20
ಯೆಹೋಷಾಫಾಟನು ಯುದ್ಧವನ್ನು ಎದುರಿಸಿದನು
1 ಕೆಲಕಾಲದನಂತರ ಮೋವಾಬ್ಯರೂ ಅಮ್ಮೋನಿಯರೂ ಮೆಗೂನ್ಯರಲ್ಲಿ ಕೆಲವರೂ ಯೆಹೋಷಾಫಾಟನೊಂದಿಗೆ ಯುದ್ಧಮಾಡಲು ಬಂದರು. 2 ಕೆಲವು ಜನರು ಯೆಹೋಷಾಫಾಟನ ಬಳಿಗೆ ಬಂದು, “ಎದೋಮ್ಯರ ದೊಡ್ಡ ಸೈನ್ಯವು ಲವಣಸಮುದ್ರದ ಆಚೆಕಡೆಯಿಂದ ನಿನಗೆ ವಿರುದ್ಧವಾಗಿ ಬರುತ್ತಿದೆ. ಈಗಾಗಲೇ ಅವರು ಹಚೆಚೋನ್ ತಾಮಾರಿನಲ್ಲಿದ್ದಾರೆ” (ಇದನ್ನು ಏಂಗೆದಿ ಎಂತಲೂ ಕರೆಯುತ್ತಾರೆ.) ಎಂದು ಹೇಳಿದರು. 3 ಯೆಹೋಷಾಫಾಟನು ಭಯಭೀತನಾಗಿ ಯೆಹೋವನನ್ನು ವಿಚಾರಿಸಲು ನಿರ್ಧರಿಸಿದನು. ಯೆಹೂದದ ಎಲ್ಲಾ ಜನರು ಉಪವಾಸ ಮಾಡಬೇಕೆಂದು ಆಜ್ಞೆ ಹೊರಡಿಸಿದನು. 4 ಯೆಹೂದದ ಜನರೆಲ್ಲಾ ಯೆಹೋವನನ್ನು ವಿಚಾರಿಸಲು ಒಟ್ಟಾಗಿ ಸೇರಿದರು. 5 ಯೆಹೋಷಾಫಾಟನು ದೇವಾಲಯದ ಹೊಸ ಅಂಗಳದಲ್ಲಿ ಕೂಡಿಬಂದ ಜನರೆದುರು ಎದ್ದುನಿಂತು,
6 “ನಮ್ಮ ಪಿತೃಗಳ ದೇವರಾದ ಯೆಹೋವನೇ, ನೀನು ಪರಲೋಕದಲ್ಲಿರುವ ದೇವರು. ಲೋಕದ ಎಲ್ಲಾ ದೇಶಗಳನ್ನಾಳುವವನು ನೀನೇ. ಬಲಸಾಮರ್ಥ್ಯವುಳ್ಳವನು ನೀನೇ, ಯಾರೂ ನಿನಗೆದುರಾಗಿ ನಿಲ್ಲಲಾರರು. 7 ನೀನೇ ನಮ್ಮ ದೇವರಾಗಿರುವೆ. ನೀನು ಈ ದೇಶದಲ್ಲಿ ವಾಸವಾಗಿದ್ದ ಜನರನ್ನು ಹೊರಡಿಸಿ ಈ ದೇಶವನ್ನು ಅಬ್ರಹಾಮನ ಸಂತತಿಯವರಾದ ಇಸ್ರೇಲರಿಗೆ ಕೊಟ್ಟೆ. ಅಬ್ರಹಾಮನು ನಿನ್ನ ಸ್ನೇಹಿತನಾಗಿದ್ದನು. 8 ಅಬ್ರಹಾಮನ ಸಂತತಿಯವರು ಈ ದೇಶದಲ್ಲಿ ವಾಸವಾಗಿ ನಿನ್ನ ಹೆಸರನ್ನು ಸ್ಥಾಪಿಸಲು ನಿನಗೊಂದು ದೇವಾಲಯವನ್ನು ಕಟ್ಟಿದರು. 9 ಅವರು, ‘ನಮಗೆ ಖಡ್ಗ, ಕಾಯಿಲೆ, ಬರ, ಶಿಕ್ಷೆಗಳಿಂದ ಸಂಕಷ್ಟ ಉಂಟಾದರೆ ನಾವು ನಿನ್ನ ಮತ್ತು ನಿನ್ನ ಆಲಯದೆದುರು ನಿಂತು ನಿನಗೆ ಮೊರೆಯಿಡುವಾಗ ನೀನು ನಮ್ಮ ಮೊರೆಯನ್ನು ಕೇಳಿ ನಮಗೆ ಸಹಾಯ ಮಾಡುವೆ. ನಿನ್ನ ಹೆಸರು ಈ ಆಲಯದ ಮೇಲಿದೆ’ ಎಂದು ಹೇಳಿದರು.
10 “ಈಗ ಅಮ್ಮೋನಿಯರೂ ಮೋವಾಬಿನವರೂ ಸೇಯೀರ್ ಬೆಟ್ಟಪ್ರದೇಶದವರೂ ನಮಗೆ ವಿರೋಧವಾಗಿ ಬಂದಿದ್ದಾರೆ. ಈಜಿಪ್ಟಿನಿಂದ ಇಸ್ರೇಲರು ಹೊರಬಂದಾಗ ಅವರ ದೇಶದೊಳಗಿಂದ ಪ್ರಯಾಣ ಮಾಡಲು ನೀನು ಬಿಡಲಿಲ್ಲ. ಆದ್ದರಿಂದ ಇಸ್ರೇಲರು ಅವರನ್ನು ನಾಶಮಾಡದೆ ಬೇರೆ ಕಡೆಗೆ ತಿರುಗಿದರು. 11 ಅವರನ್ನು ನಾಶಮಾಡದೆ ಹೋದದ್ದಕ್ಕೆ ಈಗ ಅವರು ಮಾಡುತ್ತಿರುವುದನ್ನು ನೀನೇ ನೋಡು. ನೀನು ನಮಗೆ ಕೊಟ್ಟ ದೇಶದಿಂದ ನಮ್ಮನ್ನು ಹೊರಡಿಸಲು ಬಂದಿದ್ದಾರೆ. 12 ನಮ್ಮ ದೇವರೇ, ನೀನೇ ಅವರನ್ನು ಶಿಕ್ಷಿಸು. ನಮಗೆ ವಿರುದ್ಧವಾಗಿ ಬರುತ್ತಿರುವ ಅವರ ದೊಡ್ಡಸೈನ್ಯವನ್ನು ಎದುರಿಸಲು ನಮ್ಮಿಂದಾಗದು. ಏನು ಮಾಡಬೇಕೋ ನಮಗೆ ತಿಳಿಯುತ್ತಿಲ್ಲ. ನಾವು ನಿನ್ನ ಸಹಾಯವನ್ನೇ ಎದುರುನೋಡುತ್ತಿದ್ದೇವೆ” ಎಂದು ಪ್ರಾರ್ಥಿಸಿದನು.
13 ಯೆಹೂದದ ಎಲ್ಲಾ ಜನರು ತಮ್ಮ ಹೆಂಡತಿಮಕ್ಕಳೊಂದಿಗೆ ಯೆಹೋವನೆದುರು ನಿಂತಿದ್ದರು. 14 ಆಗ ಜೆಕರ್ಯನ ಮಗನಾದ ಯೆಹಜೀಯೇಲನ ಮೇಲೆ ಯೆಹೋವನ ಆತ್ಮನು ಬಂದನು. ಜೆಕರ್ಯನು ಬೆನಾಯನ ಮಗ. ಬೆನಾಯನು ಯೆಗೀಯೇಲನ ಮಗ. ಯೆಗೀಯೇಲನು ಮತ್ತನ್ಯನ ಮಗ. ಯೆಹಜೀಯೇಲನು ಲೇವಿಯನಾಗಿದ್ದನು ಮತ್ತು ಆಸಾಫನ ಸಂತತಿಯವನಾಗಿದ್ದನು. 15 ಸಭೆಯ ಮಧ್ಯದಲ್ಲಿ ನಿಂತುಕೊಂಡು ಯೆಹಜೀಯೇಲನು ಅವರಿಗೆ, “ರಾಜನಾದ ಯೆಹೋಷಾಫಾಟನೇ, ನನ್ನ ಮಾತನ್ನು ಕೇಳು. ಜೆರುಸಲೇಮಿನಲ್ಲಿಯೂ ಯೆಹೂದದ ರಾಜ್ಯದಲ್ಲಿಯೂ ವಾಸಿಸುವ ಸರ್ವಜನರೇ, ನನ್ನ ಮಾತನ್ನು ಕೇಳಿರಿ. ಯೆಹೋವನು ನಿಮಗೆ ಹೀಗೆನ್ನುತ್ತಾನೆ: ‘ಆ ದೊಡ್ಡ ಸೈನ್ಯಕ್ಕೆ ಹೆದರಿ ಚಿಂತೆಗೊಳಗಾಗಬೇಡಿ. ಯಾಕೆಂದರೆ ಯುದ್ಧವು ನಿಮ್ಮದಲ್ಲ, ಅದು ದೇವರದೇ! 16 ನಾಳೆ ಅವರ ವಿರುದ್ಧವಾಗಿ ಹೊರಟು ಅವರೊಂದಿಗೆ ಹೋರಾಡಿ. ಅವರು ಹಜ್ಜೀಜ್ ಕಣಿವೆಯಿಂದ ಬರುವರು. ನೀವು ಅವರನ್ನು ಯೆರೂವೇಲ್ ಅರಣ್ಯದ ಮುಂದಿರುವ ಕಣಿವೆಯ ತುದಿಯಲ್ಲಿ ಅವರನ್ನು ಸಂಧಿಸುವಿರಿ. 17 ನೀವು ಈ ಯುದ್ಧದಲ್ಲಿ ಹೋರಾಡುವ ಅವಶ್ಯವಿಲ್ಲ. ನಿಮ್ಮ ಸ್ಥಳಗಳಲ್ಲಿ ಸ್ಥಿರವಾಗಿ ನಿಂತುಕೊಂಡಿರಿ. ಯೆಹೋವನ ರಕ್ಷಣಾಕಾರ್ಯವನ್ನು ನೀವು ನೋಡುವಿರಿ. ಭಯಪಡಬೇಡಿರಿ; ಚಿಂತೆಗೊಳಗಾಗಬೇಡಿರಿ; ಯೆಹೋವನು ನಿಮ್ಮೊಂದಿಗಿದ್ದಾನೆ. ಆದ್ದರಿಂದ ನೀವು ನಾಳೆ ಹೋಗಿ ಆ ಸೈನ್ಯವನ್ನು ಎದುರಿಸಿರಿ’ ” ಎಂದು ಹೇಳಿದನು.
18 ಯೆಹೋಷಾಫಾಟನು ನೆಲದ ಮೇಲೆ ಸಾಷ್ಟಾಂಗನಮಸ್ಕಾರ ಮಾಡಿದನು. ಹಾಗೆಯೇ, ನೆರೆದಿದ್ದ ಜನರೆಲ್ಲರೂ ಯೆಹೋವನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು. 19 ಕೆಹಾತ್ಯನ ಕುಲದವರಾದ ಲೇವಿಯರೂ ಕೋರಹನ ವಂಶದವರೂ ಎದ್ದುನಿಂತು ಇಸ್ರೇಲ್ ದೇವರಾದ ಯೆಹೋವನಿಗೆ ಗಟ್ಟಿಯಾದ ಸ್ವರದಿಂದ ಸ್ತುತಿಗೀತೆ ಹಾಡಿದರು.
20 ಮರುದಿನ ಮುಂಜಾನೆ ಯೆಹೋಷಾಫಾಟನ ಸೈನ್ಯವು ತೆಕೋವದ ಅರಣ್ಯಕ್ಕೆ ಹೊರಟಿತು. ಅವರು ಹೊರಡುವ ಮುಂಚೆ ಯೆಹೋಷಾಫಾಟನು ಎದ್ದುನಿಂತು, “ಜೆರುಸಲೇಮಿನವರೇ, ಯೆಹೂದ ಪ್ರಾಂತ್ಯದವರೇ, ನನ್ನ ಮಾತನ್ನು ಕೇಳಿರಿ. ನಮ್ಮ ದೇವರಾದ ಯೆಹೋವನ ಮೇಲೆ ಭರವಸವಿಡಿರಿ. ಆಗ ನೀವು ಸ್ಥಿರಗೊಳ್ಳುವಿರಿ. ಯೆಹೋವನ ಪ್ರವಾದಿಗಳ ಮೇಲೆ ಭರವಸವಿಡಿರಿ; ಆಗ ನೀವು ಜಯಗಳಿಸುವಿರಿ” ಎಂದು ಹೇಳಿದನು.
21 ಯೆಹೋಷಾಫಾಟನು ಜನರ ಸಲಹೆಗಳನ್ನು ಕೇಳಿದನು; ಯೆಹೋವನನ್ನು ಸ್ತುತಿಸಲು ಗಾಯಕರನ್ನು ಆರಿಸಿದನು; ಯಾಕೆಂದರೆ ಆತನು ಪರಿಶುದ್ಧನು ಮತ್ತು ಅದ್ಭುತಸ್ವರೂಪನು. ಅವರು ಸೈನ್ಯದ ಮುಂದುಗಡೆಯಲ್ಲಿ ಹೋಗುತ್ತಾ ಆತನಿಗೆ ಸ್ತುತಿಗೀತೆಯನ್ನು ಹಾಡಿದರು. ಆ ಗಾಯಕರು,
“ಯೆಹೋವನಿಗೆ ಸ್ತೋತ್ರಮಾಡಿರಿ.
ಆತನ ಕರುಣೆಯು ನಿರಂತರವಾದದ್ದು”
ಎಂದು ಹಾಡಿದರು. 22 ಅವರು ಹೀಗೆ ಸ್ತೋತ್ರ ಮಾಡುತ್ತಿರುವಾಗ ಅಮ್ಮೋನಿಯರ ಮೇಲೆಯೂ ಮೋವಾಬ್ಯರ ಮೇಲೆಯೂ ಸೇಯೀರ್ ಬೆಟ್ಟಪ್ರದೇಶದವರ ಮೇಲೆಯೂ ಇತರ ವೈರಿಗಳು ಹಠಾತ್ತನೆ ದಾಳಿ ಮಾಡುವಂತೆ ಯೆಹೋವನು ಮಾಡಿದನು. ಯೆಹೂದವನ್ನು ಆಕ್ರಮಣಮಾಡಲು ಬಂದಿದ್ದ ಅವರೆಲ್ಲರೂ ಸೋತುಹೋದರು. 23 ಅಮ್ಮೋನಿಯರೂ ಮೋವಾಬ್ಯರೂ ಸೇಯೀರ್ ಬೆಟ್ಟಪ್ರದೇಶದವರೊಂದಿಗೆ ಹೋರಾಡಲಾರಂಭಿಸಿ ಅವರನ್ನು ಕೊಂದು ನಾಶಪಡಿಸಿದರು. ಅವರು ಸೇಯೀರ್ ಬೆಟ್ಟಪ್ರದೇಶದವರನ್ನು ಕೊಂದ ಬಳಿಕ ತಮ್ಮಲ್ಲಿ ತಾವೇ ಒಬ್ಬರನ್ನೊಬ್ಬರು ಕೊಂದರು.
24 ಯೆಹೂದದ ಸೈನ್ಯದವರು ಅರಣ್ಯದಲ್ಲಿ ಶತ್ರು ಸೈನ್ಯವನ್ನು ವೀಕ್ಷಿಸುವ ಸ್ಥಳಕ್ಕೆ ಬಂದಾಗ ಸೈನ್ಯವನ್ನು ಕಾಣದೆ ರಾಶಿಯಾಗಿ ಬಿದ್ದಿದ್ದ ಹೆಣಗಳನ್ನೇ ಕಂಡರು; ಯಾರೂ ಜೀವದಿಂದುಳಿದಿರಲಿಲ್ಲ. 25 ಯೆಹೋಷಾಫಾಟನೂ ಅವನ ಸೈನಿಕರೂ ಬಂದು ಸತ್ತವರ ದೇಹದಿಂದ ಬೆಲೆಬಾಳುವ ವಸ್ತುಗಳನ್ನು ಸೂರೆ ಮಾಡಿದರು. ಅವರು ಅನೇಕ ಪಶುಗಳನ್ನು, ಐಶ್ವರ್ಯವನ್ನು, ಬಟ್ಟೆಬರೆಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡರು. ಯೆಹೋಷಾಫಾಟನು ಮತ್ತು ಅವನ ಜನರು ಹೊತ್ತುಕೊಂಡು ಹೋಗಲಾರದಷ್ಟು ವಸ್ತುಗಳಿದ್ದವು; ಅವುಗಳನ್ನು ಶೇಖರಿಸಲು ಮೂರು ದಿವಸಗಳು ಬೇಕಾಯಿತು. 26 ನಾಲ್ಕನೆಯ ದಿವಸದಲ್ಲಿ ಯೆಹೋಷಾಫಾಟನೂ ಅವನ ಸೈನ್ಯವೂ ಬೆರಾಕ ತಗ್ಗಿನಲ್ಲಿ ಬಂದು ಸೇರಿದರು. ಅಲ್ಲಿ ಯೆಹೋವನಿಗೆ ಸ್ತೋತ್ರ ಮಾಡಿದರು. ಆದ್ದರಿಂದ ಈ ದಿನದವರೆಗೂ ಅದಕ್ಕೆ ಬೆರಾಕ*ಬೆರಾಕ ಅಂದರೆ ಸ್ತುತಿ. ತಗ್ಗು ಎಂಬ ಹೆಸರಿದೆ.
27 ತರುವಾಯ ಯೆಹೋಷಾಫಾಟನು ತನ್ನ ಸೈನ್ಯವನ್ನು ಜೆರುಸಲೇಮಿಗೆ ನಡಿಸಿದನು. ಶತ್ರುಗಳ ಮೇಲೆ ಯೆಹೋವನು ನೀಡಿದ ಜಯಕ್ಕಾಗಿ ಅವರು ಹರ್ಷಿಸಿದರು. 28 ಅವರು ವಾದ್ಯಗಳನ್ನು ಬಾರಿಸುತ್ತಾ ದೇವಾಲಯವನ್ನು ಪ್ರವೇಶಿಸಿದರು.
29 ಯೆಹೋವನು ಇಸ್ರೇಲರ ವೈರಿಗಳಿಗೆ ವಿರುದ್ಧವಾಗಿ ಯುದ್ಧ ಮಾಡಿದನೆಂದು ಕೇಳಿ ಎಲ್ಲಾ ದೇಶಗಳವರು ಆತನಿಗೆ ಭಯಪಟ್ಟರು. 30 ಆದ್ದರಿಂದ ಯೆಹೋಷಾಫಾಟನ ರಾಜ್ಯದಲ್ಲಿ ಸಮಾಧಾನ ನೆಲೆಸಿತ್ತು. ಅವನ ಸುತ್ತಮುತ್ತಲೂ ಯೆಹೋವನು ಶಾಂತಿಯನ್ನು ಅನುಗ್ರಹಿಸಿದನು.
ಯೆಹೋಷಾಫಾಟನ ಆಳ್ವಿಕೆಯ ಅಂತ್ಯ
31 ಯೆಹೂದ ದೇಶವನ್ನು ಯೆಹೋಷಾಫಾಟನು ಆಳಿದನು. ಅವನು ಪಟ್ಟವನ್ನೇರಿದಾಗ ಮೂವತ್ತೈದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಅವನ ತಾಯಿಯ ಹೆಸರು ಅಜೂಬ. ಆಕೆ ಶಿಲ್ಹಿ ಎಂಬಾತನ ಮಗಳು. 32 ಯೆಹೋಷಾಫಾಟನು ತನ್ನ ತಂದೆ ಆಸನ ಹಾಗೆ ದೇವರ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದುಕೊಂಡನು. 33 ಆದರೆ ಅವನು ಉನ್ನತಸ್ಥಳಗಳನ್ನು ನಿರ್ಮೂಲಗೊಳಿಸಲಿಲ್ಲ. ಯೆಹೂದದ ಜನರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಮೇಲೆ ಪೂರ್ಣ ಮನಸ್ಸಿಟ್ಟಿರಲಿಲ್ಲ.
34 ಯೆಹೋಷಾಫಾಟನು ಆರಂಭದಿಂದ ಕೊನೆಯವರೆಗೂ ಮಾಡಿದ ಬೇರೆ ಕಾರ್ಯಗಳು, ಹನಾನೀಯನ ಮಗನಾದ ಯೇಹು ಬರೆದ ಇಸ್ರೇಲ್ ರಾಜರ ಗ್ರಂಥದಲ್ಲಿ ದಾಖಲಾಗಿವೆ.
35 ಕೆಲಕಾಲದ ನಂತರ ಯೆಹೋಷಾಫಾಟನು ಇಸ್ರೇಲರ ರಾಜನಾಗಿದ್ದ ಅಹಜ್ಯನೊಂದಿಗೆ ಒಪ್ಪಂದವನ್ನು ಮಾಡಿಕೊಂಡನು. ಅಹಜ್ಯನು ದೇವರ ದೃಷ್ಟಿಯಲ್ಲಿ ಬಹು ದುಷ್ಟನಾಗಿದ್ದನು. 36 ಯೆಹೋಷಾಫಾಟನು ಅಹಜ್ಯನೊಂದಿಗೆ ಸೇರಿ ಹಡಗುಗಳನ್ನು ತಯಾರಿಸಿ ತಾರ್ಷೀಷಿಗೆ ಕಳುಹಿಸಿದನು. ಅವರು ಎಚ್ಯೋನ್ ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿದರು. 37 ಆಗ ಎಲಿಯೇಜರನು ಯೆಹೋಷಾಫಾಟನ ವಿರುದ್ಧವಾಗಿ ಪ್ರವಾದಿಸಿದನು. ಅವನು ದೋದಾವಾಹುವಿನ ಮಗನು. ಅವನು ಮಾರೇಶ ಎಂಬ ಪಟ್ಟಣದವನಾಗಿದ್ದನು. ಅವನು, “ಯೆಹೋಷಾಫಾಟನೇ, ನೀನು ಅಹಜ್ಯನೊಂದಿಗೆ ಸೇರಿಕೊಂಡಿರುವೆ. ಇದಕ್ಕಾಗಿ ಯೆಹೋವನು ನಿನ್ನ ಕೆಲಸಗಳನ್ನು ನಾಶಮಾಡುವನು” ಎಂದು ಹೇಳಿದನು. ಅವನ ಹಡಗುಗಳು ಸಮುದ್ರದಲ್ಲಿ ಒಡೆದು ಹೋದದ್ದರಿಂದ ಅವುಗಳು ತಾರ್ಷೀಷಿಗೆ ಹೋಗಲಾಗಲಿಲ್ಲ.