15
ಅಬ್ಷಾಲೋಮನಿಗೆ ಅನೇಕರು ಸ್ನೇಹಿತರಾದದ್ದು
1 ಇದಾದನಂತರ, ಅಬ್ಷಾಲೋಮನು ತನಗಾಗಿ ರಥವನ್ನೂ ಕುದರೆಗಳನ್ನೂ ಪಡೆದನು. ಅವನು ರಥವನ್ನು ನಡೆಸುವಾಗ ಅವನ ಮುಂದೆ ಓಡಲು ಐವತ್ತು ಜನರಿದ್ದರು. 2 ಅಬ್ಷಾಲೋಮನು ಹೊತ್ತಾರೆಯಲ್ಲಿಯೇ ಎದ್ದು ದ್ವಾರದ*ದ್ವಾರ ಜನರು ತಮ್ಮ ಎಲ್ಲಾ ವ್ಯವಹಾರಗಳನ್ನು ಮಾಡಲು ಬಂದು ಸೇರುವ ಸ್ಥಳ. ನ್ಯಾಯಸ್ಥಾನದ ಅನೇಕ ಮೊಕದ್ದಮೆಗಳು ನಡೆಯುವ ಸ್ಥಳವೂ ಇದೇ. ಹತ್ತಿರದಲ್ಲಿ ನಿಂತುಕೊಳ್ಳುತ್ತಿದ್ದನು. ತೊಂದರೆಯಲ್ಲಿ ಸಿಕ್ಕಿಕೊಂಡಿರುವ ಯಾವನಾದರೂ ತೀರ್ಪಿಗಾಗಿ ರಾಜನಾದ ದಾವೀದನ ಬಳಿಗೆ ಹೋಗುತ್ತಿರುವುದನ್ನು ಅಬ್ಷಾಲೋಮನು ಕಂಡರೆ ಅವನನ್ನು ತನ್ನ ಬಳಿಗೆ ಕರೆಯುತ್ತಿದ್ದನು. ಅಬ್ಷಾಲೋಮನು, “ನೀನು ಯಾವ ನಗರದಿಂದ ಬಂದೆ?” ಎಂದು ಕೇಳುತ್ತಿದ್ದನು. ಆ ಮನುಷ್ಯನು, “ನಾನು ಇಸ್ರೇಲಿನ ಇಂಥ ಕುಲಕ್ಕೆ ಸೇರಿದವನು” ಎಂದು ಉತ್ತರಿಸುತ್ತಿದ್ದನು. 3 ಆಗ ಅಬ್ಷಾಲೋಮನು ಆ ಮನುಷ್ಯನಿಗೆ, “ನೋಡು, ನಿನ್ನ ಬೇಡಿಕೆಗಳು ಸರಿಯಾಗಿವೆ. ಆದರೆ ರಾಜನಾದ ದಾವೀದನು ನಿನ್ನ ಮಾತುಗಳನ್ನು ಕೇಳುವುದಿಲ್ಲ” ಎಂದು ಹೇಳುತ್ತಿದ್ದನು.
4 ಅಲ್ಲದೆ ಅಬ್ಷಾಲೋಮನು, “ಯಾರಾದರೂ ನನ್ನನ್ನು ಈ ದೇಶದಲ್ಲಿ ನ್ಯಾಯಾಧೀಶನನ್ನಾಗಿ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು. ತೀರ್ಪಿಗಾಗಿ ತಮ್ಮ ತೊಂದರೆಗಳೊಂದಿಗೆ ಬರುವ ಪ್ರತಿಯೊಬ್ಬನಿಗೂ ಆಗ ನಾನು ಸಹಾಯ ಮಾಡಬಹುದಾಗಿತ್ತು. ಅವನ ತೊಂದರೆಗೆ ತೃಪ್ತಿಕರವಾದ ಪರಿಹಾರವನ್ನು ನೀಡಲು ನಾನು ಸಹಾಯ ಮಾಡಬಹುದಾಗಿತ್ತು” ಎಂದು ಹೇಳುತ್ತಿದ್ದನು.
5 ಯಾವನಾದರೂ ಅಬ್ಷಾಲೋಮನ ಹತ್ತಿರಕ್ಕೆ ಬಂದು ಸಾಷ್ಟಾಂಗನಮಸ್ಕಾರಮಾಡಲು ಬಾಗಿದಾಗ, ಅಬ್ಷಾಲೋಮನು ಕೈಚಾಚಿ ಅವನನ್ನು ಅಪ್ಪಿಕೊಂಡು ಮುದ್ದಿಡುತ್ತಿದ್ದನು. 6 ರಾಜನಾದ ದಾವೀದನ ಬಳಿಗೆ ತೀರ್ಪಿಗಾಗಿ ಬರುವ ಎಲ್ಲಾ ಇಸ್ರೇಲರಿಗೆ ಅಬ್ಷಾಲೋಮನು ಇದೇ ರೀತಿ ಮಾಡುತ್ತಿದ್ದನು. ಹೀಗೆ, ಅಬ್ಷಾಲೋಮನು ಇಸ್ರೇಲಿನ ಜನರೆಲ್ಲರ ಹೃದಯಗಳನ್ನು ಗೆದ್ದುಕೊಂಡನು.
ದಾವೀದನ ರಾಜ್ಯಾಧಿಕಾರವನ್ನು ಪಡೆದುಕೊಳ್ಳಲು ಅಬ್ಷಾಲೋಮನ ಆಲೋಚನೆ
7 ನಾಲ್ಕು ವರ್ಷಗಳ ಬಳಿಕ†ನಾಲ್ಕು ವರ್ಷಗಳ ಬಳಿಕ ಕೆಲವು ಪ್ರಾಚೀನ ಬರಹಗಳಲ್ಲಿ “ನಲವತ್ತು ವರ್ಷಗಳು” ಎಂದಿದೆ. ಅಬ್ಷಾಲೋಮನು ರಾಜನಾದ ದಾವೀದನಿಗೆ, “ನಾನು ಹೆಬ್ರೋನಿನಲ್ಲಿ ಯೆಹೋವನೊಂದಿಗೆ ಮಾಡಿದ ವಿಶೇಷ ಪ್ರಮಾಣವನ್ನು ಪೂರ್ಣಗೊಳಿಸುವುದಕ್ಕೆ ದಯವಿಟ್ಟು ಅನುಮತಿಕೊಡು. 8 ನಾನು ಅರಾಮಿನ ಗೆಷೂರಿನಲ್ಲಿ ನೆಲೆಸಿದ್ದಾಗ, ‘ಯೆಹೋವನು ನನ್ನನ್ನು ಜೆರುಸಲೇಮಿಗೆ ಮತ್ತೆ ಕರೆಸಿಕೊಂಡರೆ, ನಾನು ಯೆಹೋವನ ಆರಾಧನೆ ಮಾಡುತ್ತೇನೆ, ಎಂಬ ವಿಶೇಷ ಪ್ರಮಾಣವನ್ನು ಮಾಡಿದ್ದೆನು’ ” ಎಂದನು.
9 “ಸಮಾಧಾನದಿಂದ ಹೋಗು” ಎಂದು ರಾಜನಾದ ದಾವೀದನು ಹೇಳಿದನು.
ಅಬ್ಷಾಲೋಮನು ಹೆಬ್ರೋನಿಗೆ ಹೋದನು. 10 ಆದರೆ ಅಬ್ಷಾಲೋಮನು ಇಸ್ರೇಲಿನ ಎಲ್ಲಾ ಕುಲಗಳಿಗೂ ಗೂಢಚಾರರನ್ನು ಕಳುಹಿಸಿದನು. ಈ ಗೂಢಚಾರರು ಜನರಿಗೆ, “ನೀವು ಕಹಳೆಯ ಧ್ವನಿಯನ್ನು ಕೇಳಿದಾಗ, ‘ಅಬ್ಷಾಲೋಮನು ಹೆಬ್ರೋನಿನಲ್ಲಿ ರಾಜನಾದ’ನೆಂದು ಹೇಳಿ” ಎಂಬುದಾಗಿ ತಿಳಿಸಿದರು.
11 ಅಬ್ಷಾಲೋಮನು ತನ್ನೊಂದಿಗೆ ಬರಲು ಇನ್ನೂರು ಜನರನ್ನು ಆಹ್ವಾನಿಸಿದನು. ಆ ಜನರು ಜೆರುಸಲೇಮನ್ನು ಬಿಟ್ಟು ಅವನೊಂದಿಗೆ ಹೊರಟರು. ಆದರೆ ಅವನು ಯೋಚಿಸಿದ ಕಾರ್ಯವು ಅವರಿಗೆ ತಿಳಿದಿರಲಿಲ್ಲ. 12 ಅಹೀತೋಫೆಲನೆಂಬವನು ದಾವೀದನ ಸಲಹೆಗಾರರಲ್ಲಿ ಒಬ್ಬನಾಗಿದ್ದನು. ಅಹೀತೋಫೆಲನು ಗೀಲೋವ ಎಂಬ ಪಟ್ಟಣದವನು. ಅಬ್ಷಾಲೋಮನು ಯಜ್ಞಗಳನ್ನು ಅರ್ಪಿಸುತ್ತಿರುವಾಗ ಅಹೀತೋಫೆಲನನ್ನು ಅವನ ಪಟ್ಟಣವಾದ ಗೀಲೋವದಿಂದ ಕರೆಯಿಸಿದನು. ಜನರು ಅಬ್ಷಾಲೋಮನನ್ನು ಕೂಡಿಕೊಳ್ಳುತ್ತಾ ಬಂದದ್ದರಿಂದ ಅವನು ಮಾಡಿದ ಒಳಸಂಚು ಸಫಲವಾಗತೊಡಗಿತು.
ಅಬ್ಷಾಲೋಮನ ಯೋಜನೆಗಳ ಬಗ್ಗೆ ದಾವೀದನಿಗೆ ತಿಳಿದದ್ದು
13 ಒಬ್ಬನು ದಾವೀದನಿಗೆ ಸುದ್ದಿಯನ್ನು ಹೇಳಲು ಒಳಗೆ ಬಂದು, “ಇಸ್ರೇಲಿನ ಜನರು ಅಬ್ಷಾಲೋಮನನ್ನು ಹಿಂಬಾಲಿಸಲಾರಂಭಿಸಿದ್ದಾರೆ” ಎಂದು ಹೇಳಿದನು.
14 ಆಗ ದಾವೀದನು ಜೆರುಸಲೇಮಿನಲ್ಲಿ ತನ್ನೊಂದಿಗಿದ್ದ ತನ್ನ ಸೇವಕರಿಗೆಲ್ಲ, “ನಾವು ತಪ್ಪಿಸಿಕೊಳ್ಳಲೇಬೇಕು! ನಾವು ತಪ್ಪಿಸಿಕೊಳ್ಳದಿದ್ದರೆ ಅಬ್ಷಾಲೋಮನು ನಮ್ಮನ್ನು ಹೋಗಗೊಡಿಸುವುದಿಲ್ಲ. ಅಬ್ಷಾಲೋಮನು ನಮ್ಮನ್ನು ಹಿಡಿಯುವುದಕ್ಕಿಂತ ಮೊದಲೇ ಇಲ್ಲಿಂದ ಹೋಗಿಬಿಡೋಣ. ಅವನು ನಮ್ಮೆಲ್ಲರನ್ನೂ ನಾಶಮಾಡುತ್ತಾನೆ; ಅವನು ಜೆರುಸಲೇಮಿನ ಜನರನ್ನು ಕೊಂದುಹಾಕುತ್ತಾನೆ” ಎಂದು ಹೇಳಿದನು.
15 ರಾಜನ ಸೇವಕರು ರಾಜನಿಗೆ, “ನಿನ್ನ ನಿರ್ಧಾರದಂತೆ ನಾವು ಮಾಡುತ್ತೇವೆ” ಎಂದರು.
ದಾವೀದನು ಮತ್ತು ಅವನ ಜನರು ತಪ್ಪಿಸಿಕೊಂಡದ್ದು
16 ರಾಜನಾದ ದಾವೀದನು ತನ್ನ ಮನೆಯಲ್ಲಿದ್ದ ಎಲ್ಲಾ ಜನರೊಂದಿಗೆ ಹೊರಟನು. ಮನೆಯ ಉಸ್ತುವಾರಿಯನ್ನು ನೋಡಿಕೊಳ್ಳುವುದಕ್ಕಾಗಿ ರಾಜನು ತನ್ನ ಹತ್ತು ಮಂದಿ ಪತ್ನಿಯರನ್ನು ಅಲ್ಲಿಯೇ ಬಿಟ್ಟು, 17 ತನ್ನ ಹಿಂಬಾಲಕರೊಂದಿಗೆ ಹೊರಟುಹೋದನು. ಅವನು ಕೊನೆಯ ಮನೆಯ ಹತ್ತಿರ ನಿಂತುಕೊಂಡನು. 18 ಅವನ ಸೇವಕರೆಲ್ಲ ರಾಜನನ್ನು ದಾಟಿ ಮುಂದೆ ಹೋದರು. ಕೆರೇತ್ಯರು, ಪೆಲೇತ್ಯರು ಮತ್ತು ಗಿತ್ತೀಯರು (ಗತ್‌ನ ಆರುನೂರು ಜನರು) ರಾಜನನ್ನು ದಾಟಿಹೋದರು.
19 ರಾಜನು ಗತ್‌ನ ಇತ್ತೈಯನಿಗೆ, “ನೀನು ಸಹ ನಮ್ಮೊಂದಿಗೆ ಏಕೆ ಬರುತ್ತಿರುವೆ? ಹಿಂದಿರುಗಿಹೋಗಿ, ಹೊಸ ರಾಜನೊಂದಿಗೆ ನೆಲೆಸು. ನೀನು ಹೊರದೇಶೀಯನು. ಇದು ನಿನ್ನ ಸ್ವದೇಶವಲ್ಲ. 20 ನೀನು ನನ್ನ ಜೊತೆ ಸೇರಿಕೊಳ್ಳಲು ಬಂದದ್ದು ನಿನ್ನೆಯಷ್ಟೇ. ನೀನು ಈಗ ನನ್ನೊಂದಿಗೆ ಬೇರೆಬೇರೆ ಸ್ಥಳಗಳಲ್ಲಿ ಅಲೆಯಬೇಕೇ? ಇಲ್ಲ! ನಿನ್ನ ಸೋದರರನ್ನೂ ನಿನ್ನ ಜೊತೆಯಲ್ಲಿ ಕರೆದುಕೊಂಡು ಹಿಂತಿರುಗಿಹೋಗು. ದಯೆಯೂ ನಂಬಿಗಸ್ತಿಕೆಯೂ ನಿನ್ನಲ್ಲಿ ತೋರಿಬರಲಿ” ಎಂದನು.
21 ಅದಕ್ಕೆ ಇತ್ತೈಯನು ರಾಜನಿಗೆ, “ಯೆಹೋವನಾಣೆ ಮತ್ತು ನಿನ್ನಾಣೆ, ನಾನಂತೂ ನಿನ್ನೊಂದಿಗೆ ಇರುತ್ತೇನೆ. ನನಗೆ ಜೀವ ಹೋದರೂ ಉಳಿದರೂ ನಿನ್ನೊಂದಿಗೆ ಇರುತ್ತೇನೆ” ಎಂದು ಹೇಳಿದನು.
22 ದಾವೀದನು ಇತ್ತೈಯನಿಗೆ, “ಬಾ, ಕಿದ್ರೋನ್ ಹಳ್ಳವನ್ನು ದಾಟೋಣ” ಎಂದನು.
ಗತ್‌ನ ಇತ್ತೈಯನೂ ಅವನ ಜನರೂ ಅವರ ಮಕ್ಕಳೆಲ್ಲರೂ ಕಿದ್ರೋನ್ ಹಳ್ಳವನ್ನು ದಾಟಿಹೋದರು. 23 ಜನರೆಲ್ಲರೂ ಜೋರಾಗಿ ಅಳುತ್ತಿದ್ದರು. ರಾಜನಾದ ದಾವೀದನು ಕಿದ್ರೋನ್ ಹಳ್ಳವನ್ನು ದಾಟಿಹೋದನು. ನಂತರ ಜನರೆಲ್ಲರೂ ಅರಣ್ಯಕ್ಕೆ ಹೋದರು. 24 ಚಾದೋಕನು ಮತ್ತು ಅವನೊಂದಿಗಿದ್ದ ಲೇವಿಯರೆಲ್ಲ ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡಿದ್ದರು. ಅವರು ದೇವರ ಪವಿತ್ರ ಪೆಟ್ಟಿಗೆಯನ್ನು ಇಳಿಸಿದರು. ಜೆರುಸಲೇಮಿನಿಂದ ಜನರೆಲ್ಲರೂ ಹೊರಗೆ ಹೋಗುವವರೆಗೆ ಎಬ್ಯಾತಾರನು ಪ್ರಾರ್ಥನೆಗಳನ್ನು ಮಾಡಿದನು.
25 ರಾಜನಾದ ದಾವೀದನು ಚಾದೋಕನಿಗೆ, “ದೇವರ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ಮತ್ತೆ ತೆಗೆದುಕೊಂಡು ಹೋಗು. ಯೆಹೋವನು ನನಗೆ ದಯಾಪರನಾಗಿದ್ದರೆ, ನನ್ನನ್ನು ಮತ್ತೆ ಬರಮಾಡುತ್ತಾನೆ. ಜೆರುಸಲೇಮನ್ನು ಮತ್ತು ಆತನ ಆಲಯವನ್ನು ಮತ್ತೆ ನಾನು ನೋಡುವ ಹಾಗೆ ಯೆಹೋವನು ಮಾಡುತ್ತಾನೆ. 26 ಆದರೆ ನನ್ನ ಮೇಲೆ ಯೆಹೋವನಿಗೆ ಇಷ್ಟವಿಲ್ಲವೆಂದು ತೋರಿದರೆ, ಆಗ ನನ್ನ ವಿರುದ್ಧವಾಗಿ ಆತನು ತನಗೆ ತೋಚಿದ್ದನ್ನು ಮಾಡಲಿ” ಎಂದನು.
27 ರಾಜನು ಯಾಜಕನಾದ ಚಾದೋಕನಿಗೆ, “ನೀನೊಬ್ಬ ದೇವದರ್ಶಿ. ಸಮಾಧಾನದಿಂದ ನಗರಕ್ಕೆ ಹಿಂದಿರುಗು. ನಿನ್ನ ಮಗನಾದ ಅಹೀಮಾಚನನ್ನು ಮತ್ತು ಎಬ್ಯಾತಾರನ ಮಗನಾದ ಯೋನಾತಾನನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು. 28 ಜನರು ಮರಳುಗಾಡಿಗೆ ದಾಟಿಹೋಗುವ ಸ್ಥಳದಲ್ಲಿ ನಾನು ಕಾದಿರುತ್ತೇನೆ. ನಾನು ನಿನ್ನಿಂದ ವರ್ತಮಾನ ಬರುವವರೆಗೆ ಅಲ್ಲಿ ಕಾದಿರುತ್ತೇನೆ” ಎಂದನು.
29 ಆದ್ದರಿಂದ ಚಾದೋಕನು ಮತ್ತು ಎಬ್ಯಾತಾರನು ದೇವರ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಜೆರುಸಲೇಮಿಗೆ ಹಿಂದಿರುಗಿ, ಅಲ್ಲಿಯೇ ಉಳಿದುಕೊಂಡರು.
ಅಹೀತೋಫೆಲನ ವಿರುದ್ಧವಾಗಿ ದಾವೀದನ ಪ್ರಾರ್ಥನೆ
30 ದಾವೀದನು ಆಲೀವ್ ಮರಗಳ ದಿಣ್ಣೆಯನ್ನೇರಿದನು. ಅವನು ಗೋಳಾಡುತ್ತಿದ್ದನು. ಅವನು ತಲೆಯ ಮೇಲೆ ಮುಸುಕೆಳೆದುಕೊಂಡು ಬರಿಗಾಲಿನಲ್ಲಿ ನಡೆದುಕೊಂಡು ಹೋದನು. ದಾವೀದನ ಜೊತೆಯಲ್ಲಿದ್ದ ಅವನ ಜನರೆಲ್ಲರೂ ತಲೆಯ ಮೇಲೆ ಮುಸುಕು ಹಾಕಿಕೊಂಡು ಗೋಳಾಡುತ್ತಾ ದಾವೀದನೊಂದಿಗೆ ಹೋದರು.
31 ಒಬ್ಬನು ದಾವೀದನಿಗೆ, “ಅಬ್ಷಾಲೋಮನ ಜೊತೆಯಲ್ಲಿ ಉಪಾಯಗಳನ್ನು ಮಾಡಿದ ಜನರಲ್ಲಿ ಅಹೀತೋಫೆಲನೂ ಒಬ್ಬನು” ಎಂದು ಹೇಳಿದನು. ಆಗ ದಾವೀದನು, “ಯೆಹೋವನೇ, ಅಹೀತೋಫೆಲನ ಸಲಹೆಗಳನ್ನು ವಿಫಲಗೊಳಿಸು” ಎಂದು ಪ್ರಾರ್ಥಿಸಿದನು. 32 ದಾವೀದನು ಬೆಟ್ಟದ ಮೇಲೆ ದೇವರನ್ನು ಆರಾಧಿಸಿದನು. ಆ ಸಮಯದಲ್ಲಿ ಅರ್ಕೀಯನಾದ ಹೂಷೈ ಎಂಬವನು ಅವನಲ್ಲಿಗೆ ಬಂದನು. ಹೂಷೈನ ಅಂಗಿಯು ಹರಿದಿತ್ತು. ಅವನ ತಲೆಯ ಮೇಲೆಲ್ಲಾ ಧೂಳಿತ್ತು.
33 ದಾವೀದನು ಹೂಷೈಗೆ, “ನೀನು ನನ್ನೊಂದಿಗೆ ಬರುವುದಾದರೆ, ನೀನು ನನಗೆ ಭಾರವಾಗುವಿಯಷ್ಟೇ. 34 ಆದರೆ ನೀನು ಜೆರುಸಲೇಮಿಗೆ ಹಿಂದಿರುಗಿ ಹೋದರೆ, ನೀನು ಅಹೀತೋಫೆಲನ ಸಲಹೆಗಳನ್ನು ನಿರರ್ಥಕಗೊಳಿಸುವೆ. ನೀನು ಅಬ್ಷಾಲೋಮನಿಗೆ, ‘ರಾಜನೇ, ನಾನು ನಿನ್ನ ಸೇವಕ. ನಾನು ನಿನ್ನ ತಂದೆಯ ಸೇವೆಯನ್ನು ಮಾಡಿದೆನು. ಆದರೆ ಈಗ ನಿನ್ನ ಸೇವೆಯನ್ನು ಮಾಡುತ್ತೇನೆ’ ಎಂದು ಹೇಳು. 35 ಯಾಜಕರಾದ ಚಾದೋಕ್ ಮತ್ತು ಎಬ್ಯಾತಾರರು ನಿನ್ನೊಂದಿಗೆ ಇರುತ್ತಾರೆ. ರಾಜನ ಮನೆಯಲ್ಲಿ ಕೇಳಿಸಿಕೊಂಡಿದ್ದನ್ನೆಲ್ಲ ಅವರಿಗೆ ನೀನು ತಿಳಿಸಲೇಬೇಕು. 36 ಚಾದೋಕನ ಮಗನಾದ ಅಹೀಮಾಚನ ಮತ್ತು ಎಬ್ಯಾತಾರನ ಮಗನಾದ ಯೋನಾತಾನನ ಮೂಲಕ ನೀನು ಕೇಳಿಸಿಕೊಂಡಿದ್ದನೆಲ್ಲ ನನಗೆ ತಿಳಿಸಬೇಕು” ಎಂದು ಹೇಳಿಕೊಟ್ಟನು.
37 ದಾವೀದನ ಗೆಳೆಯನಾದ ಹೂಷೈ ನಗರಕ್ಕೆ ಹೋದನು. ಅಬ್ಷಾಲೋಮನು ಜೆರುಸಲೇಮಿಗೆ ಬಂದನು.