4
ಯೋನನ ಕೋಪವೂ ದೇವರ ಕನಿಕರವೂ
ಇದರಿಂದ ಯೋನನಿಗೆ ಬಹು ಬೇಸರವಾಯಿತು; ಅವನು ಬಹಳ ಸಿಟ್ಟುಗೊಂಡನು. ಆಗ ಅವನು ಯೆಹೋವನಿಗೆ ಮೊರೆಯಿಟ್ಟನು, “ಯೆಹೋವನೇ, ಲಾಲಿಸು, ನಾನು ಸ್ವದೇಶದಲ್ಲಿರುವಾಗಲೇ ಹೀಗಾಗುವುದೆಂದು ಹೇಳಿದೆನಷ್ಟೆ; ನೀನು ದಯೆಯೂ, ಕನಿಕರವೂ, ದೀರ್ಘಶಾಂತಿಯೂ, ಮಹಾಕೃಪೆಯೂ ಉಳ್ಳ ದೇವರು, ಮಾಡಬೇಕೆಂದಿದ್ದ ಕೇಡಿಗೆ ಮನಮರುಗುವವನು ಎಂದು ನಾನು ತಿಳಿದೇ, ತಾರ್ಷೀಷಿಗೆ ಓಡಿಹೋಗಲು ಪ್ರಯತ್ನಿಸಿದ್ದು. ಆದುದರಿಂದ ಯೆಹೋವನೇ, ನನ್ನ ಪ್ರಾಣವನ್ನು ತೆಗೆದುಕೋ; ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು” ಎಂದು ವಿಜ್ಞಾಪಿಸಿಕೊಂಡನು. ಅದಕ್ಕೆ ಯೆಹೋವನು, “ನೀನು ಸಿಟ್ಟುಗೊಳ್ಳುವುದು ಸರಿಯೋ?” ಎಂದು ಕೇಳಿದನು. ಅನಂತರ ಯೋನನು ಪಟ್ಟಣವನ್ನು ಬಿಟ್ಟು ಅದರ ಮೂಡಣದಲ್ಲಿ ಒಂದು ಗುಡಿಸಲನ್ನು ಮಾಡಿಕೊಂಡು ಪಟ್ಟಣವು ಏನಾಗುವುದೋ ಎಂದು ನೋಡುತ್ತಾ ಅದರ ನೆರಳಿನಲ್ಲಿ ಕುಳಿತುಕೊಂಡಿದ್ದನು. ಆಗ ದೇವರಾದ ಯೆಹೋವನು ಒಂದು ಸೋರೆಗಿಡವನ್ನು ಬೆಳೆಯುವಂತೆ ಮಾಡಿ ಅದು ಯೋನನ ತಲೆಗೆ ನೆರಳಾಗಿ ಅವನ ಮನೋವ್ಯಥೆಗೆ ಸಮಾಧಾನ ಬರುವಂತೆ ಮಾಡಿದನು. ಇದರಿಂದ ಯೋನನಿಗೆ ಬಹು ಸಂತೋಷವಾಯಿತು. ಮಾರನೆಯ ದಿನ ಮುಂಜಾನೆ ದೇವರು ಒಂದು ಹುಳಕ್ಕೆ ಆ ಸೋರೆಗಿಡವನ್ನು ಕೊರೆಯಲು ಅಪ್ಪಣೆ ಮಾಡಿದನು. ಆ ಗಿಡವು ಒಣಗಿಹೋಯಿತು. ಸೂರ್ಯನು ಉದಯಿಸಿದಾಗ ದೇವರು ಬಿಸಿಯಾದ ಮೂಡಣ ಗಾಳಿಯನ್ನು ಏರ್ಪಡಿಸಿದನು; ಬಿಸಿಲು ಯೋನನ ತಲೆಗೆ ಹೊಡೆಯಲು ಅವನು ಮೂರ್ಛೆಹೋಗುವವನಾಗಿ “ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು” ಎಂದು ಸಾಯಲು ಬಯಸಿದನು. ಆಗ ದೇವರು ಯೋನನಿಗೆ, “ನೀನು ಸೋರೆಗಿಡ ಒಣಗಿದ್ದಕ್ಕಾಗಿ ಸಿಟ್ಟುಗೊಳ್ಳುವುದು ಸರಿಯೋ?” ಎಂದು ಕೇಳಲು ಯೋನನು “ಹೌದು, ನಾನು ಸಾಯುವಷ್ಟು ಕಾಲ ಸಿಟ್ಟುಗೊಳ್ಳುವುದು ಸರಿಯೇ” ಎಂದು ಉತ್ತರಕೊಟ್ಟನು. 10 ಅದಕ್ಕೆ ಯೆಹೋವನು “ನೀನು ಆ ಸೋರೆಗಿಡಕ್ಕಾಗಿ ಕಷ್ಟಪಡಲಿಲ್ಲ, ಬೆಳೆಯಿಸಲಿಲ್ಲ; ಅದು ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶವಾಯಿತು; 11 ಇಂಥ ಗಿಡಕ್ಕಾಗಿ ನೀನು ಕನಿಕರಪಡುವಾಗ ಎಡಗೈ ಬಲಗೈ ತಿಳಿಯದ ಒಂದು ಲಕ್ಷದ ಇಪ್ಪತ್ತು ಸಾವಿರ ಜನರು, ಅಪಾರ ಪಶುಪ್ರಾಣಿಗಳೂ ಇರುವ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ?” ಎಂದನು.