8
ದಾವೀದನು ಅನೇಕ ಯುದ್ಧಗಳಲ್ಲಿ ಜಯಗಳಿಸಿದ್ದು
ತರುವಾಯ, ದಾವೀದನು ಫಿಲಿಷ್ಟಿಯರನ್ನು ಸೋಲಿಸಿ ಬಹುವಿಸ್ತಾರವಾದ ಪ್ರದೇಶವನ್ನು ಹತೋಟಿಯಲ್ಲಿಟ್ಟುಕೊಂಡಿದ್ದ ಅವರ ರಾಜಧಾನಿಯನ್ನು ಸ್ವಾಧೀನಪಡಿಸಿಕೊಂಡನು. ಮೋವಾಬಿನ ಜನರನ್ನು ಸಹ ದಾವೀದನು ಸೋಲಿಸಿದನು. ಅವರನ್ನು ನೆಲದ ಮೇಲೆ ಬಲವಂತದಿಂದ ಮಲಗಿಸಿ ಹಗ್ಗದಿಂದ ಅವರನ್ನು ಸಾಲುಸಾಲಾಗಿ ವಿಂಗಡಿಸಿದನು. ಎರಡು ಸಾಲಿನ ಗಂಡಸರನ್ನು ಕೊಲ್ಲಿಸಿದನು; ಆದರೆ ಮೂರನೆಯ ಸಾಲಿನ ಗಂಡಸರನ್ನು ಜೀವಂತವಾಗಿ ಉಳಿಸಿದನು. ಮೋವಾಬಿನ ಜನರು ದಾವೀದನ ಸೇವಕರಾದರು. ಅವರು ಅವನಿಗೆ ಕಪ್ಪಕಾಣಿಕೆಗಳನ್ನು ಅರ್ಪಿಸಿದರು.
ಹದದೆಜೆರನು ರೆಹೋಬನ ಮಗ ಹಾಗೂ ಚೋಬದ ರಾಜ. ದಾವೀದನು ಯೂಫ್ರೇಟೀಸ್ ನದಿಯ ಸುತ್ತಲಿನ ಪ್ರದೇಶವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಹದದೆಜೆರನನ್ನು ಸೋಲಿಸಿದನು. ಹದದೆಜೆರನಿಂದ ಒಂದು ಸಾವಿರ ರಥಗಳನ್ನೂ ಒಂದು ಸಾವಿರದ ಏಳುನೂರು ಅಶ್ವಪಡೆಗಳನ್ನೂ ದಾವೀದನು ತೆಗೆದುಕೊಂಡನು. ಅವನು ಇಪ್ಪತ್ತು ಸಾವಿರ ಕಾಲಾಳು ಸೈನಿಕರನ್ನು ಸಹ ಪಡೆದನು. ದಾವೀದನು ಒಂದು ನೂರು ರಥದ ಕುದುರೆಗಳನ್ನು ಇಟ್ಟುಕೊಂಡು ಉಳಿದವುಗಳನ್ನು ಕುಂಟುವಂತೆ ಮಾಡಿದನು.
ಚೋಬದ ರಾಜನಾದ ಹದದೆಜೆರನ ಸಹಾಯಕ್ಕೆ ದಮಸ್ಕದ ಅರಾಮ್ಯರು ಬಂದರು. ಆದರೆ ದಾವೀದನು ಆ ಇಪ್ಪತ್ತೆರಡು ಸಾವಿರ ಅರಾಮ್ಯರನ್ನು ಸಂಹರಿಸಿದನು. ಬಳಿಕ ದಾವೀದನು ದಮಸ್ಕದ ಅರಾಮ್ ದೇಶದಲ್ಲಿ ಕಾವಲುದಂಡನ್ನು ಇರಿಸಿದನು. ಅರಾಮ್ಯರು ದಾವೀದನ ಸೇವಕರಾದರು ಮತ್ತು ಅವನಿಗೆ ಕಾಣಿಕೆಗಳನ್ನು ತಂದರು. ದಾವೀದನು ಹೋದ ಸ್ಥಳಗಳಲ್ಲೆಲ್ಲ ಯೆಹೋವನು ಜಯವನ್ನು ಉಂಟುಮಾಡಿದನು.
ಹದದೆಜೆರನ ಸೇವಕರಿಗೆ ಸೇರಿದ ಚಿನ್ನದ ಗುರಾಣಿಗಳನ್ನು ದಾವೀದನು ವಶಪಡಿಸಿಕೊಂಡನು. ದಾವೀದನು ಅವುಗಳನ್ನು ಜೆರುಸಲೇಮಿಗೆ ತಂದನು. ಹದದೆಜೆರನಿಗೆ ಸೇರಿದ ನಗರಗಳಾದ ಬೆಟಹ ಮತ್ತು ಬೇರೋತೈಗಳಿಂದ ಹಿತ್ತಾಳೆಯ ಅನೇಕಾನೇಕ ವಸ್ತುಗಳನ್ನು ದಾವೀದನು ವಶಪಡಿಸಿಕೊಂಡನು.
ಹದದೆಜೆರನ ಸೈನ್ಯವನ್ನೆಲ್ಲ ದಾವೀದನು ಸೋಲಿಸಿದನೆಂಬ ವರ್ತಮಾನವು ಹಮಾತಿನ ರಾಜನಾದ ತೋವಿಗೆ ತಿಳಿಯಿತು. 10 ಆಗ ತೋವಿಯು ತನ್ನ ಮಗನಾದ ಯೋರಾವುನನ್ನು ರಾಜನಾದ ದಾವೀದನ ಬಳಿಗೆ ಕಳುಹಿಸಿದನು. ದಾವೀದನು ಹದದೆಜೆರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಯೋರಾವುನು ದಾವೀದನನ್ನು ಅಭಿನಂದಿಸಿದನು ಮತ್ತು ಆಶೀರ್ವದಿಸಿದನು. (ಈ ಮೊದಲು ಹದದೆಜೆರನು ತೋವಿಗೆ ವಿರುದ್ಧವಾಗಿ ಯುದ್ಧವನ್ನು ಮಾಡಿದನು.) ಯೋರಾವುನು ಚಿನ್ನ, ಬೆಳ್ಳಿ ಮತ್ತು ಹಿತ್ತಾಳೆಯಿಂದ ಮಾಡಿದ ವಸ್ತುಗಳನ್ನು ತಂದಿದ್ದನು. 11 ದಾವೀದನು ಆ ವಸ್ತುಗಳನ್ನು ತೆಗೆದುಕೊಂಡು ಯೆಹೋವನಿಗೆ ಸಮರ್ಪಿಸಿದನು. ಅವನು ಅನ್ಯದೇಶಗಳನ್ನು ಸೋಲಿಸಿದ್ದಾಗ ಯೆಹೋವನಿಗೆ ಸಮರ್ಪಿಸಿದ್ದ ಬೆಳ್ಳಿ ಮತ್ತು ಚಿನ್ನಗಳೊಂದಿಗೆ ಇವುಗಳನ್ನೂ ಸೇರಿಸಿದನು. 12 ಆತನು ಸೋಲಿಸಿದ ದೇಶಗಳು ಯಾವುವೆಂದರೆ: ಅರಾಮ್, ಮೋವಾಬ್, ಅಮ್ಮೋನಿಯ, ಫಿಲಿಷ್ಟಿಯ ಮತ್ತು ಅಮಾಲೇಕ್ಯ. ಚೋಬದ ರಾಜನಾದ ರೆಹೋಬನ ಮಗ ಹದದೆಜೆರನನ್ನು ಸಹ ದಾವೀದನು ಸೋಲಿಸಿದನು. 13 ದಾವೀದನು ಉಪ್ಪಿನ ಕಣಿವೆಯಲ್ಲಿ ಹದಿನೆಂಟು ಸಾವಿರ ಎದೋಮ್ಯರನ್ನು ಸೋಲಿಸಿದನು. ಅವನು ಮನೆಗೆ ಹಿಂದಿರುಗುವಷ್ಟರಲ್ಲಿ ಪ್ರಸಿದ್ಧನಾಗಿದ್ದನು. 14 ದಾವೀದನು ಎದೋಮಿನ ಎಲ್ಲಾ ಕಡೆಯಲ್ಲೂ ಕಾವಲುದಂಡನ್ನು ಇರಿಸಿದನು. ಎದೋಮಿನ ಜನರೆಲ್ಲರೂ ದಾವೀದನ ಸೇವಕರಾದರು. ದಾವೀದನು ಹೋದ ಕಡೆಗಳಲ್ಲೆಲ್ಲಾ ಯೆಹೋವನು ಜಯವನ್ನು ಉಂಟುಮಾಡಿದನು.
ದಾವೀದನ ರಾಜ್ಯಾಡಳಿತ
15 ದಾವೀದನು ಸಮಸ್ತ ಇಸ್ರೇಲರನ್ನು ಆಳಿದನು. ದಾವೀದನು ಜನರಿಗೆ ನ್ಯಾಯವಾದ ಮತ್ತು ಸರಿಯಾದ ತೀರ್ಪುಗಳನ್ನು ಕೊಡುತ್ತಿದ್ದನು. 16 ಚೆರೂಯಳ ಮಗನಾದ ಯೋವಾಬನು ಅವನ ಸೈನ್ಯದ ಅಧಿಕಾರಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಇತಿಹಾಸಕಾರನಾಗಿದ್ದನು. 17 ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು. 18 ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರು ಮತ್ತು ಪೆಲೇತ್ಯರು ಎಂಬ ಕಾವಲು ದಂಡುಗಳ ಅಧಿಪತಿಯಾಗಿದ್ದನು. ದಾವೀದನ ಮಕ್ಕಳೆಲ್ಲರೂ ಮುಖ್ಯಅಧಿಕಾರಿಗಳಾಗಿದ್ದರು.*ಮುಖ್ಯ ಅಧಿಕಾರಿ ಅಥವಾ ಯಾಜಕರಾಗಿದ್ದರು.

*8:18: ಮುಖ್ಯ ಅಧಿಕಾರಿ ಅಥವಾ ಯಾಜಕರಾಗಿದ್ದರು.