7
ಸ್ತೆಫನನ ಪ್ರಸಂಗ
ಪ್ರಧಾನಯಾಜಕನು ಸ್ತೆಫನನಿಗೆ, “ಈ ಸಂಗತಿಗಳು ನಿಜವೋ?” ಎಂದು ಕೇಳಿದನು. ಪ್ರತ್ಯುತ್ತರವಾಗಿ ಅವನು ಹೀಗೆಂದನು: “ನನ್ನ ಯೆಹೂದ್ಯತಂದೆಗಳೇ, ಸಹೋದರರೇ, ನನಗೆ ಕಿವಿಗೊಡಿರಿ. ನಮ್ಮ ಪಿತೃವಾದ ಅಬ್ರಹಾಮನಿಗೆ ನಮ್ಮ ಪ್ರಭಾವಸ್ವರೂಪನಾದ ದೇವರು ಕಾಣಸಿಕೊಂಡನು. ಅಬ್ರಹಾಮನು ಹಾರಾನಿನಲ್ಲಿ ವಾಸಮಾಡುವ ಮೊದಲು ಮೆಸಪೊಟೇಮಿಯದಲ್ಲಿದ್ದನು. ದೇವರು ಅಬ್ರಹಾಮನಿಗೆ, ‘ನಿನ್ನ ದೇಶವನ್ನೂ ನಿನ್ನ ಜನರನ್ನೂ ಬಿಟ್ಟು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು’ಉಲ್ಲೇಖನ: ಆದಿಕಾಂಡ 12:1. ಎಂದು ಹೇಳಿದನು.
“ಆದ್ದರಿಂದ ಅಬ್ರಹಾಮನು ಖಾಲ್ದೆಯ*ಖಾಲ್ದೆಯ ಅಥವಾ ಬಾಬಿಲೋನಿಯ. ದೇಶವನ್ನು ಬಿಟ್ಟು ಹಾರಾನಿನಲ್ಲಿ ವಾಸಿಸಲು ಹೋದನು. ಅಬ್ರಹಾಮನ ತಂದೆ ಸತ್ತಮೇಲೆ ದೇವರು ಅವನನ್ನು ಈಗ ನೀವು ವಾಸಿಸುತ್ತಿರುವ ಈ ಸ್ಥಳಕ್ಕೆ ಕಳುಹಿಸಿದನು. ಆದರೆ ದೇವರು ಅಬ್ರಹಾಮನಿಗೆ ಇಲ್ಲಿ ಯಾವ ಭೂಮಿಯನ್ನೂ ಕೊಡಲಿಲ್ಲ. ದೇವರು ಅವನಿಗೆ ಒಂದು ಅಡಿ ಸ್ಥಳವನ್ನೂ ಕೊಡಲಿಲ್ಲ. ಆದರೆ ಮುಂದಿನ ಕಾಲದಲ್ಲಿ ಈ ದೇಶವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವುದಾಗಿ ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದನು. (ಅಬ್ರಹಾಮನಿಗೆ ಮಕ್ಕಳೇ ಇಲ್ಲದಿದ್ದಾಗ ಇದಾಯಿತು.)
“ದೇವರು ಅವನಿಗೆ, ‘ನಿನ್ನ ಸಂತಾನದವರು ಬೇರೊಂದು ದೇಶದಲ್ಲಿ ವಾಸಿಸುವರು. ಅವರು ಪರದೇಶಿಗಳಾಗಿರುವರು. ಅಲ್ಲಿಯ ಜನರು ಅವರನ್ನು ಗುಲಾಮರನ್ನಾಗಿ ಮಾಡಿಕೊಂಡು ನಾನೂರು ವರ್ಷಗಳವರೆಗೆ ಅವರಿಗೆ ಕೇಡುಗಳನ್ನು ಮಾಡುವರು. ಆದರೆ ಅವರನ್ನು ಗಲಾಮರನ್ನಾಗಿ ಮಾಡಿಕೊಂಡ ಜನಾಂಗವನ್ನು ನಾನು ದಂಡಿಸುವೆನು’ಉಲ್ಲೇಖನ: ಆದಿಕಾಂಡ 15:13-14. ಎಂದು ಹೇಳಿದನು. ಇದಲ್ಲದೆ ದೇವರು ಅವನಿಗೆ, ‘ಆ ಬಳಿಕ ನಿನ್ನ ಜನರು ಆ ದೇಶದಿಂದ ಹೊರಗೆ ಬಂದು ನನ್ನನ್ನು ಈ ಸ್ಥಳದಲ್ಲಿ ಆರಾಧಿಸುವರು’ಉಲ್ಲೇಖನ: ಆದಿಕಾಂಡ 15:14; ವಿಮೋಚನ. 3:12. ಎಂದು ಹೇಳಿದನು.
“ದೇವರು ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಆ ಒಡಂಬಡಿಕೆಯ ಗುರುತೇ ಸುನ್ನತಿ. ಹೀಗಿರಲು ಅಬ್ರಹಾಮನು ಒಬ್ಬ ಮಗನನ್ನು ಪಡೆದಾಗ, ಆ ಮಗನಿಗೆ ಎಂಟನೆಯ ದಿನದಲ್ಲಿ ಸುನ್ನತಿ ಮಾಡಿದನು. ಅವನ ಮಗನ ಹೆಸರು ಇಸಾಕ. ಇಸಾಕನು ಸಹ ತನ್ನ ಮಗನಾದ ಯಾಕೋಬನಿಗೆ ಸುನ್ನತಿ ಮಾಡಿದನು. ಮತ್ತು ಯಾಕೋಬನು ತನ್ನ ಗಂಡುಮಕ್ಕಳಿಗೆಲ್ಲಾ ಸುನ್ನತಿ ಮಾಡಿದನು. ಈ ಗಂಡುಮಕ್ಕಳೇ ಮುಂದೆ ಹನ್ನೆರಡು ಮಂದಿ ಪಿತೃಗಳಾದರು.
“ಈ ಪಿತೃಗಳು ಯೋಸೇಫನ (ಅವರು ತಮ್ಮ) ಮೇಲೆ ಹೊಟ್ಟೆಕಿಚ್ಚುಪಟ್ಟರು. ಅವರು ಯೋಸೇಫನನ್ನು ಈಜಿಪ್ಟಿನ ಜನರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಯೋಸೇಫನೊಂದಿಗೆ ಇದ್ದನು. 10 ಯೋಸೇಫನಿಗೆ ಅಲ್ಲಿ ಅನೇಕ ತೊಂದರೆಗಳು ಬಂದವು. ಆದರೆ ದೇವರು ಆ ಎಲ್ಲಾ ತೊಂದರೆಗಳಿಂದ ಅವನನ್ನು ರಕ್ಷಿಸಿದನು. ಆಗ ಫರೋಹನು ಈಜಿಪ್ಟಿನ ರಾಜನಾಗಿದ್ದನು. ದೇವರು ಯೋಸೇಫನಿಗೆ ಕೊಟ್ಟ ಜ್ಞಾನದ ದೆಸೆಯಿಂದ ಫರೋಹನು ಯೋಸೇಫನನ್ನು ಇಷ್ಟಪಟ್ಟನು ಮತ್ತು ಗೌರವಿಸಿದನು. ಫರೋಹನು ಯೋಸೇಫನನ್ನು ಈಜಿಪ್ಟಿನ ರಾಜ್ಯಪಾಲನನ್ನಾಗಿಯೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರ ಮೇಲೆ ಅಧಿಪತಿಯನ್ನಾಗಿಯೂ ಮಾಡಿದನು. 11 ಆದರೆ ಈಜಿಪ್ಟಿನಲ್ಲಿ ಮತ್ತು ಕಾನಾನಿನಲ್ಲಿ ಬರಗಾಲ ಉಂಟಾಯಿತು. ಆಹಾರವಿಲ್ಲದೆ ನಮ್ಮ ಪಿತೃಗಳಿಗೆ ಬಹಳ ಕಷ್ಟವಾಯಿತು.
12 “ಆದರೆ ಈಜಿಪ್ಟಿನಲ್ಲಿ ಆಹಾರವನ್ನು ಸಂಗ್ರಹಿಸಲಾಗಿದೆ ಎಂಬ ಸುದ್ದಿಯನ್ನು ಯಾಕೋಬನು ಕೇಳಿ, ನಮ್ಮ ಪಿತೃಗಳನ್ನು ಅಲ್ಲಿಗೆ ಕಳುಹಿಸಿದನು. (ಇದು ಈಜಿಪ್ಟಿಗೆ ಅವರ ಮೊದಲ ಪ್ರಯಾಣ.) 13 ಬಳಿಕ ಅವರು ಅಲ್ಲಿಗೆ ಎರಡನೆಯ ಸಲ ಹೋದರು. ಈ ಸಲ, ತಾನು ಯಾರೆಂಬುದನ್ನು ಯೋಸೇಫನು ತನ್ನ ಸಹೋದರರಿಗೆ ತಿಳಿಸಿದನು ಮತ್ತು ಯೋಸೇಫನ ಕುಟುಂಬದ ಬಗ್ಗೆ ಫರೋಹನಿಗೆ ತಿಳಿಯಿತು. 14 ಬಳಿಕ, ಯೋಸೇಫನು ತನ್ನ ತಂದೆಯಾದ ಯಾಕೋಬನನ್ನು ಮತ್ತು ಸಂಬಂಧಿಕರನ್ನು (ಅವರೆಲ್ಲರು ಒಟ್ಟಿಗೆ ಎಪ್ಪತ್ತೈದು ಮಂದಿ) ಈಜಿಪ್ಟಿಗೆ ಆಹ್ವಾನಿಸಲು ಕೆಲವು ಜನರನ್ನು ಕಳುಹಿಸಿದನು. 15 ಆದ್ದರಿಂದ ಯಾಕೋಬನು ಈಜಿಪ್ಟಿಗೆ ಹೋದನು. ಯಾಕೋಬನು ಮತ್ತು ನಮ್ಮ ಪಿತೃಗಳು ತಾವು ಸಾಯುವವರೆಗೆ ಅಲ್ಲೇ ಇದ್ದರು. 16 ಬಳಿಕ ಅವರ ದೇಹಗಳನ್ನು ಶೇಕೆಮಿಗೆ ಸಾಗಿಸಲಾಯಿತು. ಅಲ್ಲಿಯ ಸಮಾಧಿಯೊಂದರಲ್ಲಿ ಅವರನ್ನು ಹೂಳಲಾಯಿತು. (ಅಬ್ರಹಾಮನು ಹಾಮೋರನ ಗಂಡುಮಕ್ಕಳಿಂದ ಕೊಂಡುಕೊಂಡದ್ದು ಈ ಸಮಾಧಿಯನ್ನೇ. ಅವನು ಅವರಿಗೆ ಬೆಳ್ಳಿಯನ್ನು ಕ್ರಯವಾಗಿ ಕೊಟ್ಟಿದ್ದನು.)
17 “ಈಜಿಪ್ಟಿನಲ್ಲಿ ನಮ್ಮ ಜನರಾದ ಯೆಹೂದ್ಯರ ಸಂಖ್ಯೆಯು ಹೆಚ್ಚತೊಡಗಿತು. (ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ ಕಾಲ ಬಹು ಶೀಘ್ರದಲ್ಲೇ ಬರಲಿತ್ತು.) 18 ಬಳಿಕ, ಬೇರೊಬ್ಬ ರಾಜನು ಈಜಿಪ್ಟನ್ನು ಆಳಲಾರಂಭಿಸಿದನು. ಅವನಿಗೆ ಯೋಸೇಫನ ಬಗ್ಗೆ ಏನೂ ತಿಳಿದಿರಲಿಲ್ಲ. 19 ಈ ರಾಜನು ನಮ್ಮ ಜನರಿಗೆ ಮೋಸ ಮಾಡಿದನು. ಅವನು ನಮ್ಮ ಪಿತೃಗಳಿಗೆ ಕೇಡನ್ನು ಮಾಡಿದನು. ಅವರ ಕೂಸುಗಳನ್ನು ಸಾಯಿಸಬೇಕೆಂದು ಹೊರಗೆ ಹಾಕಿಸಿದನು.
20 “ಮೋಶೆಯು ಜನಿಸಿದ್ದು ಈ ಕಾಲದಲ್ಲೇ. ಅವನು ಬಹು ಸುಂದರನಾಗಿದ್ದನು. ಮೋಶೆಯನ್ನು ಅವನ ತಂದೆಯ ಮನೆಯಲ್ಲಿ ಮೂರು ತಿಂಗಳವರೆಗೆ ನೋಡಿಕೊಳ್ಳಲಾಯಿತು. 21 ಅವರು ಮೋಶೆಯನ್ನು ಹೊರಗೆ ಹಾಕಿದಾಗ ಫರೋಹನ ಮಗಳು ಅವನನ್ನು ತೆಗೆದುಕೊಂಡಳು. ಆಕೆಯು ಅವನನ್ನು ತನ್ನ ಸ್ವಂತ ಮಗನಂತೆ ಬೆಳೆಸಿದಳು. 22 ಈಜಿಪ್ಟಿನವರು ತಮಗೆ ಗೊತ್ತಿದ್ದ ಸಕಲ ವಿದ್ಯೆಗಳನ್ನು ಮೋಶೆಗೆ ಕಲಿಸಿದರು. ಅವನು ವಿಷಯಗಳನ್ನು ಹೇಳುವುದರಲ್ಲಿಯೂ ಕಾರ್ಯಗಳನ್ನು ಮಾಡುವು ದರಲ್ಲಿಯೂ ಬಹು ಸಮರ್ಥನಾಗಿದ್ದನು.
23 “ಮೋಶೆಗೆ ನಲವತ್ತು ವರ್ಷ ವಯಸ್ಸಾಗಿದ್ದಾಗ, ತನ್ನ ಸಹೋದರರಾದ ಯೆಹೂದ್ಯ ಜನರನ್ನು ಸಂದರ್ಶಿಸುವುದು ಒಳ್ಳೆಯದೆಂದು ಯೋಚಿಸಿಕೊಂಡನು. 24 ಈಜಿಪ್ಟಿನವನೊಬ್ಬನು ಯೆಹೂದ್ಯನೊಬ್ಬನಿಗೆ ಅನ್ಯಾಯ ಮಾಡಿ ಹಿಂಸಿಸುತ್ತಿರುವುದನ್ನು ಕಂಡ ಮೋಶೆಯು ಆ ಈಜಿಪ್ಟಿನವನಿಗೆ ಬಲವಾಗಿ ಹೊಡೆದು ಕೊಂದುಹಾಕಿದನು. 25 ತಮ್ಮನ್ನು ರಕ್ಷಿಸಲು ದೇವರು ಮೋಶೆಯನ್ನು ಉಪಯೋಗಿಸುತ್ತಿದ್ದಾನೆ ಎಂಬುದಾಗಿ ತನ್ನ ಯೆಹೂದ್ಯ ಸಹೋದರರು ಅರ್ಥಮಾಡಿಕೊಳ್ಳುತ್ತಾರೆ ಎಂದು ಮೋಶೆ ಭಾವಿಸಿಕೊಂಡನು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ.
26 “ಮರುದಿನ, ಇಬ್ಬರು ಯೆಹೂದ್ಯರು ಹೊಡೆದಾಡುವುದನ್ನು ಮೋಶೆಯು ಕಂಡನು. ಅವರನ್ನು ಸಮಾಧಾನಪಡಿಸಲು ಅವನು ಪ್ರಯತ್ನಿಸಿ ‘ಗೆಳೆಯರೇ, ನೀವು ಸಹೋದರರಾಗಿದ್ದೀರಿ! ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡುವುದೇಕೆ?’ ಎಂದು ಅವರನ್ನು ಕೇಳಿದನು. 27 ಮತ್ತೊಬ್ಬನಿಗೆ ಅನ್ಯಾಯ ಮಾಡುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಿನ್ನನ್ನು ನಮ್ಮ ಅಧಿಪತಿ ಎಂದಾಗಲಿ ನ್ಯಾಯಾಧೀಶ ಎಂದಾಗಲಿ ಯಾರಾದರೂ ಹೇಳಿದರೇ? ಇಲ್ಲ! 28 ನಿನ್ನೆ ಆ ಈಜಿಪ್ಟಿನವನನ್ನು ಕೊಂದಂತೆ ನನ್ನನ್ನೂ ಕೊಲ್ಲುವೆಯಾ?’ಉಲ್ಲೇಖನ: ವಿಮೋಚನ. 2:14. ಎಂದು ಹೇಳಿದನು. 29 ಇದನ್ನು ಕೇಳಿದ್ದೇ ಮೋಶೆಯು ಈಜಿಪ್ಟನ್ನು ಬಿಟ್ಟು ಮಿದ್ಯಾನ್ಯರ ನಾಡಿಗೆ ಹೋಗಿ ವಿದೇಶಿಯವನಂತೆ ವಾಸಿಸತೊಡಗಿದನು. ಅಲ್ಲಿ ಅವನಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು.
30 “ನಲವತ್ತು ವರ್ಷಗಳಾದ ಮೇಲೆ ಮೋಶೆಯು ಸಿನಾಯ್ ಬೆಟ್ಟದ ಸಮೀಪದಲ್ಲಿರುವ ಮರಳುಗಾಡಿನಲ್ಲಿದ್ದಾಗ ಉರಿಯುತ್ತಿದ್ದ ಪೊದೆಯ ಜ್ವಾಲೆಯಲ್ಲಿ ದೇವದೂತನೊಬ್ಬನು ಕಾಣಿಸಿಕೊಂಡನು. 31 ಮೋಶೆಯು ಆಶ್ಚರ್ಯದಿಂದ ನೋಡಲು ಸಮೀಪಕ್ಕೆ ಹೋದನು. ಆಗ ಮೋಶೆಗೆ ವಾಣಿಯೊಂದು ಕೇಳಿಸಿತು. ಅದು ಪ್ರಭುವಿನ ವಾಣಿಯಾಗಿತ್ತು. 32 ಪ್ರಭುವು ಅವನಿಗೆ, ‘ನಾನೇ ನಿನ್ನ ಪಿತೃಗಳ ದೇವರು. ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ಉಲ್ಲೇಖನ: ವಿಮೋಚನ. 3:6. ಎಂದು ಹೇಳಿದನು. ಮೋಶೆಯು ಭಯದಿಂದ ನಡುಗ ತೊಡಗಿದನು; ಪೊದೆಯನ್ನು ನೋಡಲು ಹೆದರಿದನು.
33 “ಪ್ರಭುವು ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ತೆಗೆದುಹಾಕು, ಈಗ ನೀನು ನಿಂತುಕೊಂಡಿರುವ ಸ್ಥಳ ಪರಿಶುದ್ಧವಾದದ್ದು. 34 ಜನರು ಈಜಿಪ್ಟಿನಲ್ಲಿ ಬಹಳ ಸಂಕಟಪಡುತ್ತಿರುವುದನ್ನು ನಾನು ನೋಡಿದ್ದೇನೆ; ನನ್ನ ಜನರ ಗೋಳಾಟವನ್ನು ನಾನು ಕೇಳಿದ್ದೇನೆ. ನಾನು ಅವರನ್ನು ರಕ್ಷಿಸುವುದಕ್ಕಾಗಿ ಇಳಿದುಬಂದಿದ್ದೇನೆ. ಮೋಶೆಯೇ, ಈಗ ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುತ್ತಿದ್ದೇನೆ’ಉಲ್ಲೇಖನ: ವಿಮೋಚನ. 3:5-10. ಎಂದು ಹೇಳಿದನು.
35 “ಆ ಯೆಹೂದ್ಯರಿಂದ ತಿರಸ್ಕೃತನಾದವನೇ ಈ ಮೋಶೆ. ಅವರು ಅವನಿಗೆ, ‘ನಿನ್ನನ್ನು ನಮ್ಮ ಅಧಿಪತಿ ಎಂದಾಗಲಿ ನ್ಯಾಯಾಧೀಶ ಎಂದಾಗಲಿ ನಿನಗೆ ಯಾರಾದರೂ ಹೇಳಿದರೇ?’ ಎಂದು ಪ್ರಶ್ನಿಸಿದ್ದರು. ಆದರೆ ದೇವರು ಅಧಿಪತಿಯನ್ನಾಗಿಯೂ ವಿಮೋಚಕನನ್ನಾಗಿಯೂ ಕಳುಹಿಸಿದ್ದು ಆ ಮೋಶೆಯನ್ನೇ. ದೇವರು ತನ್ನ ದೂತನ ಮೂಲಕವಾಗಿ ಮೋಶೆಯನ್ನು ಕಳುಹಿಸಿದನು. ಉರಿಯುವ ಪೊದೆಯಲ್ಲಿ ಮೋಶೆಯು ಕಂಡದ್ದು ಈ ದೇವದೂತನನ್ನೇ. 36 ಆದ್ದರಿಂದ ಮೋಶೆಯು ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಅವನು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಈಜಿಪ್ಟಿನಲ್ಲಿಯೂ ಕೆಂಪುಸಮುದ್ರದಲ್ಲಿಯೂ ಮತ್ತು ನಲವತ್ತು ವರ್ಷಗಳ ಕಾಲ ಅರಣ್ಯದಲ್ಲಿಯೂ ಮಾಡಿದನು.
37 “ಈ ಮೋಶೆಯೇ ಯೆಹೂದ್ಯ ಜನರಿಗೆ, ‘ದೇವರು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ಆ ಪ್ರವಾದಿಯು ನಿಮ್ಮ ಸ್ವಜನರ ಮಧ್ಯದಿಂದಲೇ ಬರುವನು. ಅವನು ನನ್ನಂತೆಯೇ ಇರುವನು’ಉಲ್ಲೇಖನ: ಧರ್ಮೋಪದೇಶ. 18:15. ಎಂದು ಹೇಳಿದನು. 38 ಅರಣ್ಯದಲ್ಲಿ ಯೆಹೂದ್ಯರ ಸಮೂಹದೊಂದಿಗೆ ಇದ್ದವನು ಈ ಮೋಶೆಯೇ. ಸಿನಾಯ್ ಬೆಟ್ಟದ ಬಳಿ ತನ್ನೊಂದಿಗೆ ಮಾತಾಡಿದ ದೇವದೂತನೊಂದಿಗೆ ಅವನಿದ್ದನು. ಅಲ್ಲದೆ ಅವನು ನಮ್ಮ ಪಿತೃಗಳೊಂದಿಗೆ ಇದ್ದನು. ಜೀವಕರವಾದ ಆಜ್ಞೆಗಳನ್ನು ಮೋಶೆಯು ದೇವರಿಂದ ಸ್ವೀಕರಿಸಿಕೊಂಡು ಅವುಗಳನ್ನು ನಮಗೆ ಕೊಟ್ಟನು.
39 “ಆದರೆ ಮೋಶೆಗೆ ವಿಧೇಯರಾಗಲು ನಮ್ಮ ಪಿತೃಗಳಿಗೆ ಇಷ್ಟವಿರಲಿಲ್ಲ. ಅವರು ಅವನನ್ನು ತಿರಸ್ಕರಿಸಿ, ಈಜಿಪ್ಟಿಗೆ ಹಿಂತಿರುಗಬೇಕೆಂದಿದ್ದರು. 40 ನಮ್ಮ ಪಿತೃಗಳು ಆರೋನನಿಗೆ, ‘ಮೋಶೆಯು ನಮ್ಮನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದನು. ಆದರೆ ಅವನಿಗೆ ಏನಾಯಿತೋ ನಮಗೆ ಗೊತ್ತಿಲ್ಲ. ಆದ್ದರಿಂದ ನಮ್ಮ ಮುಂದೆ ಹೋಗಲು ಮತ್ತು ನಮ್ಮನ್ನು ನಡೆಸಲು ಕೆಲವು ದೇವರುಗಳನ್ನು ಮಾಡು’ಉಲ್ಲೇಖನ: ವಿಮೋಚನ. 32:1. ಎಂದರು. 41 ಆದ್ದರಿಂದ ಆ ಜನರು ಕರುವಿನಾಕೃತಿಯಲ್ಲಿ ಒಂದು ವಿಗ್ರಹವನ್ನು ಮಾಡಿ, ಅದಕ್ಕೆ ಯಜ್ಞಗಳನ್ನು ಅರ್ಪಿಸಿದರು. ಆ ಜನರು ತಮ್ಮ ಕೈಯಾರೆ ಮಾಡಿಕೊಂಡ ವಿಗ್ರಹದ ವಿಷಯದಲ್ಲಿ ಬಹು ಸಂತೋಷಪಟ್ಟರು! 42 ಆದರೆ ದೇವರು ಅವರಿಗೆ ವಿರೋಧವಾಗಿ, ಆಕಾಶದ ಸುಳ್ಳುದೇವರುಗಳನ್ನು ಪೂಜಿಸುವಂತೆ ಅವರನ್ನು ಬಿಟ್ಟುಬಿಟ್ಟನು. ಇದರ ಬಗ್ಗೆ ಪ್ರವಾದಿಗಳ ಪುಸ್ತಕದಲ್ಲಿ ಹೀಗೆ ಬರೆದಿದೆ: ದೇವರು ಹೀಗೆನ್ನುತ್ತಾನೆ,
 
‘ಯೆಹೂದ್ಯ ಜನರಾದ ನೀವು ನಲವತ್ತು ವರ್ಷಗಳ ಕಾಲ ಮರಳುಗಾಡಿನಲ್ಲಿದ್ದಾಗ ನನಗೆ ಯಜ್ಞಗಳನ್ನು ಅರ್ಪಿಸಲಿಲ್ಲ; ಕಾಣಿಕೆಗಳನ್ನು ತರಲಿಲ್ಲ.
43 ನೀವು ನಿಮ್ಮೊಂದಿಗೆ ಮೊಲೋಖನ (ಸುಳ್ಳುದೇವರ) ಗುಡಾರವನ್ನು
ಮತ್ತು ನಿಮ್ಮ ರೇಫಾ ದೇವತೆಯ ನಕ್ಷತ್ರರೂಪವನ್ನು ಹೊತ್ತುಕೊಂಡು ಹೋದಿರಿ.
ಆರಾಧಿಸುವುದಕ್ಕಾಗಿ ನೀವು ಮಾಡಿಕೊಂಡ ವಿಗ್ರಹಗಳೇ ಇವು.
ಆದ್ದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆಗೆ ಕಳುಹಿಸಿಬಿಡುವೆನು.’ ಆಮೋಸ 5:25-27
 
44 “ದೇವರು ನಮ್ಮ ಪಿತೃಗಳೊಂದಿಗೆ ಯಾವ ಗುಡಾರದಲ್ಲಿ ಮತಾಡಿದ್ದನೋ ಆ ಗುಡಾರವುಗುಡಾರ ಯಜ್ಞವೇದಿಕೆಯನ್ನು ಹೊಂದಿರುವ ದೇವಾಲಯದಂತೆ ಈ ಗುಡಾರವನ್ನು ಆರಾಧನಾ ಸ್ಥಳವನ್ನಾಗಿ ಉಪಯೋಗಿಸಲಾಗುತ್ತಿತ್ತು. ಇದನ್ನು ಸ್ಥಳದಿಂದ ಸ್ಥಳಕ್ಕೆ ತೆಗೆದುಕೊಂಡು ಹೋಗಬಹುದಾಗಿತ್ತು. ಈ ಯೆಹೂದ್ಯರೊಂದಿಗೆ ಮರಳುಗಾಡಿನಲ್ಲಿತ್ತು. ಈ ಗುಡಾರವನ್ನು ನಿರ್ಮಿಸುವ ಬಗೆಯನ್ನು ದೇವರು ಮೋಶೆಗೆ ತಿಳಿಸಿಕೊಟ್ಟನು. ದೇವರು ತನಗೆ ತೋರಿಸಿದ ಆಕಾರದಂತೆಯೇ ಮೋಶೆಯು ಅದನ್ನು ನಿರ್ಮಿಸಿದನು. 45 ತರುವಾಯ ಇತರ ಜನಾಂಗಗಳ ನಾಡುಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಯೆಹೋಶುವನು ನಮ್ಮ ಪಿತೃಗಳನ್ನು ಮುನ್ನಡೆಸಿದನು. ನಮ್ಮ ಜನರು ಆ ದೇಶದೊಳಗೆ ಹೋದಾಗ, ದೇವರು ಇತರ ಜನರನ್ನು ಅಲ್ಲಿಂದ ಹೊರಡಿಸಿಬಿಟ್ಟನು. ನಮ್ಮ ಜನರು ಆ ಹೊಸ ದೇಶದೊಳಗೆ ಹೋದಾಗ ಈ ಗುಡಾರವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ನಮ್ಮ ಜನರು ಈ ಗುಡಾರವನ್ನು ತಮ್ಮ ಪಿತೃಗಳಿಂದ ಸ್ವೀಕರಿಸಿಕೊಂಡು ದಾವೀದನ ಕಾಲದವರೆಗೂ ಅದನ್ನು ಇಟ್ಟುಕೊಂಡಿದ್ದರು. 46 ದೇವರು ದಾವೀದನನ್ನು ಬಹಳವಾಗಿ ಮೆಚ್ಚಿಕೊಂಡನು. ‘ಯಾಕೋಬನ ದೇವರಾದ ನಿನಗಾಗಿ ಒಂದು ಆಲಯವನ್ನು ಕಟ್ಟಲು ನನಗೆ ಅವಕಾಶಕೊಡು’ ಎಂದು ದಾವೀದನು ದೇವರನ್ನು ಕೇಳಿಕೊಂಡನು. 47 ಆದರೆ ದೇವಾಲಯವನ್ನು ಕಟ್ಟಿದ್ದು (ದಾವೀದನ ಮಗನಾದ) ಸೊಲೊಮೋನನೇ.
48 “ಆದರೆ ಮನುಷ್ಯರು ತಮ್ಮ ಕೈಯಾರೆ ನಿರ್ಮಿಸಿದ ಮನೆಗಳಲ್ಲಿ ಮಹೋನ್ನತನು (ದೇವರು) ವಾಸಿಸುವುದಿಲ್ಲ. ಪ್ರವಾದಿಯು ಹೀಗೆ ಬರೆದಿದ್ದಾನೆ:
 
49 ‘ಪ್ರಭುವು ಹೀಗೆನ್ನುತ್ತಾನೆ,
ಪರಲೋಕವು ನನ್ನ ಸಿಂಹಾಸನ.
ಭೂಮಿಯು ನನ್ನ ಪಾದಪೀಠ.
ನೀವು ನನಗೋಸ್ಕರ ಯಾವ ಬಗೆಯ ಮನೆಯನ್ನು ಕಟ್ಟಬಲ್ಲಿರಿ?
ನಾನು ವಿಶ್ರಮಿಸಿಕೊಳ್ಳತಕ್ಕ ಸ್ಥಳವೇ ಇಲ್ಲ!
50 ನೆನಪಿರಲಿ, ಈ ವಸ್ತುಗಳನ್ನೆಲ್ಲ ಮಾಡಿದವನು ನಾನೇ!’ ” ಯೆಶಾಯ 66:1-2
 
51 ಸ್ತೆಫನನು ಮಾತನ್ನು ಮುಂದುವರಿಸಿದನು: “ಮೊಂಡರಾದ ಯೆಹೂದ್ಯನಾಯಕರೇ! ನೀವು ನಿಮ್ಮ ಹೃದಯಗಳನ್ನು ದೇವರಿಗೆ ಕೊಟ್ಟಿಲ್ಲ. ನೀವು ಆತನಿಗೆ ಕಿವಿಗೊಡುವುದಿಲ್ಲ. ಪವಿತ್ರಾತ್ಮನು ನಿಮಗೆ ತಿಳಿಸಲು ಪ್ರಯತ್ನಿಸುತ್ತಿರುವ ವಿಷಯಕ್ಕೆ ನೀವು ಯಾವಾಗಲೂ ವಿರೋಧಿಗಳಾಗಿದ್ದೀರಿ. ನಿಮ್ಮ ಪಿತೃಗಳು ಹೀಗೆಯೇ ಮಾಡಿದರು ಮತ್ತು ನೀವೂ ಅವರಂತೆಯೇ ಇದ್ದೀರಿ! 52 ಜೀವಸಿದ್ದ ಪ್ರವಾದಿಗಳಲ್ಲಿ ಪ್ರತಿಯೊಬ್ಬರನ್ನೂ ನಿಮ್ಮ ಪಿತೃಗಳು ಹಿಂಸಿಸಿದರು. ನೀತಿವಂತನೊಬ್ಬನು (ಕ್ರಿಸ್ತನು) ಬರುತ್ತಾನೆಂದು ಬಹುಕಾಲದ ಹಿಂದೆಯೇ ಆ ಪ್ರವಾದಿಗಳು ತಿಳಿಸಿದ್ದರು. ಆದರೆ ನಿಮ್ಮ ಪಿತೃಗಳು ಆ ಪ್ರವಾದಿಗಳನ್ನು ಕೊಂದುಹಾಕಿದರು. ಈಗ ನೀವು ನೀತಿವಂತನಿಗೆ ವಿರುದ್ಧವಾಗಿ ತಿರುಗಿ ಆತನನ್ನು ಕೊಂದುಹಾಕಿದಿರಿ. 53 ದೇವರು ತನ್ನ ದೂತರ ಮೂಲಕ ಕೊಟ್ಟ ಮೋಶೆಯ ಧರ್ಮಶಾಸ್ತ್ರವನ್ನು ಪಡೆದುಕೊಂಡ ನೀವೇ ಅದಕ್ಕೆ ವಿಧೇಯರಾಗುವುದಿಲ್ಲ!”
ಸ್ತೆಫನನು ಕೊಲ್ಲಲ್ಪಟ್ಟನು
54 ಸ್ತೆಫನನ ಈ ಮಾತುಗಳನ್ನು ಕೇಳಿದ ಆ ಯೆಹೂದ್ಯನಾಯಕರು ಬಹಳ ಕೋಪಗೊಂಡರು. ಅವರು ರೋಷದಿಂದ ಸ್ತೆಫನನ ಮೇಲೆ ಹಲ್ಲು ಕಡಿದರು. 55 ಆದರೆ ಸ್ತೆಫನನು ಪವಿತ್ರಾತ್ಮಭರಿತನಾಗಿದ್ದನು. ಅವನು ಆಕಾಶದತ್ತ ಕಣ್ಣೆತ್ತಿ ನೋಡಿ, ದೇವರ ಮಹಿಮೆಯನ್ನೂ ಯೇಸುವು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ಕಂಡು, 56 “ಇಗೋ, ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನು (ಯೇಸು) ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ!” ಎಂದು ಹೇಳಿದನು.
57 ಆಗ ಯೆಹೂದ್ಯನಾಯಕರೆಲ್ಲ ಗಟ್ಟಿಯಾಗಿ ಕೂಗಿ, ತಮ್ಮ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡರು. ಅವರೆಲ್ಲರು ಸ್ತೆಫನನ ಬಳಿಗೆ ಒಟ್ಟಾಗಿ ಓಡಿಬಂದು, 58 ಅವನನ್ನು ಪಟ್ಟಣದಿಂದ ಹೊರಗೆ ಎಳೆದೊಯ್ದು, ಅವನು ಸಾಯುವವರೆಗೂ ಅವನ ಮೇಲೆ ಕಲ್ಲುಗಳನ್ನು ಎಸೆದರು. ಸ್ತೆಫನನ ವಿರುದ್ಧವಾಗಿ ಸುಳ್ಳು ಹೇಳಿದ ಜನರು ತಮ್ಮ ಮೇಲಂಗಿಗಳನ್ನು ಬಿಚ್ಚಿ ಸೌಲನೆಂಬ ಯುವಕನಿಗೆ ಕೊಟ್ಟು, 59 ಸ್ತೆಫನನಿಗೆ ಕಲ್ಲುಗಳನ್ನು ಎಸೆದರು. ಆದರೆ ಸ್ತೆಫನನು ಪ್ರಾರ್ಥಿಸುತ್ತಾ, “ಪ್ರಭುವಾದ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿಕೊ!” ಎಂದನು. 60 ಅವನು ಮೊಣಕಾಲೂರಿ, “ಪ್ರಭುವೇ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡ!” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು.

7:3: ಉಲ್ಲೇಖನ: ಆದಿಕಾಂಡ 12:1.

*7:4: ಖಾಲ್ದೆಯ ಅಥವಾ ಬಾಬಿಲೋನಿಯ.

7:7: ಉಲ್ಲೇಖನ: ಆದಿಕಾಂಡ 15:13-14.

7:7: ಉಲ್ಲೇಖನ: ಆದಿಕಾಂಡ 15:14; ವಿಮೋಚನ. 3:12.

7:28: ಉಲ್ಲೇಖನ: ವಿಮೋಚನ. 2:14.

7:32: ಉಲ್ಲೇಖನ: ವಿಮೋಚನ. 3:6.

7:34: ಉಲ್ಲೇಖನ: ವಿಮೋಚನ. 3:5-10.

7:37: ಉಲ್ಲೇಖನ: ಧರ್ಮೋಪದೇಶ. 18:15.

7:40: ಉಲ್ಲೇಖನ: ವಿಮೋಚನ. 32:1.

7:44: ಗುಡಾರ ಯಜ್ಞವೇದಿಕೆಯನ್ನು ಹೊಂದಿರುವ ದೇವಾಲಯದಂತೆ ಈ ಗುಡಾರವನ್ನು ಆರಾಧನಾ ಸ್ಥಳವನ್ನಾಗಿ ಉಪಯೋಗಿಸಲಾಗುತ್ತಿತ್ತು. ಇದನ್ನು ಸ್ಥಳದಿಂದ ಸ್ಥಳಕ್ಕೆ ತೆಗೆದುಕೊಂಡು ಹೋಗಬಹುದಾಗಿತ್ತು.