3
ಸಮುವೇಲನಿಗೆ ದೇವರ ಕರೆ
ಬಾಲಕನಾದ ಸಮುವೇಲನು ಏಲಿಯ ಕೈಕೆಳಗಿದ್ದು ಯೆಹೋವನ ಸೇವೆಮಾಡುತ್ತಿದ್ದನು. ಆ ಕಾಲದಲ್ಲಿ ಯೆಹೋವನು ಜನರೊಂದಿಗೆ ಪದೇಪದೇ ಮಾತಾಡುತ್ತಿರಲಿಲ್ಲ; ದರ್ಶನಗಳ ಸಂಖ್ಯೆಯೂ ಕಡಿಮೆಯಾಗಿತ್ತು.
ಏಲಿಯ ಕಣ್ಣುಗಳು ಮಂಜಾಗಿ ಕುರುಡನೆನ್ನುವಷ್ಟು ಕಾಣುತ್ತಿರಲಿಲ್ಲ. ಒಂದು ರಾತ್ರಿ ಏಲಿಯು ತನ್ನ ಸ್ಥಳದಲ್ಲಿ ಮಲಗಿದ್ದನು. ಸಮುವೇಲನು ಯೆಹೋವನ ಪವಿತ್ರ ಆಲಯದಲ್ಲಿ ಹಾಸಿಗೆಯ ಮೇಲೆ ಮಲಗಿದ್ದನು. ಯೆಹೋವನ ಪವಿತ್ರ ಪೆಟ್ಟಿಗೆಯು ಅಲ್ಲಿಯೇ ಇತ್ತು. ಯೆಹೋವನ ದೀಪವು ಇನ್ನೂ ಬೆಳಗುತ್ತಿತ್ತು. ಯೆಹೋವನು ಸಮುವೇಲನನ್ನು ಕರೆದನು. ಸಮುವೇಲನು, “ಇಗೋ, ಇಲ್ಲಿದ್ದೇನೆ” ಎಂದನು. ಏಲಿಯು ಕರೆದಿರಬಹುದೆಂದು ಸಮುವೇಲನು ನೆನೆಸಿದನು. ಆದ್ದರಿಂದ ಸಮುವೇಲನು ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಅಂದನು.
ಆದರೆ ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ. ಹೋಗಿ ಮಲಗಿಕೋ” ಅಂದನು.
ಸಮುವೇಲನು ಹೋಗಿ ಮಲಗಿಕೊಂಡನು. ನಂತರ ಯೆಹೋವನು, “ಸಮುವೇಲನೇ” ಎಂದು ಮತ್ತೆ ಕರೆದನು. ಸಮುವೇಲನು ಮತ್ತೆ ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಎಂದು ಹೇಳಿದನು.
ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ, ಹೋಗಿ ಮಲಗಿಕೋ” ಅಂದನು.
ಆ ವರೆಗೂ ಸಮುವೇಲನಿಗೆ ಯೆಹೋವನ ಅನುಭವವಿರಲಿಲ್ಲ; ಯೆಹೋವನು ಅವನೊಂದಿಗೆ ನೇರವಾಗಿ ಮಾತಾಡಿರಲಿಲ್ಲ.*ಯೆಹೋವನು … ಮಾತಾಡಿರಲಿಲ್ಲ ಅಕ್ಷರಶಃ, “ಯೆಹೋವನ ವಾಕ್ಯಗಳು ಇನ್ನೂ ಅವನಿಗೆ ತಿಳಿದಿರಲಿಲ್ಲ. “
ಯೆಹೋವನು ಸಮುವೇಲನನ್ನು ಮೂರನೆಯ ಸಲ ಕರೆದನು. ಸಮುವೇಲನು ಮತ್ತೆ ಮೇಲೆದ್ದು ಏಲಿಯನ ಬಳಿಗೆ ಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಅಂದನು.
ಬಾಲಕನನ್ನು ಕರೆಯುತ್ತಿರುವವನು ಯೆಹೋವನೆಂಬುದು ಏಲಿಗೆ ಆಗ ಅರ್ಥವಾಯಿತು. ಏಲಿಯು ಸಮುವೇಲನಿಗೆ, “ಹೋಗಿ ಮಲಗಿಕೊ. ನಿನ್ನನ್ನು ಮತ್ತೆ ಕರೆದರೆ, ‘ಅಪ್ಪಣೆಯಾಗಲಿ, ಯೆಹೋವನೇ ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ’ ಎಂದು ಉತ್ತರಿಸು” ಎಂಬುದಾಗಿ ಹೇಳಿದನು.
ಸಮುವೇಲನು ತನ್ನ ಸ್ಥಳದಲ್ಲಿ ಮಲಗಲು ಹೋದನು. 10 ಯೆಹೋವನು ಅಲ್ಲಿ ಪ್ರತ್ಯಕ್ಷನಾಗಿ ನಿಂತು ಮೊದಲು ಕರೆದಂತೆಯೇ “ಸಮುವೇಲನೆ, ಸಮುವೇಲನೆ” ಎಂದು ಕರೆದನು.
ಸಮುವೇಲನು, “ಅಪ್ಪಣೆಯಾಗಲಿ, ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ” ಎಂದನು.
11 ಯೆಹೋವನು ಸಮುವೇಲನಿಗೆ, “ನಾನು ಇಸ್ರೇಲಿನಲ್ಲಿ ಒಂದು ಕಾರ್ಯವನ್ನು ಶೀಘ್ರದಲ್ಲೇ ಮಾಡುವೆನು. ಈ ಕಾರ್ಯದ ಬಗ್ಗೆ ಕೇಳಿದ ಜನರು ಗಾಬರಿಗೊಳ್ಳುವರು. 12 ನಾನು ಇದನ್ನು ಏಲಿ ಮತ್ತು ಅವನ ಕುಟುಂಬದ ವಿರುದ್ಧ ಸಂಪೂರ್ಣವಾಗಿ ಮಾಡುತ್ತೇನೆ. 13 ಏಲಿಯ ಕುಟುಂಬವನ್ನು ನಿತ್ಯದಂಡನೆಗೆ ಗುರಿಪಡಿಸುತ್ತೇನೆಂದು ನಾನು ಏಲಿಗೆ ಹೇಳಿರುವೆನು. ಏಲಿಯ ಮಕ್ಕಳು ನನಗೆ ವಿರೋಧವಾಗಿ ಮಾತಾಡಿದ್ದರಿಂದ ಮತ್ತು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ನಾನು ಇದನ್ನು ಮಾಡುತ್ತೇನೆ. ಅಲ್ಲದೆ ಅವರನ್ನು ಹತೋಟಿಯಲ್ಲಿಡಲು ಏಲಿಗೆ ಸಾಧ್ಯವಾಗಲಿಲ್ಲ. 14 ಆದಕಾರಣವೇ, ಏಲಿಯ ಕುಟುಂಬವು ಅರ್ಪಿಸುವ ಯಜ್ಞವಾಗಲಿ ಧಾನ್ಯನೈವೇದ್ಯವಾಗಲಿ ಅವರ ಪಾಪಗಳಿಗೆ ಪ್ರಾಯಶ್ಚಿತ್ತವಾಗುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು.
15 ಸಮುವೇಲನು ನಿದ್ರಿಸಿದನು. ಅವನು ಮುಂಜಾನೆ ಮೇಲೆದ್ದು ಯೆಹೋವನ ಆಲಯದ ಬಾಗಿಲುಗಳನ್ನು ತೆರೆದನು. ಸಮುವೇಲನು ತಾನು ಕಂಡ ದರ್ಶನದ ಬಗ್ಗೆ ಏಲಿಗೆ ತಿಳಿಸಲು ಭಯಪಟ್ಟನು.
16 ಆದರೆ ಏಲಿಯು, “ಸಮುವೇಲನೇ, ನನ್ನ ಮಗನೇ” ಎಂದು ಕರೆದನು.
ಸಮುವೇಲನು, “ಇಗೋ, ಇದ್ದೇನೆ” ಅಂದನು.
17 ಏಲಿಯು, “ಯೆಹೋವನು ನಿನಗೆ ಹೇಳಿದ್ದೇನು? ನನ್ನೊಂದಿಗೆ ಅದನ್ನು ಮುಚ್ಚಿಡಬೇಡ. ಆತನು ನಿನ್ನೊಂದಿಗೆ ಆಡಿದ ಮಾತುಗಳಲ್ಲಿ ಏನನ್ನಾದರೂ ಮುಚ್ಚಿಟ್ಟರೆ ಆತನು ನಿನ್ನನ್ನು ಶಿಕ್ಷಿಸುತ್ತಾನೆ” ಎಂದು ತಿಳಿಸಿದನು.
18 ಸಮುವೇಲನು ಏನನ್ನೂ ಮುಚ್ಚಿಡದೆ, ಎಲ್ಲವನ್ನೂ ಏಲಿಗೆ ತಿಳಿಸಿದನು.
ಏಲಿಯು, “ಆತನು ಯೆಹೋವ. ಆತನು ತನಗೆ ಸರಿಕಾಣುವದನ್ನೇ ಮಾಡಲಿ” ಎಂದು ಹೇಳಿದನು.
19 ಯೆಹೋವನು ಸಮುವೇಲನ ಸಂಗಡವಿದ್ದನು; ಸಮುವೇಲನು ಬೆಳೆದು ದೊಡ್ಡವನಾದನು; ಸಮುವೇಲನ ಯಾವ ಸಂದೇಶವೂ ಸುಳ್ಳಾಗದಂತೆ ಯೆಹೋವನು ನೋಡಿಕೊಂಡನು. 20 ಸಮುವೇಲನು ಯೆಹೋವನ ನಿಜಪ್ರವಾದಿಯೆಂಬುದು ದಾನಿನಿಂದ ಬೇರ್ಷೆಬದವರೆಗಿದ್ದ ಎಲ್ಲಾ ಇಸ್ರೇಲರಿಗೂ ಆಗ ತಿಳಿದು ಬಂದಿತು. 21 ಯೆಹೋವನು ಶೀಲೋವಿನಲ್ಲಿ ಸಮುವೇಲನಿಗೆ ದರ್ಶನ ಕೊಡುವುದನ್ನು ಮುಂದುವರಿಸಿದನು. ಯೆಹೋವನು ಸಮುವೇಲನಿಗೆ ತನ್ನ ವಾಕ್ಯದ ಮೂಲಕ ತನ್ನನ್ನು ಪ್ರಕಟಿಸಿಕೊಂಡನು.

*3:7: ಯೆಹೋವನು … ಮಾತಾಡಿರಲಿಲ್ಲ ಅಕ್ಷರಶಃ, “ಯೆಹೋವನ ವಾಕ್ಯಗಳು ಇನ್ನೂ ಅವನಿಗೆ ತಿಳಿದಿರಲಿಲ್ಲ. “