2
ಪವಿತ್ರಾತ್ಮನ ಆಗಮನ
1 ಪಂಚಾಶತ್ತಮ ಹಬ್ಬದ ದಿನ ಬಂದಾಗ ಅವರೆಲ್ಲರು ಒಂದು ಸ್ಥಳದಲ್ಲಿ ಒಟ್ಟಾಗಿ ಸೇರಿದ್ದರು.
2 ಆಗ, ಆಕಾಶದಿಂದ ಒಂದು ಶಬ್ದ ಇದ್ದಕ್ಕಿದ್ದಂತೆ ಬಂದಿತು. ಬಿರುಗಾಳಿ ಬೀಸುತ್ತಿದೆಯೋ ಎಂಬಂತಿತ್ತು ಆ ಶಬ್ದ. ಅವರು ಕುಳಿತುಕೊಂಡಿದ್ದ ಮನೆಯಲ್ಲೆಲ್ಲಾ ಆ ಶಬ್ದ ತುಂಬಿಕೊಂಡಿತು.
3 ಬೆಂಕಿಯ ಜ್ವಾಲೆಗಳಂತಿದ್ದ ಏನನ್ನೊ ಅವರು ಕಂಡರು. ಜ್ವಾಲೆಗಳು ವಿಂಗಡವಾಗಿ ಅಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ನೆಲೆಸಿದವು.
4 ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ವಿವಿಧ ಭಾಷೆಗಳಲ್ಲಿ ಮಾತಾಡತೊಡಗಿದರು. ಪವಿತ್ರಾತ್ಮನೇ ಅವರಿಗೆ ಆ ಶಕ್ತಿಯನ್ನು ಕೊಟ್ಟನು.
5 ಬಹು ಧಾರ್ಮಿಕರಾದ ಅನೇಕ ಯೆಹೂದ್ಯರು ಆ ಸಮಯದಲ್ಲಿ ಜೆರುಸಲೇಮಿನಲ್ಲಿದ್ದರು. ಇವರಲ್ಲಿ ಪ್ರಪಂಚದ ಪ್ರತಿಯೊಂದು ದೇಶದಿಂದ ಬಂದ ಜನರಿದ್ದರು.
6 ಈ ಶಬ್ದವನ್ನು ಕೇಳಿ ಈ ಜನರ ಒಂದು ದೊಡ್ಡ ಸಮೂಹವೇ ಅಲ್ಲಿಗೆ ಬಂದಿತು. ಅಪೊಸ್ತಲರು ಮಾತಾಡುತ್ತಿರುವುದು ಪ್ರತಿಯೊಬ್ಬರಿಗೂ ಅವರವರ ಸ್ವಂತ ಭಾಷೆಗಳಲ್ಲಿ ಕೇಳಿಸುತ್ತಿರುವುದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು.
7 ಇದನ್ನು ನೋಡಿದ ಯೆಹೂದ್ಯರೆಲ್ಲರೂ ವಿಸ್ಮಯಗೊಂಡರು. ಹೀಗೆ ಮಾಡಲು ಅಪೊಸ್ತಲರಿಗೆ ಹೇಗೆ ಸಾಧ್ಯವಾಯಿತೆಂದು ಅವರಿಗೆ ಅರ್ಥವಾಗಲಿಲ್ಲ. ಅವರು, “ಮಾತಾಡುತ್ತಿರುವ ಈ ಜನರು (ಅಪೊಸ್ತಲರು) ಗಲಿಲಾಯದವರು!
8 ಆದರೆ ಇವರು ನಮ್ಮ ಸ್ವಂತ ಭಾಷೆಗಳಲ್ಲಿ ಮಾತಾಡುತ್ತಿರುವಂತೆ ಕೇಳಿಸುತ್ತಿದೆ. ಇದು ಹೇಗೆ ಸಾಧ್ಯ? ನಾವು ಬೇರೆಬೇರೆ ಸ್ಥಳಗಳವರು.
9 ನಮ್ಮಲ್ಲಿ ಪಾರ್ಥ್ಯರು, ಮೇದ್ಯರು, ಏಲಾಮಿನವರು, ಮೆಸೊಪೊಟೇಮದವರು, ಯೂದಾಯದವರು, ಕಪ್ಪದೋಕ್ಯಯದವರು, ಪೊಂತದವರು, ಏಷ್ಯಾದವರು,
10 ಫ್ರಿಜಿಯದವರು, ಪಾಂಫಿಲಿಯದವರು, ಈಜಿಪ್ಟ್‌ನವರು ಮತ್ತು ಸಿರೇನಿನ ಬಳಿಯಲ್ಲಿರುವ ಲಿಬಿಯ ಪ್ರಾಂತ್ಯದವರು, ರೋಮ್‌ನವರು,
11 ಕ್ರೇಟ್‌ನವರು ಮತ್ತು ಅರೇಬಿಯವರು ಇದ್ದಾರೆ. ನಮ್ಮಲ್ಲಿರುವ ಕೆಲವು ಜನರು ಹುಟ್ಟು ಯೆಹೂದ್ಯರು. ಉಳಿದವರು ಮತಾಂತರ ಹೊಂದಿದವರು. ನಾವು ಬೇರೆಬೇರೆ ದೇಶಗಳವರು. ಆದರೆ ಈ ಜನರು ಮಾತಾಡುತ್ತಿರುವುದು ನಮ್ಮ ಸ್ವಂತ ಭಾಷೆಗಳಲ್ಲಿ ನಮಗೆ ಕೇಳಿಸುತ್ತಿದೆ! ಅವರು ದೇವರ ಬಗ್ಗೆ ಹೇಳುತ್ತಿರುವ ಮಹಾಸಂಗತಿಗಳು ನಮಗೆಲ್ಲರಿಗೂ ಅರ್ಥವಾಗುತ್ತಿವೆ” ಎಂದು ಹೇಳಿದರು.
12 ಜನರೆಲ್ಲರೂ ವಿಸ್ಮಯಗೊಂಡರು ಮತ್ತು ಗಲಿಬಿಲಿಯಾದರು. ಅವರು, “ಏನು ನಡೆಯುತ್ತಿದೆ?” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು.
13 ಕೆಲವರು ಅಪೊಸ್ತಲರನ್ನು ನೋಡಿ ನಗುತ್ತಾ, “ಇವರು ಅತಿಯಾಗಿ ದ್ರಾಕ್ಷಾರಸ ಕುಡಿದು ಮತ್ತರಾಗಿದ್ದಾರೆ” ಎಂದು ಹಾಸ್ಯಮಾಡಿದರು.
ಪೇತ್ರನ ಪ್ರಸಂಗ
14 ಬಳಿಕ ಪೇತ್ರನು ಉಳಿದ ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎದ್ದುನಿಂತುಕೊಂಡನು. ಎಲ್ಲಾ ಜನರಿಗೆ ಕೇಳುವಂತೆ ಅವನು ಗಟ್ಟಿಯಾಗಿ ಹೀಗೆಂದನು: “ಯೆಹೂದ್ಯರೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರೇ, ನನಗೆ ಕಿವಿಗೊಡಿರಿ. ನೀವು ತಿಳಿದುಕೊಳ್ಳಬೇಕಾದ ಸಂಗತಿಯನ್ನು ನಾನು ನಿಮಗೆ ಹೇಳುತ್ತೇನೆ.
15 ನೀವು ಯೋಚಿಸಿಕೊಂಡಿರುವಂತೆ ಈ ಜನರು ಕುಡಿದು ಮತ್ತರಾದವರಲ್ಲ. ಈಗ ಮುಂಜಾನೆ ಒಂಭತ್ತು ಗಂಟೆಯಷ್ಟೆ!
16 ಆದರೆ ಈ ಹೊತ್ತು ಇಲ್ಲಿ ನಡೆಯುತ್ತಿರುವ ಸಂಗತಿಗಳ ಬಗ್ಗೆ ಪ್ರವಾದಿಯಾದ ಯೋವೇಲನು ಹೀಗೆ ಬರೆದಿದ್ದಾನೆ:
17 ‘ದೇವರು ಹೀಗೆನ್ನುತ್ತಾನೆ:
ಕೊನೆಯ ದಿನಗಳಲ್ಲಿ, ನಾನು ನನ್ನ ಆತ್ಮವನ್ನು ಎಲ್ಲಾ ಜನರ ಮೇಲೆ ಸುರಿಸುವೆನು.
ನಿಮ್ಮ ಗಂಡುಮಕ್ಕಳು, ಹೆಣ್ಣುಮಕ್ಕಳು ಪ್ರವಾದಿಸುವರು.
ನಿಮ್ಮ ಯುವಜನರು ದರ್ಶನಗಳನ್ನು ಕಾಣುವರು.
ನಿಮ್ಮ ವಯೋವೃದ್ಧರು ವಿಶೇಷ ಕನಸುಗಳನ್ನು ಕಾಣುವರು.
18 ಆ ಸಮಯದಲ್ಲಿ ನಾನು ನನ್ನ ಆತ್ಮವನ್ನು ನನ್ನ ದಾಸದಾಸಿಯರ ಮೇಲೆ ಸುರಿಸುವೆನು.
ಆಗ ಅವರು ಪ್ರವಾದಿಸುವರು.
19 ನಾನು ಆಕಾಶದಲ್ಲಿ ಅದ್ಭುತಕಾರ್ಯಗಳನ್ನು ತೋರಿಸುವೆನು.
ಭೂಮಿಯ ಮೇಲೆ ಸೂಚಕಕಾರ್ಯಗಳನ್ನು ಮಾಡುವೆನು.
ರಕ್ತ, ಬೆಂಕಿ ಮತ್ತು ಕಪ್ಪೊಗೆಗಳು ಅಲ್ಲಿರುವವು.
20 ಸೂರ್ಯನು ಕತ್ತಲಾಗುವನು,
ಚಂದ್ರನು ರಕ್ತದಂತೆ ಕೆಂಪಾಗುವನು,
ಆಗ ಪ್ರಭುವಿನ ಗಂಭೀರವಾದ ಮಹಾದಿನವು ಬರುವುದು;
21 ಪ್ರಭುವಿನ ಹೆಸರನ್ನು ಹೇಳಿಕೊಳ್ಳುವವರಿಗೆಲ್ಲ ರಕ್ಷಣೆ ಆಗುವುದು.’ ಯೋವೇಲ 2:28-32
22 “ಯೆಹೂದ್ಯರೇ, ಈ ಮಾತುಗಳನ್ನು ಕೇಳಿರಿ: ನಜರೇತಿನ ಯೇಸು ಬಹು ವಿಶೇಷವಾದ ವ್ಯಕ್ತಿ. ದೇವರು ತಾನು ಯೇಸುವಿನ ಮೂಲಕ ಮಾಡಿದ ಶಕ್ತಿಯುತವಾದ ಮತ್ತು ಅದ್ಭುತವಾದ ಕಾರ್ಯಗಳ ಮೂಲಕ ಇದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾನೆ. ಈ ಸಂಗತಿಗಳನ್ನು ನೀವೆಲ್ಲರೂ ನೋಡಿದಿರಿ. ಆದ್ದರಿಂದ ಇದು ಸತ್ಯವೆಂದು ನಿಮಗೆ ಗೊತ್ತಿದೆ.
23 ಯೇಸುವನ್ನು ನಿಮಗೆ ಒಪ್ಪಿಸಲಾಯಿತು. ನೀವು ಕೆಟ್ಟಜನರ ಸಹಾಯದಿಂದ ಆತನನ್ನು ಶಿಲುಬೆಗೇರಿಸಿದಿರಿ. ಆದರೆ ಇವುಗಳೆಲ್ಲಾ ಸಂಭವಿಸುತ್ತವೆಯೆಂದು ದೇವರಿಗೆ ಗೊತ್ತಿತ್ತು. ಇದು ದೇವರ ಯೋಜನೆ. ದೇವರು ಬಹು ಕಾಲದ ಹಿಂದೆಯೇ ಈ ಯೋಜನೆಯನ್ನು ಮಾಡಿದನು.
24 ಯೇಸು ಮರಣವೇದನೆಯನ್ನು ಅನುಭವಿಸಿದನು. ಆದರೆ ದೇವರು ಆತನನ್ನು ಬಿಡಿಸಿದನು. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಮರಣವು ಯೇಸುವನ್ನು ಹಿಡಿದುಕೊಳ್ಳಲಾಗಲಿಲ್ಲ.
25 ಯೇಸುವಿನ ಬಗ್ಗೆ ದಾವೀದನು ಹೀಗೆ ಹೇಳಿದ್ದಾನೆ:
‘ಪ್ರಭುವು ಯಾವಾಗಲೂ ನನ್ನ ಮುಂದೆ ಇರುವುದನ್ನು ನಾನು ನೋಡುತ್ತಿದ್ದೆನು;
ನನ್ನನ್ನು ಸುರಕ್ಷಿತವಾಗಿಡಲು ಆತನು ನನ್ನ ಬಲಗಡೆಯಲ್ಲಿದ್ದಾನೆ.
26 ಆದ್ದರಿಂದ ನನ್ನ ಹೃದಯವು ಹರ್ಷಿಸುತ್ತದೆ.
ನನ್ನ ಬಾಯಿ ಆನಂದದಿಂದ ಮಾತಾಡುತ್ತದೆ.
ಹೌದು, ನನ್ನ ದೇಹವು ಸಹ ನಿರೀಕ್ಷೆಯಿಂದ ಜೀವಿಸುವುದು;
27 ಯಾಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ತೊರೆದುಬಿಡುವುದಿಲ್ಲ.
ನಿನ್ನ ಪರಿಶುದ್ಧನ ದೇಹವು ಸಮಾಧಿಯಲ್ಲಿ ಕೊಳೆಯಲು ನೀನು ಅವಕಾಶ ಕೊಡುವುದಿಲ್ಲ.
28 ಹೇಗೆ ಜೀವಿಸಬೇಕೆಂಬುದನ್ನು ನೀನು ನನಗೆ ಉಪದೇಶಿಸಿದೆ.
ನಿನ್ನ ಪ್ರಸನ್ನತೆಯು ನನ್ನಲ್ಲಿ ಮಹಾ ಆನಂದವನ್ನು ಉಂಟುಮಾಡುವುದು.’ ಕೀರ್ತನೆ. 16:8-11
29 “ನನ್ನ ಸಹೋದರರೇ, ನಮ್ಮ ಪಿತೃವಾದ ದಾವೀದನ ಬಗ್ಗೆ ನಾನು ನಿಮಗೆ ನಿಜವಾಗಿಯೂ ಹೇಳಬಲ್ಲೆನು. ಅವನು ಸತ್ತುಹೋದನು ಮತ್ತು ಅವನಿಗೆ ಸಮಾಧಿಯಾಯಿತು. ಅವನ ಸಮಾಧಿಯು ನಮ್ಮ ಮಧ್ಯದಲ್ಲಿ ಇಂದಿನವರೆಗೂ ಇದೆ.
30 ದಾವೀದನು ಒಬ್ಬ ಪ್ರವಾದಿಯಾಗಿದ್ದನು ಮತ್ತು ‘ನಿನ್ನ ಕುಟುಂಬದ ಒಬ್ಬನನ್ನು ನಿನ್ನಂತೆಯೇ ರಾಜನನ್ನಾಗಿ ಮಾಡುವೆನು’ ಎಂದು ದೇವರು ಅವನಿಗೆ ಆಣೆಯಿಟ್ಟು ವಾಗ್ದಾನ ಮಾಡಿದ್ದು ಅವನಿಗೆ ಗೊತ್ತಿತ್ತು.
31 ಅದು ನೆರವೇರುವುದಕ್ಕಿಂತ ಮೊದಲೇ ದಾವೀದನಿಗೆ ತಿಳಿದಿತ್ತು. ಆದಕಾರಣ ದಾವೀದನು ಪುನರುತ್ಥಾನ ಹೊಂದುವ ಕ್ರಿಸ್ತನ ಬಗ್ಗೆ,
‘ಆತನನ್ನು ಪಾತಾಳದಲ್ಲಿ ಬಿಡಲ್ಪಡಲಿಲ್ಲ.
ಆತನ ದೇಹವು ಸಮಾಧಿಯಲ್ಲಿ ಕೊಳೆಯಲಿಲ್ಲ’
ಎಂದಿದ್ದಾನೆ.
32 ಆದ್ದರಿಂದ ದೇವರು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದು ಯೇಸುವನ್ನೇ ಹೊರತು ದಾವೀದನನ್ನಲ್ಲ! ಇದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ನಾವು ಆತನನ್ನು ಕಂಡೆವು!
33 ಯೇಸು ಪರಲೋಕಕ್ಕೆ ಎತ್ತಲ್ಪಟ್ಟನು. ಈಗ ಯೇಸು ದೇವರೊಂದಿಗಿದ್ದಾನೆ, ದೇವರ ಬಲಗಡೆಯಲ್ಲಿದ್ದಾನೆ. ಈಗ ತಂದೆಯು (ದೇವರು) ಪವಿತ್ರಾತ್ಮನನ್ನು ಯೇಸುವಿಗೆ ಕೊಟ್ಟಿದ್ದಾನೆ. ಪವಿತ್ರಾತ್ಮನನ್ನು ಕೊಡುವುದಾಗಿ ದೇವರು ವಾಗ್ದಾನ ಮಾಡಿದ್ದನು. ಆದ್ದರಿಂದ ಯೇಸು ಈಗ ಆ ಆತ್ಮನನ್ನು ಸುರಿಸಿದ್ದಾನೆ. ನೀವು ನೋಡುತ್ತಿರುವುದು ಮತ್ತು ಕೇಳುತ್ತಿರುವುದು ಇದನ್ನೇ.
34-35 ಪರಲೋಕಕ್ಕೆ ಎತ್ತಲ್ಪಟ್ಟವನು ದಾವೀದನಲ್ಲ, ಯೇಸುವೇ. ದಾವೀದನೇ ಅದರ ಬಗ್ಗೆ ಹೇಳುತ್ತಾ,
‘ಪ್ರಭುವು (ದೇವರು) ನನ್ನ ಪ್ರಭುವಿಗೆ,
ನಾನು ನಿನ್ನ ಶತ್ರುಗಳನ್ನು ನಿನ್ನ ಪಾದಗಳಿಗೆ ಪೀಠವಾಗಿ ಮಾಡುವ ತನಕ
ನನ್ನ ಬಲಗಡೆಯಲ್ಲಿ ಕುಳಿತುಕೊ ಎಂದು ತಿಳಿಸಿದನು’ ಎಂದಿದ್ದಾನೆ. ಕೀರ್ತನೆ. 110:1
36 “ಆದ್ದರಿಂದ ಯೆಹೂದ್ಯರೆಲ್ಲರೂ ಇದನ್ನು ನಿಜವಾಗಿಯೂ ತಿಳಿದುಕೊಳ್ಳಬೇಕು. ದೇವರು ಯೇಸುವನ್ನು ಪ್ರಭುವನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ. ನೀವು ಶಿಲುಬೆಗೇರಿಸಿದ ವ್ಯಕ್ತಿಯೇ ಆತನು!”
37 ಇದನ್ನು ಕೇಳಿದಾಗ, ಅವರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪೇತ್ರನನ್ನು ಮತ್ತು ಉಳಿದ ಅಪೊಸ್ತಲರನ್ನು, “ಈಗ ನಾವೇನು ಮಾಡಬೇಕು?” ಎಂದು ಕೇಳಿದರು.
38 ಪೇತ್ರನು ಅವರಿಗೆ, “ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ದೇವರು ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಲ್ಲದೆ ದೇವರು ವಾಗ್ದಾನ ಮಾಡಿರುವ ಪವಿತ್ರಾತ್ಮನನ್ನು ಹೊಂದಿಕೊಳ್ಳುವಿರಿ.
39 ಈ ವಾಗ್ದಾನವನ್ನು ನಿಮಗೂ ನಿಮ್ಮ ಮಕ್ಕಳಿಗೂ ಬಹು ದೂರದಲ್ಲಿರುವ ಜನರಿಗೂ ಕೊಡಲಾಗಿದೆ. ನಮ್ಮ ದೇವರಾದ ಪ್ರಭುವು ತನ್ನ ಬಳಿಗೆ ಕರೆಯುವ ಪ್ರತಿಯೊಬ್ಬರಿಗೂ ಈ ವಾಗ್ದಾನವನ್ನು ಕೊಟ್ಟಿದ್ದಾನೆ” ಎಂದು ಹೇಳಿದನು.
40 ಪೇತ್ರನು ಇನ್ನೂ ಅನೇಕ ಮಾತುಗಳಿಂದ ಅವರನ್ನು ಎಚ್ಚರಿಸಿ, “ಈ ದುಷ್ಟ ಸಂತತಿಯಿಂದ ತಪ್ಪಿಸಿಕೊಳ್ಳಿ” ಎಂದು ಬೇಡಿಕೊಂಡನು.
41 ಪೇತ್ರನು ಹೇಳಿದ್ದನ್ನು ಸ್ವೀಕರಿಸಿಕೊಂಡ ಜನರು ದೀಕ್ಷಾಸ್ನಾನ ಮಾಡಿಸಿಕೊಂಡರು. ಆ ದಿನ ಸುಮಾರು ಮೂರುಸಾವಿರ ಜನರು ವಿಶ್ವಾಸಿಗಳ ಗುಂಪಿಗೆ ಸೇರಿದರು.
ಅನ್ಯೋನ್ಯ ಜೀವನ
42 ಇವರೆಲ್ಲರೂ ಅಪೊಸ್ತಲರ ಬೋಧನೆಯನ್ನು ಕೇಳುವುದರಲ್ಲಿಯೂ ಸಹೋದರರ ಅನ್ಯೋನ್ಯತೆಯಲ್ಲಿಯೂ ರೊಟ್ಟಿ ಮುರಿಯುವುದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು.
43 ಅಪೊಸ್ತಲರು ಅನೇಕ ಶಕ್ತಿಯುತ ಮತ್ತು ಅದ್ಭುತಕಾರ್ಯಗಳನ್ನು ಮಾಡುತ್ತಿದ್ದರು; ಮತ್ತು ಪ್ರತಿಯೊಬ್ಬರಿಗೂ ದೇವರಲ್ಲಿ ಭಯಭಕ್ತಿ ಉಂಟಾಯಿತು.
44 ಎಲ್ಲಾ ವಿಶ್ವಾಸಿಗಳು ಒಟ್ಟಾಗಿ ವಾಸಿಸುತ್ತಿದ್ದರು. ಅವರು ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಿದ್ದರು.
45 ತಮ್ಮ ಜಮೀನನ್ನು ಮತ್ತು ತಾವು ಹೊಂದಿದ್ದ ವಸ್ತುಗಳನ್ನು ಮಾರಿ, ಬಂದ ಹಣವನ್ನೆಲ್ಲಾ ಕೊರತೆಯಲ್ಲಿದ್ದವರಿಗೆ ಹಂಚಿಕೊಡುತ್ತಿದ್ದರು;
46 ಪ್ರತಿದಿನ ದೇವಾಲಯದಲ್ಲಿ ಸೇರಿಬರುತ್ತಿದ್ದರು. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು. ಅವರು ತಮ್ಮ ಮನೆಗಳಲ್ಲಿ ರೊಟ್ಟಿ ಮುರಿದು ಒಟ್ಟಾಗಿ ಊಟ ಮಾಡುತ್ತಿದ್ದರು. ಅವರ ಹೃದಯಗಳು ಆನಂದದಿಂದ ತುಂಬಿದ್ದವು.
47 ಅವರು ದೇವರನ್ನು ಕೊಂಡಾಡುತ್ತಿದ್ದರು ಮತ್ತು ಜನರೆಲ್ಲರೂ ಅವರನ್ನು ಇಷ್ಟಪಡುತ್ತಿದ್ದರು. ಪ್ರತಿದಿನವೂ ಹೆಚ್ಚುಹೆಚ್ಚು ಜನರು ರಕ್ಷಣೆ ಹೊಂದುತ್ತಿದ್ದರು; ಪ್ರಭುವು ಅವರನ್ನೆಲ್ಲಾ ವಿಶ್ವಾಸಿಗಳ ಸಭೆಗೆ ಸೇರಿಸುತ್ತಿದ್ದನು.