2
1 ಇನ್ನೊಮ್ಮೆ ನಿಮ್ಮ ಬಳಿಗೆ ಬಂದು, ನಿಮ್ಮನ್ನು ದುಃಖಕ್ಕೆ ಈಡುಮಾಡಬಾರದೆಂದು ನಾನು ನಿರ್ಧರಿಸಿಕೊಂಡೆ.
2 ನಾನೇ ನಿಮ್ಮನ್ನು ದುಃಖಪಡಿಸಿದರೆ, ನನ್ನನ್ನು ಸಂತೋಷಪಡಿಸುವವರು ಯಾರು? ನನ್ನಿಂದ ದುಃಖಕ್ಕೆ ಒಳಗಾದ ನೀವೇ ಅಲ್ಲವೇ?
3 ಆದಕಾರಣ ನಾನು ಆ ಪತ್ರವನ್ನು ಬರೆದದ್ದು: ನನ್ನನ್ನು ಸಂತೋಷಪಡಿಸಬೇಕಾದವರೇ ನನ್ನನ್ನು ದುಃಖಕ್ಕೆ ಈಡುಮಾಡಬಾರದೆಂದು ನಾನು ಬರಲಿಲ್ಲ. ನನ್ನ ಸಂತೋಷವೇ ನಿಮ್ಮೆಲ್ಲರ ಸಂತೋಷವೆಂದು ನೀವು ಭಾವಿಸುತ್ತೀರೆಂದು ನಂಬಿದ್ದೇನೆ.
4 ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳಿದುಕೊಳ್ಳಬೇಕೆಂತಲೇ ನಾನು ಬಹಳವಾಗಿ ಕಣ್ಣೀರಿಡುತ್ತಾ ಹೃದಯದ ಬಹು ಸಂಕಟದಿಂದಲೂ ವ್ಯಾಕುಲದಿಂದಲೂ ನಿಮಗೆ ಬರೆದೆನೇ ಹೊರತು ನಿಮ್ಮನ್ನು ನೋಯಿಸುವುದಕ್ಕಾಗಿಯಲ್ಲ.
5 ಮನಸ್ಸಿಗೆ ನೋವುಂಟುಮಾಡಿದವನು ಒಬ್ಬನು ನಿಮ್ಮಲ್ಲಿ ಇದ್ದರೂ ಅವನು ನನ್ನನ್ನು ಮಾತ್ರ ದುಃಖಪಡಿಸದೆ ನಿಮ್ಮಲ್ಲಿ ಬಹುಜನರನ್ನೂ ನೋಯಿಸಿದ್ದಾನೆ. ಆ ದುಃಖವು ಎಲ್ಲರಲ್ಲಿಯೂ ಉಂಟಾಯಿತೆಂದು ನಾನು ಹೇಳುವುದಿಲ್ಲ.
6 ಇಂಥವನಿಗೆ ನಿಮ್ಮಲ್ಲಿ ಬಹುಜನರಿಂದಾದ ಆ ಶಿಕ್ಷೆಯೇ ಸಾಕು.
7 ಇನ್ನೂ ಅವನನ್ನು ಶಿಕ್ಷಿಸದೇ ಮನ್ನಿಸಿರಿ, ಸಂತೈಸಿರಿ. ಇಲ್ಲವಾದರೆ ಅವನು ಅಧಿಕವಾದ ದುಃಖದಲ್ಲಿ ಮುಳುಗಿ ಹೋಗುವನು.
8 ಆದ್ದರಿಂದ ಅವನಿಗೆ ನಿಮ್ಮ ಪ್ರೀತಿಯನ್ನು ತೋರಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
9 ಎಲ್ಲಾ ವಿಷಯದಲ್ಲೂ ನೀವು ವಿಧೇಯರಾಗಿದ್ದೀರೋ ಎಂದು ನಿಮ್ಮ ಗುಣವನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕೆಂಬುವ ಉದ್ದೇಶದಿಂದಲೇ ಹೀಗೆ ಬರೆದೆನು.
10 ನೀವು ಯಾರನ್ನು ಕ್ಷಮಿಸುತ್ತೀರೋ ನಾನು ಸಹ ಅವನನ್ನು ಕ್ಷಮಿಸುತ್ತೇನೆ. ನಿಮಗೋಸ್ಕರವೇ ಅವನನ್ನು ಕ್ರಿಸ್ತನ ಸನ್ನಿಧಾನದಲ್ಲಿ ಕ್ಷಮಿಸಿದ್ದೇನೆ.
11 ಸೈತಾನನು ನಮ್ಮನ್ನು ವಂಚಿಸಬಾರದೆಂದು ಹೀಗೆ ಮಾಡಿದೆನು. ಅವನ ಕುತಂತ್ರಗಳನ್ನು ನಾವು ಚೆನ್ನಾಗಿ ತಿಳಿದಿದ್ದೇವಲ್ಲಾ.
ಸುವಾರ್ತಾ ಸೇವೆಯ ಶ್ರೇಷ್ಠತೆಯನ್ನು ಕುರಿತದ್ದು
12 ದೇವರು ನನಗಾಗಿ ಬಾಗಿಲನ್ನು ತೆರೆದಿದ್ದಾನೆಂದು ಯೋಚಿಸಿ ಕ್ರಿಸ್ತನ ಸುವಾರ್ತೆಯನ್ನು ಸಾರುವುದಕ್ಕಾಗಿ ನಾನು ತ್ರೋವ ಪಟ್ಟಣಕ್ಕೆ ಬಂದೆನು.
13 ಆದರೂ ನನ್ನ ಸಹೋದರ ತೀತನು ನನಗೆ ಅಲ್ಲಿ ಸಿಕ್ಕಲಿಲ್ಲವಾದ ಕಾರಣ ನನ್ನ ಮನಸ್ಸಿಗೆ ಸಮಾಧಾನವಿಲ್ಲದೆ ಅಲ್ಲಿದ್ದವರಿಗೆ ವಂದಿಸಿ ಅಲ್ಲಿಂದ ಹೊರಟು ಮಕೆದೋನ್ಯಕ್ಕೆ ಬಂದೆನು.
14 ಕ್ರಿಸ್ತನ ಮುಖಾಂತರ ನಮ್ಮನ್ನು ವಿಜಯೋತ್ಸವದತ್ತ ನಡೆಸುವ ಹಾಗೂ ನಮ್ಮ ಮೂಲಕವಾಗಿ ತನ್ನ ಜ್ಞಾನವೆಂಬ ಸುವಾಸನೆಯನ್ನು ಎಲ್ಲಾ ಸ್ಥಳಗಳಲ್ಲಿ ಹರಡಿಸಿದ ದೇವರಿಗೆ ಸ್ತೋತ್ರವಾಗಲಿ.
15 ರಕ್ಷಣಾ ಮಾರ್ಗದಲ್ಲಿರುವವರಲ್ಲಿಯೂ ಮತ್ತು ನಾಶನದ ಮಾರ್ಗದಲ್ಲಿರುವವರಲ್ಲಿಯೂ ನಾವು ದೇವರಿಗೆ ಕ್ರಿಸ್ತನ ಪರಿಮಳವಾಗಿದ್ದೇವೆ.
16 ನಾವು ವಿನಾಶಮಾರ್ಗದಲ್ಲಿರುವವರಿಗೆ ಮೃತ್ಯುಕಾರಕ ಗಂಧ; ರಕ್ಷಣಾಮಾರ್ಗದಲ್ಲಿರುವವರಿಗೆ ಸಜೀವದಾಯಕ ಸುಗಂಧ. ಇಂಥ ಕಾರ್ಯಗಳಿಗೆ ಯಾರು ಯೋಗ್ಯರು?
17 ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ ವ್ಯಾಪಾರಮಾಡುತ್ತಾರೆ. ನಾವು ಹಾಗಲ್ಲ; ದೇವರಿಂದಲೇ ನಿಯೋಜಿತರಾಗಿ, ದೇವರ ಸಮಕ್ಷಮದಲ್ಲಿ, ಕ್ರಿಸ್ತ ಅನ್ಯೋನ್ಯತೆಯಲ್ಲಿ ನಾವು ಯಥಾರ್ಥವಾದುದನ್ನೇ ಉಪದೇಶಿಸುವವರು.