15
ಯೇಸುವೇ ನಿಜವಾದ ದ್ರಾಕ್ಷಿಬಳ್ಳಿ
“ನಾನೇ ನಿಜವಾದ ದ್ರಾಕ್ಷಿಬಳ್ಳಿ, ನನ್ನ ತಂದೆ ತೋಟಗಾರನು. ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ಕತ್ತರಿಸಿಹಾಕುತ್ತಾನೆ. ಫಲ ಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲ ಕೊಡುವ ಹಾಗೆ ಅದನ್ನು ಕತ್ತರಿಸಿ ಶುದ್ಧಮಾಡುತ್ತಾನೆ. ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ಈಗ ನೀವು ಶುದ್ಧರಾಗಿದ್ದೀರಿ. ನೀವು ನನ್ನಲ್ಲಿ ನೆಲೆಗೊಂಡಿರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೇ ತಾನೇ ಫಲಕೊಡಲಾರದೋ, ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ. ನಾನು ದ್ರಾಕ್ಷಿಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನು ಬಹಳ ಫಲ ಕೊಡುವನು. ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ. ಯಾವನು ನನ್ನಲ್ಲಿ ನೆಲೆಗೊಂಡಿರುವುದಿಲ್ಲವೋ ಅವನು ಹೊರಕ್ಕೆ ಬಿಸಾಡಲ್ಪಟ್ಟ ಕೊಂಬೆಯಂತೆ ಒಣಗಿಹೋಗುವನು. ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುವರು. ಅವು ಸುಟ್ಟು ಹೋಗುತ್ತವೆ. *ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನಾದರೂ ಬೇಡಿಕೊಳ್ಳಿರಿ ಅದು ನಿಮಗೆ ದೊರೆಯುವುದು. ನೀವು ಬಹಳ ಫಲಕೊಡುವುದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವುದು ಮತ್ತು ನೀವು ನನ್ನ ಶಿಷ್ಯರಾಗುವಿರಿ.
“ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ. 10  ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಗೊಂಡು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಪ್ರಕಾರ, ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ, ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. 11  ನನ್ನಲ್ಲಿರುವ ಆನಂದವು ನಿಮ್ಮಲ್ಲಿಯೂ ಇರಬೇಕೆಂದೂ, ಆ ನಿಮ್ಮ ಆನಂದವು ಪರಿಪೂರ್ಣವಾಗಬೇಕೆಂದೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ. 12  ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇನನ್ನ ಆಜ್ಞೆಯಾಗಿದೆ. 13  ತನ್ನ ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ. 14  ನಾನು ನಿಮಗೆ ಕೊಟ್ಟ ಆಜ್ಞೆಗಳ ಪ್ರಕಾರ ನೀವು ನಡೆದರೆ, ನೀವು ನನ್ನ ಸ್ನೇಹಿತರು. 15  ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವುದಿಲ್ಲ, ಏಕೆಂದರೆ, ಯಜಮಾನನು ಮಾಡುವಂಥದ್ದು ಆಳಿಗೆ ತಿಳಿಯುವುದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ, ಏಕೆಂದರೆ ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಾನು ನಿಮಗೆ ತಿಳಿಸಿದ್ದೇನೆ. 16  ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನು ನಿಮ್ಮನ್ನು ಆರಿಸಿಕೊಂಡಿದ್ದೇನೆ, ನೀವು ಹೊರಟು ಹೋಗಿ ಫಲಕೊಡಬೇಕೆಂತಲೂ, ಹಾಗೂ ನೀವು ಕೊಡುವ ಫಲವು ಸದಾಕಾಲ ನಿಲ್ಲುವಂಥದ್ದಾಗಬೇಕಂತಲೂ ನಾನು ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ, ಅದನ್ನು ಆತನು ನಿಮಗೆ ಕೊಡುವನು. 17  ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಾನು ನಿಮಗೆ ಆಜ್ಞಾಪಿಸುತ್ತಿದ್ದೇನೆ.
18  “ಲೋಕವು ನಿಮ್ಮನ್ನು ದ್ವೇಷ ಮಾಡುವುದಾದರೆ ಅದು ಮೊದಲು ನನ್ನನ್ನು ದ್ವೇಷ ಮಾಡಿತ್ತೆಂದು ನೀವು ತಿಳಿದುಕೊಳ್ಳಿರಿ. 19  ನೀವುಲೋಕದವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ನೀವಾದರೋ ಲೋಕದ ಕಡೆಯವರಲ್ಲ, ನಾನು ನಿಮ್ಮನ್ನು ಆರಿಸಿಕೊಂಡಿದ್ದರಿಂದಲೇ ಲೋಕವು ನಿಮ್ಮನ್ನು ದ್ವೇಷ ಮಾಡುತ್ತದೆ. 20  §ದಣಿಗಿಂತ ಆಳು ದೊಡ್ಡವನಲ್ಲವೆಂಬುದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕ ಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು. ಅವರು ನನ್ನ ಮಾತನ್ನು ಕೈಗೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಗೊಳ್ಳುತ್ತಿದ್ದರು. 21  ಆದರೆ ಅವರು ನನ್ನನ್ನು ಕಳುಹಿಸಿಕೊಟ್ಟಾತನನ್ನು ತಿಳಿಯದವರಾದ್ದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿಮಿತ್ತ ನಿಮಗೆ ಮಾಡುವರು. 22  ನಾನು ಬಾರದೆ ಮತ್ತು ಅವರ ಸಂಗಡ ಮಾತನಾಡದೆ ಹೋಗಿದ್ದಾರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಅವರ ಪಾಪಕ್ಕಾಗಿ ಈಗ ಯಾವ ನೆಪವೂ ಇಲ್ಲ. 23  ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನು ಸಹ ದ್ವೇಷಿಸುತ್ತಾನೆ. 24  ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರ ನಡುವೆ ಮಾಡದೆಹೋಗಿದ್ದರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಈಗ ಅವರು ನನ್ನ ಅದ್ಭುತಕಾರ್ಯಗಳನ್ನು ನೋಡಿದ್ದಾರೆ, ಆದರೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸಿದ್ದಾರೆ 25  *‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು’ ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು. 26  ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವಸಹಾಯಕನು, ಎಂದರೆ, ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ, ಆತನೇ ನನ್ನ ವಿಷಯವಾಗಿ ಸಾಕ್ಷಿ ಕೊಡುವನು. 27  ನೀವು ಮೊದಲಿನಿಂದ ನನ್ನ ಸಂಗಡ ಇದ್ದುದರಿಂದ ನೀವೂ ಸಹ ನನಗೆ ಸಾಕ್ಷಿಗಳಾಗಿದ್ದೀರಿ.
* 15:7 15:7 ಯೋಹಾ 8:31: 15:12 15:12 ಯೋಹಾ 13:34; 1 ಯೋಹಾ 3:23: 15:19 15:19 ಯೋಹಾ 17, 14, 16; 1 ಯೋಹಾ 4:5: § 15:20 15:20 ಯೋಹಾ 13:16; ಮತ್ತಾ 10:24: * 15:25 15:25 ಕೀರ್ತ 7, 4; 35:19; 69:4 15:26 15:26 ಯೋಹಾ 14:16, 17, 26: