30
ರಾಹೇಲಳು ತಾನು ಯಾಕೋಬನಿಗೆ ಮಕ್ಕಳನ್ನು ಹೆರದೆ ಇರುವುದನ್ನು ನೋಡಿ ತನ್ನ ಅಕ್ಕನ ಮೇಲೆ ಹೊಟ್ಟೆಕಿಚ್ಚುಪಟ್ಟು, ಯಾಕೋಬನಿಗೆ, “ಮಕ್ಕಳನ್ನು ನನಗೆ ಕೊಡು, ಇಲ್ಲದಿದ್ದರೆ ಸಾಯುವೆನು” ಎಂದು ಹೇಳಿದಳು.
ಯಾಕೋಬನು ರಾಹೇಲಳ ಮೇಲೆ ಕೋಪಗೊಂಡು, “ದೇವರು ನಿನಗೆ ಮಕ್ಕಳನ್ನು ಕೊಡದೆ ಹೋದ ಮೇಲೆ ಕೊಡಲಿಕ್ಕೆ ನನ್ನಿಂದಾದೀತೋ” ಎಂದನು.
ಅದಕ್ಕೆ ಆಕೆಯು, “ನನ್ನ ದಾಸಿಯಾದ ಬಿಲ್ಹಾ ಇದ್ದಾಳಲ್ಲಾ, ಅವಳನ್ನು ಸಂಗಮಿಸು, ಅವಳು ಬಸುರಾದರೆ ಆ ಮಗುವನ್ನು ನನ್ನ ಮಡಿಲಲ್ಲಿ ಹಾಕಲಿ. ಆಗ ನನಗೂ ಸಂತಾನವಾಗುವುದು” ಎಂದು ಹೇಳಿ, ತನ್ನ ದಾಸಿಯಾದ ಬಿಲ್ಹಳನ್ನು ಯಾಕೋಬನಿಗೆ ಹೆಂಡತಿಯಾಗುವುದಕ್ಕೆ ಒಪ್ಪಿಸಿದಳು. ಯಾಕೋಬನು ಅವಳನ್ನು ಸಂಗಮಿಸಲು ಬಿಲ್ಹಳು ಗರ್ಭಿಣಿಯಾಗಿ ಗಂಡು ಮಗುವನ್ನು ಹೆರಲು, ರಾಹೇಲಳು, “ದೇವರು ನನ್ನ ಕಡೆಗೆ ನ್ಯಾಯತೀರಿಸಿದ್ದಾನೆ. ಆತನು ನನ್ನ ಮೊರೆಯನ್ನು ಕೇಳಿ ನನಗೆ ಮಗನನ್ನು ಅನುಗ್ರಹಿಸಿದ್ದಾನೆ” ಎಂದು ಹೇಳಿ ಅದಕ್ಕೆ “ದಾನ್” ಎಂದು ಹೆಸರಿಟ್ಟಳು.
ರಾಹೇಲಳ ದಾಸಿಯಾದ ಬಿಲ್ಹಳು ತಿರುಗಿ ಬಸುರಾಗಿ ಯಾಕೋಬನಿಗೆ ಎರಡನೆಯ ಗಂಡು ಮಗುವನ್ನು ಹೆರಲು, ರಾಹೇಲಳು, “ನನ್ನ ಅಕ್ಕನ ಸಂಗಡ ಬಲವಾಗಿ ಹೋರಾಡಿ ಜಯಿಸಿದ್ದೇನೆ” ಎಂದು ಹೇಳಿ ಅದಕ್ಕೆ “ನಫ್ತಾಲಿ” ಎಂದು ಹೆಸರಿಟ್ಟಳು.
ಲೇಯಳು ತನಗೆ ಹೆರಿಗೆ ನಿಂತುಹೋಗಿರುವುದನ್ನು ತಿಳಿದು ತನ್ನ ದಾಸಿಯಾದ ಜಿಲ್ಪಳನ್ನು ಯಾಕೋಬನ ಹೆಂಡತಿಯಾಗುವುದಕ್ಕೆ ಒಪ್ಪಿಸಿದಳು. 10 ಲೇಯಳ ದಾಸಿಯಾದ ಜಿಲ್ಪಳು ಯಾಕೋಬನಿಗೆ ಗಂಡು ಮಗುವನ್ನು ಹೆರಲು, 11 ಲೇಯಳು, “ನನಗೆ ಶುಭವಾಯಿತೆಂದು” ಹೇಳಿ ಅದಕ್ಕೆ “ಗಾದ್” ಎಂದು ಹೆಸರಿಟ್ಟಳು.
12 ಲೇಯಳ ದಾಸಿಯಾದ ಜಿಲ್ಪಳು ಯಾಕೋಬನಿಗೆ ಇನ್ನೊಂದು ಗಂಡು ಮಗುವನ್ನು ಹೆರಲು, 13 ಲೇಯಳು, “ನಾನು ಧನ್ಯಳಾದೆ, ಸ್ತ್ರೀಯರು ನನ್ನನ್ನು ಧನ್ಯಳೆಂದು ಹೊಗಳುವರು” ಎಂದು ಹೇಳಿ ಅದಕ್ಕೆ “ಆಶೇರ್” ಎಂದು ಹೆಸರಿಟ್ಟಳು.
14 ಗೋದಿ ಸುಗ್ಗಿಯ ಕಾಲದಲ್ಲಿ ರೂಬೇನನು ಅಡವಿಗೆ ಹೋಗಿದ್ದಾಗ *ಕಾಮಜನಕ ಹಣ್ಣುಗಳನ್ನು ಕಂಡು ತನ್ನ ತಾಯಿಯಾದ ಲೇಯಳಿಗೆ ತಂದು ಕೊಡಲು ರಾಹೇಲಳು ಆಕೆಗೆ, “ನಿನ್ನ ಮಗನು ತಂದಿರುವ ಕಾಮಜನಕ ಹಣ್ಣುಗಳಲ್ಲಿ ಕೆಲವನ್ನು ನನಗೆ ಕೊಡು” ಎಂದು ಕೇಳಿಕೊಂಡಳು.
15 ಅದಕ್ಕೆ ಲೇಯಳು, “ನೀನು ನನ್ನ ಗಂಡನನ್ನು ತೆಗೆದುಕೊಂಡದ್ದು ಸಾಲದೋ? ನನ್ನ ಮಗನು ತಂದ ಕಾಮಜನಕ ಹಣ್ಣುಗಳನ್ನೂ ತೆಗೆದುಕೊಳ್ಳಬೇಕೆಂದು ಅಪೇಕ್ಷಿಸುತ್ತೀಯಾ?” ಎಂದು ಹೇಳಲು ರಾಹೇಲಳು, “ಒಳ್ಳೆಯದು, ನೀನು ನಿನ್ನ ಮಗನು ತಂದ ಹಣ್ಣುಗಳನ್ನು ನನಗೆ ಕೊಟ್ಟರೆ ಗಂಡನು ಈ ಹೊತ್ತು ರಾತ್ರಿ ನಿನ್ನಲ್ಲೇ ಇರಲಿ” ಎಂದಳು.
16 ಸಾಯಂಕಾಲದಲ್ಲಿ ಯಾಕೋಬನು ಅಡವಿಯಿಂದ ಬರುವಾಗ ಲೇಯಳು ಅವನೆದುರಿಗೆ ಹೋಗಿ, “ನೀನು ನನ್ನಲ್ಲಿ ಬರಬೇಕು, ನಾನು ನನ್ನ ಮಗನು ತಂದ ಕಾಮಜನಕ ಹಣ್ಣುಗಳನ್ನು ಕೊಟ್ಟು ನಿನ್ನನ್ನು ಸಂಪಾದಿಸಿಕೊಂಡಿದ್ದೇನೆ” ಎಂದಳು. ಆ ಹೊತ್ತು ರಾತ್ರಿ ಅವನು ಆಕೆಯೊಂದಿಗೆ ಇದ್ದನು.
17 ದೇವರು ಲೇಯಳ ಪ್ರಾರ್ಥನೆಯನ್ನು ಕೇಳಿದನು. ಆಕೆಯು ಗರ್ಭಿಣಿಯಾಗಿ ಯಾಕೋಬನಿಗೆ ಐದನೆಯ ಗಂಡು ಮಗುವನ್ನು ಹೆತ್ತಳು. 18 ಲೇಯಳು, “ನನ್ನ ದಾಸಿಯನ್ನು ನನ್ನ ಗಂಡನ ವಶಕ್ಕೆ ಒಪ್ಪಿಸಿದ್ದರಿಂದ ದೇವರು ನನಗೆ ಪ್ರತಿಫಲವನ್ನು ಕೊಟ್ಟಿದ್ದಾನೆ” ಎಂದು ಹೇಳಿ ಅದಕ್ಕೆ “ಇಸ್ಸಾಕಾರ್” ಎಂದು ಹೆಸರಿಟ್ಟಳು.
19 ಲೇಯಳು ಪುನಃ ಗರ್ಭಿಣಿಯಾಗಿ ಯಾಕೋಬನಿಗೆ ಆರನೆಯ ಗಂಡು ಮಗುವನ್ನು ಹೆತ್ತಳು. 20 ಲೇಯಳು, “ದೇವರು ನನಗೆ ಒಳ್ಳೆಯ ವರದಾನವನ್ನು ಕೊಟ್ಟಿದ್ದಾನೆ. ನಾನು ನನ್ನ ಗಂಡನಿಗೆ ಆರು ಮಂದಿ ಗಂಡು ಮಕ್ಕಳನ್ನು ಹೆತ್ತದ್ದರಿಂದ ಅವನು ನನ್ನೊಡನೆಯೇ ವಾಸಿಸುವನು” ಎಂದು ಹೇಳಿ ಅದಕ್ಕೆ “ಜೆಬುಲೂನ್” ಎಂದು ಹೆಸರಿಟ್ಟಳು.
21 ತರುವಾಯ ಆಕೆಯು ಹೆಣ್ಣು ಮಗುವನ್ನು ಹೆತ್ತು ಅದಕ್ಕೆ “ದೀನಾ” ಎಂದು ಹೆಸರಿಟ್ಟಳು.
22 ಆಮೇಲೆ ದೇವರು ರಾಹೇಲಳನ್ನು ನೆನಪಿಸಿಕೊಂಡು ಆಕೆಯ ಮೊರೆಯನ್ನು ಕೇಳಿ ಆಕೆಗೆ ಮಕ್ಕಳಾಗುವಂತೆ ಮಾಡಿದನು. 23 ಆಕೆಯು ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತು, “ದೇವರು ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನೆ” ಎಂದಳು. 24 ಇದಲ್ಲದೆ ಆಕೆಯು, “ಯೆಹೋವನು ಇನ್ನೊಂದು ಗಂಡು ಮಗುವನ್ನು ನನಗೆ ದಯಪಾಲಿಸುವನು” ಎಂದು ಹೇಳಿ ಅದಕ್ಕೆ “ಯೋಸೇಫ್” ಎಂದು ಹೆಸರಿಟ್ಟಳು.
ಯಾಕೋಬನ ಮತ್ತು ಲಾಬಾನನ ಆಡುಕುರಿಗಳು
25 ರಾಹೇಲಳು ಯೋಸೇಫನನ್ನು ಹೆತ್ತ ನಂತರ ಯಾಕೋಬನು ಲಾಬಾನನಿಗೆ, “ನಾನು ನನ್ನ ದೇಶದಲ್ಲಿರುವ ಸ್ವಂತ ಊರಿಗೆ ಹೋಗಲು ನನಗೆ ಅಪ್ಪಣೆಯಾಗಬೇಕು. 26 ನಾನು ಸೇವೆಮಾಡಿ ಪಡೆದುಕೊಂಡ ಹೆಂಡತಿಯರನ್ನೂ ನನ್ನ ಮಕ್ಕಳನ್ನೂ ನನ್ನೊಂದಿಗೆ ಕಳುಹಿಸಿಕೊಡಬೇಕು.
27 ನಾನು ನಿನಗೆ ಮಾಡಿದ ಸೇವೆಯನ್ನು ನೀನು ಬಲ್ಲವನಾಗಿರುವೆ” ಎಂದು ಹೇಳಲು ಲಾಬಾನನು ಅವನಿಗೆ, “ನನ್ನ ಮೇಲೆ ದಯೆ ಇಟ್ಟು ನನ್ನ ಬಳಿಯಲ್ಲೇ ಇರು. ಯೆಹೋವನು ನಿನ್ನ ನಿಮಿತ್ತ ನನ್ನನ್ನು ಅಭಿವೃದ್ಧಿಪಡಿಸಿದ್ದಾನೆಂದು ಚೆನ್ನಾಗಿ ತಿಳಿದುಕೊಂಡಿದ್ದೇನೆ. 28 ನಾನು ನಿನಗೆ ಏನು ಕೊಡಬೇಕು ಹೇಳು ಕೊಡುತ್ತೇನೆ” ಎಂದು ಹೇಳಿದನು.
29 ಅದಕ್ಕೆ ಯಾಕೋಬನು, “ನಾನು ನಿನಗೆ ಮಾಡಿದ ಸೇವೆಯನ್ನೂ ನನ್ನ ವಶದಲ್ಲಿದ್ದ ನಿನ್ನ ಪಶುಪ್ರಾಣಿಗಳು ಅಭಿವೃದ್ದಿಯಾದುದ್ದನ್ನೂ ನೀನು ಬಲ್ಲೇ. 30 ನಾನು ಬರುವುದಕ್ಕೆ ಮೊದಲು ನಿನಗಿದ್ದದ್ದು ಸ್ವಲ್ಪವೇ. ಈಗ ಅದು ಬಹಳವಾಗಿ ಹೆಚ್ಚಿದೆ. ನಾನು ಕೈಹಾಕಿದ ಎಲ್ಲಾ ಕೆಲಸದಲ್ಲಿಯೂ ಯೆಹೋವನು ನಿನ್ನನ್ನು ಅಭಿವೃದ್ಧಿಪಡಿಸಿದ್ದಾನೆ. ಇನ್ನು ನಾನು ನನ್ನ ಸ್ವಂತ ಮನೆಗೋಸ್ಕರ ಯಾವಾಗ ಸಂಪಾದನೆ ಮಾಡಿಕೊಳ್ಳಲಿ” ಎಂದು ಹೇಳಿದನು.
31 ಅದಕ್ಕೆ ಲಾಬಾನನು, “ನಿನಗೆ ನಾನೇನು ಕೊಡಬೇಕು ಹೇಳು” ಅನ್ನಲು ಯಾಕೋಬನು, “ನನಗೆ ಏನೂ ಕೊಡಬೇಡ, ನೀನು ನನಗೆ ಈ ಒಂದು ಕಾರ್ಯ ಮಾತ್ರ ಮಾಡಿದರೆ ಸಾಕು, ನಾನು ಪುನಃ ನಿನ್ನ ಹಿಂಡನ್ನು ಮೇಯಿಸಿ ಕಾಯುವೆನು” 32 ಅದೇನೆಂದರೆ, “ಈ ಹೊತ್ತು ನಾನು ನಿನ್ನ ಹಿಂಡಿನೊಳಗೆ ಹೋಗಿ, ಕುರಿಗಳಲ್ಲಿ ಚುಕ್ಕೆ ಮತ್ತು ಮಚ್ಚೆಗಳಿರುವವುಗಳನ್ನೂ, ಕುರಿಗಳಲ್ಲಿ ಕಪ್ಪಾಗಿರುವವುಗಳನ್ನೂ, ಆಡುಗಳಲ್ಲಿ ಚುಕ್ಕೆ ಮತ್ತು ಮಚ್ಚೆಗಳಿರುವುಗಳನ್ನೂ ವಿಂಗಡಿಸುವೆನು. ಅವೇ ನನ್ನ ಸಂಬಳವಾಗಿರಲಿ. 33 ಹೀಗಿದ್ದರೆ ಬರುವ ಕಾಲದಲ್ಲಿ ನನ್ನ ಸಂಬಳಕ್ಕಾಗಿ ನಾನು ನಿನ್ನ ಮುಂದೆ ಬಂದಾಗ ನನ್ನ ಪ್ರಾಮಾಣಿಕತೆಯೇ ನನಗೆ ಸಾಕ್ಷಿ ಕೊಡುವುದು. ಆಡುಗಳಲ್ಲಿ ಚುಕ್ಕೆ ಮಚ್ಚೆಗಳಿಲ್ಲದ್ದು, ಕುರಿಗಳಲ್ಲಿ ಕಪ್ಪಿಲ್ಲದ್ದು, ನನ್ನ ಬಳಿಯಲ್ಲಿ ಸಿಕ್ಕಿದರೆ ಅದನ್ನು ಕದ್ದದ್ದೆಂದು ಎಣಿಸಬಹುದು” ಎಂದನು.
34 ಅದಕ್ಕೆ ಲಾಬಾನನು, “ಒಳ್ಳೆಯದು, ನೀನು ಹೇಳಿದಂತೆಯೇ ಆಗಲಿ” ಎಂದನು. 35 ಅದೇ ದಿನ ಲಾಬಾನನು ಆಡುಗಳಲ್ಲಿ ರೇಖೆ ಮಚ್ಚೆ ಇದ್ದವುಗಳನ್ನೂ, ಮೇಕೆಗಳಲ್ಲಿ ಚುಕ್ಕೆ ಮಚ್ಚೆ ಇದ್ದವುಗಳನ್ನೂ, ಅಂದರೆ ಸ್ವಲ್ಪ ಬಿಳುಪಾದ ಬಣ್ಣವು ತೋರಿದ ಎಲ್ಲವುಗಳನ್ನೂ, ಕುರಿಗಳಲ್ಲಿ ಕಪ್ಪಾಗಿದ್ದುವುಗಳನ್ನೂ ವಿಂಗಡಿಸಿ ತನ್ನ ಮಕ್ಕಳ ವಶಕ್ಕೆ ಒಪ್ಪಿಸಿಕೊಟ್ಟನು. 36 ಲಾಬಾನನು ತನಗೂ, ಯಾಕೋಬನಿಗೂ ಮೂರು ದಿನದ ಪ್ರಯಾಣದಷ್ಟು ದೂರ ಅಂತರವನ್ನು ಬಿಟ್ಟನು. ಯಾಕೋಬನು ಲಾಬಾನನ ಹಿಂಡಿನಲ್ಲಿ ಮಿಕ್ಕಾದವುಗಳನ್ನು ಮೇಯಿಸಿದನು.
37 ಹೀಗಿರುವಲ್ಲಿ ಯಾಕೋಬನು ಚಿನಾರು, ಬಾದಾಮಿ, ಅರ್ಮೋನ್ ಎಂಬ ಮರಗಳ ಹಸಿ ಕೋಲುಗಳನ್ನು ತೆಗೆದುಕೊಂಡು ಪಟ್ಟೆಪಟ್ಟೆಯಾಗಿ ತೊಗಟೆಯನ್ನು ಸುಲಿದು, 38 ಅವುಗಳಲ್ಲಿರುವ ಬಿಳಿಯ ಬಣ್ಣವು ಕಾಣಿಸುವಂತೆ ಮಾಡಿದನು. ಆ ಕೋಲುಗಳನ್ನು ಆಡುಕುರಿಗಳ ಹಿಂಡು ನೀರು ಕುಡಿಯುವ ತೊಟ್ಟಿಗಳಲ್ಲಿ ಇಟ್ಟನು. ಆಡುಕುರಿಗಳಿಗೆ ನೀರು ಕುಡಿಯುವ ಸಮಯ, ಸಂಗಮ ಸಮಯ. 39 ಆಡುಕುರಿಗಳು ಆ ಕೋಲುಗಳನ್ನು ನೋಡುತ್ತಾ ಸಂಗಮಮಾದಿದ್ದರಿಂದ ರೇಖೆ, ಚುಕ್ಕೆ, ಮಚ್ಚೆಗಳುಳ್ಳ ಮರಿಗಳನ್ನು ಈಯುತ್ತಿದ್ದವು. 40 ಯಾಕೋಬನು ಆ ಮರಿಗಳನ್ನು ಲಾಬಾನನ ಹಿಂಡಿಗೆ ಸೇರಿಸದೆ ತನ್ನವೆಂದು ಪ್ರತ್ಯೇಕಿಸಿದನು ಮತ್ತು ಲಾಬಾನನ ಆಡು ಕುರಿಗಳ ಮುಖಗಳನ್ನು ರೇಖೆಯುಳ್ಳ ಆ ಆಡುಗಳ ಮತ್ತು ಕಪ್ಪಾದ ಕುರಿಗಳ ಕಡೆಗೆ ತಿರುಗಿಸಿದನು. 41 ಇದಲ್ಲದೆ ಬಲಿಷ್ಠವಾದ ಆಡು ಕುರಿಗಳು ಸಂಗಮಮಾಡುವಾಗ ಆ ಕೋಲುಗಳನ್ನು ನೋಡುತ್ತಾ ಸಂಗಮಮಾಡಲಿ ಎಂದು ಯಾಕೋಬನು ತೊಟ್ಟಿಗಳಲ್ಲಿ ಕೋಲುಗಳನ್ನಿಟ್ಟನು. ಆದರೆ ಆಡುಕುರಿಗಳು ಬಲಹೀನವಾಗಿದ್ದಾಗ ಅವನು ಕೋಲುಗಳನ್ನು ತೊಟ್ಟಿಗಳಲ್ಲಿ ಇಡುತ್ತಿರಲಿಲ್ಲ. 42 ಹೀಗಾಗಿ ಬಲಹೀನವಾದ ಹಿಂಡು ಲಾಬಾನನ ಪಾಲಿಗೆ ಬಂದವು, ಬಲಿಷ್ಠವಾದವುಗಳು ಯಾಕೋಬನು ಪಾಲಿಗೆ ಬಂದವು. 43 ಈ ಪ್ರಕಾರ ಯಾಕೋಬನು ಬಹಳ ಸಂಪತ್ತುಳ್ಳವನಾದನು. ಅವನಿಗೆ ಕುರಿಹಿಂಡುಗಳು, ದಾಸದಾಸಿಯರು, ಒಂಟೆ ಕತ್ತೆಗಳು, ಹೇರಳವಾಗಿದ್ದವು.
* 30:14 30:14 ಈ ಹಣ್ಣುಗಳು ಸುವಾಸನೆಯುಳ್ಳವುಗಳು, ಕಾಮೋತ್ತೇಜಕವಾದವುಗಳು ಮತ್ತು ಸ್ತ್ರೀಯರಿಗೆ ಗರ್ಭಧರಿಸಲು ಉಪಯುಕ್ತವಾದವುಗಳು. 30:18 30:18 ಇಸ್ಸಾಕಾರ್ ಅಂದರೆ ಪ್ರತಿಫಲ. 30:20 30:20 ಜೆಬುಲೂನ್ ಅಂದರೆ ಗೌರವ.