20
ಶೆಬನು ದಾವೀದನ ವಿರುದ್ಧವಾಗಿ ದಂಗೆ ಎದ್ದದ್ದು
ಬಿಕ್ರೀಯ ಮಗನಾದ ಶೆಬ ಅಲ್ಲಿದ್ದನು. ಇವನು ದುಷ್ಟನಾಗಿದ್ದನು; ಬೆನ್ಯಾಮೀನ್ ಕುಲದವನಾಗಿದ್ದ ಇವನು, ತುತ್ತೂರಿಯನ್ನು ಊದುತ್ತಾ,
 
“ದಾವೀದನಲ್ಲಿ ನಮ್ಮ ಪಾಲು ಏನೂ ಇಲ್ಲ.
ಇಷಯನ ಮಗನಲ್ಲಿ ನಮಗೇನೂ ಇಲ್ಲ.
ನಾವೆಲ್ಲ, ಅಂದರೆ ಇಸ್ರೇಲರೆಲ್ಲ ನಮ್ಮನಮ್ಮ ಗುಡಾರಗಳಿಗೆ ಹೋಗೋಣ”
 
ಎಂದು ಹೇಳಿದನು.
ಆಗ ಇಸ್ರೇಲರೆಲ್ಲರೂ ದಾವೀದನನ್ನು ತೊರೆದು, ಬಿಕ್ರೀಯ ಮಗನಾದ ಶೆಬನನ್ನು ಹಿಂಬಾಲಿಸಿದರು. ಆದರೆ ಯೆಹೂದದ ಜನರೆಲ್ಲರೂ ಜೋರ್ಡನ್ ನದಿಯಿಂದ ಜೆರುಸಲೇಮಿನ ತನಕ ತಮ್ಮ ರಾಜನ ಜೊತೆಯಲ್ಲಿಯೇ ಇದ್ದರು.
ದಾವೀದನು ಜೆರುಸಲೇಮಿನ ತನ್ನ ಅರಮನೆಗೆ ಬಂದನು. ದಾವೀದನು ಮನೆಕಾಯಲು ಬಿಟ್ಟುಹೋದ ತನ್ನ ಹತ್ತುಮಂದಿ ಉಪಪತ್ನಿಯರನ್ನು*ಉಪಪತ್ನಿಯರನ್ನು ಈ ಉಪಪತ್ನಿಯರನ್ನು ಅಬ್ಷಾಲೋಮನು ಕೆಡಿಸಿದನು. ನೋಡಿ: 2 ಸಮುವೇಲ 16:21-22. ಒಂದು ಮನೆಯಲ್ಲಿ ಇಟ್ಟಿದ್ದನು. ಈ ಮನೆಯನ್ನು ಕಾವಲುಗಾರರು ಕಾಯುತ್ತಿದ್ದರು. ಈ ಹೆಂಗಸರು ತಾವು ಸಾಯುವವರೆಗೆ ಈ ಮನೆಯಲ್ಲಿಯೇ ನೆಲೆಸಿದ್ದರು. ದಾವೀದನು ಅವರಿಗೆ ಆಹಾರ ವಸ್ತ್ರಗಳನ್ನು ಕೊಟ್ಟನು. ಆದರೆ ಅವನು ಅವರೊಂದಿಗೆ ಮಲಗಿಕೊಳ್ಳಲಿಲ್ಲ. ಅವರು ಸಾಯುವವರೆಗೆ ವಿಧವೆಯರಂತಿದ್ದರು.
ರಾಜನು ಅಮಾಸನಿಗೆ, “ಯೆಹೂದದ ಜನರು ನನ್ನನ್ನು ಮೂರು ದಿನಗಳಲ್ಲಿ ನೋಡುವಂತೆ ಅವರಿಗೆ ತಿಳಿಸು. ನೀನು ಸಹ ಇಲ್ಲಿಯೇ ಇರು” ಎಂದು ಹೇಳಿದನು.
ಆಗ ಅಮಾಸನು ಯೆಹೂದದ ಜನರನ್ನು ಒಟ್ಟಾಗಿ ಕರೆಯಲು ಹೋದನು; ಆದರೆ ನೇಮಕವಾದ ಸಮಯಕ್ಕೆ ಬರದೆ ತಡಮಾಡಿದನು.
ಶೆಬನನ್ನು ಕೊಲ್ಲುವಂತೆ ಅಬೀಷೈಯನಿಗೆ ದಾವೀದನು ಹೇಳಿದ್ದು
ದಾವೀದನು ಅಬೀಷೈಯನಿಗೆ, “ಬಿಕ್ರೀಯ ಮಗನಾದ ಶೆಬನು ಅಬ್ಷಾಲೋಮನಿಗಿಂತ ನಮಗೆ ಹೆಚ್ಚು ಅಪಾಯಕಾರಿಯಾಗಿದ್ದಾನೆ. ಆದ್ದರಿಂದ ನನ್ನ ಸೇವಕರನ್ನು ಕರೆದುಕೊಂಡು, ಶೆಬನನ್ನು ಅಟ್ಟಿಸಿಕೊಂಡು ಹೋಗು. ಶೆಬನು ಕೋಟೆಗಳಿರುವ ನಗರಗಳಲ್ಲಿ ಸೇರಿಕೊಳ್ಳುವುದಕ್ಕಿಂತ ಮುಂಚೆಯೇ ತ್ವರಿತವಾಗಿ ಹೋಗು. ಶೆಬನು ಕೋಟೆಗಳಿರುವ ನಗರಗಳಲ್ಲಿ ಸೇರಿಕೊಂಡರೆ, ಅವನು ನಮ್ಮಿಂದ ತಪ್ಪಿಸಿಕೊಂಡು ಬಿಡುತ್ತಾನೆ” ಎಂದು ಹೇಳಿದನು.
ಆದ್ದರಿಂದ ಯೋವಾಬನು ಕೆರೇತ್ಯರ ಪೆಲೇತ್ಯರ ಮತ್ತು ಸೈನಿಕರೆಲ್ಲರ ಸಮೇತವಾಗಿ ಜೆರುಸಲೇಮಿನಿಂದ ಹೊರಟು ಬಿಕ್ರೀಯ ಮಗನಾದ ಶೆಬನನ್ನು ಅಟ್ಟಿಸಿಕೊಂಡು ಹೋದರು.
ಯೋವಾಬನು ಅಮಾಸನನ್ನು ಕೊಂದದ್ದು
ಯೋವಾಬನು ತನ್ನ ಸೈನ್ಯದೊಂದಿಗೆ ಗಿಬ್ಯೋನಿನಲ್ಲಿದ್ದ “ದೊಡ್ಡ ಕಲ್ಲಿನ” ಬಳಿಗೆ ಬಂದಾಗ, ಅಮಾಸನು ಅವರನ್ನು ಸಂಧಿಸಲು ಬಂದನು. ಯೋವಾಬನು ತನ್ನ ಸಮವಸ್ತ್ರಗಳನ್ನು ಧರಿಸಿದ್ದನು. ಸೊಂಟಪಟ್ಟಿಯನ್ನು ಕಟ್ಟಿಕೊಂಡಿದ್ದನು. ಅವನ ಖಡ್ಗವು ಒರೆಯಲ್ಲಿತ್ತು. ಅವನು ಅಮಾಸನನ್ನು ಸಂಧಿಸಲು ಮುಂದೆ ಸಾಗಿದಾಗ, ಅವನ ಖಡ್ಗವು ಒರೆಯಿಂದ ಹೊರಗೆ ಬಿದ್ದಿತು. ಯೋವಾಬನು ಖಡ್ಗವನ್ನು ಎತ್ತಿಕೊಂಡು ಅದನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡನು. ಅವನು ಅಮಾಸನನ್ನು, “ಸೋದರನೇ, ನೀವೆಲ್ಲ ಕ್ಷೇಮವೇ?” ಎಂದು ಕೇಳಿದನು. ಯೋವಾಬನು ಅಮಾಸನಿಗೆ ಮುದ್ದಿಡಲು ಅವನ ಗಡ್ಡವನ್ನು ಬಲಗೈಯಲ್ಲಿ ಹಿಡಿದನು. 10 ಅವನ ಕೈಯಲ್ಲಿದ್ದ ಖಡ್ಗವನ್ನು ಅಮಾಸನು ಗಮನಿಸಲಿಲ್ಲ. ಅಮಾಸನ ಹೊಟ್ಟೆಯಲ್ಲಿದ್ದದ್ದೆಲ್ಲ ಹೊರಚೆಲ್ಲಿ ನೆಲದ ಮೇಲೆ ಬೀಳುವಂತೆ ಯೋವಾಬನು ಅವನ ಹೊಟ್ಟೆಗೆ ಖಡ್ಗದಿಂದ ತಿವಿದನು. ಅಮಾಸನು ಆಗಲೇ ಸತ್ತದ್ದರಿಂದ ಯೋವಾಬನು ಮತ್ತೆ ತಿವಿಯಲಿಲ್ಲ.
ದಾವೀದನ ಜನರು ಶೆಬನನ್ನು ಹುಡುಕತೊಡಗಿದ್ದು
ನಂತರ ಯೋವಾಬನು ತನ್ನ ಸೋದರನಾದ ಅಬೀಷೈಯನೊಂದಿಗೆ ಬಿಕ್ರೀಯ ಮಗನಾದ ಶೆಬನನ್ನು ಅಟ್ಟಿಸಿಕೊಂಡು ಹೋದನು. 11 ಯೋವಾಬನ ಯುವಸೈನಿಕರಲ್ಲಿ ಒಬ್ಬನು ಅಮಾಸನ ದೇಹದ ಹತ್ತಿರ ನಿಂತುಕೊಂಡು, “ಯೋವಾಬನನ್ನು ಮತ್ತು ದಾವೀದನನ್ನು ಬೆಂಬಲಿಸುವ ಪ್ರತಿಯೊಬ್ಬರೂ ಯೋವಾಬನನ್ನು ಹಿಂಬಾಲಿಸಲೇಬೇಕು. ಶೆಬನನ್ನು ಅಟ್ಟಿಸಿಕೊಂಡು ಹೋಗಲು ಅವನಿಗೆ ಸಹಾಯಮಾಡಿ” ಎಂದು ಹೇಳಿದನು.
12 ಅಮಾಸನು ರಸ್ತೆಯ ಮಧ್ಯದಲ್ಲಿ ತನ್ನ ರಕ್ತದಲ್ಲಿಯೇ ಬಿದ್ದಿದ್ದನು. ಅವನ ದೇಹವನ್ನು ನೋಡಲು ಜನರೆಲ್ಲರೂ ನಿಲ್ಲುತ್ತಿದ್ದರು. ಆದ್ದರಿಂದ ಆ ಯುವಕನು ಅಮಾಸನ ದೇಹವನ್ನು ರಸ್ತೆಯಿಂದ ಎತ್ತಿ ಹೊಲದಲ್ಲಿಟ್ಟನು. ನಂತರ ಅವನು ಅಮಾಸನ ದೇಹದ ಮೇಲೆ ಒಂದು ವಸ್ತ್ರವನ್ನು ಹೊದಿಸಿದನು. 13 ಅಮಾಸನ ದೇಹವನ್ನು ರಸ್ತೆಯಿಂದ ಎತ್ತಿಕೊಂಡು ಹೋದ ಮೇಲೆ ಜನರೆಲ್ಲರೂ ಯೋವಾಬನನ್ನು ಹಿಂಬಾಲಿಸಿದರು. ಬಿಕ್ರೀಯ ಮಗನಾದ ಶೆಬನನ್ನು ಅಟ್ಟಿಸಿಕೊಂಡು ಹೋಗಲು ಅವರು ಯೋವಾಬನೊಂದಿಗೆ ಹೋದರು.
ಶೆಬನು ತಪ್ಪಿಸಿಕೊಂಡು ಆಬೇಲ್ಬೇತ್ಮಾಕಾಗೆ ಹೋದದ್ದು
14 ಬಿಕ್ರೀಯ ಮಗನಾದ ಶೆಬನು ಇಸ್ರೇಲಿನ ಎಲ್ಲಾ ಕುಲಗಳ ಮೂಲಕ ಸಂಚರಿಸುತ್ತಾ ಆಬೇಲ್ಬೇತ್ಮಾಕಾ ಎಂಬಲ್ಲಿಗೆ ಹೋದನು. ಬೇರಿಯ ಕುಲದವರೆಲ್ಲರೂ ಒಟ್ಟಿಗೆ ಸೇರಿಕೊಂಡು ಶೆಬನನ್ನು ಹಿಂಬಾಲಿಸಿದರು.
15 ಯೋವಾಬನು ತನ್ನ ಜನರೊಂದಿಗೆ ಆಬೇಲ್ಬೇತ್ಮಾಕಾ ಊರಿಗೆ ಬಂದನು. ಯೋವಾಬನ ಸೈನ್ಯವು ಪಟ್ಟಣವನ್ನು ಸುತ್ತುಗಟ್ಟಿತು. ಅವರು ನಗರದ ಗೋಡೆಯ ಹತ್ತಿರ ಮಣ್ಣಿನ ದಿಬ್ಬವನ್ನು ಮಾಡಿ ಗೋಡೆಯನ್ನು ಸಮೀಪಿಸಿದರು; ನಂತರ ಆ ಗೋಡೆಯನ್ನು ಬೀಳಿಸುವುದಕ್ಕಾಗಿ ಅದನ್ನು ಹೊಡೆಯಲಾಂಭಿಸಿದರು.
16 ಆ ನಗರದ ಬುದ್ಧಿವಂತೆ ಸ್ತ್ರೀಯೊಬ್ಬಳು ಪಟ್ಟಣದೊಳಗಿಂದ ಜೋರಾಗಿ ಕೂಗುತ್ತಾ, “ನನ್ನ ಮಾತನ್ನು ಕೇಳಿ. ಯೋವಾಬನನ್ನು ಇಲ್ಲಿಗೆ ಬರಲು ಹೇಳಿ. ನಾನು ಅವನ ಜೊತೆಯಲ್ಲಿ ಮಾತಾಡಬೇಕಾಗಿದೆ” ಎಂದು ಹೇಳಿದಳು.
17 ಯೋವಾಬನು ಆ ಸ್ತ್ರೀಯೊಂದಿಗೆ ಮಾತಾಡಲು ಹತ್ತಿರಕ್ಕೆ ಬಂದನು. ಅವಳು, “ನೀನು ಯೋವಾಬನೇ?” ಎಂದು ಕೇಳಿದಳು.
“ಹೌದು, ನಾನೇ ಯೋವಾಬನು” ಎಂದು ಅವನು ಉತ್ತರಿಸಿದನು.
ಆಗ ಅವಳು ಯೋವಾಬಿಗೆ, “ನಾನು ಹೇಳುವುದನ್ನು ಕೇಳು” ಎಂದಳು.
“ಆಗಲಿ, ಕೇಳುತ್ತೇನೆ” ಎಂದು ಯೋವಾಬನು ಉತ್ತರಿಸಿದನು.
18 ಆಗ ಅವಳು, “ಪೂರ್ವಕಾಲದಲ್ಲಿ ಜನರು, ‘ಅಗತ್ಯವಿದ್ದಾಗ ಆಬೇಲಿನವರ ಸಲಹೆಯನ್ನು ಕೇಳಿ, ಆಗ ನಿಮಗೆ ಸೂಕ್ತ ಸಲಹೆ ದೊರಕುತ್ತದೆ’ ಎಂದು ಹೇಳುತ್ತಿದ್ದರು. 19 ನಮ್ಮ ಪಟ್ಟಣವು ಇಸ್ರೇಲರಲ್ಲಿ ಶಾಂತಿಯಿಂದಲೂ ರಾಜನಿಷ್ಠೆಯಿಂದಲೂ ಇದೆ. ಈ ಕಾರಣದಿಂದ ಈ ಪಟ್ಟಣವು ಇಸ್ರೇಲ್ ಪಟ್ಟಣಗಳಲ್ಲಿ ತಾಯಿ ಎನಿಸಿಕೊಂಡಿದೆ. ಇಂಥ ಪಟ್ಟಣವನ್ನು ನೀನು ನಾಶಮಾಡುವುದು ಸರಿಯೋ?” ಎಂದು ಕೇಳಿದಳು.
20 ಅದಕ್ಕೆ ಯೋವಾಬನು, “ಇಲ್ಲ, ಇಲ್ಲ! ನಾನು ಏನನ್ನೂ ನಾಶಪಡಿಸಲು ಇಚ್ಛಿಸಿಲ್ಲ. ನಿಮ್ಮ ಪಟ್ಟಣವನ್ನು ನಾಶಪಡಿಸಲು ನಾನು ಬಂದಿಲ್ಲ. 21 ಆದರೆ ಎಫ್ರಾಯೀಮ್ ಬೆಟ್ಟಪ್ರದೇಶದ ಒಬ್ಬ ಮನುಷ್ಯನಿದ್ದಾನೆ ಅವನನ್ನು ಶೆಬ ಎನ್ನುತ್ತಾರೆ. ಅವನು ಬಿಕ್ರೀಯನ ಮಗನು. ಅವನು ರಾಜನಾದ ದಾವೀದನ ವಿರುದ್ಧ ದಂಗೆ ಎದ್ದಿದ್ದಾನೆ. ನೀನು ಅವನನ್ನು ನನ್ನ ಬಳಿಗೆ ತಂದು ಒಪ್ಪಿಸಿದರೆ, ನಾನು ಈ ನಗರವನ್ನು ಬಿಟ್ಟುಹೋಗುತ್ತೇನೆ” ಎಂದು ಉತ್ತರಿಸಿದನು.
ಅವಳು ಯೋವಾಬನಿಗೆ, “ಸರಿ, ಅವನ ತಲೆಯನ್ನು ಗೋಡೆಯ ಮೇಲಿನಿಂದ ನಿನ್ನ ಕಡೆಗೆ ಎಸೆಯಲಾಗುವುದು” ಎಂದು ಹೇಳಿದಳು.
22 ನಂತರ ಅವಳು ನಗರದ ಎಲ್ಲ ಜನರೊಂದಿಗೆ ಬಹಳ ಜಾಣತನದಿಂದ ಮಾತನಾಡಿದಳು. ಆಗ ಜನರು ಬಿಕ್ರೀಯ ಮಗನಾದ ಶೆಬನ ತಲೆಯನ್ನು ಕತ್ತರಿಸಿಹಾಕಿ ಅದನ್ನು ನಗರದ ಗೋಡೆಯಿಂದಾಚೆಗೆ ಯೋವಾಬನ ಕಡೆಗೆ ಎಸೆದರು.
ಆ ಕೂಡಲೇ ಯೋವಾಬನು ತುತ್ತೂರಿಯನ್ನು ಊದಿಸಿದನು. ಸೈನ್ಯವು ನಗರವನ್ನು ಬಿಟ್ಟುಹೋಯಿತು. ಪ್ರತಿಯೊಬ್ಬರೂ ತಮ್ಮತಮ್ಮ ಮನೆಗಳಿಗೆ ಹಿಂತಿರುಗಿದರು. ಯೋವಾಬನು ಜೆರುಸಲೇಮಿನಲ್ಲಿದ್ದ ರಾಜನ ಬಳಿಗೆ ಹಿಂದಿರುಗಿ ಹೋದನು.
ದಾವೀದನ ಆಸ್ಥಾನದಲ್ಲಿದ್ದ ಜನರು
23 ಯೋವಾಬನು ಇಸ್ರೇಲಿನ ಸೈನ್ಯಕ್ಕೆಲ್ಲ ಮುಖ್ಯ ಸೇನಾಪತಿಯಾಗಿದ್ದನು. ಕೆರೇತ್ಯರಿಗೆ ಮತ್ತು ಪೆಲೇತ್ಯರಿಗೆ ಯೆಹೋಯಾದಾವನ ಮಗನಾದ ಬೆನಾಯನು ಅಧಿಪತಿಯಾಗಿದ್ದನು. 24 ಅದೋರಾಮನು ಬಿಟ್ಟೀಕೆಲಸ ಮಾಡುವವರ ಮೇಲಾಧಿಕಾರಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಇತಿಹಾಸಕಾರನಾಗಿದ್ದನು. 25 ಶೆವನು ಕಾರ್ಯದರ್ಶಿಯಾಗಿದ್ದನು. ಚಾದೋಕ್ ಮತ್ತು ಎಬ್ಯಾತಾರರು ಯಾಜಕರಾಗಿದ್ದರು. 26 ಯಾಯೀರಿನವನಾದ ಈರನು ದಾವೀದನ ಮುಖ್ಯ ಸೇವಕನಾಗಿದ್ದನು.ಮುಖ್ಯ ಸೇವಕನು ಅಕ್ಷರಶಃ, “ಯಾಜಕನು.”

*20:3: ಉಪಪತ್ನಿಯರನ್ನು ಈ ಉಪಪತ್ನಿಯರನ್ನು ಅಬ್ಷಾಲೋಮನು ಕೆಡಿಸಿದನು. ನೋಡಿ: 2 ಸಮುವೇಲ 16:21-22.

20:26: ಮುಖ್ಯ ಸೇವಕನು ಅಕ್ಷರಶಃ, “ಯಾಜಕನು.”