2
ಯೇಸು ಕ್ರಿಸ್ತನ ಜನನವೂ
ಆ ಕಾಲದಲ್ಲಿ ತನ್ನ ರಾಜ್ಯದ ಜನರೆಲ್ಲಾ ಜನಗಣತಿಯನ್ನು ಮಾಡಿಸಿಕೊಳ್ಳಬೇಕೆಂಬ ಆಜ್ಞೆಯು ಚಕ್ರವರ್ತಿಯಾದ ಔಗುಸ್ತನಿಂದ ಹೊರಟಿತು. ಇದು ಕುರೇನ್ಯನು ಸಿರಿಯಕ್ಕೆ ಅಧಿಪತಿಯಾಗಿದ್ದಾಗ ನಡೆದ ಮೊದಲನೆಯ ಜನಗಣತಿ. ಆಗ ಎಲ್ಲರೂ ಜನಗಣತಿ ಮಾಡಿಸಿಕೊಳ್ಳುವುದಕ್ಕಾಗಿ ತಮ್ಮತಮ್ಮ ಊರುಗಳಿಗೆ ಹೊರಟರು. 4-5 ಯೋಸೇಫನು ಸಹ ತಾನು ದಾವೀದನ ಮನೆತನದವನೂ, ಗೋತ್ರದವನೂ ಆಗಿದ್ದದರಿಂದ ಹೆಸರು ನೊಂದಾಯಿಸಿಕೊಳ್ಳುವುದಕ್ಕಾಗಿ ತನಗೆ ನಿಶ್ಚಿತಾರ್ಥವಾಗಿದ್ದ ಹಾಗೂ ಗರ್ಭವತಿಯಾಗಿದ್ದ ಮರಿಯಳ ಸಂಗಡ ಗಲಿಲಾಯ ಸೀಮೆಯ ನಜರೇತ್ ಎಂಬ ಊರಿನಿಂದ ಹೊರಟು ಯೂದಾಯದಲ್ಲಿರುವ ಬೇತ್ಲೆಹೇಮೆಂಬ ದಾವೀದನೂರಿಗೆ ಹೋದರು. ಅವರು ಅಲ್ಲಿದ್ದಾಗ ಆಕೆಗೆ ಪ್ರಸವಕ್ಕೆ ದಿನತುಂಬಿತು. ಆಕೆಯು ತನ್ನ ಚೊಚ್ಚಲು ಮಗನನ್ನು ಹೆತ್ತು ಬಟ್ಟೆಯಲ್ಲಿ ಸುತ್ತಿ ಛತ್ರದಲ್ಲಿ ಅವರಿಗೆ ಸ್ಥಳವಿಲ್ಲದ ಕಾರಣ ಅವನನ್ನು ಗೋದಲಿಯಲ್ಲಿ ಮಲಗಿಸಿದಳು.
ದೇವದೂತರು ಯೇಸುವಿನ ಜನನವನ್ನು ಕುರುಬರಿಗೆ ತಿಳಿಸಿದ್ದು
ಆ ಸೀಮೆಯಲ್ಲಿ ಕುರುಬರು ಹೊಲದಲ್ಲಿದ್ದುಕೊಂಡು ರಾತ್ರಿಯಲ್ಲಿ ತಮ್ಮ ಕುರಿಹಿಂಡನ್ನು ಕಾಯುತ್ತಿರಲಾಗಿ, ಕರ್ತನ ದೂತನೊಬ್ಬನು ಬಂದು ಅವರ ಎದುರಿನಲ್ಲಿ ನಿಂತನು. ಕರ್ತನ ಪ್ರಭೆಯು ಅವರ ಸುತ್ತಲು ಪ್ರಕಾಶಿಸಿತು; ಅವರು ಬಹಳವಾಗಿ ಹೆದರಿದರು. 10 ಆ ದೂತನು ಅವರಿಗೆ, “ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭವಾರ್ತೆಯನ್ನು ನಿಮಗೆ ತಿಳಿಸುತ್ತೇನೆ. 11 ಅದೇನೆಂದರೆ, ಈ ಹೊತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ. 12 ಅದರ ಗುರುತೇನಂದರೆ, ಬಟ್ಟೆಯಿಂದ ಸುತ್ತಿರುವ ಒಂದು ಕೂಸು ಗೋದಲಿಯಲ್ಲಿ ಮಲಗಿರುವುದನ್ನು ನೀವು ಕಾಣುವಿರಿ” ಎಂದು ಹೇಳಿದನು. 13-14 ಫಕ್ಕನೆ ಆ ದೂತನ ಸಂಗಡ ಸ್ವರ್ಗೀಯ ಸೈನ್ಯದವರ ಒಂದು ದೊಡ್ಡ ಗುಂಪು ಕಾಣಿಸಿಕೊಂಡು,
“ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆ,
ಭೂಲೋಕದಲ್ಲಿ ದೇವರೊಲಿದ ಮನುಷ್ಯರೊಳಗೆ ಸಮಾಧಾನ”
ಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು.
15 ದೇವದೂತರು ಅವರ ಬಳಿಯಿಂದ ಪರಲೋಕಕ್ಕೆ ಹೊರಟುಹೋದ ಮೇಲೆ ಆ ಕುರುಬರು, “ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ಕರ್ತನು ನಮಗೆ ತಿಳಿಯಪಡಿಸಿದ ಈ ಸಂಗತಿಯನ್ನು ನೋಡಲು ಹೋಗೋಣ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು, 16 ತ್ವರೆಯಾಗಿ ಹೋಗಿ ಮರಿಯಳನ್ನೂ ಯೋಸೇಫನನ್ನೂ ಗೋದಲಿಯಲ್ಲಿ ಮಲಗಿರುವ ಆ ಕೂಸನ್ನೂ ಕಂಡುಕೊಂಡರು. 17 ಅದನ್ನು ನೋಡಿದಾಗ ಅವರು ಆ ಮಗುವಿನ ವಿಷಯದಲ್ಲಿ ದೇವದೂತನು ತಮಗೆ ಹೇಳಿದ್ದ ಮಾತನ್ನು ಅವರಿಗೆ ತಿಳಿಸಿದರು. 18 ಅದನ್ನು ಕೇಳಿದವರೆಲ್ಲರೂ, ತಮಗೆ ಕುರುಬರು ಹೇಳಿದ ಮಾತುಗಳಿಗೆ ಆಶ್ಚರ್ಯಪಟ್ಟರು. 19 ಆದರೆ ಮರಿಯಳು ಆ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿಟ್ಟುಕೊಂಡು ಆಲೋಚಿಸುತ್ತಿದ್ದಳು. 20 ಕುರುಬರು ತಮಗೆ ದೂತರಿಂದ ಹೇಳಲ್ಪಟ್ಟಂತೆಯೇ ಎಲ್ಲಾ ಸಂಗತಿಗಳನ್ನು ಕೇಳಿ ನೋಡಿ ಅವುಗಳಿಗಾಗಿ ದೇವರನ್ನು ಕೊಂಡಾಡುತ್ತಾ ಸ್ತುತಿಸುತ್ತಾ ಹಿಂತಿರುಗಿ ಹೋದರು.
ಯೇಸುವಿನ ನಾಮಕರಣ ಮತ್ತು ಆತನನ್ನು ದೇವಾಲಯದಲ್ಲಿ ದೇವರಿಗೆ ಸಮರ್ಪಿಸಿದ್ದು
21 ಆ ಕೂಸಿಗೆ ಸುನ್ನತಿಮಾಡಬೇಕಾಗಿದ್ದ ಎಂಟನೆಯ ದಿನದಲ್ಲಿ, ಅವರು ಅದಕ್ಕೆ ಯೇಸು ಎಂದು ಹೆಸರಿಟ್ಟರು. ಆ ಕೂಸನ್ನು ಗರ್ಭಧರಿಸುವುದಕ್ಕಿಂತ ಮೊದಲೇ ದೇವದೂತನು ಅದೇ ಹೆಸರನ್ನು ಸೂಚಿಸಿದ್ದನು.
22-23 ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಅವರ ಶುದ್ಧೀಕರಣದ ದಿನಗಳು ಮುಗಿದ ಮೇಲೆ, “ಚೊಚ್ಚಲು ಗಂಡೆಲ್ಲಾ ಕರ್ತನಿಗೆ ಮೀಸಲೆನಿಸಿಕೊಳ್ಳುವುದು” ಎಂದು ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, ಅವರು ಆ ಕೂಸನ್ನು ಕರ್ತನಿಗೆ ಸಮರ್ಪಿಸುವುದಕ್ಕಾಗಿ ಯೆರೂಸಲೇಮಿಗೆ ತೆಗೆದುಕೊಂಡು ಹೋದರು. 24 ಇದಲ್ಲದೆ ಕರ್ತನ ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ ಅವರು “ಒಂದು ಜೋಡಿ ಬೆಳವಕ್ಕಿಯನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ” ಬಲಿಕೊಡಬೇಕಾಗಿತ್ತು. 25 ಆ ಕಾಲದಲ್ಲಿ ಯೆರೂಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬ ಮನುಷ್ಯನಿದ್ದನು. ಈ ಮನುಷ್ಯನು ನೀತಿವಂತನೂ ದೇವಭಕ್ತನೂ ಆಗಿದ್ದನು. ಇಸ್ರಾಯೇಲರನ್ನು ಸಂತೈಸುವವನು ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು ಮತ್ತು ಆತನು ಪವಿತ್ರಾತ್ಮಭರಿತನಾಗಿದ್ದನು. 26 ಇದಲ್ಲದೆ, ಕರ್ತನು ಕಳುಹಿಸಬೇಕಾದ ಕ್ರಿಸ್ತನನ್ನು ಕಾಣುವುದಕ್ಕಿಂತ ಮುಂಚೆ ನೀನು ಸಾಯುವುದಿಲ್ಲವೆಂದು ಪವಿತ್ರಾತ್ಮನ ಮೂಲಕ ಅವನಿಗೆ ದೈವೋಕ್ತಿ ಉಂಟಾಗಿತ್ತು. 27 ಇವನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಆಗ ತಂದೆತಾಯಿಗಳು ಮಗುವಾದ ಯೇಸುವನ್ನು ಧರ್ಮಶಾಸ್ತ್ರದಲ್ಲಿ ಹೇಳಿರುವ ಪದ್ಧತಿಯ ಪ್ರಕಾರ ನಡೆಸಬೇಕೆಂದು ಮಗುವನ್ನು ಒಳಕ್ಕೆ ತರಲು, 28 ಸಿಮೆಯೋನನು ಆ ಮಗುವನ್ನು ತನ್ನ ಕೈಯಲ್ಲಿ ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ,
29 “ಕರ್ತನೇ, ನಿನ್ನ ಮಾತು ನೆರವೇರಿತು;
ಈಗ ಸಮಾಧಾನದಿಂದ ಹೋಗುವುದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಯಿತು.
30-31 ನೀನು ಎಲ್ಲಾ ಜನರ ಸಮ್ಮುಖದಲ್ಲಿ ಸಿದ್ಧಪಡಿಸಿದ
ಆ ರಕ್ಷಣೆಯನ್ನು ನಾನು ಕಣ್ಣಾರೆ ಕಂಡೆನು.
32 ಆತನು ಅನ್ಯಜನರಿಗೆ ಜ್ಞಾನೋದಯದ ಬೆಳಕು,
ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಕೀರ್ತಿ” ಅಂದನು.
33 ಆ ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳಿಗೆ ಅದರ ತಂದೆತಾಯಿಗಳು ಆಶ್ಚರ್ಯಪಡುತ್ತಿರಲು, 34 ಸಿಮೆಯೋನನು ಅವರನ್ನು ಆಶೀರ್ವದಿಸಿ ತಾಯಿಯಾದ ಮರಿಯಳಿಗೆ, “ಇಗೋ, ಈತನು ಇಸ್ರಾಯೇಲ್ ಜನರಲ್ಲಿ ಅನೇಕರು ಬೀಳುವುದಕ್ಕೂ, ಅನೇಕರು ಏಳುವುದಕ್ಕೂ ಕಾರಣನಾಗಿರುವನು ಮತ್ತು ಜನರು ವಿರೋಧಿಸಿ ಮಾತನಾಡುವುದಕ್ಕೂ ಗುರುತಾಗಿರುವನು; 35 ಹೀಗೆ ಬಹುಜನರ ಹೃದಯದ ಆಲೋಚನೆಗಳು ಬಹಿರಂಗವಾಗುವವು; ಈ ಕಾರಣಕ್ಕಾಗಿ ಈತನು ಹುಟ್ಟಿದ್ದು. ಇದಲ್ಲದೆ ನಿನ್ನ ಸ್ವಂತ ಮನಸ್ಸಿಗಂತೂ ಅಲಗು ನಾಟಿದಂತೆ ವೇದನೆ ಉಂಟಾಗುತ್ತದೆ” ಎಂದು ಹೇಳಿದನು.
36 ಇದಲ್ಲದೆ ಅಸೇರನ ಕುಲದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆ ಬಹಳ ಮುಪ್ಪಿನವಳು. ಮದುವೆಯಾಗಿ ಏಳು ವರ್ಷ ಗಂಡನ ಕೂಡ ಸಂಸಾರ ಮಾಡಿ ವಿಧವೆಯಾಗಿದ್ದಳು, 37 ಅವಳು ಎಂಭತ್ತುನಾಲ್ಕು ವರ್ಷದವಳಾಗಿದ್ದಳು. ಆಕೆ ದೇವಾಲಯವನ್ನು ಬಿಟ್ಟುಹೋಗದೆ ಉಪವಾಸ ವಿಜ್ಞಾಪನೆಗಳಿಂದ ರಾತ್ರಿ ಹಗಲೂ ದೇವರನ್ನು ಆರಾಧಿಸುತ್ತಿದ್ದಳು. 38 ಆಕೆ ಅದೇ ಗಳಿಗೆಯಲ್ಲಿ ಅವರ ಹತ್ತಿರಕ್ಕೆ ಬಂದು ದೇವರಿಂದಾದ ಉಪಕಾರವನ್ನು ನೆನಸಿ ಕೊಂಡಾಡಿದ್ದಲ್ಲದೆ ಯೆರೂಸಲೇಮಿನ ಬಿಡುಗಡೆಯನ್ನು ಹಾರೈಸುತ್ತಿದ್ದವರೆಲ್ಲರ ಸಂಗಡ ಆತನ ವಿಷಯವಾಗಿ ಮಾತನಾಡುವವಳಾದಳು. 39 ಇತ್ತಲಾಗಿ ಅವರು ಧರ್ಮಶಾಸ್ತ್ರದಲ್ಲಿ ಹೇಳಿರುವ ಕಾರ್ಯಗಳನ್ನೆಲ್ಲಾ ನೆರವೇರಿಸಿದ ಮೇಲೆ ಗಲಿಲಾಯಕ್ಕೆ ಸೇರಿದ ನಜರೇತೆಂಬ ತಮ್ಮ ಊರಿಗೆ ಹಿಂತಿರುಗಿ ಹೋದರು.
40 ಆ ಬಾಲಕನು ಬೆಳೆದು ಬಲಗೊಂಡು ಜ್ಞಾನದಿಂದ ತುಂಬಿದವನಾದನು; ಮತ್ತು ಆತನ ಮೇಲೆ ದೇವರ ಕೃಪೆ ಇತ್ತು.
ಬಾಲಕನಾದ ಯೇಸು ದೇವಾಲಯದಲ್ಲಿ ವಿದ್ವಾಂಸರೊಂದಿಗೆ ಸಂಭಾಷಿಸಿದ್ದು
41 ಯೇಸುವಿನ ತಂದೆತಾಯಿಗಳು ಪ್ರತಿವರ್ಷವೂ ಪಸ್ಕ ಹಬ್ಬಕ್ಕೆ ಯೆರೂಸಲೇಮಿಗೆ ಹೋಗುತ್ತಿದ್ದರು. 42 ಆತನು ಹನ್ನೆರಡು ವರ್ಷದವನಾದಾಗ ಅವರು ಪದ್ಧತಿಯ ಪ್ರಕಾರ ಅಲ್ಲಿಗೆ ಹೋದರು. 43 ಹಬ್ಬದ ದಿನಗಳನ್ನು ಮುಗಿಸಿಕೊಂಡು ಹಿಂತಿರುಗಿ ಬರುವಾಗ ಬಾಲಕನಾದ ಯೇಸು ಯೆರೂಸಲೇಮಿನಲ್ಲಿಯೇ ಉಳಿದುಕೊಂಡನು. ಅವನ ತಂದೆತಾಯಿಗಳು ಅದನ್ನು ತಿಳಿಯದೆ, 44 ಆತನು ಯಾತ್ರಿಕರ ಗುಂಪಿನಲ್ಲಿ ಸೇರಿರಬಹುದೆಂದು ಊಹಿಸಿ, ಒಂದು ದಿನದ ಪ್ರಯಾಣ ಮಾಡಿಬಿಟ್ಟಿದ್ದರು. ನಂತರ ಬಂಧುಬಾಂಧವರಲ್ಲಿಯೂ ಪರಿಚಿತರಲ್ಲಿಯೂ ಹುಡುಕಾಡಿ, 45 ಆತನನ್ನು ಕಾಣದಿದ್ದಾಗ ತಿರುಗಿ ಯೆರೂಸಲೇಮಿಗೆ ಹುಡುಕಿಕೊಂಡು ಹೋದರು. 46 ಮೂರು ದಿನದ ಮೇಲೆ ಆತನನ್ನು ದೇವಾಲಯದಲ್ಲಿ ಕಂಡರು. ಆತನು ಬೋಧಕರ ನಡುವೆ ಕುಳಿತುಕೊಂಡು ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆಮಾಡುತ್ತಾ ಇದ್ದನು. 47 ಆತನು ಆಡಿದ ಮಾತುಗಳನ್ನು ಕೇಳಿದವರೆಲ್ಲರು ಆತನ ಬುದ್ಧಿಗೂ ಉತ್ತರಗಳಿಗೂ ಆಶ್ಚರ್ಯಪಟ್ಟರು. 48 ತಂದೆತಾಯಿಗಳು ಆತನನ್ನು ಕಂಡು ಬೆರಗಾದರು; ಮತ್ತು ಆತನ ತಾಯಿಯು, “ಕಂದಾ, ನೀನು ನಮಗೆ ಯಾಕೆ ಹೀಗೆ ಮಾಡಿದಿ? ನಿನ್ನ ತಂದೆಯೂ ನಾನೂ ಎಷ್ಟೋ ತಳಮಳಗೊಂಡು ನಿನ್ನನ್ನು ಹುಡುಕಿ ಬಂದೆವಲ್ಲಾ” ಎಂದು ಹೇಳಲು, 49 ಆತನು ಅವರಿಗೆ, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದವನು ಎಂದು ನಿಮಗೆ ತಿಳಿಯಲಿಲ್ಲವೇ?” ಎಂದು ಕೇಳಿದನು. 50 ಆದರೆ ಆತನು ಹೇಳಿದ ಮಾತಿನ ಅರ್ಥವನ್ನು ಅವರು ಗ್ರಹಿಸಲಿಲ್ಲ. 51 ಬಳಿಕ ಆತನು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ವಿಧೇಯನಾಗಿದ್ದನು. ಆತನ ತಾಯಿಯು ಈ ಸಂಗತಿಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಳು.
52 ಯೇಸು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ಬೆಳೆಯುತ್ತಾ ಬಂದನು; ಇದಲ್ಲದೆ ದೇವರ ಮತ್ತು ಮನುಷ್ಯರ ಕೃಪೆಯು ಆತನ ಮೇಲೆ ಹೆಚ್ಚಾಗುತ್ತಾ ಬಂದಿತು.