8
ಮಾಗಿದ ಹಣ್ಣಿನ ದರ್ಶನ
1 ಯೆಹೋವನು ನನಗೆ ಇದನ್ನು ತೋರಿಸಿದನು: ನಾನು ಒಂದು ಪುಟ್ಟಿ ಬೇಸಿಗೆಯ ಹಣ್ಣುಗಳನ್ನು ಕಂಡೆನು. 2 ಯೆಹೋವನು ನನಗೆ, “ಆಮೋಸನೇ, ನೀನು ಏನನ್ನು ನೋಡುತ್ತೀ?” ಎಂದು ಕೇಳಿದನು.
ಅದಕ್ಕೆ ನಾನು, “ಒಂದು ಪುಟ್ಟಿ ಬೇಸಿಗೆಯ ಹಣ್ಣುಗಳು” ಎಂದು ಹೇಳಿದೆನು.
ಆಗ ಯೆಹೋವನು ನನಗೆ, “ನನ್ನ ಜನರಾದ ಇಸ್ರೇಲರಿಗೆ ಅಂತ್ಯಕಾಲವು ಬಂದಿದೆ. ಇನ್ನು ಮೇಲೆ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ. 3 ನನ್ನ ಆಲಯದಲ್ಲಿ ಹಾಡುವ ಹಾಡುಗಳು ಮರಣದ ಶೋಕಗೀತೆಗಳಾಗುವವು. ಇವು ಕರ್ತನಾದ ಯೆಹೋವನ ನುಡಿಗಳು. ಸತ್ತಹೆಣಗಳು ಎಲ್ಲೆಲ್ಲಿಯೂ ಬಿದ್ದುಕೊಂಡಿರುವವು. ಜನರು ಮೌನದಿಂದಿದ್ದು ಸತ್ತವರನ್ನು ಎತ್ತಿ ರಾಶಿಗೆ ಬಿಸಾಡುವರು.”
ಇಸ್ರೇಲಿನ ವರ್ತಕರಿಗೆ ಹಣ ಸಂಪಾದಿಸುವದೇ ಗುರಿ
4 ನನ್ನ ಮಾತುಗಳನ್ನು ಕೇಳಿರಿ! ಜನರೇ, ನೀವು ಬಡವರ ಮೇಲೆ ನಡೆದಾಡುತ್ತೀರಿ.
ಈ ದೇಶದ ಬಡಜನರನ್ನು ನಾಶಮಾಡುತ್ತೀರಿ.
5 ವರ್ತಕರಾದ ನೀವು ಹೇಳುವುದೇನೆಂದರೆ,
“ಅಮಾವಾಸ್ಯೆ ಯಾವಾಗ ಮುಗಿಯುವುದು? ಆಗ ನಾವು ಧಾನ್ಯವನ್ನು ಮಾರಾಟ ಮಾಡುವೆವು.
ಸಬ್ಬತ್ ಯಾವಾಗ ಮುಗಿಯುವುದು?
ಆಗ ನಾವು ನಮ್ಮ ಗೋದಿಯನ್ನು ಮಾರಾಟ ಮಾಡಲು ತರುವೆವು.
ಅದರ ಬೆಲೆಯನ್ನು ಅಧಿಕಗೊಳಿಸಿ
ಅಳತೆಯನ್ನು ಕಡಿಮೆ ಮಾಡುವೆವು.
ತ್ರಾಸನ್ನು ಕಡಿಮೆ ಮಾಡಿ
ಜನರಿಗೆ ಮೋಸ ಮಾಡುವೆವು.
6 ಬಡಜನರಿಗೆ ಸಾಲ ಸಂದಾಯ ಮಾಡಲು ಸಾಧ್ಯವಾಗದಿರುವದರಿಂದ
ಅವರನ್ನು ನಾವು ಗುಲಾಮರನ್ನಾಗಿ ತೆಗೆದುಕೊಳ್ಳೋಣ.
ಒಂದು ಜೊತೆ ಚಪ್ಪಲಿಯ ಕ್ರಯಕೊಟ್ಟು
ಅವರನ್ನು ಖರೀದಿಸೋಣ.
ಮತ್ತು ನೆಲದಲ್ಲಿ ಬಿದ್ದ ಗೋದಿಯನ್ನು
ಒಟ್ಟುಗೂಡಿಸಿ ಮಾರೋಣ.”
7 ಯೆಹೋವನು “ಯಾಕೋಬನ ಮಹಿಮೆ” ಎಂಬ ತನ್ನ ಹೆಸರಿನ ಮೇಲೆ ಆಣೆಯಿಟ್ಟು ವಾಗ್ದಾನ ಮಾಡಿದ್ದಾನೆ.
“ಆ ಜನರು ಮಾಡಿದ ಕೃತ್ಯಗಳನ್ನು ನಾನು ಎಂದಿಗೂ ಮರೆಯುವುದಿಲ್ಲ.
8 ಅದರ ಸಲುವಾಗಿ ಇಡೀ ದೇಶವು ಅಲುಗಾಡುವದು.
ಸತ್ತವರಿಗಾಗಿ ದೇಶದ ಪ್ರತಿ ನಿವಾಸಿಯೂ ರೋಧಿಸುವನು.
ಈಜಿಪ್ಟಿನ ನೈಲ್ ನದಿಯ ರೀತಿಯಲ್ಲಿ ದೇಶವು ತಿರುಗುಮುರುಗಾಗುವುದು.”
9 ಯೆಹೋವನು ಹೀಗೆನ್ನುತ್ತಾನೆ,
“ಆ ದಿವಸಗಳಲ್ಲಿ ನಡುಮಧ್ಯಾಹ್ನದಲ್ಲಿಯೇ ಸೂರ್ಯನನ್ನು ಮುಳುಗುವಂತೆ ಮಾಡುವೆನು.
ಶುಭ್ರವಾದ ಹಗಲಿನಲ್ಲಿ ಕತ್ತಲು ಉಂಟಾಗುವಂತೆ ಮಾಡುವೆನು.
10 ನಿಮ್ಮ ಸಂತಸದ ದಿವಸಗಳನ್ನು ಸತ್ತವರಿಗಾಗಿ ರೋದಿಸುವ ದಿವಸಗಳನ್ನಾಗಿ ಮಾಡುವೆನು.
ನಿಮ್ಮ ಹಾಡುಗಳೆಲ್ಲಾ ಶೋಕಗೀತೆಯಾಗುವವು.
ಎಲ್ಲರೂ ಶೋಕಬಟ್ಟೆಯನ್ನು ಧರಿಸುವಂತೆ ಮಾಡುವೆನು.
ಪ್ರತಿ ತಲೆಯನ್ನು ಬೋಳು ತಲೆಯನ್ನಾಗಿ ಮಾಡುವೆನು.
ಒಬ್ಬನೇ ಮಗನನ್ನು ಕಳೆದುಕೊಳ್ಳುವಾಗ ರೋದಿಸುವ ಹಾಗೆ
ಗಟ್ಟಿಯಾಗಿ ರೋದಿಸುವಂತೆ ಮಾಡುತ್ತೇನೆ.
ಅದರ ಅಂತ್ಯ ಕಹಿಯಾಗಿರುವುದು.”
ದೇವರ ವಾಕ್ಯಕ್ಕಾಗಿ ಅತಿಯಾದ ಹಸಿವೆಯಿಂದ ಕೇಳುವ ದಿವಸಗಳು ಬರುವವು
11 ಯೆಹೋವನು ಹೇಳುವುದೇನೆಂದರೆ,
“ನಿಮ್ಮ ದೇಶದಲ್ಲಿ ಹಸಿವೆಯ
ದಿವಸಗಳನ್ನು ಬರಮಾಡುವೆನು.
ಜನರು ರೊಟ್ಟಿಗಾಗಿ ಹಸಿಯುವುದಿಲ್ಲ.
ನೀರಿಗಾಗಿ ಬಾಯಾರುವದಿಲ್ಲ.
ಇಲ್ಲ! ಜನರು ಯೆಹೋವನ ವಾಕ್ಯಕ್ಕಾಗಿ ಹಸಿವೆಯುಳ್ಳವರಾಗುವರು.
12 ಮೃತ್ಯುಸಮುದ್ರದಿಂದ ಮೆಡಿಟರೇನಿಯನ್ ಸಮುದ್ರದ ತನಕ,
ಉತ್ತರದಿಂದ ಪೂರ್ವದಿಕ್ಕಿನ ತನಕ ಜನರು
ಯೆಹೋವನ ಸಂದೇಶಕ್ಕಾಗಿ ಹಾತೊರೆಯುತ್ತಾ ಅಲೆದಾಡುವರು.
ಆದರೆ ಅವರು ಕಂಡುಕೊಳ್ಳುವುದಿಲ್ಲ.
13 ಆ ಸಮಯದಲ್ಲಿ ಸುಂದರವಾದ
ತರುಣತರುಣಿಯರು ದಾಹದಿಂದ ಬಳಲುವರು.
14 ಆ ಜನರು ಸಮಾರ್ಯದ ಪಾಪದ*ಸಮಾರ್ಯದ ಪಾಪ ಅಂದರೆ ಬಸವನ ವಿಗ್ರಹ. ಮೇಲೆ ಆಣೆಯಿಡುವರು,
‘ದಾನೇ, ನಿನ್ನ ದೇವರಾಣೆ ….’
‘ಬೇರ್ಷೆಬದ ದೇವರಾಣೆ ….’ ಎಂಬುದಾಗಿ ಹೇಳುವರು.
ಆದರೆ ಆ ಜನರು ಬಿದ್ದುಹೋಗುವರು.
ಅಲ್ಲಿಂದ ತಿರುಗಿ ಏಳುವದೇ ಇಲ್ಲ.”