46
ಯೆಹೋವನು ಭಕ್ತಪಾಲಕನೂ, ಸರ್ವಾಧಿಪತಿಯೂ ಎಂಬುದು
1 ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಗೀತೆ; ತಾರಕಸ್ಥಾಯಿಯಲ್ಲಿ ಹಾಡತಕ್ಕದ್ದು.
ಕೀರ್ತ 76; 1ಪೂರ್ವ 15:20
ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ;
ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.
ಆದುದರಿಂದ ಭೂಮಿಯು ಮಾರ್ಪಟ್ಟರೂ,
ಬೆಟ್ಟಗಳು ಸಮುದ್ರದಲ್ಲಿ ಮುಳುಗಿಹೋದರೂ,
ನಮಗೇನೂ ಭಯವಿಲ್ಲ.
ಸಮುದ್ರವು ಬೋರ್ಗರೆಯುತ್ತಾ ನೊರೆಯನ್ನು ಕಾರಿದರೇನು?
ಅದರ ಅಲ್ಲಕಲ್ಲೋಲಗಳಿಂದ ಪರ್ವತಗಳು ಚಲಿಸಿದರು ಭಯವಿಲ್ಲ?
ಸೆಲಾ
ಒಂದು ನದಿ ಇದೆ; ಅದರ ಕಾಲುವೆಗಳು,
ಪರಾತ್ಪರನಾದ ದೇವರ ಪರಿಶುದ್ಧ ನಿವಾಸಸ್ಥಾನವಾಗಿರುವ,
ದೇವರ ನಗರವನ್ನು ಸಂತೋಷಪಡಿಸುತ್ತವೆ.
ದೇವರು ಇದರಲ್ಲಿದ್ದಾನೆ; ಇದಕ್ಕೆ ಚಲನವೇ ಇಲ್ಲ.
ಉದಯಕಾಲದಲ್ಲಿಯೇ ದೇವರು ಇದರ ಸಹಾಯಕ್ಕೆ ಬರುವನು.
ಜನಾಂಗಗಳು ಕಳವಳಗೊಂಡವು;
ರಾಜ್ಯಗಳು ತತ್ತರಿಸಿದವು. ಆತನು ಗರ್ಜಿಸಲು ಭೂಲೋಕವೆಲ್ಲಾ ಕರಗಿ ಹೋಯಿತು.
ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ;
ಯಾಕೋಬ ವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ.
ಸೆಲಾ
ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ;
ಆತನು ಭೂಲೋಕದಲ್ಲಿ ಎಂಥಾ ವಿನಾಶವನ್ನು ಉಂಟುಮಾಡಿದ್ದಾನೆ.
ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ಸ್ಥಗಿತಗೊಳಿಸಿದ್ದಾನೆ;
ಬಿಲ್ಲುಗಳನ್ನೂ, ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ;
*ರಥಗಳನ್ನು ದಹಿಸಿಬಿಟ್ಟಿದ್ದಾನೆ.
10 ಕಾದಾಡುವುದನ್ನು ನಿಲ್ಲಿಸಿರಿ, ನಾನೇ ದೇವರು;
ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿಯಿರಿ” ಎಂದು ಹೇಳಿದ್ದಾನೆ.
11 ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ;
ಯಾಕೋಬವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ.
ಸೆಲಾ.
* 46:9 46:9 ಅಥವಾ ಗುರಾಣಿಗಳನ್ನು. ಪ್ರಾಚೀನ ಗುರಾಣಿಗಳನ್ನು ಮರದಿಂದ ಮತ್ತು ಚರ್ಮದಿಂದ ತಯಾರಿಸಲಾಗುತ್ತಿತ್ತು ಮತ್ತು ಸಾಮಾನ್ಯವಾಗಿ ಆಲಿವ್ ಎಣ್ಣೆಯನ್ನು ಉಜ್ಜಲಾಗುತ್ತಿತ್ತು; ಇದರ ಪರಿಣಾಮವಾಗಿ ಅವುಗಳನ್ನು ಸುಲಭವಾಗಿ ದಹಿಸಬಹುದಾಗಿತ್ತು. 46:10 46:10 ಅಥವಾ ಮೌನವಾಗಿರಿ.