ಪೇತ್ರನು
ಬರೆದ ಮೊದಲನೆ ಪತ್ರ
1
ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು, ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನಿಯ ಎಂಬ ಪ್ರದೇಶಗಳಲ್ಲಿ ಚದರಿಹೋಗಿ ಪ್ರವಾಸಿಗಳಾದ ದೇವಜನರಿಗೆ ಬರೆಯುವ ಪತ್ರ.
ದೇವರು ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡುವುದರ ಮೂಲಕ ಆರಿಸಿಕೊಳ್ಳಲು ಬಹುಕಾಲದ ಹಿಂದೆಯೇ ಯೋಜನೆ ಮಾಡಿದ್ದನು. ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡುವುದು ಪರಿಶುದ್ಧಾತ್ಮನ ಕಾರ್ಯ. ನೀವು ಯೇಸು ಕ್ರಿಸ್ತನ ರಕ್ತದ ಮೂಲಕ ಪರಿಶುದ್ಧರಾಗಿ ತನಗೆ ವಿಧೇಯರಾಗಬೇಕೆಂಬುದು ದೇವರ ಅಪೇಕ್ಷೆಯಾಗಿತ್ತು. ಕೃಪೆಯೂ ಶಾಂತಿಯೂ ನಿಮಗೆ ಅಧಿಕವಾಗಿ ಲಭಿಸಲಿ.
ಜೀವಂತವಾದ ನಿರೀಕ್ಷೆ
ನಮ್ಮ ಪ್ರಭುವಾಗಿರುವ ಯೇಸು ಕ್ರಿಸ್ತನ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ದೇವರು ಮಹಾ ಕರುಣಾಳುವಾಗಿದ್ದಾನೆ. ಆತನು ತನ್ನ ಕರುಣೆಯಿಂದಲೇ ನಮಗೆ ಹೊಸ ಜೀವವನ್ನು ನೀಡಿದನು. ಸತ್ತವರೊಳಗಿಂದ ಎದ್ದುಬಂದ ಯೇಸು ಕ್ರಿಸ್ತನ ಮೂಲಕ ಅದು ನಮಗೆ ಒಂದು ಜೀವಂತ ನಿರೀಕ್ಷೆಯನ್ನು ತರುತ್ತದೆ. ದೇವರು ತನ್ನ ಮಕ್ಕಳಿಗೆ ನೀಡುವ ಆಶೀರ್ವಾದಗಳಲ್ಲಿ ಈಗ ನಮಗೆ ನಿರೀಕ್ಷೆಯಿದೆ. ಅವು ನಿಮಗಾಗಿ ಪರಲೋಕದಲ್ಲಿ ಇಡಲ್ಪಟ್ಟಿವೆ. ಅವು ಹಾಳಾಗುವುದಿಲ್ಲ, ನಾಶವಾಗುವುದಿಲ್ಲ ಮತ್ತು ಸೌಂದರ್ಯವನ್ನು ಕಳೆದುಕೊಳ್ಳುವುದಿಲ್ಲ.
ದೇವರ ಶಕ್ತಿಯು ನಿಮ್ಮ ನಂಬಿಕೆಯ ಮೂಲಕ ನಿಮ್ಮನ್ನು ಕಾಯುತ್ತದೆ. ನಿಮಗೆ ರಕ್ಷಣೆಯಾಗುವವರೆಗೆ ನಿಮ್ಮನ್ನು ಸುರಕ್ಷಿತವಾಗಿಡುತ್ತದೆ. ಸಿದ್ಧವಾಗಿರುವ ಆ ರಕ್ಷಣೆಯು ಅಂತ್ಯಕಾಲದಲ್ಲಿ ನಿಮಗೆ ದೊರೆಯುವುದು. ಇದು ನಿಮ್ಮನ್ನು ಬಹಳ ಸಂತೋಷಗೊಳಿಸುತ್ತದೆ. ಆದರೆ ಈಗ ಸ್ವಲ್ಪಕಾಲ ಅನೇಕ ವಿಧವಾದ ತೊಂದರೆಗಳು ನಿಮ್ಮಲ್ಲಿ ದುಃಖವನ್ನು ಉಂಟುಮಾಡಬಹುದು. ನಿಮ್ಮ ನಂಬಿಕೆಯು ಪರಿಶುದ್ಧವಾಗಿದೆ ಎಂಬುದನ್ನು ಪ್ರಕಟಿಸಲು ಈ ತೊಂದರೆಗಳು ಸಂಭವಿಸುತ್ತವೆ. ನಿಮ್ಮ ನಂಬಿಕೆಯ ಪರಿಶುದ್ಧತೆಯು ಬಂಗಾರದ ಮೌಲ್ಯಕ್ಕಿಂತಲೂ ಹೆಚ್ಚಿನದಾಗಿದೆ. ಬಂಗಾರವು ನಶಿಸಿಹೋಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟ ಹಾಕಿ ಅದರ ಪರಿಶುದ್ಧತೆಯನ್ನು ಶೋಧಿಸುವರು. ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ, ನಿಮ್ಮ ನಂಬಿಕೆಯ ಪರಿಶುದ್ಧತೆಯು ನಿಮಗೆ ಕೀರ್ತಿ, ಪ್ರಭಾವ ಮತ್ತು ಗೌರವಗಳನ್ನು ತರುತ್ತದೆ.
ನೀವು ಕ್ರಿಸ್ತನನ್ನು ನೋಡದಿದ್ದರೂ ಆತನನ್ನು ಪ್ರೀತಿಸುವಿರಿ. ಈಗ ಆತನನ್ನು ನೋಡದಿದ್ದರೂ ಆತನಲ್ಲಿ ನಂಬಿಕೆಯಿಟ್ಟಿದ್ದೀರಿ. ನಿಮ್ಮಲ್ಲಿ ಹೇಳಲಾಗದಷ್ಟು ಆನಂದವು ತುಂಬಿಕೊಂಡಿದೆ. ಆ ಆನಂದವು ಪ್ರಭಾವಪೂರ್ಣವಾಗಿದೆ. ನಿಮ್ಮ ನಂಬಿಕೆಗೆ ಒಂದು ಗುರಿಯಿದೆ. ನಿಮ್ಮ ಆತ್ಮವನ್ನು ರಕ್ಷಿಸಬೇಕೆಂಬುದೇ ಆ ಗುರಿ. ನಿಮ್ಮ ಗುರಿಯಾಗಿರುವ ರಕ್ಷಣೆಯನ್ನು ಹೊಂದಿಕೊಳ್ಳುವಿರಿ.
10 ಪ್ರವಾದಿಗಳು ಈ ರಕ್ಷಣೆಯನ್ನು ಕುರಿತು ಸೂಕ್ಷ್ಮವಾಗಿ ಹುಡುಕಿ ಪರಿಶೀಲಿಸಲು ಪ್ರಯತ್ನಿಸಿದರು. ನಿಮಗೆ ಮುಂದೆ ಬರಲಿರುವ ಕೃಪೆಯನ್ನು ಕುರಿತು ಅವರು ಮಾತನಾಡಿದರು. 11 ಕ್ರಿಸ್ತನ ಆತ್ಮನು ಅವರಲ್ಲಿದ್ದನು. ಆ ಆತ್ಮನು ಕ್ರಿಸ್ತನಿಗೆ ಸಂಭವಿಸಬಹುದಾದ ಸಂಕಟವನ್ನು ಮತ್ತು ಆ ಸಂಕಟಗಳ ನಂತರ ಬರಲಿದ್ದ ಮಹಿಮೆಯನ್ನು ಕುರಿತು ತಿಳಿಸುತ್ತಿದ್ದನು. ಆ ಪ್ರವಾದಿಗಳು ತಮಗೆ ಆತ್ಮನು ತೋರಿಸುತ್ತಿದ್ದುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ಆ ಸಂಗತಿಗಳು ಯಾವಾಗ ಸಂಭವಿಸುತ್ತವೆ ಹಾಗೂ ಆ ಕಾಲದಲ್ಲಿ ಈ ಲೋಕವು ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು.
12 ಆ ಪ್ರವಾದಿಗಳು ಮಾಡಿದ ಈ ಸೇವೆಯು ನಿಮಗೋಸ್ಕರವೇ ಹೊರತು ಅವರಿಗೋಸ್ಕರವಲ್ಲ ಎಂಬುದು ಅವರಿಗೆ ಪ್ರಕಟವಾಯಿತು. ಈಗ ನೀವು ಕೇಳಿದ ಸಂಗತಿಗಳನ್ನು ಅವರು ತಿಳಿಸಿದಾಗ ಅವರು ನಿಮ್ಮ ಸೇವೆಯನ್ನೇ ಮಾಡುತ್ತಿದ್ದರು. ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮನ ಸಹಾಯದಿಂದ ನಿಮಗೆ ಸುವಾರ್ತೆಯನ್ನು ತಿಳಿಸಿದವರೇ ನಿಮಗೆ ಆ ಸಂಗತಿಗಳನ್ನು ತಿಳಿಸಿದರು. ನಿಮಗೆ ತಿಳಿಸಿದ ಸಂಗತಿಗಳ ಬಗ್ಗೆ ತಿಳಿದುಕೊಳ್ಳಲು ದೇವದೂತರೂ ಕಾತುರರಾಗಿದ್ದಾರೆ.
ಪರಿಶುದ್ಧರಾಗಿ ಜೀವಿಸಲು ಆಹ್ವಾನ
13 ಆದ್ದರಿಂದ ನೀವು ನಿಮ್ಮ ಮನಸ್ಸುಗಳನ್ನು ಸೇವೆಗಾಗಿ ಸಿದ್ಧಪಡಿಸಿರಿ. ಅಲ್ಲದೆ ನಿಮ್ಮನ್ನು ಹತೋಟಿಯಲ್ಲಿಟ್ಟುಕೊಂಡಿರಿ. ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ದೊರೆಯುವ ಕೃಪಾವರದ ಮೇಲೆಯೇ ನಿಮ್ಮ ನಿರೀಕ್ಷೆಯೆಲ್ಲಾ ಇರಬೇಕು. 14 ನೀವು ಮೊದಲು ಈ ಸಂಗತಿಗಳ ಕುರಿತು ಅರ್ಥಮಾಡಿಕೊಳ್ಳದಿದ್ದ ಕಾರಣ, ನೀವು ನಿಮ್ಮ ಇಚ್ಛೆಯಂತೆ ಕೆಟ್ಟಕಾರ್ಯಗಳನ್ನು ಮಾಡಿದಿರಿ. ಆದರೆ ಈಗ ನೀವು ವಿಧೇಯರಾಗಿರುವ ದೇವಮಕ್ಕಳು, ಆದ್ದರಿಂದ ಈಗ ಮೊದಲಿನಂತೆ ಜೀವಿಸಬೇಡಿ. 15 ದೇವರು ಪರಿಶುದ್ಧನಾಗಿರುವಂತೆ ನಿಮ್ಮ ನಡೆನುಡಿಗಳು ಪರಿಶುದ್ಧವಾಗಿರಲಿ. ನಿಮ್ಮನ್ನು ಕರೆದಾತನು ದೇವರೇ. 16 “ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು”ಉಲ್ಲೇಖನ: ಯಾಜಕಕಾಂಡ 11:44,45; 19:2; 20:7. ಎಂಬುದಾಗಿ ಪವಿತ್ರ ಗ್ರಂಥವು ಹೇಳುತ್ತದೆ.
17 ನೀವು ದೇವರಲ್ಲಿ ಪ್ರಾರ್ಥಿಸುವಾಗ ಆತನನ್ನು ತಂದೆಯೆಂದು ಕರೆಯುತ್ತೀರಿ. ದೇವರು ಪ್ರತಿಯೊಬ್ಬರಿಗೆ ಅವರವರ ಕೆಲಸಕ್ಕೆ ತಕ್ಕಂತೆ ತೀರ್ಪುಕೊಡುವನು. ನೀವು ಈ ಲೋಕದಲ್ಲಿ ಪ್ರವಾಸಿಗಳಾಗಿರುವುದರಿಂದ ದೇವರಿಗೆ ಭಯಪಟ್ಟು ಜೀವಿಸಿ. 18 ಮೊದಲು ನೀವು ನಿರರ್ಥಕವಾದ ರೀತಿಯಲ್ಲಿ ಜೀವಿಸುತ್ತಿದ್ದಿರೆಂಬುದು ನಿಮಗೇ ತಿಳಿದಿದೆ. ನಿಮಗಿಂತಲೂ ಮೊದಲು ಜೀವಿಸಿದ್ದವರಿಂದ ಅಂತಹ ಜೀವಿತವನ್ನು ಕಲಿತುಕೊಂಡಿರಿ. ಆದರೆ ಅದರಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿಹೋಗುವ ಬೆಳ್ಳಿಬಂಗಾರಗಳಿಂದಲ್ಲ. 19 ಪೂರ್ಣಾಂಗವಾದ ಮತ್ತು ಪರಿಶುದ್ಧವಾದ ಕುರಿಮರಿಯಾದ ಕ್ರಿಸ್ತನ ಅಮೂಲ್ಯವಾದ ರಕ್ತದಿಂದ ನಿಮಗೆ ಬಿಡುಗಡೆಯಾಯಿತು. 20 ಈ ಲೋಕವು ಸೃಷ್ಟಿಯಾಗುವುದಕ್ಕೆ ಮೊದಲೇ ಕ್ರಿಸ್ತನು ಆರಿಸಲ್ಪಟ್ಟನು. ಆದರೆ ಆತನು ನಿಮಗೋಸ್ಕರ ಈ ಅಂತ್ಯಕಾಲದಲ್ಲಿ ಪ್ರತ್ಯಕ್ಷನಾದನು. 21 ನೀವು ಕ್ರಿಸ್ತನ ಮೂಲಕ ದೇವರನ್ನು ನಂಬಿದ್ದೀರಿ. ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ನಂತರ ದೇವರು ಆತನಿಗೆ ಪ್ರಭಾವವನ್ನು ದಯಪಾಲಿಸಿದನು. ಆದ್ದರಿಂದ ನಿಮ್ಮ ನಂಬಿಕೆ ಮತ್ತು ನಿರೀಕ್ಷೆಗಳು ದೇವರಲ್ಲಿರಲಿ.
22 ನೀವು ಸತ್ಯಕ್ಕೆ ವಿಧೇಯರಾಗಿರುವುದರ ಮೂಲಕ ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡಿಕೊಂಡಿದ್ದೀರಿ. ಈಗ ನಿಮ್ಮ ಸಹೋದರ ಸಹೋದರಿಯರನ್ನು ನಿಜವಾಗಿಯೂ ಪ್ರೀತಿಸಬಲ್ಲವರಾಗಿದ್ದೀರಿ. ಆದ್ದರಿಂದ ಒಬ್ಬರನ್ನೊಬ್ಬರು ಹೃದಯಪೂರ್ವಕವಾಗಿ*ಹೃದಯಪೂರ್ವಕವಾಗಿ ಕೆಲವು ಪ್ರಾಚೀನ ಪತ್ರಿಕೆಗಳಲ್ಲಿ “ಪವಿತ್ರ ಹೃದಯ” ಎಂದು ಹೇಳಿದೆ. ಪ್ರೀತಿಸಿರಿ. 23 ನೀವು ಹೊಸದಾಗಿ ಹುಟ್ಟಿದವರಾಗಿದ್ದೀರಿ. ಈ ಹೊಸಜೀವವು ನಾಶವಾಗುವಂಥದ್ದರಿಂದ ಬರದೆ ನಾಶವಾಗದೆ ಇರುವಂಥದ್ದರಿಂದ ಬಂದದ್ದಾಗಿದೆ. ಸಜೀವವೂ ಶಾಶ್ವತವೂ ಆಗಿರುವ ದೇವರ ವಾಕ್ಯದ ಮೂಲಕ ನೀವು ಹೊಸದಾಗಿ ಹುಟ್ಟಿದ್ದೀರಿ. 24 ಪವಿತ್ರ ಗ್ರಂಥವು ಹೇಳುವುದೇನೆಂದರೆ,
 
“ಜನರೆಲ್ಲರೂ ಹುಲ್ಲಿನಂತಿದ್ದಾರೆ.
ಅವರ ವೈಭವವೆಲ್ಲವೂ ಹುಲ್ಲಿನ ಹೂವಿನಂತಿದೆ.
ಹುಲ್ಲು ಒಣಗಿಹೋಗುವುದು,
ಹೂವು ಉದುರಿಹೋಗುವುದು,
25 ಆದರೆ ದೇವರ ವಾಕ್ಯವು ಎಂದೆಂದಿಗೂ ಜೀವಂತವಾಗಿರುತ್ತದೆ.” ಯೆಶಾಯ 40:6-8
 
ನಿಮಗೆ ಈ ವಾಕ್ಯವನ್ನೇ ತಿಳಿಸಲಾಯಿತು.

1:16: ಉಲ್ಲೇಖನ: ಯಾಜಕಕಾಂಡ 11:44,45; 19:2; 20:7.

*1:22: ಹೃದಯಪೂರ್ವಕವಾಗಿ ಕೆಲವು ಪ್ರಾಚೀನ ಪತ್ರಿಕೆಗಳಲ್ಲಿ “ಪವಿತ್ರ ಹೃದಯ” ಎಂದು ಹೇಳಿದೆ.