92
ದೇವರ ನೀತಿಸಾಧನೆಗಳನ್ನು ಹೊಗಳುವುದು
ಕೀರ್ತನೆ; ಸಬ್ಬತ್ ದಿನದ ಗೀತೆ.
ಯೆಹೋವನೇ, ನಿನ್ನನ್ನು ಕೊಂಡಾಡುವುದೂ,
ಪರಾತ್ಪರನಾದ ದೇವರೇ, ನಿನ್ನ ನಾಮವನ್ನು ಸಂಕೀರ್ತಿಸುವುದೂ ಯುಕ್ತವಾಗಿದೆ.
ವೀಣೆ, ಸ್ವರಮಂಡಲಗಳಿಂದಲೂ, ಕಿನ್ನರಿಯ ಘನಸ್ವರದಿಂದಲೂ,
ಹೊತ್ತಾರೆಯಲ್ಲಿ ನಿನ್ನ ಪ್ರೇಮವನ್ನೂ,
ರಾತ್ರಿಯಲ್ಲಿ ನಿನ್ನ ಸತ್ಯವನ್ನೂ ವರ್ಣಿಸುವುದು ಉಚಿತವಾಗಿದೆ.
ಯೆಹೋವನೇ, ನಿನ್ನ ಕ್ರಿಯೆಗಳಿಂದ ನನ್ನನ್ನು ಸಂತೋಷಪಡಿಸಿದ್ದಿ;
ನಿನ್ನ ಕೆಲಸಗಳಿಗಾಗಿ ಉತ್ಸಾಹಧ್ವನಿ ಮಾಡುತ್ತೇನೆ.
ಯೆಹೋವನೇ, ನಿನ್ನ ಕೃತ್ಯಗಳು ಎಷ್ಟೋ ಶ್ರೇಷ್ಠವಾಗಿವೆ;
ನಿನ್ನ ಆಲೋಚನೆಗಳು ಅಶೋಧ್ಯವಾಗಿವೆ.
ಪಶುಪ್ರಾಯನು ಅರಿಯನು;
ಮೂರ್ಖನು ಇದನ್ನು ಗ್ರಹಿಸಿಕೊಳ್ಳನು.
ದುಷ್ಟರು ಹುಲ್ಲಿನಂತೆ ಬೆಳೆಯುವುದೂ,
ಕೆಡುಕರು ಹೂವಿನಂತೆ ಮೆರೆಯುವುದೂ ತೀರಾ ಹಾಳಾಗುವುದಕ್ಕಾಗಿಯೇ.
ಯೆಹೋವನೇ, ನೀನಾದರೋ ಸದಾ ಉನ್ನತಸ್ಥಾನದಲ್ಲಿರುತ್ತೀ.
ಯೆಹೋವನೇ, ಇಗೋ ನಿನ್ನ ಶತ್ರುಗಳು!
ಅವರೆಲ್ಲಾ ನಾಶವಾಗುತ್ತಿದ್ದಾರೆ. ಅಧರ್ಮಿಗಳೆಲ್ಲಾ ಚದರಿಹೋಗುವರು.
10 ಆದರೆ ನನ್ನ ಕೊಂಬನ್ನು* ಕಾಡುಕೋಣದ ಕೊಂಬಿನಂತೆ ಎತ್ತಿದ್ದಿ;
ಚೈತನ್ಯತೈಲದಿಂದ ನನ್ನನ್ನು ಅಭಿಷೇಕಿಸಿದ್ದಿ.
11 ನನ್ನ ಶತ್ರುಗಳಿಗುಂಟಾದ ದುರ್ಗತಿಯನ್ನು ಕಣ್ಣಾರೆ ಕಂಡಿದ್ದೇನೆ;
ನನಗೆ ವಿರುದ್ಧವಾಗಿ ಎದ್ದವರ ವಿಪತ್ತನ್ನು ಕಿವಿಯಾರೆ ಕೇಳಿದ್ದೇನೆ.
12 ನೀತಿವಂತರು ಖರ್ಜೂರದ ಮರದಂತೆ ಬೆಳೆಯುವರು;
ಲೆಬನೋನಿನ ದೇವದಾರು ವೃಕ್ಷದ ಹಾಗೆ ವೃದ್ಧಿಯಾಗುವರು.
13 ಯೆಹೋವನ ಆಲಯದಲ್ಲಿ ಸಸಿಗಳಂತೆ ನೆಡಲ್ಪಟ್ಟವರು,
ನಮ್ಮ ದೇವರ ಅಂಗಳದಲ್ಲಿ ಚೆನ್ನಾಗಿ ಬೆಳೆಯುವರು.
14 ಮುಪ್ಪಿನಲ್ಲಿಯೂ ಫಲಿಸುವರು;
ಪುಷ್ಟಿಯಾಗಿದ್ದು ಶೋಭಿಸುವರು.
15 ಹೀಗೆ ಅವರು ಯೆಹೋವನ ಸತ್ಯಸಂಧತೆಗೆ ದೃಷ್ಟಾಂತರಾಗಿರುವರು.
ಆತನೇ ನನ್ನ ಬಂಡೆಯು; ಆತನು ನಿರ್ವಂಚಕನು.
* 92:10 92:10 ಕೊಂಬನ್ನು ಅಥವಾ ಬಲ. 92:10 92:10 ಕೊಂಬಿನಂತೆ ಅಥವಾ ಬಲ. 92:10 92:10 ಅಥವಾ ನೀನು ನನ್ನನ್ನು ಸಂತೋಷವುಳ್ಳವನಾಗಿರುವಂತೆ ಆಶೀರ್ವದಿಸಿದ್ದೀ.