6
ಪಶ್ಚಾತ್ತಾಪವಿಲ್ಲದ ಇಸ್ರಾಯೇಲರು
1 ಬನ್ನಿರಿ, ನಾವು ಯೆಹೋವ ದೇವರ ಕಡೆಗೆ ತಿರುಗಿಕೊಳ್ಳೋಣ.
ಅವರು ನಮ್ಮನ್ನು ಗಾಯಗೊಳಿಸಿದ್ದಾರೆ,
ಅವರೇ ನಮ್ಮನ್ನು ಸ್ವಸ್ಥ ಮಾಡುವರು.
ಅವರು ಹೊಡೆದಿದ್ದಾನೆ,
ಅವರೇ ನಮ್ಮನ್ನು ಕಟ್ಟುವರು.
2 ಅವರು ಎರಡು ದಿವಸಗಳಾದ ಮೇಲೆ ನಮ್ಮನ್ನು ಪುನರ್ಜೀವಿಸ ಮಾಡುವನು.
ಮೂರನೆಯ ದಿವಸದಲ್ಲಿ ಆತನೇ ನಮ್ಮನ್ನು ಪುನಃಸ್ಥಾಪಿಸುವರು.
ನಾವು ಅವರ ದೃಷ್ಟಿಯಲ್ಲಿ ಜೀವಿಸುವೆವು.
3 ನಾವು ಯೆಹೋವ ದೇವರನ್ನು ತಿಳಿದುಕೊಳ್ಳಲು,
ಅವರನ್ನು ಹಿಂಬಾಲಿಸಿದರೆ ತಿಳಿದುಕೊಳ್ಳುವೆವು.
ಅವರ ಆಗಮನವು
ಅರುಣೋದಯದಂತೆ ನಿಶ್ಚಯ.
ಅವರು ಮಳೆಯಂತೆಯೂ ಮುಂಗಾರಿನಂತೆಯೂ,
ಭೂಮಿಯನ್ನು ತಂಪು ಮಾಡುವ ಹಿಂಗಾರಿನಂತೆಯೂ ಬಳಿಗೆ ಬರುವರು.
4 ಎಫ್ರಾಯೀಮೇ, ನಿನಗೆ ನಾನು ಏನು ಮಾಡಲಿ?
ಯೆಹೂದವೇ, ನಿನಗೆ ನಾನು ಏನು ಮಾಡಲಿ?
ನಿಮ್ಮ ಪ್ರೀತಿಯು ಹೊತ್ತಾರೆಯ ಮೇಘದ ಹಾಗೆಯೂ,
ಮುಂಜಾನೆಯ ಮಂಜಿನ ಹಾಗೆಯೂ ಹೋಗಿಬಿಡುತ್ತದೆ.
5 ಆದ್ದರಿಂದ ನಾನು ನಿಮ್ಮ ಜನರನ್ನು ಪ್ರವಾದಿಗಳ ಮುಖಾಂತರ ಕಡಿದುಬಿಟ್ಟು,
ನನ್ನ ಬಾಯಿಮಾತುಗಳಿಂದ ಅವರನ್ನು ಸಂಹರಿಸಿದ್ದೇನೆ.
ನನ್ನ ನ್ಯಾಯತೀರ್ಪುಗಳು ಸೂರ್ಯನ ಹಾಗೆ ಹೊರಟವು.
6 ಏಕೆಂದರೆ ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ.
ದಹನಬಲಿಗಳಿಗಿಂತ ದೇವರ ಅಂಗೀಕಾರವನ್ನೇ ಅಪೇಕ್ಷಿಸುತ್ತೇನೆ.
7 ಅವರು ಆದಾಮನಂತೆ ಒಡಂಬಡಿಕೆಯನ್ನು ಮೀರಿದ್ದಾರೆ.
ಅಲ್ಲಿ ಅವರು ನನಗೆ ವಿರುದ್ಧವಾಗಿ ಅಪನಂಬಿಗಸ್ತಿಕೆಯಿಂದ ನಡೆದುಕೊಂಡಿದ್ದಾರೆ.
8 ಗಿಲ್ಯಾದ್ ಕೆಟ್ಟ ಕೆಲಸ ಮಾಡುವವರ ಮತ್ತು
ರಕ್ತದಿಂದ ಅಪವಿತ್ರಮಾಡಿದ ಪಟ್ಟಣವಾಗಿದೆ.
9 ದರೋಡೆಕೋರರು ಮನುಷ್ಯನಿಗೋಸ್ಕರ ಹೊಂಚುಹಾಕುವಂತೆ,
ಯಾಜಕರ ಗುಂಪು ದಾರಿಹೋಕರಿಗಾಗಿ ಹೊಂಚುಹಾಕುತ್ತಾ
ಶೆಕೆಮಿಗೆ ಹೋಗುವವರನ್ನು ದಾರಿಯಲ್ಲಿ ಕೊಲೆಮಾಡುತ್ತಾರೆ.
ಅವರು ನೀಚತನವನ್ನು ಮಾಡುವವರಾಗಿದ್ದಾರೆ.
10 ಇಸ್ರಾಯೇಲಿನ ಮನೆತನದವರಲ್ಲಿ ಅತಿ ಭಯಂಕರವಾದ ಸಂಗತಿಯನ್ನು ನೋಡಿದೆನು.
ಅಲ್ಲಿ ಎಫ್ರಾಯೀಮಿನ ವ್ಯಭಿಚಾರವು ನಡೆಯುತ್ತದೆ,
ಇಸ್ರಾಯೇಲು ಅಪವಿತ್ರವಾಗಿದೆ.
11 “ಯೆಹೂದವೇ, ನಿನಗೂ ಸಹ,
ತಕ್ಕ ಸುಗ್ಗಿಯು ನೇಮಕವಾಗಿದೆ.
“ಸೆರೆಯಾದ ನನ್ನ ಜನರಿಗೆ, ಪುನಃಸ್ಥಾಪನೆಯಾಗುವುದು.