19
1 ಬಳಿಕ, ಯೇಸುವನ್ನು ಕರೆದುಕೊಂಡು ಹೋಗಿ, ಕೊರಡೆಯಿಂದ ಹೊಡೆಯಬೇಕೆಂದು ಪಿಲಾತನು ಆಜ್ಞಾಪಿಸಿದನು.
2 ಸೈನಿಕರು ಮುಳ್ಳುಬಳ್ಳಿಗಳಿಂದ ಒಂದು ಕಿರೀಟವನ್ನು ಮಾಡಿ ಯೇಸುವಿನ ತಲೆಯ ಮೇಲೆ ಇಟ್ಟರು. ಬಳಿಕ ಸೈನಿಕರು ಯೇಸುವಿಗೆ ಕಡುಕೆಂಪಾದ ಅಂಗಿಯನ್ನು ತೊಡಿಸಿದರು.
3 ಸೈನಿಕರು ಪದೇಪದೇ ಯೇಸುವಿನ ಬಳಿಗೆ ಬಂದು, “ಯೆಹೂದ್ಯರ ರಾಜನೇ, ನಿನಗೆ ನಮಸ್ಕಾರ!” ಎಂದು ಹೇಳುತ್ತಾ ಆತನ ಕೆನ್ನೆಗೆ ಹೊಡೆದರು.
4 ಪಿಲಾತನು ಮತ್ತೆ ಹೊರಗೆ ಬಂದು, ಯೆಹೂದ್ಯರಿಗೆ, “ನೋಡಿ! ನಾನು ಯೇಸುವನ್ನು ನಿಮ್ಮ ಬಳಿಗೆ ತರುತ್ತಿದ್ದೇನೆ. ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ ಎಂಬುದು ನಿಮಗೆ ತಿಳಿದಿರಲಿ” ಎಂದು ಹೇಳಿದನು.
5 ಆಗ ಯೇಸು ಹೊರಗೆ ಬಂದನು. ಆತನ ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ಇಟ್ಟಿದ್ದರು ಮತ್ತು ಕೆಂಪು ಅಂಗಿಯನ್ನು ಆತನಿಗೆ ತೊಡಿಸಿದ್ದರು. ಪಿಲಾತನು ಯೆಹೂದ್ಯರಿಗೆ, “ಇಗೋ, ಈ ಮನುಷ್ಯನು!” ಎಂದು ಹೇಳಿದನು.
6 ಮಹಾಯಾಜಕರು ಮತ್ತು ಯೆಹೂದ್ಯ ಕಾವಲುಗಾರರು ಯೇಸುವನ್ನು ಕಂಡು, “ಅವನನ್ನು ಶಿಲುಬೆಗೆ ಹಾಕಿಸು! ಅವನನ್ನು ಶಿಲುಬೆಗೆ ಹಾಕಿಸು!” ಎಂದು ಕೂಗಿದರು.
ಆದರೆ ಪಿಲಾತನು, “ನೀವೇ ಆತನನ್ನು ಶಿಲುಬೆಗೆ ಹಾಕಿರಿ. ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ” ಎಂದು ಉತ್ತರಕೊಟ್ಟನು.
7 ಯೆಹೂದ್ಯರು, “ನಮಗೊಂದು ನಿಯಮವಿದೆ. ಅದರ ಪ್ರಕಾರ ಇವನಿಗೆ ಮರಣದಂಡನೆ ಆಗಲೇಬೇಕು. ಯಾಕೆಂದರೆ ಇವನು ತನ್ನನ್ನು ದೇವರ ಮಗನೆಂದು ಹೇಳಿಕೊಂಡಿದ್ದಾನೆ” ಎಂದು ಉತ್ತರಕೊಟ್ಟರು.
8 ಪಿಲಾತನು ಇದನ್ನು ಕೇಳಿ ಬಹು ಭಯಗೊಂಡು,
9 ಮತ್ತೆ ಭವನದೊಳಗೆ ಹೋಗಿ, ಯೇಸುವಿಗೆ, “ನೀನು ಎಲ್ಲಿಯವನು?” ಎಂದು ಕೇಳಿದನು. ಆದರೆ ಯೇಸು ಮೌನವಾಗಿದ್ದನು.
10 ಪಿಲಾತನು, “ನೀನು ನನ್ನೊಂದಿಗೆ ಮಾತಾಡುವುದಿಲ್ಲವೇ? ನಿನ್ನನ್ನು ಬಿಡಿಸುವ ಅಧಿಕಾರವೂ ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗಿದೆ ಎಂಬುದು ನಿನಗೆ ತಿಳಿಯದೋ?” ಎಂದನು.
11 ಯೇಸು “ನನ್ನ ಮೇಲೆ ನಿನಗಿರುವ ಅಧಿಕಾರವೆಂದರೆ ದೇವರು ನಿನಗೆ ಕೊಟ್ಟಿರುವ ಅಧಿಕಾರವೊಂದೇ. ಆದ್ದರಿಂದ ನನ್ನನ್ನು ನಿನ್ನ ಕೈಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪದೋಷವಿರುವುದು” ಎಂದು ಉತ್ತರಕೊಟ್ಟನು.
12 ಇದಾದ ಮೇಲೆ, ಯೇಸುವನ್ನು ಬಿಡುಗಡೆ ಮಾಡಲು ಪಿಲಾತನು ಪ್ರಯತ್ನಿಸಿದನು. ಆದರೆ ಯೆಹೂದ್ಯರು, “ತನ್ನನ್ನು ರಾಜನೆಂದು ಹೇಳಿಕೊಳ್ಳುವ ಯಾವ ವ್ಯಕ್ತಿಯಾಗಲಿ ಸೀಸರನ ವಿರೋಧಿಯಾಗಿದ್ದಾನೆ. ಆದ್ದರಿಂದ ನೀನು ಈ ಮನುಷ್ಯನನ್ನು (ಯೇಸುವನ್ನು) ಬಿಡುಗಡೆ ಮಾಡಿದರೆ, ನೀನು ಸೀಸರನ ಮಿತ್ರನಲ್ಲವೆಂದೇ ಅದರ ಅರ್ಥ” ಎಂದು ಕೂಗಿದರು.
13 ಯೆಹೂದ್ಯರು ಹೇಳಿದ್ದನ್ನು ಕೇಳಿ ಪಿಲಾತನು ಯೇಸುವನ್ನು ಹೊರಗೆ ಕರೆಯಿಸಿ, “ಹಾಸುಗಲ್ಲು” ಎಂಬ ಕಟ್ಟೆಯ (ಯೆಹೂದ್ಯರ ಭಾಷೆ ಯಲ್ಲಿ ಅದರ ಹೆಸರು ಗಬ್ಬಥ.) ಮೇಲಿದ್ದ ನ್ಯಾಯಪೀಠದಲ್ಲಿ ಕುಳಿತುಕೊಂಡನು.
14 ಅಂದು ಪಸ್ಕಹಬ್ಬದ ಸಿದ್ಧತೆಯ ದಿನ ಮತ್ತು ಆಗಲೇ ಮಧ್ಯಾಹ್ನವಾಗಿತ್ತು. ಪಿಲಾತನು ಯೆಹೂದ್ಯರಿಗೆ, “ಇಗೋ, ನಿಮ್ಮ ರಾಜನು!” ಎಂದು ಹೇಳಿದನು.
15 ಯೆಹೂದ್ಯರು, “ಕೊಲ್ಲಿರಿ, ಕೊಲ್ಲಿರಿ; ಅವನನ್ನು ಶಿಲುಬೆಗೇರಿಸಿರಿ!” ಎಂದು ಕಿರುಚಿದರು.
ಪಿಲಾತನು ಯೆಹೂದ್ಯರಿಗೆ, “ನಿಮ್ಮ ರಾಜನನ್ನು ಶಿಲುಬೆಗೇರಿಸಬೇಕೇ?” ಎಂದು ಕೇಳಿದನು.
ಮಹಾಯಾಜಕರು, “ನಮಗಿರುವ ಒಬ್ಬನೇ ರಾಜನೆಂದರೆ ಸೀಸರ್!” ಎಂದು ಉತ್ತರಕೊಟ್ಟರು.
16 ಆಗ ಪಿಲಾತನು, ಯೇಸುವನ್ನು ಶಿಲುಬೆಗೇರಿಸಲು ಅವರಿಗೆ ಒಪ್ಪಿಸಿಕೊಟ್ಟನು.
ಯೇಸುವನ್ನು ಶಿಲುಬೆಗೇರಿಸಿದರು
(ಮತ್ತಾಯ 27:32-44; ಮಾರ್ಕ 15:21-32; ಲೂಕ 23:26-39)
ಸೈನಿಕರು ಯೇಸುವನ್ನು ಕರೆದೊಯ್ದರು.
17 ಯೇಸು ತನ್ನ ಸ್ವಂತ ಶಿಲುಬೆಯನ್ನು ಹೊತ್ತುಕೊಂಡು, “ಕಪಾಲ” ಎಂಬ ಸ್ಥಳಕ್ಕೆ ಹೊರಟನು. (ಯೆಹೂದ್ಯರ ಭಾಷೆಯಲ್ಲಿ ಈ ಸ್ಥಳದ ಹೆಸರು “ಗೊಲ್ಗೊಥಾ.”)
18 ಅವರು ಗೊಲ್ಗೊಥಾದಲ್ಲಿ ಯೇಸವನ್ನೂ ಆತನ ಸಂಗಡ ಇನ್ನಿಬ್ಬರನ್ನೂ ಶಿಲುಬೆಗೇರಿಸಿದರು. ಅವರಿಬ್ಬರನ್ನು ಯೇಸುವಿನ ಎರಡು ಕಡೆಗಳಲ್ಲಿ ಹಾಕಿ, ಯೇಸುವನ್ನು ಅವರ ಮಧ್ಯದಲ್ಲಿ ಹಾಕಿದರು.
19 ಪಿಲಾತನು ಒಂದು ಫಲಕವನ್ನು ಬರೆದು ಶಿಲುಬೆಯ ಮೇಲೆ ಹಚ್ಚಿದನು. ಆ ಫಲಕದಲ್ಲಿ, “ನಜರೇತಿನ ಯೇಸು, ಯೆಹೂದ್ಯರ ರಾಜನು” ಎಂದು ಬರೆದಿತ್ತು.
20 ಆ ಫಲಕವನ್ನು ಯೆಹೂದ್ಯರ ಭಾಷೆಯಲ್ಲಿ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಗಿತ್ತು. ಫಲಕದಲ್ಲಿ ಬರೆದಿರುವುದನ್ನು ಅನೇಕ ಯೆಹೂದ್ಯರು ಓದಿದರು. ಏಕೆಂದರೆ ಯೇಸುವನ್ನು ಶಿಲುಬೆಯ ಮೇಲೆ ಕೊಂದ ಸ್ಥಳವು ಪಟ್ಟಣದ ಸಮೀಪದಲ್ಲಿತ್ತು.
21 ಯೆಹೂದ್ಯ ಮಹಾಯಾಜಕರು ಪಿಲಾತನಿಗೆ, “ ‘ಯೆಹೂದ್ಯರ ರಾಜನು’ ಎಂದು ಬರೆಯಬೇಡ. ಆದರೆ, ‘ಇವನು ತನ್ನನ್ನು ಯೆಹೂದ್ಯರ ರಾಜ ಎಂದು ಹೇಳಿಕೊಂಡನು’ ಎಂಬುದಾಗಿ ಬರೆ” ಎಂದರು.
22 ಪಿಲಾತನು, “ನಾನು ಬರೆದಿರುವುದನ್ನು ಬದಲಾಯಿಸಲಾಗುವುದಿಲ್ಲ” ಎಂದು ಉತ್ತರಕೊಟ್ಟನು.
23 ಸೈನಿಕರು ಯೇಸುವನ್ನು ಶಿಲುಬೆಗೇರಿಸಿದ ಬಳಿಕ ಆತನ ಬಟ್ಟೆಗಳನ್ನು ನಾಲ್ಕು ಭಾಗ ಮಾಡಿ ಒಬ್ಬೊಬ್ಬರು ಒಂದೊಂದು ಭಾಗವನ್ನು ತೆಗೆದುಕೊಂಡರು. ಅಲ್ಲದೆ ಆತನ ಒಳಂಗಿಯನ್ನು ಸಹ ತೆಗೆದುಕೊಂಡರು. ಅದು ಹೊಲಿಗೆಯಿಲ್ಲದೆ ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು.
24 ಆದ್ದರಿಂದ ಸೈನಿಕರು, “ನಾವು ಇದನ್ನು ಹರಿದು ಪಾಲುಮಾಡಬಾರದು. ನಾವು ಚೀಟಿಹಾಕಿ ಇದು ಯಾರಿಗೆ ಬರುತ್ತದೋ ನೋಡೋಣ” ಎಂದು ಮಾತಾಡಿಕೊಂಡು ಹಾಗೆಯೇ ಮಾಡಿದರು.
“ಅವರು ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲು ಮಾಡಿಕೊಂಡರು;
ನನ್ನ ಅಂಗಿಗಾಗಿ ಚೀಟಿ ಹಾಕಿದರು” ಕೀರ್ತನೆ 22:18
ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ಮಾತು ಹೀಗೆ ನೆರವೇರಿತು.
25 ಯೇಸುವಿನ ತಾಯಿ, ತಾಯಿಯ ಸಹೋದರಿ, ಕ್ಲೋಪನ ಹೆಂಡತಿಯಾದ ಮರಿಯಳು ಮತ್ತು ಮಗ್ದಲದ ಮರಿಯಳು ಶಿಲುಬೆಯ ಬಳಿಯಲ್ಲಿ ನಿಂತುಕೊಂಡಿದ್ದರು.
26 ಯೇಸು ತನ್ನ ತಾಯಿಯನ್ನೂ ಅಲ್ಲೇ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಅಮ್ಮಾ, ಇಗೋ, ನಿನ್ನ ಮಗನು” ಎಂದು ಹೇಳಿದನು.
27 ಬಳಿಕ ಯೇಸು ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದನು. ಅಂದಿನಿಂದ ಆ ಶಿಷ್ಯನು ಆಕೆಯನ್ನು ಕರೆದುಕೊಂಡು ಹೋಗಿ ತನ್ನ ಮನೆಯಲ್ಲೇ ಇರಿಸಿಕೊಂಡನು.
ಯೇಸುವಿನ ಮರಣ
(ಮತ್ತಾಯ 27:45-56; ಮಾರ್ಕ 15:33-41; ಲೂಕ 23:44-49)
28 ಇದಾದ ಮೇಲೆ ಎಲ್ಲವೂ ನೆರವೇರಿತೆಂದು ತಿಳಿದುಕೊಂಡು ಪವಿತ್ರ ಗ್ರಂಥದ ಮಾತನ್ನು ನೆರವೇರಿಸುವುದಕ್ಕಾಗಿ ಆತನು, “ನನಗೆ ದಾಹವಾಗಿದೆ” ಎಂದು ಹೇಳಿದನು.
29 ಅಲ್ಲಿ ಹುಳಿರಸ ತುಂಬಿದ ಪಾತ್ರೆಯೊಂದಿತ್ತು. ಸೈನಿಕರು ಸ್ಪಂಜನ್ನು ಹುಳಿರಸದಲ್ಲಿ ತೋಯಿಸಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಅದನ್ನು ಮೇಲೆತ್ತಿ ಯೇಸುವಿನ ಬಾಯಿಗೆ ಮುಟ್ಟಿಸಿದರು.
30 ಯೇಸು ಹುಳಿರಸವನ್ನು ರುಚಿನೋಡಿ, “ತೀರಿತು” ಎಂದು ಹೇಳಿ ತಲೆಬಾಗಿ ಪ್ರಾಣಬಿಟ್ಟನು.
31 ಆ ದಿನವು ಸಿದ್ಧತೆಯ ದಿನವಾಗಿತ್ತು. ಮರುದಿನ ವಿಶೇಷವಾದ ಸಬ್ಬತ್‌ದಿನವಾಗಿತ್ತು. ಸಬ್ಬತ್‌ದಿನದಂದು ದೇಹಗಳು ಶಿಲುಬೆಯ ಮೇಲಿರುವುದು ಯೆಹೂದ್ಯರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅವರ ಕಾಲುಗಳನ್ನು ಮುರಿದು ಬೇಗನೆ ಸಾಯಿಸಲು ಆಜ್ಞಾಪಿಸಬೇಕೆಂಬುದಾಗಿ ಅವರು ಪಿಲಾತನನ್ನು ಕೇಳಿಕೊಂಡರು.
32 ಆದ್ದರಿಂದ ಸೈನಿಕರು ಬಂದು ಯೇಸುವಿನೊಂದಿಗೆ ಶಿಲುಬೆಗೇರಿಸಲ್ಪಟ್ಟಿದ್ದ ಇಬ್ಬರ ಕಾಲುಗಳನ್ನು ಮುರಿದುಹಾಕಿದರು.
33 ಬಳಿಕ ಅವರು ಯೇಸುವಿನ ಅತಿ ಸಮೀಪಕ್ಕೆ ಬಂದಾಗ ಆತನು ಆಗಲೇ ಸತ್ತುಹೋಗಿರುವುದನ್ನು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ.
34 ಆದರೆ ಸೈನಿಕರಲ್ಲಿ ಒಬ್ಬನು ತನ್ನ ಈಟಿಯಿಂದ ಯೇಸುವಿನ ಪಕ್ಕೆಗೆ ತಿವಿದನು. ಪಕ್ಕೆಯಿಂದ ರಕ್ತ ಮತ್ತು ನೀರು ಹೊರಗೆ ಹರಿದುಬಂದವು.
35 (ಇದನ್ನು ಕಂಡವನೇ ಇದರ ಬಗ್ಗೆ ಹೇಳಿದ್ದಾನೆ. ನೀವು ಸಹ ನಂಬಬೇಕೆಂದು ಅವನು ಇದನ್ನು ತಿಳಿಸಿದ್ದಾನೆ. ಅವನು ಹೇಳುವ ಸಂಗತಿಗಳು ಸತ್ಯವಾಗಿವೆ. ತಾನು ಹೇಳುತ್ತಿರುವುದು ಸತ್ಯವೆಂದು ಅವನಿಗೆ ಗೊತ್ತಿದೆ.)
36 ಪವಿತ್ರ ಗ್ರಂಥದಲ್ಲಿ ಬರೆದಿರುವ, “ಆತನ ಎಲುಬುಗಳಲ್ಲಿ ಒಂದಾದರೂ ಮುರಿಯಲ್ಪಡುವುದಿಲ್ಲ” ಎಂಬ ಮಾತು ಹೀಗೆ ನೆರವೇರಿತು.
37 ಪವಿತ್ರ ಗ್ರಂಥದ ಮತ್ತೊಂದು ಕಡೆಯಲ್ಲಿ, “ಜನರು ತಾವು ಈಟಿಯಿಂದ ಇರಿದವನನ್ನೇ ದಿಟ್ಟಿಸಿ ನೋಡುವರು” ಎಂತಲೂ ಬರೆದಿದೆ.
ಯೇಸುವಿನ ಶವಸಂಸ್ಕಾರ
(ಮತ್ತಾಯ 27:57-61; ಮಾರ್ಕ 15:42-47; ಲೂಕ 23:50-56)
38 ತರುವಾಯ, ಅರಿಮಥಾಯ ಊರಿನ ಯೋಸೇಫ ಎಂಬವನು ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಪಿಲಾತನನ್ನು ಕೇಳಿಕೊಂಡನು. (ಯೋಸೇಫನು ಯೇಸುವಿನ ಒಬ್ಬ ಅನುಯಾಯಿ ಆಗಿದ್ದನು. ಆದರೆ ಅವನು ಯೆಹೂದ್ಯರಿಗೆ ಹೆದರಿಕೊಂಡಿದ್ದರಿಂದ ಅದರ ಬಗ್ಗೆ ಜನರಿಗೆ ಹೇಳಿಕೊಳ್ಳಲಿಲ್ಲ.) ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗಲು ಪಿಲಾತನು ಅವನಿಗೆ ಅಪ್ಪಣೆಕೊಟ್ಟನು. ಆದ್ದರಿಂದ ಅವನು ಬಂದು ಯೇಸುವಿನ ದೇಹವನ್ನು ತೆಗೆದುಕೊಂಡು ಹೋದನು.
39 ನಿಕೊದೇಮನೂ ಯೋಸೇಫನೊಂದಿಗೆ ಹೋದನು. ಹಿಂದೊಮ್ಮೆ, ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನೊಂದಿಗೆ ಮಾತಾಡಿದ್ದವನೇ ನಿಕೊದೇಮನು. ಅವನು ಸುಮಾರು ಐವತ್ತು ಕಿಲೋಗ್ರಾಮಿನಷ್ಟು ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಬಂದನು. ಆ ಸುಗಂಧದ್ರವ್ಯವು ರಕ್ತ ಬೋಳ ಮತ್ತು ಅಗರುಗಳ ಮಿಶ್ರಣವಾಗಿತ್ತು.
40 ಈ ಇಬ್ಬರು ಯೇಸುವಿನ ದೇಹವನ್ನು ತೆಗೆದುಕೊಂಡು ಅದಕ್ಕೆ ಸುಗಂಧದ್ರವ್ಯವನ್ನು ಹಾಕಿ ನಾರುಬಟ್ಟೆಗಳಿಂದ ಸುತ್ತಿದರು. (ಯೆಹೂದ್ಯರು ಸತ್ತವರನ್ನು ಇದೇರೀತಿ ಸಮಾಧಿ ಮಾಡುತ್ತಾರೆ.)
41 ಯೇಸುವನ್ನು ಶಿಲುಬೆಯ ಮೇಲೆ ಕೊಂದ ಸ್ಥಳದಲ್ಲೇ ಒಂದು ತೋಟವಿತ್ತು. ಆ ತೋಟದಲ್ಲಿ ಒಂದು ಹೊಸ ಸಮಾಧಿಯಿತ್ತು. ಅದರಲ್ಲಿ ಹಿಂದೆಂದೂ ಯಾರನ್ನೂ ಸಮಾಧಿ ಮಾಡಿರಲಿಲ್ಲ.
42 ಅದು ಸಮೀಪವಾಗಿದ್ದುದರಿಂದ ಮತ್ತು ಯೆಹೂದ್ಯರು ತಮ್ಮ ಸಬ್ಬತ್ ದಿನವನ್ನು ಆರಂಭಮಾಡಲು ಸಿದ್ಧರಾಗುತ್ತಿದುದರಿಂದ ಅವರು ಯೇಸುವನ್ನು ಆ ಸಮಾಧಿಯಲ್ಲಿಟ್ಟರು.