ಎಜ್ರ
1
ಯೆಹೂದ್ಯ ಸೆರೆಯಾಳುಗಳು ಹಿಂತಿರುಗಿ ಹೋಗಲು ಸೈರಸನ ಸಹಾಯ
ಪರ್ಶಿಯಾದ ರಾಜನಾದ ಸೈರಸನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ*ಮೊದಲನೆಯ ವರ್ಷದಲ್ಲಿ ಕ್ರಿ.ಪೂ. 538ನೇ ಇಸವಿ. ಒಂದು ಪ್ರಕಟನೆಯನ್ನು ಹೊರಡಿಸಲು ಯೆಹೋವನು ಅವನನ್ನು ಪ್ರೇರೇಪಿಸಿದನು. ಆ ಪ್ರಕಟನೆಯನ್ನು ಬರೆಯಿಸಿ ತನ್ನ ಸಾಮ್ರಾಜ್ಯದ ಎಲ್ಲಾ ಕಡೆಗಳಲ್ಲಿ ಅವನು ಅದನ್ನು ಓದಿಸಿದನು. ಯೆರೆಮೀಯನ ಮೂಲಕ ಯೆಹೋವನು ಹೇಳಿದ ವಿಷಯಗಳು ನೆರವೇರುವಂತೆ ಇದಾಯಿತು. ಆ ಪ್ರಕಟನೆ ಇಂತಿದೆ:
 
“ಪರ್ಶಿಯಾದ ರಾಜನಾದ ಸೈರಸನ ಪ್ರಕಟನೆ:
ಪರಲೋಕದ ದೇವರಾದ ಯೆಹೋವನು ಭೂಲೋಕದಲ್ಲಿರುವ ಎಲ್ಲಾ ದೇಶಗಳನ್ನು ನನ್ನ ವಶಕ್ಕೆ ಕೊಟ್ಟಿದ್ದಾನೆ. ಯೆಹೂದ ದೇಶದ ಜೆರುಸಲೇಮ್‌ನಲ್ಲಿ ತನಗೊಂದು ಆಲಯವನ್ನು ಕಟ್ಟಲು ಆತನು ನನ್ನನ್ನು ಆರಿಸಿಕೊಂಡಿದ್ದಾನೆ. ಆತನು ಜೆರುಸಲೇಮ್‌ನಲ್ಲಿರುವಾತನೂ ಇಸ್ರೇಲರ ದೇವರೂ ಆಗಿದ್ದಾನೆ. ದೇವಜನರಲ್ಲಿ ಯಾರಾದರೂ ನಿಮ್ಮೊಂದಿಗೆ ವಾಸಿಸುತ್ತಿದ್ದರೆ ದೇವರ ಆಶೀರ್ವಾದವು ಅವರ ಮೇಲಿರಲಿ. ಯೆಹೂದ ಪ್ರಾಂತ್ಯದಲ್ಲಿರುವ ಜೆರುಸಲೇಮಿಗೆ ಹೋಗಲು ಅವರಿಗೆ ಅವಕಾಶಕೊಡಿರಿ. ಅವರು ಹೋಗಿ ಯೆಹೋವನಿಗಾಗಿ ದೇವಾಲಯವನ್ನು ಕಟ್ಟಲಿ. ಆದ್ದರಿಂದ ಯಾವ ಸ್ಥಳದಲ್ಲಿಯಾದರೂ ಇಸ್ರೇಲರಲ್ಲಿ ಉಳಿದವರು ಇದ್ದಲ್ಲಿ ಅಂಥವರಿಗೆ ಆ ಸ್ಥಳದವರು ಸಹಾಯ ಮಾಡಬೇಕು. ಅವರಿಗೆ ಬೆಳ್ಳಿ, ಬಂಗಾರ, ಪಶುಗಳನ್ನು ಮತ್ತು ಇತರ ವಸ್ತುಗಳನ್ನು ಕೊಡಲಿ. ಜೆರುಸಲೇಮಿನಲ್ಲಿನ ದೇವಾಲಯಕ್ಕೆ ಕಾಣಿಕೆಗಳನ್ನು ಕೊಡಲಿ.”
 
ಆಗ ಯೆಹೂದ ಮತ್ತು ಬೆನ್ಯಾಮೀನ್ ಕುಲಗಳ ಪ್ರಧಾನರೂ ನಾಯಕರೂ ಜೆರುಸಲೇಮಿಗೆ ಹೊರಟರು. ದೇವಾಲಯವನ್ನು ಕಟ್ಟಲು ಅವರು ಹೊರಟಾಗ ದೇವರಿಂದ ಪ್ರೋತ್ಸಾಹಿಸಲ್ಪಟ್ಟ ಇತರ ಜನರೂ ಅವರೊಂದಿಗೆ ಜೆರುಸಲೇಮಿಗೆ ಹೊರಟರು. ಅವರ ನೆರೆಹೊರೆಯವರು ಅವರಿಗೆ ತುಂಬಾ ಕಾಣಿಕೆಗಳನ್ನು ಕೊಟ್ಟರು. ಅವರಿಗೆ ಬೆಳ್ಳಿಬಂಗಾರಗಳನ್ನು, ಪಶುಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಧಾರಾಳವಾಗಿ ಕೊಟ್ಟರು. ಅಲ್ಲದೆ ಸೈರಸ್ ರಾಜನು ದೇವಾಲಯಕ್ಕೆ ಸಂಬಂಧಿಸಿದ ವಸ್ತುಗಳನ್ನೆಲ್ಲಾ ಹೊರತೆಗೆದನು. ನೆಬೂಕದ್ನೆಚ್ಚರ ಅರಸನು ಜೆರುಸಲೇಮ್ ದೇವಾಲಯದಿಂದ ಸೂರೆಮಾಡಿ ತಂದ ಸಾಮಾಗ್ರಿಗಳನ್ನು ತನ್ನ ವಿಗ್ರಹಗಳನ್ನಿಡುವ ಕೋಣೆಯಲ್ಲಿ ಇಟ್ಟಿದ್ದನು. ಪರ್ಶಿಯಾದ ರಾಜನಾದ ಸೈರಸ್ ತನ್ನ ಖಜಾನೆಯ ಮೇಲ್ವಿಚಾರಕನಾದ ಮಿತ್ರದಾತನಿಗೆ ಆ ವಸ್ತುಗಳನ್ನು ಹೊರತರಲು ಹೇಳಿದನು. ಮಿತ್ರದಾತನು ಯೆಹೂದ ನಾಯಕನಾದ ಶೆಷ್ಬಚ್ಚರನಿಗೆ ಆ ವಸ್ತುಗಳನ್ನು ಕೊಟ್ಟನು.
ಅವು ಯಾವುವೆಂದರೆ: ಬಂಗಾರದ ಬೋಗುಣಿಗಳು 30 ಬೆಳ್ಳಿ ಬೋಗುಣಿಗಳು 1,000 ಕತ್ತಿಗಳು ಮತ್ತು ಪಾತ್ರೆಗಳು 29 10 ಚಿನ್ನದ ಬಟ್ಟಲುಗಳು 30 ಬೆಳ್ಳಿಯ ಬಟ್ಟಲುಗಳು 410 ಇತರ ಪಾತ್ರೆಗಳು 1,000
11 ಒಟ್ಟು ಬೆಳ್ಳಿಬಂಗಾರದ ಪಾತ್ರೆಗಳು ಐದು ಸಾವಿರದ ನಾನೂರು. ಸೆರೆಯವರು ಬಾಬಿಲೋನ್ ನಗರವನ್ನು ಬಿಟ್ಟು ಜೆರುಸಲೇಮಿಗೆ ಹೊರಟಾಗ ಈ ವಸ್ತುಗಳೆಲ್ಲಾ ಶೆಷ್ಬಚ್ಚರನ ವಶದಲ್ಲಿದ್ದವು.

*1:1: ಮೊದಲನೆಯ ವರ್ಷದಲ್ಲಿ ಕ್ರಿ.ಪೂ. 538ನೇ ಇಸವಿ.