ಪಂಚಮ ಭಾಗ (107-150)
107
ವಿಮುಕ್ತರ ಕೊಂಡಾಟ
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ;
ಆತನು ಒಳ್ಳೆಯವನು.
ಆತನ ಕೃಪೆಯು ಶಾಶ್ವತವಾಗಿರುವುದು.
ಯೆಹೋವನ ವಿಮುಕ್ತರು ಅಂದರೆ ಆತನು ಶತ್ರುಗಳಿಂದ ಬಿಡಿಸಿ,
ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣಗಳಲ್ಲಿಯೂ,
ಸಮುದ್ರದ ಕಡೆಯಲ್ಲಿಯೂ ಇರುವ ದೇಶಗಳಿಂದ ಕೂಡಿಸಿದವರೆಲ್ಲರೂ ಸ್ತುತಿಮಾಡಲಿ.
ಅವರು ಅರಣ್ಯದಲ್ಲಿಯೂ, ಮರಳುಗಾಡಿನಲ್ಲಿಯೂ,
ದಾರಿತಪ್ಪಿ ಅಲೆಯುವವರಾಗಿ,
ಜನವಿರುವ ಊರನ್ನು ಕಾಣದೆ,
ಹಸಿವೆ, ನೀರಡಿಕೆಗಳಿಂದ ಬಲಗುಂದಿದವರಾಗಿದ್ದರು.
ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು,
ಆತನು ಅವರನ್ನು ಕಷ್ಟದಿಂದ ಬಿಡಿಸಿದನು.
ಜನವಿರುವ ಊರನ್ನು ಸೇರುವಂತೆ,
ಅವರನ್ನು ಸರಿಯಾದ ದಾರಿಯಲ್ಲಿ ನಡೆಸಿದನು.
ಅವರು ಯೆಹೋವನ ಕೃಪೆಗೋಸ್ಕರವೂ,
ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ,
ಆತನನ್ನು ಕೊಂಡಾಡಲಿ.
ಆತನು ಬಾಯಾರಿದವರ ಆಶೆಯನ್ನು ಪೂರೈಸಿ,
ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸುತ್ತಾನೆ.
10 ಕತ್ತಲಲ್ಲಿಯೂ, ಘೋರಾಂಧಕಾರದಲ್ಲಿಯೂ,
ಬೇಡಿಗಳಿಂದ ಬಂಧಿಸಲ್ಪಟ್ಟು, ನೋವಿನಿಂದ ಬಿದ್ದುಕೊಂಡಿದ್ದರು.
11 ಅವರು ದೇವರ ಕಟ್ಟಳೆಗಳಿಗೆ ವಿರುದ್ಧವಾಗಿ ನಿಂತು,
ಪರಾತ್ಪರನಾದ ದೇವರ ಸಂಕಲ್ಪವನ್ನು ನಿರಾಕರಿಸಿದ್ದರಿಂದ,
12 ಆತನು ಅವರನ್ನು ಕಷ್ಟಗಳಿಂದ ಕುಗ್ಗಿಸಿದನು;
ನಿರಾಶ್ರಯರಾಗಿ ಬಿದ್ದುಹೋದರು.
13 ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು,
ಆತನು ಅವರನ್ನು ಕಷ್ಟದಿಂದ ತಪ್ಪಿಸಿದನು.
14 ಆತನು ಅವರ ಬಂಧನಗಳನ್ನು ತೆಗೆದುಹಾಕಿ,
ಕತ್ತಲೆಯಿಂದಲೂ, ಘೋರಾಂಧಕಾರದಿಂದಲೂ ಅವರನ್ನು ಹೊರತಂದನು.
15 ಅವರು ಯೆಹೋವನ ಕೃಪೆಗೋಸ್ಕರವೂ,
ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ,
ಆತನನ್ನು ಕೊಂಡಾಡಲಿ.
16 ಆತನು ತಾಮ್ರದ ಕದಗಳನ್ನು ಒಡೆದು,
ಕಬ್ಬಿಣದ ಅಗುಳಿಗಳನ್ನು ಮುರಿದುಬಿಟ್ಟಿದ್ದಾನೆ.
17 ಮೂರ್ಖರು ಅಪರಾಧ, ದುರಾಚಾರಗಳ ದೆಸೆಯಿಂದ ಬಾಧೆಗೊಳಗಾದರು.
18 ಎಲ್ಲಾ ಆಹಾರಕ್ಕೂ ಅಸಹ್ಯಪಟ್ಟು ಮರಣದ್ವಾರಕ್ಕೆ ಸಮೀಪವಾದರು.
19 ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು,
ಆತನು ಅವರನ್ನು ಕಷ್ಟದಿಂದ ತಪ್ಪಿಸಿದನು.
20 ಆತನು ದೂತನನ್ನೋ ಎಂಬಂತೆ ತನ್ನ ವಾಕ್ಯವನ್ನು ಕಳುಹಿಸಿ,
ಅವರನ್ನು ಗುಣಪಡಿಸಿದನು;
ಸಮಾಧಿಗೆ ಸೇರದಂತೆ ಮಾಡಿದನು.
21 ಅವರು ಯೆಹೋವನ ಕೃಪೆಗೋಸ್ಕರವೂ,
ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ,
ಆತನನ್ನು ಕೊಂಡಾಡಲಿ.
22 ಕೃತಜ್ಞತಾ ಯಜ್ಞಗಳನ್ನು ಸಮರ್ಪಿಸಿ,
ಉತ್ಸಾಹಧ್ವನಿಮಾಡುತ್ತಾ
ಆತನ ಮಹತ್ಕಾರ್ಯಗಳನ್ನು ವರ್ಣಿಸಲಿ.
23 ಹಡಗು ಹತ್ತಿ ಸಮುದ್ರ ಪ್ರಯಾಣ ಮಾಡುತ್ತಾ,
ಮಹಾಜಲರಾಶಿಯಲ್ಲಿ ತಮ್ಮ ಉದ್ಯೋಗವನ್ನು ನಡೆಸುವವರು,
24 ಯೆಹೋವನ ಮಹತ್ಕಾರ್ಯಗಳನ್ನೂ,
ಅಗಾಧಜಲದಲ್ಲಿ ಆತನ ಅದ್ಭುತಗಳನ್ನೂ ನೋಡುತ್ತಾರೆ.
25 ಆತನು ಅಪ್ಪಣೆಕೊಡಲು ಬಿರುಗಾಳಿಯುಂಟಾಗಿ,
ಅದರಲ್ಲಿ ತೆರೆಗಳನ್ನು ಎಬ್ಬಿಸಿತು.
26 ಜನರು* ಆಕಾಶಕ್ಕೆ ಏರುತ್ತಲೂ,
ಅಗಾಧಕ್ಕೆ ಇಳಿಯುತ್ತಲೂ ಕಂಗೆಟ್ಟು ಕರಗಿಹೋದರು.
27 ಅವರು ದಿಕ್ಕುತೋರದವರಾಗಿ ಸುತ್ತುತ್ತಾ,
ಕುಡುಕರಂತೆ ಹೊಯ್ದಾಡುತ್ತಿದ್ದರು.
28 ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು,
ಆತನು ಅವರನ್ನು ಕಷ್ಟದಿಂದ ಹೊರತಂದನು.
29 ಆತನು ಬಿರುಗಾಳಿಯನ್ನು ಶಾಂತಪಡಿಸಿದನು;
ತೆರೆಗಳು ನಿಂತವು.
30 ಸಮುದ್ರವು ಶಾಂತವಾದುದರಿಂದ,
ಹಡಗಿನವರು ಸಂತೋಷಪಟ್ಟರು,
ಅವರು ಮುಟ್ಟಬೇಕಾದ ರೇವಿಗೆ ಆತನು ಅವರನ್ನು ಸೇರಿಸಿದನು.
31 ಅವರು ಯೆಹೋವನ ಕೃಪೆಗೋಸ್ಕರವೂ
ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ
ಆತನನ್ನು ಕೊಂಡಾಡಲಿ.
32 ನೆರೆದ ಸಭೆಯಲ್ಲಿ ಆತನನ್ನು ಕೀರ್ತಿಸಲಿ;
ಹಿರಿಯರ ಸಮೂಹದಲ್ಲಿ ಕೊಂಡಾಡಲಿ.
33 ಆತನು ನಿವಾಸಿಗಳ ದುಷ್ಟತನಕ್ಕಾಗಿ
ನದಿಗಳನ್ನು ಅರಣ್ಯವಾಗುವಂತೆಯೂ,
34 ನೀರಿನ ಬುಗ್ಗೆಗಳನ್ನು ಒಣನೆಲವಾಗುವಂತೆಯೂ,
ಫಲಭೂಮಿಯನ್ನು ಉಪ್ಪು ನೆಲವಾಗುವಂತೆಯೂ ಮಾಡಿದನು.
35 ಅರಣ್ಯವನ್ನು ಕೆರೆಯಾಗಿಯೂ,
ಒಣನೆಲವನ್ನು ಬುಗ್ಗೆಗಳಾಗಿಯೂ ಮಾಡಿ,
36 ಅಲ್ಲಿ ಹಸಿದವರನ್ನು ನೆಲೆಗೊಳಿಸಿದನು;
ಅವರು ನೆಲೆಯಾಗಿ ವಾಸಿಸಲು ಪಟ್ಟಣವನ್ನು ಕಟ್ಟಿಕೊಂಡು,
37 ಹೊಲಗಳನ್ನು ಬಿತ್ತಿ, ದ್ರಾಕ್ಷಾಲತೆಗಳನ್ನು ನೆಟ್ಟು,
ಆದಾಯವನ್ನು ಕೂಡಿಸಿಕೊಂಡರು.
38 ಆತನು ಆಶೀರ್ವದಿಸಿದ್ದರಿಂದ ಅವರು ಬಹಳವಾಗಿ ಹೆಚ್ಚಿದರು.
ಅವರಿಗೆ ದನಕರುಗಳೇನೂ ಕಡಿಮೆ ಇರಲಿಲ್ಲ.
39 ಅವರು ಕೇಡು ತೊಂದರೆಗಳಿಂದಲೂ,
ಸಂಕಟದಿಂದಲೂ ಕುಗ್ಗಿಹೋಗಿ ಸ್ವಲ್ಪ ಜನರಾದರು.
40 ಪ್ರಭುಗಳಿಗೆ ಅಪಮಾನವನ್ನು ಉಂಟುಮಾಡಿ,
ಅವರನ್ನು ದಾರಿಯಿಲ್ಲದ ಅರಣ್ಯದಲ್ಲಿ ಅಲೆದಾಡಿಸುವವನು.
41 ಕಷ್ಟದಲ್ಲಿದ್ದ ದೀನರನ್ನು ಉನ್ನತಸ್ಥಿತಿಗೆ ಏರಿಸಿ,
ಅವರ ಕುಟುಂಬಗಳನ್ನು ಕುರಿಹಿಂಡಿನಂತೆ ಹೆಚ್ಚಿಸಿದನು.
42 ಯಥಾರ್ಥರು ಇದನ್ನು ನೋಡಿ ಹಿಗ್ಗುವರು;
ಕೆಡುಕುಬಾಯಿ ಮುಚ್ಚಿಹೋಗುವುದು.
43 ಜ್ಞಾನಿಗಳು ಈ ಸಂಗತಿಗಳನ್ನು ಗಮನಿಸಿ,
ಯೆಹೋವನ ಕೃಪಾಕಾರ್ಯಗಳನ್ನು ಗ್ರಹಿಸಿಕೊಳ್ಳಲಿ.
* 107:26 107:26 ಜನರು ಅಥವಾ ನಾವಿಕರು.