52
ದುಷ್ಟಾಧಿಕಾರಿಯ ದುರ್ಸ್ವಭಾವದ ಖಂಡನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ಅಹೀಮೆಲೆಕನ ಮನೆಗೆ ಬಂದ ವರ್ತಮಾನವನ್ನು ಎದೋಮ್ಯನಾದ ದೋಯೇಗನು ಸೌಲನಿಗೆ ತಿಳಿಸಿದಾಗ ದಾವೀದನು ರಚಿಸಿದ ಪದ್ಯ.
*ಪರಾಕ್ರಮಿಯೇ, ನೀನು ಕೆಡುಕುಮಾಡಿ ಹಿಗ್ಗುವುದೇನು?
ದೇವರ ಕೃಪೆಯು ಯಾವಾಗಲೂ ಇರುವುದು.
ಮೋಸಗಾರನೇ, ನಿನ್ನ ನಾಲಿಗೆಯು ಹರಿತವಾದ ಕ್ಷೌರಕತ್ತಿಯಂತೆ
ಅಪಾಯಗಳನ್ನೇ ಕಲ್ಪಿಸುತ್ತದೆ.
ಉಪಕಾರಕ್ಕಿಂತಲೂ ಅಪಕಾರವೇ ನಿನಗೆ ಇಷ್ಟ;
ನೀತಿಯನ್ನು ಬಿಟ್ಟು ಅನೀತಿಯನ್ನು ಸ್ಥಾಪಿಸುವುದೇ ನಿನಗೆ ಸಂತೋಷ.
ಸೆಲಾ
ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.
ದೇವರು ನಿನ್ನನ್ನು ಎಂದಿಗೂ ಏಳದಂತೆ ಕೆಡವಿಬಿಡುವನು;
ನಿನ್ನನ್ನು ಹಿಡಿದು ಗುಡಾರದೊಳಗಿಂದ ಕಿತ್ತು ಬೀಸಾಡುವನು;
ಆತನು ನಿನ್ನನ್ನು ಜೀವಲೋಕದಿಂದ ಬೇರು ಸಹಿತವಾಗಿ ಕಿತ್ತುಹಾಕುವನು.
ನೀತಿವಂತರು ಅದನ್ನು ನೋಡಿ ಭಯಪಡುವರು;
ಅವರು ಪರಿಹಾಸ್ಯಮಾಡುತ್ತಾ,
“ನೋಡಿರಿ, ದೇವರನ್ನು ಆಶ್ರಯಿಸಿಕೊಳ್ಳದೆ, ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು,
ತನ್ನ ದುಷ್ಟತ್ವವೇ ತನಗೆ ಬಲವೆಂದು ನಂಬಿಕೊಂಡ ಮೂಢನು ಇವನೇ” ಎಂದು ಹೇಳುವರು.
ಆದರೆ ನಾನು ದೇವಾಲಯದ ಸೊಗಸಾದ ಎಣ್ಣೇ ಮರದಂತಿರುವೆನು;
ದೇವರ ಕೃಪೆಯನ್ನು ಯುಗಯುಗಾಂತರಗಳಲ್ಲಿಯೂ ನಂಬಿಕೊಂಡಿರುವೆನು.
ದೇವರೇ, ನಿನ್ನ ಉಪಕಾರಕ್ಕಾಗಿ ಯಾವಾಗಲೂ ನಿನ್ನನ್ನು ಸ್ತುತಿಸುವೆನು;
ನಿನ್ನ ನಾಮವು ಸರ್ವೋತ್ತಮವೆಂದು ನಿನ್ನ ಭಕ್ತರ ಮುಂದೆ ಹೊಗಳುವೆನು.
* 52:1 52:1 ಅಥವಾ ಓ ಪರಾಕ್ರಮಿಯೇ, ನೀನು ದೇವರ ಮನುಷ್ಯನಿಗೆ ಮಾಡಿದ ಕಾರ್ಯದ ಬಗ್ಗೆ ಹಿಗ್ಗುವದೇನು? 52:7 52:7 ಅಥವಾ ತನ್ನ ದುಷ್ಟಕಾರ್ಯಗಳಲ್ಲಿ ಆಧಿಕ ಬಲಿಷ್ಠನಾಗುತ್ತಾ ಬಂದನು.