41
ಏಳನೆಯ ತಿಂಗಳಿನಲ್ಲಿ ರಾಜವಂಶದವನೂ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಅರಸನ ಪ್ರಧಾನರಲ್ಲಿ ಒಬ್ಬನೂ ಆದ ಇಷ್ಮಾಯೇಲನು ಹತ್ತು ಮಂದಿಯೊಂದಿಗೆ ಅಹೀಕಾಮನ ಮಗನಾದ ಗೆದಲ್ಯನು ವಾಸವಾಗಿದ್ದ ಮಿಚ್ಪಕ್ಕೆ ಬಂದನು; ಅಲ್ಲಿ ಅವನೊಂದಿಗೆ ಊಟಮಾಡಿದರು. ಆಗ ನೆತನ್ಯನ ಮಗನಾದ ಇಷ್ಮಾಯೇಲನೂ ಅವನೊಂದಿಗಿದ್ದ ಹತ್ತು ಜನರೂ ಎದ್ದು ಅಹೀಕಾಮನ ಮಗ ಶಾಫಾನನ ಮೊಮ್ಮಗ ಬಾಬೆಲಿನ ಅರಸನಿಂದ ದೇಶಾಧಿಪತಿಯಾಗಿ ನೇಮಿಸಲ್ಪಟ್ಟವನೂ ಆದ ಗೆದಲ್ಯನನ್ನು ಕತ್ತಿಯಿಂದ ಹೊಡೆದು ಕೊಂದರು. ಇದಲ್ಲದೆ ಇಷ್ಮಾಯೇಲನು ಗೆದಲ್ಯನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರೆಲ್ಲರನ್ನೂ, ಅಲ್ಲಿ ಸಿಕ್ಕಿದ ಕಸ್ದೀಯರಾದ ಸೈನಿಕರನ್ನೂ ಹತ್ಯೆಮಾಡಿದನು. ಅವನು ಗೆದಲ್ಯನನ್ನು ಕೊಂದ ಎರಡನೆಯ ದಿನದಲ್ಲಿ ಆ ಸಂಗತಿಯು ಇನ್ನೂ ಯಾರಿಗೂ ತಿಳಿಯದಿರಲು, ಗಡ್ಡಬೋಳಿಸಿ, ಬಟ್ಟೆಹರಿದು ಗಾಯ ಮಾಡಿಕೊಂಡಿದ್ದ ಎಂಭತ್ತು ಜನರು ಶೆಕೆಮ್, ಶಿಲೋ, ಸಮಾರ್ಯ ಎಂಬ ಊರುಗಳಿಂದ ಬಂದು ಕೈಯಲ್ಲಿ ಧೂಪ ಮತ್ತು ನೈವೇದ್ಯದ್ರವ್ಯಗಳನ್ನು ತೆಗೆದುಕೊಂಡು ಯೆಹೋವನ ಆಲಯಕ್ಕೆ ಹೋಗುತ್ತಿದ್ದರು. ಆಗ ನೆತನ್ಯನ ಮಗನಾದ ಇಷ್ಮಾಯೇಲನು ಮಿಚ್ಪದಿಂದ ಅವರ ಕಡೆಗೆ ಹೊರಟು ದಾರಿಯುದ್ದಕ್ಕೂ ಅಳುತ್ತಾ ನಡೆದು ಅವರನ್ನು ಎದರುಗೊಂಡು, “ಅಹೀಕಾಮನ ಮಗನಾದ ಗೆದಲ್ಯನ ಬಳಿಗೆ ಬನ್ನಿರಿ” ಎಂದು ಹೇಳಿದನು. ಅವರು ಊರೊಳಕ್ಕೆ ಬಂದ ಮೇಲೆ ನೆತನ್ಯನ ಮಗನಾದ ಇಷ್ಮಾಯೇಲನೂ ಮತ್ತು ಅವನ ಸಂಗಡಿಗರೂ ಅವರನ್ನು ಕೊಲ್ಲಿಸಿ ಬಾವಿಯಲ್ಲಿ ಹಾಕಿದರು. ಆದರೆ ಆ ಎಂಭತ್ತು ಮಂದಿಯಲ್ಲಿ ಹತ್ತು ಜನರು ಇಷ್ಮಾಯೇಲನಿಗೆ, “ನಮ್ಮನ್ನು ಕೊಲ್ಲಬೇಡ; ಗೋದಿ, ಜವೆಗೋದಿ, ಎಣ್ಣೆ, ಜೇನುತುಪ್ಪ, ಇವುಗಳನ್ನು ಕಾಡಿನಲ್ಲಿ ಬಹಳವಾಗಿ ಬಚ್ಚಿಟ್ಟಿದ್ದೇವೆ” ಎಂದು ಬಿನ್ನೈಸಲು ಅವನು ಅವರನ್ನು ಅವರ ಜೊತೆಯವರಂತೆ ಕೊಲ್ಲದೆ ಬಿಟ್ಟನು. ಇಷ್ಮಾಯೇಲನು ತಾನು ಗೆದಲ್ಯನ ಸಂಗಡ ಕೊಂದ ಇತರರ ಶವಗಳನ್ನು ಹಾಕಿದ ಬಾವಿಯು, ಇಸ್ರಾಯೇಲಿನ ಅರಸನಾದ ಬಾಷನ ಭಯದಿಂದ ಅರಸನಾದ ಆಸನು ತೋಡಿಸಿದ್ದ ಬಾವಿಯೇ. ಆ ಬಾವಿಯನ್ನು ನೆತನ್ಯನ ಮಗನಾದ ಇಷ್ಮಾಯೇಲನು ಹತರಾದವರ ಶವಗಳಿಂದ ತುಂಬಿಸಿಬಿಟ್ಟನು. 10 ಆ ಮೇಲೆ ನೆತನ್ಯನ ಮಗನಾದ ಇಷ್ಮಾಯೇಲನು ರಾಜಕುಮಾರ್ತೆಯರನ್ನು, ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿ, ಮಿಚ್ಪದ ಉಳಿದ ಜನರನ್ನು ಸೆರೆಹಿಡಿದು ಅಮ್ಮೋನ್ಯರ ಸೀಮೆಗೆ ಹೊರಟನು.
11 ಕಾರೇಹನ ಮಗನಾದ ಯೋಹಾನಾನನೂ ಅವನೊಂದಿಗಿದ್ದ ಸಕಲ ಸೇನಾಪತಿಗಳೂ ನೆತನ್ಯನ ಮಗನಾದ ಇಷ್ಮಾಯೇಲನು ಮಾಡಿದ ಎಲ್ಲಾ ಕೆಡುಕನ್ನು ಕೇಳಿ, 12 ತಮ್ಮ ಸೈನಿಕರನ್ನೆಲ್ಲಾ ಕರೆದುಕೊಂಡು, ನೆತನ್ಯನ ಮಗನಾದ ಇಷ್ಮಾಯೇಲನ ಮೇಲೆ ಯುದ್ಧಕ್ಕೆ ಹೊರಟು, ಗಿಬ್ಯೋನಿನ ದೊಡ್ಡ ಕೆರೆಯ ಹತ್ತಿರ ಅವನನ್ನು ಕಂಡರು. 13 ಆಗ ಇಷ್ಮಾಯೇಲನ ಸಂಗಡ ಇದ್ದ ಎಲ್ಲಾ ಜನರು ಕಾರೇಹನ ಮಗನಾದ ಯೋಹಾನಾನನನ್ನೂ ಅವನೊಂದಿಗಿದ್ದ ಸಮಸ್ತ ಸೇನಾಪತಿಗಳನ್ನೂ ನೋಡಿ ಸಂತೋಷಪಟ್ಟರು. 14 ಇಷ್ಮಾಯೇಲನು ಮಿಚ್ಪದಿಂದ ಸೆರೆಯಾಗಿ ಒಯ್ದಿದ್ದ ಸಕಲ ಜನರು ಹಿಂದಿರುಗಿ ಹೋಗಿ ಕಾರೇಹನ ಮಗನಾದ ಯೋಹಾನಾನನ ಬಳಿಗೆ ಸೇರಿದರು. 15 ನೆತನ್ಯನ ಮಗನಾದ ಇಷ್ಮಾಯೇಲನೋ ಎಂಟು ಮಂದಿಯ ಸಂಗಡ ಯೋಹಾನಾನನಿಂದ ತಪ್ಪಿಸಿಕೊಂಡು ಅಮ್ಮೋನ್ಯರನ್ನು ಮೊರೆಹೊಕ್ಕನು.
ಜನರು ಐಗುಪ್ತಕ್ಕೆ ವಲಸೆಹೋದದ್ದು
16 ಆಗ ಕಾರೇಹನ ಮಗನಾದ ಯೋಹಾನಾನನೂ ಅವನೊಂದಿಗಿದ್ದ ಸಮಸ್ತ ಸೇನಾಧಿಪತಿಗಳೂ ತಾವು ನೆತನ್ಯನ ಮಗನಾದ ಇಷ್ಮಾಯೇಲನ ಕೈಯಿಂದ ತಪ್ಪಿಸಿ ಗಿಬ್ಯೋನಿನಿಂದ ತಂದಿದ್ದ ಭಟರು, ಹೆಂಗಸರು, ಮಕ್ಕಳು, ಕಂಚುಕಿಗಳು, ಅಂತು ಇಷ್ಮಾಯೇಲನು ಅಹೀಕಾಮನ ಮಗನಾದ ಗೆದಲ್ಯನನ್ನು ಕೊಂದ ಮೇಲೆ ಮಿಚ್ಪದಿಂದ ಒಯ್ದ ಉಳಿದ ಜನರನ್ನೆಲ್ಲಾ ಕರೆದುಕೊಂಡು ಹೋದರು. 17 ಅವರು ಕಸ್ದೀಯರ ಭಯದಿಂದ ಐಗುಪ್ತಕ್ಕೆ ವಲಸೆಹೋಗಬೇಕೆಂದು ಬೇತ್ಲೆಹೇಮಿನ ಸಮೀಪವಾಗಿರುವ ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು. 18 ಬಾಬೆಲಿನ ಅರಸನಿಂದ ದೇಶಕ್ಕೆ ಅಧಿಪತಿಯಾಗಿ ನೇಮಿಸಲ್ಪಟ್ಟವನೂ ಅಹೀಕಾಮನ ಮಗನೂ ಆದ ಗೆದಲ್ಯನನ್ನು ನೆತನ್ಯನ ಮಗನಾದ ಇಷ್ಮಾಯೇಲನು ಕೊಂದುಹಾಕಿದ್ದರಿಂದ ಕಸ್ದೀಯರಿಗೆ ಅಂಜಿದರು.