6
ಎಲೀಷ ಮತ್ತು ಕೊಡಲಿ
1 ಪ್ರವಾದಿಗಳ ಗುಂಪು ಎಲೀಷನಿಗೆ, “ನಾವು ಈ ಸ್ಥಳದಲ್ಲಿಯೇ ವಾಸಮಾಡುತ್ತಿದ್ದೇವೆ. ಆದರೆ ಇದು ನಮಗೆ ತುಂಬಾ ಚಿಕ್ಕದಾಗಿದೆ. 2 ನಾವೆಲ್ಲಾ ಜೋರ್ಡನ್ ನದಿಗೆ ಹೋಗಿ ಸ್ವಲ್ಪ ಮರವನ್ನು ಕಡಿದುಕೊಂಡು ಬರೋಣ. ಪ್ರತಿಯೊಬ್ಬರೂ ಒಂದೊಂದು ದಿಮ್ಮಿಯನ್ನು ತಂದು ನಾವು ವಾಸಿಸಲು ಒಂದು ಮನೆಯನ್ನು ಕಟ್ಟೋಣ” ಎಂದು ಹೇಳಿದರು.
ಎಲೀಷನು, “ಸರಿ, ಹಾಗೆಯೇ ಮಾಡಿ” ಎಂದು ಉತ್ತರಿಸಿದನು.
3 ಒಬ್ಬ ವ್ಯಕ್ತಿಯು, “ದಯವಿಟ್ಟು ನಮ್ಮ ಜೊತೆಯಲ್ಲಿ ನೀನೂ ಬಾ” ಎಂದನು.
ಎಲೀಷನು, “ಸರಿ, ನಾನೂ ನಿಮ್ಮ ಜೊತೆಯಲ್ಲಿ ಬರುತ್ತೇನೆ” ಎಂದು ಹೇಳಿದನು.
4 ಎಲೀಷನು ಪ್ರವಾದಿಗಳ ಗುಂಪಿನೊಂದಿಗೆ ಹೋದನು. ಅವರು ಜೋರ್ಡನ್ ನದಿಯ ಬಳಿಗೆ ಬಂದು ಕೆಲವು ಮರಗಳನ್ನು ಕಡಿಯಲಾರಂಭಿಸಿದರು. 5 ಆದರೆ ಒಬ್ಬನು ಮರವೊಂದನ್ನು ಕಡಿದುರುಳಿಸಿದಾಗ, ಕಬ್ಬಿಣದ ಕೊಡಲಿಯು ಕಾವಿನಿಂದ ಕಳಚಿಕೊಂಡು ನೀರಿನೊಳಕ್ಕೆ ಬಿದ್ದುಬಿಟ್ಟಿತು. ಆ ಮನುಷ್ಯನು, “ಅಯ್ಯೋ, ಒಡೆಯನೇ! ನಾನು ಆ ಕೊಡಲಿಯನ್ನು ಎರವಲಾಗಿ ತಂದಿದ್ದೇನಲ್ಲಾ” ಎಂದು ಕೂಗಿಕೊಂಡನು.
6 ದೇವಮನುಷ್ಯನು, “ಅದು ಎಲ್ಲಿ ಬಿದ್ದಿತು?” ಎಂದು ಕೇಳಿದನು.
ಆ ಮನುಷ್ಯನು ಕೊಡಲಿಯು ಬಿದ್ದ ಸ್ಥಳವನ್ನು ಎಲೀಷನಿಗೆ ತೋರಿಸಿದನು. ಆಗ ಎಲೀಷನು ಒಂದು ಕಡ್ಡಿಯನ್ನು ಮುರಿದು ಅದನ್ನು ನೀರಿನೊಳಕ್ಕೆ ಎಸೆದನು. ಆ ಕಡ್ಡಿಯು ಕಬ್ಬಿಣದ ಕೊಡಲಿಯನ್ನು ತೇಲುವಂತೆ ಮಾಡಿತು. 7 ಎಲೀಷನು, “ಕೊಡಲಿಯನ್ನು ಎತ್ತಿಕೊ” ಎಂದು ಹೇಳಿದನು. ಆ ಮನುಷ್ಯನು ಅಲ್ಲಿಗೆ ಹೋಗಿ, ಕೊಡಲಿಯನ್ನು ತೆಗೆದುಕೊಂಡನು.
ಅರಾಮ್ಯರ ರಾಜನು ಇಸ್ರೇಲಿನ ರಾಜನನ್ನು ಸಿಕ್ಕಿಹಾಕಿಸಲು ಪ್ರಯತ್ನಿಸಿದನು
8 ಅರಾಮ್ಯರ ರಾಜನು ಇಸ್ರೇಲಿನ ವಿರುದ್ಧ ಯುದ್ಧಮಾಡಲು ಬಂದನು. ಅವನು ತನ್ನ ಸೇನಾಧಿಕಾರಿಗಳ ಸಭೆಸೇರಿಸಿ, “ನೀವು ಈ ಜಾಗದಲ್ಲಿ ಅಡಗಿಕೊಂಡಿದ್ದು, ಇಸ್ರೇಲರು ಇಲ್ಲಿಗೆ ಬಂದಾಗ ಅವರ ಮೇಲೆ ಆಕ್ರಮಣ ಮಾಡಿ” ಎಂದು ಹೇಳಿದನು.
9 ಆದರೆ ದೇವಮನುಷ್ಯನು (ಎಲೀಷನು) ಇಸ್ರೇಲಿನ ರಾಜನಿಗೆ ಒಂದು ಸಂದೇಶವನ್ನು ಕಳುಹಿಸಿ, “ನೀವು ಜಾಗರೂಕರಾಗಿರಿ! ನೀವು ಆ ಜಾಗದಲ್ಲಿ ತಿರುಗಾಡದಿರಿ! ಅರಾಮ್ಯರ ಸೈನಿಕರು ಅಲ್ಲಿ ಅಡಗಿದ್ದಾರೆ!” ಎಂದು ಹೇಳಿದನು.
10 ಇಸ್ರೇಲಿನ ರಾಜನು ತನ್ನ ಜನರಿಗೆ ಸಂದೇಶವೊಂದನ್ನು ಕಳುಹಿಸಿ, ದೇವಮನುಷ್ಯನು ಎಚ್ಚರವಾಗಿರಲು ತಿಳಿಸಿದ ಸ್ಥಳದಲ್ಲಿ ತಿರುಗಾಡದಿರುವಂತೆ ಸೂಚಿಸಿ ಕೆಲವು ಜನರನ್ನು*ಕೆಲವು ಜನರನ್ನು ಅಕ್ಷರಶಃ, “ಒಬ್ಬರನ್ನಲ್ಲ ಅಥವಾ ಇಬ್ಬರನ್ನಲ್ಲ.” ರಕ್ಷಿಸಿದನು.
11 ಅರಾಮ್ಯರ ರಾಜನು ಇದರಿಂದ ಬಹಳ ತಳಮಳಗೊಂಡನು. ಅರಾಮ್ಯರ ರಾಜನು ತನ್ನ ಸೇನಾಧಿಕಾರಿಗಳನ್ನು ಕರೆದು ಅವರಿಗೆ, “ಇಸ್ರೇಲಿನ ರಾಜನಿಗಾಗಿ ಗೂಢಚರ್ಯ ನಡೆಸುತ್ತಿರುವವರು ಯಾರೆಂಬುದನ್ನು ಹೇಳಿ?” ಎಂದು ಕೇಳಿದನು.
12 ಅರಾಮ್ಯರ ರಾಜನ ಅಧಿಕಾರಿಗಳಲ್ಲೊಬ್ಬನು, “ನನ್ನ ಒಡೆಯನೇ, ರಾಜನೇ, ನಮ್ಮಲ್ಲಿ ಯಾರೊಬ್ಬರೂ ಗೂಢಚಾರರಲ್ಲ. ಇಸ್ರೇಲಿನ ಪ್ರವಾದಿಯಾದ ಎಲೀಷನು ಅನೇಕ ರಹಸ್ಯ ಸಂಗತಿಗಳನ್ನು ಅಂದರೆ ನೀವು ನಿಮ್ಮ ಮಲಗುವ ಕೊಠಡಿಯಲ್ಲಿ ಮಾತನಾಡುವುದನ್ನೂ ಸಹ ಇಸ್ರೇಲಿನ ರಾಜನಿಗೆ ತಿಳಿಸಬಲ್ಲವನಾಗಿದ್ದಾನೆ!” ಎಂದು ಹೇಳಿದನು.
13 ಅರಾಮ್ಯರ ರಾಜನು, “ಎಲೀಷನನ್ನು ಕಂಡುಹಿಡಿಯಿರಿ. ಅವನನ್ನು ಸೆರೆಹಿಡಿಯಲು ನಾನು ಸೈನಿಕರನ್ನು ಕಳುಹಿಸುತ್ತೇನೆ” ಎಂದನು.
ಸೇವಕರು ಅರಾಮ್ಯರ ರಾಜನಿಗೆ, “ಎಲೀಷನು ದೋತಾನಿನಲ್ಲಿದ್ದಾನೆ” ಎಂದು ಹೇಳಿದರು.
14 ಆಗ ಅರಾಮ್ಯರ ರಾಜನು ಕುದುರೆಗಳನ್ನು, ರಥಗಳನ್ನು ಮತ್ತು ದೊಡ್ಡ ಸೇನೆಯನ್ನು ದೋತಾನಿಗೆ ಕಳುಹಿಸಿದನು. ಅವರು ರಾತ್ರಿಯಲ್ಲಿ ಬಂದು ನಗರವನ್ನು ಸುತ್ತುವರಿದರು. 15 ಎಲೀಷನ ಸೇವಕನು ಹೊತ್ತಾರೆ ನಸುಕಿನಲ್ಲಿಯೇ ಮೇಲಕ್ಕೆದ್ದನು. ಸೇವಕನು ಹೊರಕ್ಕೆ ಹೋದಾಗ ರಥಗಳಿಂದ ಮತ್ತು ಕುದುರೆಗಳಿಂದ ಕೂಡಿದ ಸೈನ್ಯವು ನಗರವನ್ನು ಸುತ್ತುವರಿದಿರುವುದನ್ನು ನೋಡಿದನು!
ಆ ಸೇವಕನು ಎಲೀಷನಿಗೆ, “ಅಯ್ಯೋ, ನನ್ನ ಒಡೆಯನೇ, ನಾವು ಈಗ ಏನು ಮಾಡೋಣ?” ಎಂದು ಕೇಳಿದನು.
16 ಎಲೀಷನು, “ನೀನು ಹೆದರದಿರು! ನಮಗಾಗಿ ಯುದ್ಧಮಾಡುವ ಸೇನೆಯು ಅರಾಮ್ಯರಿಗಾಗಿ ಯುದ್ಧಮಾಡುವ ಸೇನೆಗಿಂತ ಬಹಳ ಹೆಚ್ಚಿನದಾಗಿದೆ!” ಎಂದು ಹೇಳಿದನು.
17 ನಂತರ ಎಲೀಷನು ಪ್ರಾರ್ಥಿಸುತ್ತಾ, “ಯೆಹೋವನೇ, ನನ್ನ ಸೇವಕನ ಕಣ್ಣುಗಳನ್ನು ತೆರೆದು ಅವನು ನೋಡುವಂತೆ ಮಾಡೆಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು.
ಯೆಹೋವನು ತರುಣನ ಕಣ್ಣುಗಳನ್ನು ತೆರೆದನು. ಆ ಸೇವಕನು ಪರ್ವತವನ್ನು ತುಂಬಿರುವ ಬೆಂಕಿಯಂತಿರುವ ಕುದುರೆಗಳನ್ನು ಮತ್ತು ರಥಗಳನ್ನು ನೋಡಿದನು. ಅವರೆಲ್ಲ ಎಲೀಷನ ಸುತ್ತಲೂ ಇದ್ದರು!
18 ಆ ಬೆಂಕಿಯಂತಿರುವ ಕುದುರೆಗಳು ಮತ್ತು ರಥಗಳು ಎಲೀಷನ ಬಳಿಗೆ ಇಳಿದುಬಂದವು. ಎಲೀಷನು ಯೆಹೋವನನ್ನು ಪ್ರಾರ್ಥಿಸಿ, “ಈ ಜನರನ್ನು ಕುರುಡರನ್ನಾಗಿ ಮಾಡಬೇಕೆಂದು ನಾನು ನಿನ್ನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದನು.
ಆಗ ಯೆಹೋವನು ಎಲೀಷನ ಪ್ರಾರ್ಥನೆಯಂತೆ ಅರಾಮ್ಯರ ಸೇನೆಯು ಕುರುಡರಾಗುವಂತೆ ಮಾಡಿದನು. 19 ಎಲೀಷನು ಅರಾಮ್ಯರ ಸೇನೆಗೆ, “ಇದು ಸರಿಯಾದ ಮಾರ್ಗವಲ್ಲ, ಇದು ಸರಿಯಾದ ನಗರವೂ ಅಲ್ಲ. ನನ್ನನ್ನು ಹಿಂಬಾಲಿಸಿ. ನೀವು ಹುಡುಕುತ್ತಿರುವ ಮನುಷ್ಯನ ಬಳಿಗೆ ನಾನು ನಿಮ್ಮನ್ನು ಕರೆದೊಯ್ಯುತ್ತೇನೆ” ಎಂದು ಹೇಳಿದನು. ನಂತರ ಎಲೀಷನು ಅರಾಮ್ಯರ ಸೇನೆಯನ್ನು ಸಮಾರ್ಯಕ್ಕೆ ನಡೆಸಿಕೊಂಡು ಬಂದನು.
20 ಅವರು ಸಮಾರ್ಯಕ್ಕೆ ಬಂದು ಸೇರಿದಾಗ ಎಲೀಷನು, “ಯೆಹೋವನೇ, ಈ ಜನರ ಕಣ್ಣುಗಳನ್ನು ತೆರೆದುಬಿಡು, ಅವರು ನೋಡಲಿ” ಎಂದು ಹೇಳಿದನು.
ಆಗ ಯೆಹೋವನು ಅವರ ಕಣ್ಣುಗಳನ್ನು ತೆರೆದನು. ಅರಾಮ್ಯರ ಸೇನೆಗೆ ತಾವು ಸಮಾರ್ಯ ನಗರದಲ್ಲಿರುವುದು ತಿಳಿದುಬಂತು! 21 ಅರಾಮ್ಯರ ಸೇನೆಯನ್ನು ಇಸ್ರೇಲಿನ ರಾಜನು ನೋಡಿ ಎಲೀಷನಿಗೆ, “ನನ್ನ ತಂದೆಯೇ, ನಾನು ಅವರನ್ನು ಕೊಲ್ಲಲೇ? ಅವರನ್ನು ಕೊಂದುಹಾಕಿಬಿಡಲೇ?” ಎಂದು ಕೇಳಿದನು.
22 ಎಲೀಷನು, “ಬೇಡ, ಅವರನ್ನು ಕೊಲ್ಲಬೇಡ. ನೀನು ಯುದ್ಧದಲ್ಲಿ, ನಿನ್ನ ಖಡ್ಗದಿಂದ, ನಿನ್ನ ಬಿಲ್ಲುಬಾಣಗಳಿಂದ ಸೆರೆಹಿಡಿದ ಜನರನ್ನು ಕೊಲ್ಲಬಾರದು, ಅರಾಮ್ಯರ ಸೇನೆಗೆ ಸ್ವಲ್ಪ ನೀರನ್ನು ಮತ್ತು ರೊಟ್ಟಿಗಳನ್ನು ಕೊಡು. ಅವರು ತಿಂದು, ನೀರು ಕುಡಿಯಲಿ. ನಂತರ ಅವರು ತಮ್ಮ ಮನೆಗೆ, ಅವರ ಒಡೆಯನ ಬಳಿಗೆ ಹೋಗಲಿ” ಎಂದು ಉತ್ತರಿಸಿದನು.
23 ಇಸ್ರೇಲಿನ ರಾಜನು ಅರಾಮ್ಯರ ಸೇನೆಗೆ ಆಹಾರವನ್ನು ಹೇರಳವಾಗಿ ಸಿದ್ಧಪಡಿಸಿದನು. ಅರಾಮ್ಯರ ಸೇನೆಯು ಊಟಮಾಡಿ, ನೀರನ್ನು ಕುಡಿದರು. ನಂತರ ಇಸ್ರೇಲಿನ ರಾಜನು ಅರಾಮ್ಯರ ಸೇನೆಗೆ ತಮ್ಮ ಒಡೆಯನ ಬಳಿಗೆ ಹೋಗಲು ಆಜ್ಞಾಪಿಸಿದನು. ಅಂದಿನಿಂದ ಇಸ್ರೇಲ್ ದೇಶದ ಮೇಲೆ ಧಾಳಿಮಾಡಲು ಯಾವ ಸೈನಿಕರನ್ನೂ ಅರಾಮ್ಯರು ಕಳುಹಿಸಲಿಲ್ಲ.
ಸಮಾರ್ಯದಲ್ಲಿ ಭೀಕರ ಬರಗಾಲ
24 ಇದಾದನಂತರ, ಅರಾಮ್ಯರ ರಾಜನಾದ ಬೆನ್ಹದದನು ತನ್ನ ಸೇನೆಯನ್ನೆಲ್ಲ ಒಟ್ಟಾಗಿ ಸೇರಿಸಿಕೊಂಡು, ಸಮಾರ್ಯವನ್ನು ಸುತ್ತುವರಿದು ಆಕ್ರಮಣಮಾಡಲು ಹೋದನು. 25 ಜನರು ನಗರದೊಳಕ್ಕೆ ಆಹಾರವನ್ನು ತರಲು ಸೈನಿಕರು ಅವಕಾಶ ಕೊಡಲಿಲ್ಲ. ಆದ್ದರಿಂದ ಸಮಾರ್ಯದಲ್ಲಿ ಭೀಕರ ಬರಗಾಲವು ಆ ಕಾಲದಲ್ಲಾಯಿತು. ಸಮಾರ್ಯದಲ್ಲಿ ಒಂದು ಹೇಸರಕತ್ತೆಯ ತಲೆಯು ಎಂಭತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಾಟವಾಗುವಷ್ಟು ಕೆಟ್ಟ ಪರಿಸ್ಥಿತಿಯಿತ್ತು. ಅರ್ಧಸೇರು ಪಾರಿವಾಳದ ಮಲದ ಲದ್ದಿಯು ಐದು ಬೆಳ್ಳಿನಾಣ್ಯಗಳಿಗೆ ಮಾರಾಟವಾಗುತ್ತಿತ್ತು.
26 ಇಸ್ರೇಲಿನ ರಾಜನು ನಗರದ ಸುತ್ತಲಿನ ಗೋಡೆಯ ಮೇಲೆ ನಡೆಯುತ್ತಿರಲು ಸ್ತ್ರೀಯೊಬ್ಬಳು ಅವನನ್ನು, “ನನ್ನ ಪ್ರಭುವೇ, ರಾಜನೇ, ದಯವಿಟ್ಟು ನನಗೆ ಸಹಾಯಮಾಡು” ಎಂದು ಕೂಗಿಕೊಂಡಳು.
27 ಇಸ್ರೇಲಿನ ರಾಜನು, “ಯೆಹೋವನು ನಿನಗೆ ಸಹಾಯ ಮಾಡದಿದ್ದರೆ, ನಾನು ನಿನಗೆ ಹೇಗೆ ಸಹಾಯ ಮಾಡಲಿ? ನಿನಗೆ ಕೊಡಲು ನನ್ನ ಬಳಿ ಏನೂ ಇಲ್ಲ; ಕಣದಲ್ಲಿ ಕಾಳುಗಳಿಲ್ಲ, ದ್ರಾಕ್ಷಿಯ ಆಲೆಯಲ್ಲಿ ದ್ರಾಕ್ಷಾರಸವಿಲ್ಲ” ಎಂದನು. 28 ನಂತರ ಇಸ್ರೇಲಿನ ರಾಜನು ಆ ಸ್ತ್ರೀಗೆ, “ನಿನ್ನ ತೊಂದರೆಯೇನು?” ಎಂದು ಕೇಳಿದನು.
ಆ ಸ್ತ್ರೀಯು, “ಇವಳು ನನಗೆ, ‘ನಿನ್ನ ಮಗನನ್ನು ನನಗೆ ಕೊಡು. ನಾವು ಅವನನ್ನು ಕೊಂದು, ಈ ಹೊತ್ತು ತಿನ್ನೋಣ. ನಾಳೆ ನನ್ನ ಮಗನನ್ನು ತಿನ್ನೋಣ’ ಎಂದಳು. 29 ನಾವು ನನ್ನ ಮಗನನ್ನು ಬೇಯಿಸಿ, ನಾವು ತಿಂದು ಬಿಟ್ಟೆವು. ಮಾರನೆಯ ದಿನ ನಾನು ಈ ಸ್ತ್ರೀಗೆ, ‘ನಿನ್ನ ಮಗನನ್ನು ನಾವು ಕೊಂದು ತಿನ್ನೋಣ’ ಎಂದು ಹೇಳಿದೆನು. ಆದರೆ ಅವಳು ತನ್ನ ಮಗನನ್ನು ಅಡಗಿಸಿಟ್ಟಿದ್ದಾಳೆ!” ಎಂದು ಹೇಳಿದಳು.
30 ಆ ಸ್ತ್ರೀಯ ಮಾತುಗಳನ್ನು ರಾಜನು ಕೇಳಿದಾಗ, ದುಃಖದಿಂದ ತನ್ನ ಬಟ್ಟೆಗಳನ್ನೆಲ್ಲಾ ಹರಿದುಕೊಂಡನು. ಅವನ ಮೈಮೇಲೆ ಗೋಣಿತಟ್ಟಿರುವುದು ಜನರಿಗೆಲ್ಲಾ ಕಾಣಿಸಿತು.
31 ಇದಲ್ಲದೆ ರಾಜನು, “ಈ ದಿನದ ಅಂತ್ಯದೊಳಗೆ ನಾನು ಶಾಫಾಟನ ಮಗನಾದ ಎಲೀಷನ ತಲೆಯನ್ನು ಅವನ ದೇಹದ ಮೇಲೆ ಉಳಿಯುವಂತೆ ಮಾಡಿದರೆ ದೇವರು ನನ್ನನ್ನು ದಂಡಿಸಲಿ!” ಎಂದು ಹೇಳಿದನು.
32 ರಾಜನು ಎಲೀಷನ ಬಳಿಗೆ ಒಬ್ಬ ಸಂದೇಶಕನನ್ನು ಕಳುಹಿಸಿದನು. ಎಲೀಷನು ತನ್ನ ಮನೆಯಲ್ಲಿ ಕುಳಿತಿದ್ದನು; ಹಿರಿಯರು ಅವನೊಂದಿಗೆ ಕುಳಿತಿದ್ದರು. ಸಂದೇಶಕನು ಬರುವುದಕ್ಕೆ ಮುಂಚೆಯೇ ಎಲೀಷನು ಹಿರಿಯರಿಗೆ, “ನೋಡಿ, ನನ್ನ ತಲೆಯನ್ನು ಕತ್ತರಿಸಿಹಾಕಲು ಕೊಲೆಗಾರನ (ಇಸ್ರೇಲಿನ ರಾಜ) ಮಗ ಜನರನ್ನು ಕಳುಹಿಸಿದ್ದಾನೆ! ಆ ಸಂದೇಶಕನು ಬಂದಾಗ ಬಾಗಿಲನ್ನು ಮುಚ್ಚಿಬಿಡಿ! ಅವನು ಒಳಗೆ ಪ್ರವೇಶಿಸದಂತೆ ಬಾಗಿಲನ್ನು ಹಿಡಿದುಕೊಳ್ಳಿ! ಅವನ ಹಿಂದೆ ಬರುತ್ತಿರುವ ಅವನ ಒಡೆಯನ ಕಾಲ ಸಪ್ಪಳವು ನನಗೆ ಕೇಳಿಸುತ್ತಿದೆ!” ಎಂದು ಹೇಳಿದನು.
33 ಎಲೀಷನು ಹಿರಿಯರೊಂದಿಗೆ ಇನ್ನೂ ಮಾತನಾಡುತ್ತಿರುವಾಗ ಸಂದೇಶಕನು ಅವನ ಬಳಿಗೆ ಬಂದನು. ಅವನ ಸಂದೇಶವು ಹೀಗಿತ್ತು: “ಈ ಆಪತ್ತು ಯೆಹೋವನಿಂದಲೇ ಬಂದಿದೆ! ನಾನೇಕೆ ಆತನನ್ನು ನಿರೀಕ್ಷಿಸಿಕೊಂಡಿರಬೇಕು?”