48
ಚೀಯೋನನ್ನು ರಕ್ಷಿಸಿದ್ದಕ್ಕಾಗಿ ಯೆಹೋವನನ್ನು ಕೊಂಡಾಡುವುದು
ಹಾಡು; ಕೋರಹೀಯರ ಕೀರ್ತನೆ.
ಕೀರ್ತ 46
ಯೆಹೋವನು ಮಹೋನ್ನತನು;
ನಮ್ಮ ದೇವರು ತನ್ನ ಪರಿಶುದ್ಧ ಪರ್ವತ ನಗರದಲ್ಲಿ ಸರ್ವಸ್ತುತಿಗೆ ಪಾತ್ರನಾಗಿದ್ದಾನೆ.
ರಾಜಾಧಿರಾಜನ ಪಟ್ಟಣವಿರುವ ಚೀಯೋನ್ ಪರ್ವತವು
ಉತ್ತರದಿಕ್ಕಿನಲ್ಲಿ ಉನ್ನತವಾಗಿಯೂ, ರಮ್ಯವಾಗಿಯೂ,
ಭೂಲೋಕದಲ್ಲೆಲ್ಲಾ ಕಂಗೊಳಿಸುತ್ತಿರುವುದು.
ದೇವರು ಅದರ ಕೊತ್ತಲುಗಳಲ್ಲಿ,
ತಾನೇ ಭದ್ರವಾದ ಬುರುಜೆಂದು ಕೀರ್ತಿಪಡೆದನು.
ರಾಜರು ಕೂಡಿಕೊಂಡರು;
ಅವರು ಒಗ್ಗಟ್ಟಾಗಿ ಬಂದರು.
ನೋಡಿ ಬೆರಗಾದರು;
ತಲ್ಲಣಿಸಿ ಓಡಿಹೋದರು.
ಕಂಪನವೂ ಹೆರುವವಳಂತೆ,
ವೇದನೆಯೂ ಅವರಿಗೆ ಉಂಟಾಯಿತು.
ದೇವರೇ, ನೀನು ಬಿರುಗಾಳಿಯಿಂದ ತಾರ್ಷಿಷ್ ದೇಶದ
ದೊಡ್ಡ ದೊಡ್ಡ ಹಡಗುಗಳನ್ನು ಒಡೆದುಬಿಟ್ಟಂತಾಯಿತು.
ನಾವು ಕಿವಿಯಿಂದ ಕೇಳಿದಂತೆಯೇ ಈಗ ಕಣ್ಣಾರೆ ಕಂಡೆವು;
ನಮ್ಮ ದೇವರೂ ಸೇನಾಧೀಶನೂ ಆಗಿರುವ
ಯೆಹೋವನ ಸಂಸ್ಥಾನದಲ್ಲಿ ಆತನ ಮಹತ್ತನ್ನು ನೋಡಿದ್ದೇವೆ.
ದೇವರು ಅದನ್ನು ಶಾಶ್ವತವಾಗಿ ಸ್ಥಾಪಿಸುವನು.
ಸೆಲಾ
ದೇವರೇ, ನಾವು ನಿನ್ನ ಆಲಯದಲ್ಲಿ,
ನಿನ್ನ ಪ್ರೀತಿಯನ್ನು ಸ್ಮರಿಸುತ್ತೇವೆ;
10 ದೇವರೇ, ನಿನ್ನ ನಾಮದ ಘನತೆಗೆ ತಕ್ಕಂತೆಯೇ,
ಲೋಕವೆಲ್ಲಾ ನಿನ್ನನ್ನು ಹೊಗಳುವುದು.
ನಿನ್ನ ಬಲಗೈ ನೀತಿಯನ್ನು ನೆರವೇರಿಸಿತು.
11 ಚೀಯೋನ್ ಪಟ್ಟಣದವರು* ಹರ್ಷಿಸಲಿ;
ನೀನು ನ್ಯಾಯವನ್ನು ನಿರ್ಣಯಿಸಿದ್ದರಿಂದ,
ಯೆಹೂದ ಸೀಮೆಯ ನಿವಾಸಿಗಳು ಆನಂದಪಡಲಿ.
12 ಚೀಯೋನ್ ಸಂಸ್ಥಾನದ ಸುತ್ತಲೂ ಸಂಚರಿಸಿ,
ಅದರ ಬುರುಜುಗಳನ್ನು ಲೆಕ್ಕಿಸಿರಿ.
13 ಅದರ ಪ್ರಾಕಾರಗಳನ್ನು ಚೆನ್ನಾಗಿ ನೋಡಿರಿ;
ಅದರ ಕೊತ್ತಲುಗಳನ್ನು ಸೂಕ್ಷ್ಮವಾಗಿ ಗಮನಿಸಿರಿ.
14 ಆಗ ನೀವು ನಿಮ್ಮ ಮುಂದಣ ಸಂತತಿಯವರಿಗೆ,
ದೇವರು ಇಂಥವನು; ಆತನು ಯುಗಯುಗಾಂತರಗಳಲ್ಲಿಯೂ ನಮ್ಮ ದೇವರು,
ನಿರಂತರವೂ ನಮ್ಮನ್ನು ನಡೆಸುವವನಾಗಿದ್ದಾನೆ ಎಂದು ತಿಳಿಸುವಿರಿ.
* 48:11 48:11 ಚೀಯೋನ್ ಪಟ್ಟಣದವರು ಮೂಲತಃ ಚೀಯೋನ್ ಪುತ್ರಿಯರು.