74
ದೇವಾಲಯವನ್ನು ಹಾಳುಮಾಡಿದ ಶತ್ರುಗಳನ್ನು ತಗ್ಗಿಸಬೇಕೆಂಬ ಪ್ರಾರ್ಥನೆ
ಆಸಾಫನ ಪದ್ಯ.
ಕೀರ್ತ 79
ದೇವರೇ, ನೀನು ನಮ್ಮನ್ನು ಸಂಪೂರ್ಣವಾಗಿ ತಳ್ಳಿಬಿಟ್ಟಿದ್ದೇಕೆ?
ನೀನು ಪಾಲಿಸುವ ಹಿಂಡಿನ ಮೇಲೆ ನಿನ್ನ ಕೋಪಾಗ್ನಿಯ ಹೊಗೆ ಏರುವುದೇಕೆ?
ನೀನು ಹಿಂದಿನ ಕಾಲದಲ್ಲಿ ಸ್ವಕುಲವಾಗಿರಬೇಕೆಂದು
ಬಿಡುಗಡೆ ಮಾಡಿ ಸಂಪಾದಿಸಿಕೊಂಡ ನಿನ್ನ ಸಭಾಮಂಡಲಿಯನ್ನು ಜ್ಞಾಪಿಸಿಕೋ;
ನಿನ್ನ ವಾಸಸ್ಥಾನವಾಗಿದ್ದ ಚೀಯೋನ್ ಪರ್ವತವನ್ನು ಮರೆಯಬೇಡ.
ಬಹುಕಾಲದಿಂದ ಹಾಳುಬಿದ್ದಿರುವ ಈ ಸ್ಥಾನದ ಕಡೆಗೆ ನೀನು ಹೆಜ್ಜೆ ಹಾಕು.
ನೋಡು, ವೈರಿಯು ಪವಿತ್ರಾಲಯದಲ್ಲಿ ಎಲ್ಲವನ್ನು ಕೆಡವಿಬಿಟ್ಟಿದ್ದಾನೆ.
ನಿನ್ನ ದರ್ಶನಾಲಯದ ಮಧ್ಯದಲ್ಲಿ ನಿನ್ನ ವಿರೋಧಿಗಳು ಆರ್ಭಟಿಸುತ್ತಾರೆ;
ನಮ್ಮ ಆರಾಧನಾ ಚಿಹ್ನೆಗಳನ್ನು ತೆಗೆದು ತಮ್ಮ ಚಿಹ್ನೆಗಳನ್ನು ಇಟ್ಟಿದ್ದಾರೆ.
ಮರಗಳ ಗುಂಪಿನಲ್ಲಿ ಕೊಡಲಿಗಳನ್ನು ಮೇಲೆತ್ತುವ ಜನರೋ ಎಂಬಂತಿದ್ದಾರೆ.
ನೋಡು, ಅವರು ಈಗ ಕೈಕೊಡಲಿ ಮತ್ತು ಸುತ್ತಿಗೆಗಳಿಂದ,
ದೇವಾಲಯದ ಕೆತ್ತನೆಯ ಕೆಲಸವನ್ನೆಲ್ಲಾ ಹೊಡೆದುಹಾಕುತ್ತಿದ್ದಾರೆ.
ಅವರು ನಿನ್ನ ಪವಿತ್ರಾಲಯಕ್ಕೆ ಬೆಂಕಿ ಹಚ್ಚಿ,
ನಿನ್ನ ನಾಮಕ್ಕೆ ಪ್ರತಿಷ್ಠಿತವಾದ ಮಂದಿರವನ್ನು ಹೊಲೆಮಾಡಿ, ನೆಲಸಮಗೊಳಿಸಿದ್ದಾರೆ.
“ನಾವು ಈ ಜನವನ್ನೆಲ್ಲಾ ಸಂಹರಿಸಿಬಿಡೋಣ” ಅಂದುಕೊಂಡಿದ್ದಾರೆ;
ದೇಶದಲ್ಲಿರುವ ನಿನ್ನ ಎಲ್ಲಾ ಸಭಾಮಂದಿರಗಳನ್ನು ಸುಟ್ಟುಬಿಟ್ಟಿದ್ದಾರೆ.
ನಮ್ಮ ಆರಾಧನಾ ಚಿಹ್ನೆಗಳು ಈಗ ಕಾಣುವುದಿಲ್ಲ.
ಮುಂಚೆ ಇದ್ದಂತೆ ನಮಗೆ ಪ್ರವಾದಿಗಳು ಯಾರೂ ಇಲ್ಲ;
ಇದು ಎಷ್ಟರವರೆಗೆ ಇರುವುದೆಂದು ಬಲ್ಲವರು ನಮ್ಮಲ್ಲಿ ಯಾರೂ ಇಲ್ಲ.
10 ದೇವರೇ, ವಿರೋಧಿಗಳು ಇನ್ನೆಲ್ಲಿಯ ತನಕ ನಿಂದಿಸುತ್ತಿರಬೇಕು?
ವೈರಿಗಳು ನಿನ್ನ ನಾಮವನ್ನು ಸದಾಕಾಲವೂ ತಿರಸ್ಕರಿಸಬಹುದೋ?
11 ಚಾಚಿದ ಬಲಗೈಯನ್ನು ಏಕೆ ಹಿಂದೆಗೆದಿದ್ದೀ?
ಅದನ್ನು ಎದೆಯ ಮೇಲಿನಿಂದ ತೆಗೆದು ಅವರನ್ನು ಸಂಹರಿಸಿಬಿಡು.
12 ದೇವರೇ, ನೀನು ಮೊದಲಿನಿಂದಲೂ ನನ್ನ ಅರಸನೂ,
ಲೋಕಮಧ್ಯದಲ್ಲಿ ರಕ್ಷಣೆಗಳನ್ನು ನಡೆಸಿದಾತನೂ ಆಗಿದ್ದೀಯಲ್ಲವೇ?
13 ಸ್ವಶಕ್ತಿಯಿಂದ ಸಮುದ್ರವನ್ನು ಭೇದಿಸಿದವನು ನೀನು;
ಜಲರಾಶಿಯ ಮೇಲೆ ತಿಮಿಂಗಿಲಗಳ ತಲೆಗಳನ್ನು ಜಜ್ಜಿಬಿಟ್ಟವನು ನೀನು.
14 ಲಿವ್ಯಾತಾನನ* ಶಿರಚ್ಛೇದನೆಮಾಡಿ,
ಅಡವಿಯ ಮೃಗಸಮುದಾಯಕ್ಕೆ ಆಹಾರ ಕೊಟ್ಟವನು ನೀನು.
15 ಬುಗ್ಗೆಹಳ್ಳಗಳನ್ನು ಉಕ್ಕಿಸಿದವನು ನೀನು;
ಮಹಾನದಿಗಳನ್ನು ಒಣಗಿಸಿಬಿಟ್ಟವನು ನೀನು.
16 ಹಗಲಿರುಳುಗಳನ್ನು ನೇಮಿಸಿದವನು ನೀನು;
ಸೂರ್ಯ ಮತ್ತು ಜ್ಯೋತಿರ್ಮಂಡಲಗಳ ನಿರ್ಮಾಪಕನು ನೀನು.
17 ಭೂಮಿಯ ಎಲ್ಲಾ ಮೇರೆಗಳನ್ನು ಸ್ಥಾಪಿಸಿದವನು ನೀನು;
ಬೇಸಿಗೆ ಮತ್ತು ಚಳಿಗಾಲಗಳನ್ನು ನೇಮಿಸಿದವನು ನೀನು.
18 ಯೆಹೋವನೇ, ವೈರಿಗಳು ನಿನ್ನನ್ನು ನಿಂದಿಸಿದ್ದನ್ನು,
ದುರ್ಮತಿಗಳು ನಿನ್ನ ನಾಮವನ್ನು ತಿರಸ್ಕರಿಸಿದ್ದನ್ನು ಜ್ಞಾಪಿಸಿಕೋ.
19 ನಿನ್ನ ಬೆಳವಕ್ಕಿಯ ಜೀವವನ್ನು ಕಾಡುಮೃಗಕ್ಕೆ ಕೊಡಬೇಡ;
ನಿನ್ನ ದೀನಮಂಡಲಿಯನ್ನು ಸದಾ ಮರೆಯಬೇಡ.
20 ನಿನ್ನ ಒಡಂಬಡಿಕೆಯನ್ನು ಲಕ್ಷ್ಯಕ್ಕೆ ತಂದುಕೋ.
ದೇಶದ ಅಂಧಕಾರ ಸ್ಥಾನಗಳಲ್ಲಿ ಬಲತ್ಕಾರವು ತುಂಬಿ ವಾಸಿಸುತ್ತದಲ್ಲಾ.
21 ಕುಗ್ಗಿದವರು ಆಶಾಭಂಗದಿಂದ ಹಿಂದಿರುಗದಿರಲಿ;
ದುಃಖಿತರೂ, ಬಡವರೂ ನಿನ್ನ ನಾಮವನ್ನು ಕೀರ್ತಿಸಲಿ.
22 ದೇವರೇ, ಎದ್ದು ನಿನ್ನ ನ್ಯಾಯವನ್ನು ನಡೆಸುವವನಾಗು;
ದುರ್ಮತಿಯು ಯಾವಾಗಲೂ ನಿನ್ನನ್ನು ನಿಂದಿಸುತ್ತಿರುವುದನ್ನು ಜ್ಞಾಪಿಸಿಕೋ.
23 ಮೇಲಣ ಲೋಕವನ್ನು ಎಡೆಬಿಡದೆ ಮುಟ್ಟುತ್ತಿರುವ,
ನಿನ್ನ ವೈರಿಗಳ ಗದ್ದಲವನ್ನೂ ನಿನ್ನ ವಿರೋಧಿಗಳ ದೊಂಬಿಯನ್ನೂ ಮರೆಯದಿರು.
* 74:14 74:14 ಲಿವ್ಯಾತಾನನ ಲಿವ್ಯಾತಾನ್ (104:26; ಯೆಶಾ 27:1) ಎಂಬುದು ಪೌರಾಣಿಕ ಘಟಸರ್ಪದ ಹೆಸರಾಗಿದೆ, ಇತರ ಸ್ಥಳಗಳಲ್ಲಿ ಬೇರೆ ಹೆಸರಿನಿಂದ ಕರೆಯಲ್ಪಟ್ಟಿದೆ. ಇದು ಅನೇಕ ತಲೆಗಳನ್ನು ಹೊಂದಿದೆಯೆಂದು ಭಾವಿಸಲಾಗಿದೆ. ಕೆಲವೊಮ್ಮೆ ನೀರಿನಲ್ಲಿರುವ ಘಟಸರ್ಪಗಳನ್ನು “ಕಡಲ ಮಹಾ ಹಾವುಗಳು” ಅಥವಾ “ಸಮುದ್ರದಲ್ಲಿ ವಾಸಿಸುವ ಮಹಾ ಪ್ರಾಣಿಗಳು” ಎಂದು ಅನುವಾದಿಸಲಾಗಿದೆ. 74:14 74:14 ಮೃಗಸಮುದಾಯಕ್ಕೆ ಅಥವಾ ಜನರಿಗೆ.