21
ಇತರ ಕಟ್ಟಳೆಗಳು ಮತ್ತು ಆಜ್ಞೆಗಳು
1 ಬಳಿಕ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನೀನು ಜನರಿಗೆ ನೇಮಿಸಬೇಕಾದ ಇತರ ಕಟ್ಟಳೆಗಳು ಯಾವುವೆಂದರೆ:
2 “ನೀವು ಇಬ್ರಿಯ ಗುಲಾಮನನ್ನು ಕೊಂಡುಕೊಂಡರೆ, ಆ ಗುಲಾಮನು ಆರು ವರ್ಷಗಳವರೆಗೆ ಮಾತ್ರ ನಿಮ್ಮ ಸೇವೆಮಾಡುವನು. ಆರು ವರ್ಷಗಳ ನಂತರ, ಅವನು ಬಿಡುಗಡೆಯಾಗುವನು, ಅವನು ಏನೂ ಕೊಡಬೇಕಾಗಿರುವುದಿಲ್ಲ. 3 ಅವನು ನಿಮ್ಮ ಗುಲಾಮನಾಗುವಾಗ ಮದುವೆಯಾಗಿಲ್ಲದಿದ್ದರೆ, ಅವನು ಬಿಡುಗಡೆ ಹೊಂದುವಾಗಲೂ ಹೆಂಡತಿಯಿಲ್ಲದವನಾಗಿ ಹೋಗುವನು. ಆದರೆ ಅವನು ನಿಮ್ಮ ಗುಲಾಮನಾಗುವಾಗ ಮದುವೆಯಾಗಿದ್ದರೆ ಅವನು ಬಿಡುಗಡೆ ಹೊಂದುವಾಗ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗುವನು. 4 ಗುಲಾಮನು ಮದುವೆಯಾಗಿಲ್ಲದಿದ್ದರೆ, ಅವನ ಯಜಮಾನನು ಅವನಿಗೆ ಮದುವೆ ಮಾಡಿಸಬಹುದು. ಆ ಸ್ತ್ರೀಯು ಮಕ್ಕಳನ್ನು ಹೆತ್ತರೆ, ಆಕೆಯೂ ಆಕೆಯ ಮಕ್ಕಳೂ ಯಜಮಾನನ ಸ್ವತ್ತಾಗುವರು. ಗುಲಾಮನು ತನ್ನ ಸೇವಾ ವರ್ಷಗಳನ್ನು ಮುಗಿಸಿದ ತರುವಾಯ ಬಿಡುಗಡೆ ಹೊಂದುವನು.
5 “ಆದರೆ ಒಂದುವೇಳೆ ಆ ಗುಲಾಮನು ತನ್ನ ಯಜಮಾನನ ಸಂಗಡವಿರಲು ದೃಢವಾಗಿ ಬಯಸಿದರೆ ಅವನು, ‘ನಾನು ನನ್ನ ಯಜಮಾನನನ್ನು ಪ್ರೀತಿಸುತ್ತೇನೆ. ನಾನು ನನ್ನ ಹೆಂಡತಿಯನ್ನೂ ಮಕ್ಕಳನ್ನೂ ಪ್ರೀತಿಸುತ್ತೇನೆ. ನಾನು ಬಿಡುಗಡೆ ಹೊಂದದೆ ಇಲ್ಲೇ ಇರುವೆನು’ ಎಂದು ಹೇಳಬೇಕು. 6 ಹೀಗಾದರೆ ಯಜಮಾನನು ಆ ಗುಲಾಮನನ್ನು ದೇವರ ಸನ್ನಿಧಿಗೆ*ದೇವರ ಸನ್ನಿಧಿ ನ್ಯಾಯಾಧಿಪತಿಗಳನ್ನು “ದೇವರು” ಎಂದು ಕರೆಯಲಾಗುತ್ತಿತ್ತು. ಯಜಮಾನನು ಗುಲಾಮನನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುತ್ತಾನೆ ಎಂಬರ್ಥವನ್ನು ಕೊಡುತ್ತದೆ. ಕರೆದುಕೊಂಡು ಬರುವನು. ಯಜಮಾನನು ಗುಲಾಮನನ್ನು ಬಾಗಿಲ ಬಳಿಗೆ ಅಥವಾ ಬಾಗಿಲಿನ ಮರದ ನಿಲುವುಪಟ್ಟಿಗಳ ಬಳಿಗೆ ಕರೆದುಕೊಂಡು ಬರುವನು. ಯಜಮಾನನು ಗುಲಾಮನ ಕಿವಿಗೆ ಚೂಪಾದ ಸಲಾಕೆಯಿಂದ ರಂಧ್ರ ಮಾಡುವನು. ಆಗ ಗುಲಾಮನು ತನ್ನ ಜೀವಮಾನಪರ್ಯಂತ ಆ ಯಜಮಾನನಿಗೆ ಸೇವೆ ಮಾಡುವನು.
7 “ಒಬ್ಬನು ತನ್ನ ಮಗಳನ್ನು ಗುಲಾಮಳನ್ನಾಗಿ ಮಾರಲು ತೀರ್ಮಾನಿಸಿದರೆ, ಆಕೆಯನ್ನು ಬಿಡುಗಡೆಗೊಳಿಸುವ ನಿಯಮಗಳು ಗುಲಾಮರಾದ ಪುರುಷರನ್ನು ಬಿಡುಗಡೆಗೊಳಿಸುವ ನಿಯಮಗಳ ಪ್ರಕಾರ ಇರುವುದಿಲ್ಲ. 8 ಯಜಮಾನನು ತನಗಾಗಿ ಆರಿಸಿಕೊಂಡ ಗುಲಾಮಳನ್ನು ಇಷ್ಟಪಡದಿದ್ದರೆ, ಅವಳನ್ನು ಬಿಡುಗಡೆ ಮಾಡಬಹುದು. (ಅವಳ ತಂದೆಗೆ ಅವಳನ್ನು ಮಾರಬಹುದು.) ಅವಳನ್ನು ವಿದೇಶಿಯರಿಗೆ ಮಾರುವ ಹಕ್ಕನ್ನು ಯಜಮಾನನು ಕಳೆದುಕೊಳ್ಳುತ್ತಾನೆ; ಯಾಕೆಂದರೆ ಆಕೆಯಲ್ಲಿ ಅವನಿಗಿದ್ದ ನಂಬಿಕೆಯು ಮುರಿದುಹೋಯಿತು. 9 ಯಜಮಾನನು ಗುಲಾಮಳನ್ನು ತನ್ನ ಸ್ವಂತ ಮಗನಿಗೆ ಮದುವೆ ಮಾಡಿಸುವುದಾಗಿ ವಾಗ್ದಾನ ಮಾಡಿದರೆ, ಅವಳನ್ನು ಗುಲಾಮಳನ್ನಾಗಿ ನೋಡಿಕೊಳ್ಳದೆ ಸೊಸೆಯಾಗಿ ನೋಡಿಕೊಳ್ಳಬೇಕು.
10 “ಯಜಮಾನನು ಇನ್ನೊಬ್ಬ ಸ್ತ್ರೀಯನ್ನು ಮದುವೆಯಾದರೆ, ಅವನು ತನ್ನ ಮೊದಲನೆಯ ಹೆಂಡತಿಗೆ ಅವನು ಕೊಡುವ ಆಹಾರ ಅಥವಾ ಬಟ್ಟೆಬರೆಗಳಲ್ಲಿ ಏನೂ ಕಡಿಮೆ ಮಾಡಬಾರದು; ಮದುವೆಯ ಮೂಲಕ ಆಕೆಯು ಯಾವ್ಯಾವ ವಸ್ತುಗಳನ್ನು ಹೊಂದಲು ಹಕ್ಕು ಪಡೆದಿರುತ್ತಾಳೊ ಅವೆಲ್ಲವನ್ನು ಅವನು ಆಕೆಗೆ ಕೊಡಬೇಕು. 11 ಅವನು ಆಕೆಗಾಗಿ ಈ ಮೂರು ಸಂಗತಿಗಳನ್ನು ಮಾಡಬೇಕು. ಇಲ್ಲವಾದರೆ ಅವಳು ಬಿಡುಗಡೆಯಾಗಿದ್ದಾಳೆ. ಅವಳು ಅವನಿಗೆ ಯಾವ ಸಾಲವನ್ನೂ ತೀರಿಸಬೇಕಾಗಿಲ್ಲ.
12 “ಒಬ್ಬನು ಮತ್ತೊಬ್ಬನನ್ನು ಹೊಡೆದು ಕೊಂದರೆ, ಅವನೂ ಕೊಲ್ಲಲ್ಪಡಬೇಕು. 13 ಆದರೆ ಕೊಲ್ಲಬೇಕೆಂಬ ಉದ್ದೇಶವಿಲ್ಲದೆ ಹೊಡೆದಾಗ ಸತ್ತುಹೋದರೆ ಅದು ದೇವರ ಸಂಕಲ್ಪವೆಂದು ಪರಿಗಣಿಸಬೇಕು. ನಾನು ನೇಮಿಸಲಿರುವ ಆಶ್ರಯಸ್ಥಳಗಳಿಗೆ ಹೊಡೆದವನು ಓಡಿಹೋಗಿ ಸುರಕ್ಷಿತವಾಗಿ ಬದುಕಲಿ. 14 ಆದರೆ ಒಬ್ಬನು ಕೋಪದಿಂದಾಗಲಿ ದ್ವೇಷದಿಂದಾಗಲಿ ಇನ್ನೊಬ್ಬನನ್ನು ಕೊಂದರೆ, ಆ ಕೊಲೆಗಾರನಿಗೆ ದಂಡನೆಯಾಗಬೇಕು. ನನ್ನ ಯಜ್ಞವೇದಿಕೆಯಿಂದ ಅವನನ್ನು ದೂರಕ್ಕೆ ತೆಗೆದುಕೊಂಡು ಹೋಗಿ ಕೊಲ್ಲಬೇಕು.
15 “ತಂದೆಯನ್ನಾಗಲಿ ತಾಯಿಯನ್ನಾಗಲಿ ಹೊಡೆಯುವವನನ್ನು ಕೊಲ್ಲಬೇಕು.
16 “ಯಾವನಾದರೂ ಮತ್ತೊಬ್ಬನನ್ನು ಕದ್ದು ಗುಲಾಮನನ್ನಾಗಿ ಮಾರಿದರೆ ಅಥವಾ ತನ್ನ ಗುಲಾಮನನ್ನಾಗಿ ಮಾಡಿಕೊಂಡರೆ ಅವನಿಗೆ ಮರಣಶಿಕ್ಷೆಯಾಗಬೇಕು.
17 “ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವವನನ್ನೂ ಕೊಲ್ಲಬೇಕು.
18 “ಇಬ್ಬರು ಜಗಳವಾಡುತ್ತಿರುವಾಗ ಒಬ್ಬನನ್ನು ಕಲ್ಲಿನಿಂದಾಗಲಿ ಮುಷ್ಟಿಯಿಂದಾಗಲಿ ಹೊಡೆದಾಗ, ಪೆಟ್ಟಾದ ಮನುಷ್ಯನು ಸಾಯದಿದ್ದರೆ, ಹೊಡೆದವನನ್ನು ಕೊಲ್ಲಬಾರದು. 19 ಗಾಯಗೊಂಡವನು ಕೆಲವು ಕಾಲದವರೆಗೆ ಹಾಸಿಗೆಯಲ್ಲಿರಬೇಕಾದರೆ, ಬಳಿಕ ಅವನು ಎದ್ದು ಊರುಗೋಲಿನ ಸಹಾಯದಿಂದ ನಡೆಯಬಲ್ಲವನಾದರೆ, ಹೊಡೆದವನು ಅವನನ್ನು ಆರೈಕೆ ಮಾಡಬೇಕು. ಗಾಯಗೊಂಡವನು ಕೆಲಸಮಾಡಲಾರದೆ ಹೋದ ಸಮಯಕ್ಕೆ ಹೊಡೆದವನು ಹಣ ಕೊಡಬೇಕು; ಅವನು ಸಂಪೂರ್ಣ ವಾಸಿಯಾಗುವವರೆಗೆ ಆರೈಕೆ ಮಾಡಬೇಕು.
20 “ಕೆಲವು ಸಲ ಯಜಮಾನರು ಗುಲಾಮನನ್ನಾಗಲಿ ಗುಲಾಮಳನ್ನಾಗಲಿ ಹೊಡೆಯುತ್ತಾರೆ. ಹೊಡೆದಾಗ ಆ ವ್ಯಕ್ತಿಯು ಸತ್ತರೆ, ಯಜಮಾನನಿಗೆ ಶಿಕ್ಷೆಯಾಗಬೇಕು. 21 ಆದರೆ ಆ ವ್ಯಕ್ತಿಯು ಸಾಯದೆ ಕೆಲವು ದಿನಗಳ ನಂತರ ಗುಣವಾದರೆ ಯಜಮಾನನಿಗೆ ಶಿಕ್ಷೆಯಾಗಬಾರದು. ಯಾಕೆಂದರೆ ಯಜಮಾನನು ಹಣವನ್ನು ಕೊಟ್ಟು ಆ ವ್ಯಕ್ತಿಯನ್ನು ಕೊಂಡುಕೊಂಡಿದ್ದಾನೆ ಮತ್ತು ಆ ವ್ಯಕ್ತಿಯು ಅವನ ಸ್ವತ್ತಾಗಿದ್ದಾನೆ.
22 “ಇಬ್ಬರು ಜಗಳವಾಡುವಾಗ ಗರ್ಭಿಣೆ ಸ್ತ್ರೀಗೆ ಪೆಟ್ಟಾಗಿ ಗರ್ಭಸ್ರಾವವಾದರೆ ಅದಕ್ಕೆ ಕಾರಣನಾದ ವ್ಯಕ್ತಿಯು ಅವಳಿಗೆ ದಂಡ ಕೊಡಬೇಕು. ಅವನು ಎಷ್ಟು ದಂಡ ಕೊಡಬೇಕೆಂಬುದನ್ನು ಅವಳ ಗಂಡನು ನ್ಯಾಯಾಧಿಪತಿಗಳ ಸಹಾಯದಿಂದ ತೀರ್ಮಾನಿಸುವನು. 23 ಆದರೆ ಆ ಸ್ತ್ರೀಯು ತೀರಿಕೊಂಡರೆ ಅದಕ್ಕೆ ಕಾರಣನಾದವನಿಗೆ ಮರಣದಂಡನೆಯಾಗಬೇಕು. ನೀವು ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡಿಸಬೇಕು. 24 ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಪ್ರತಿಯಾಗಿ ಹಲ್ಲು, ಕೈಗೆ ಪ್ರತಿಯಾಗಿ ಕೈ, ಕಾಲಿಗೆ ಪ್ರತಿಯಾಗಿ ಕಾಲು, 25 ಬರೆಗೆ ಪ್ರತಿಯಾಗಿ ಬರೆ, ಗಾಯಕ್ಕೆ ಪ್ರತಿಯಾಗಿ ಗಾಯ, ಏಟಿಗೆ ಪ್ರತಿಯಾಗಿ ಏಟು, ಈ ಮೇರೆಗೆ ಪ್ರತಿದಂಡನೆಯಾಗಬೇಕು.
26 “ಯಜಮಾನನು ಗುಲಾಮನಿಗೆ ಹೊಡೆದಾಗ ಗುಲಾಮನು ಕುರುಡನಾದರೆ, ಆ ಗುಲಾಮನು ಬಿಡುಗಡೆ ಹೊಂದಿದ್ದಾನೆ. ಅವನು ತನ್ನ ಬಿಡುಗಡೆಗೆ ತನ್ನ ಕಣ್ಣನ್ನೇ ಪ್ರತಿಯಾಗಿ ಕೊಟ್ಟಿದ್ದಾನೆ. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿಯೂ ಇದೇ ನಿಯಮ ಅನ್ವಯಿಸುತ್ತದೆ. 27 ಯಜಮಾನನು ಗುಲಾಮನ ಬಾಯಿಗೆ ಹೊಡೆದದ್ದರಿಂದ, ಗುಲಾಮನು ತನ್ನ ಹಲ್ಲನ್ನು ಕಳೆದುಕೊಂಡರೆ, ಆ ಗುಲಾಮನ ಹಲ್ಲು ಅವನ ಬಿಡುಗಡೆಗೆ ಕೊಟ್ಟ ಹಣವಾಗಿದೆ. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿ ಇದೇ ನಿಯಮವು ಅನ್ವಯಿಸುತ್ತದೆ.
28 “ಒಬ್ಬನ ಎತ್ತು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಕೊಂದರೆ, ಆಗ ನೀವು ಕಲ್ಲುಗಳಿಂದ ಆ ಎತ್ತನ್ನು ಕೊಲ್ಲಬೇಕು. ನೀವು ಅದರ ಮಾಂಸವನ್ನು ತಿನ್ನಬಾರದು. ಆದರೆ ಎತ್ತಿನ ಮಾಲಿಕನು ತಪ್ಪಿಸಸ್ಥನಲ್ಲ. 29 ಆದರೆ ಹಿಂದೊಮ್ಮೆ ಆ ಎತ್ತು ಜನರಿಗೆ ತಿವಿದಿದ್ದು, ಅದರ ಮಾಲಿಕನಿಗೆ ಇದರ ವಿಷಯದಲ್ಲಿ ಎಚ್ಚರಿಕೆ ನೀಡಿದ್ದರೆ ಆಗ ಆ ಮಾಲಿಕನು ತಪ್ಪಿತಸ್ಥನಾಗಿದ್ದಾನೆ. ಯಾಕೆಂದರೆ ಅವನು ಆ ಎತ್ತನ್ನು ಕಟ್ಟಿಹಾಕಲಿಲ್ಲ ಅಥವಾ ಅದರ ಸ್ಥಳದಲ್ಲಿ ಬಂಧಿಸಿರಲಿಲ್ಲ. ಆದ್ದರಿಂದ ಎತ್ತನ್ನು ಕಟ್ಟಿಹಾಕದೆ ಇದ್ದುದರಿಂದ, ಅದು ಯಾರನ್ನಾದರೂ ಕೊಂದರೆ, ಆಗ ಆ ಮಾಲಿಕನು ತಪ್ಪಿತಸ್ಥನಾಗಿದ್ದಾನೆ. ನೀವು ಎತ್ತನ್ನು ಕಲ್ಲೆಸೆದು ಕೊಲ್ಲಬೇಕಲ್ಲದೆ ಅದರ ಮಾಲಿಕನನ್ನೂ ಕೊಲ್ಲಬೇಕು. 30 ಆದರೆ ಸತ್ತವನ ಕುಟುಂಬದವರು ಅವನಿಂದ ಹಣವನ್ನು ಕೇಳಿದರೆ ಮತ್ತು ಅವನು ಹಣವನ್ನು ಕೊಟ್ಟರೆ, ಅವನು ತನ್ನ ಜೀವವನ್ನು ಬಿಡಿಸಿಕೊಂಡಂತಾಗುವುದು. ಆಗ ಆ ಎತ್ತಿನ ಮಾಲಿಕನನ್ನು ಕೊಲ್ಲಬಾರದು. ಆದರೆ ನ್ಯಾಯಾಧಿಪತಿಗಳು ತೀರ್ಮಾನಿಸುವಷ್ಟು ಹಣವನ್ನು ಅವನು ಕೊಡಬೇಕು.
31 “ಎತ್ತು ಒಬ್ಬನ ಮಗನನ್ನಾಗಲಿ ಅಥಲಾ ಮಗಳನ್ನಾಗಲಿ ಕೊಂದರೆ ಇದೇ ನಿಯಮವನ್ನು ಪಾಲಿಸಬೇಕು. 32 ಆದರೆ ಎತ್ತು ಗುಲಾಮನನ್ನು ಕೊಂದರೆ, ಆಗ ಆ ಪಶುವಿನ ಮಾಲಿಕನು ಗುಲಾಮನ ಯಜಮಾನನಿಗೆ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಕೊಡಬೇಕು ಮತ್ತು ಎತ್ತನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕು. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿ ಇದೇ ನಿಯಮವನ್ನು ಪಾಲಿಸಬೇಕು.
33 “ಒಬ್ಬ ಮನುಷ್ಯನು ಕುಣಿಯೊಂದನ್ನು ತೋಡಿ ಅದನ್ನು ಮುಚ್ಚಿಲ್ಲದಿದ್ದರೆ ಮತ್ತು ಆ ಕುಣಿಯಲ್ಲಿ ಬೇರೊಬ್ಬನ ಪಶುವು ಬಿದ್ದು ಸತ್ತುಹೋದರೆ, 34 ಕುಣಿಯನ್ನು ತೋಡಿದವನು ಆ ಪಶುವಿಗೆ ಪ್ರತಿಯಾಗಿ ಈಡುಕೊಡಬೇಕು. ಅವನು ಈಡುಕೊಟ್ಟ ನಂತರ ಆ ಸತ್ತ ಪಶುವು ಅವನದಾಗುತ್ತದೆ.
35 “ಒಬ್ಬನ ಎತ್ತು ಇನ್ನೊಬ್ಬನ ಎತ್ತನ್ನು ಹಾದು ಕೊಂದರೆ ಆಗ ಜೀವಂತವಾಗಿರುವ ಎತ್ತನ್ನು ಮಾರಬೇಕು. ಆ ಎತ್ತನ್ನು ಮಾರಿದ್ದರಿಂದ ಬಂದ ಹಣವನ್ನು ಸಮವಾಗಿ ಹಂಚಿಕೊಳ್ಳಬೇಕು. ಕೊಲ್ಲಲ್ಪಟ್ಟ ಎತ್ತನ್ನು ಸಮವಾಗಿ ಹಂಚಿಕೊಳ್ಳಬೇಕು. 36 ಆದರೆ ಒಬ್ಬನ ಎತ್ತು ಮೊದಲೊಮ್ಮೆ ಇತರ ಪಶುಗಳಿಗೆ ಗಾಯಮಾಡಿದ್ದರೆ, ಅದರ ಮಾಲಿಕನು ಅದನ್ನು ಕಟ್ಟಿಹಾಕದೆ ಇದ್ದುದರ ನಿಮಿತ್ತ ತಪ್ಪಿತಸ್ಥನಾಗಿದ್ದಾನೆ. ಅವನು ಸತ್ತ ಎತ್ತಿಗೆ ಪ್ರತಿಯಾಗಿ ಸ್ವಂತ ಎತ್ತನ್ನು ಕೊಡಬೇಕು. ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬೇಕು.
*21:6: ದೇವರ ಸನ್ನಿಧಿ ನ್ಯಾಯಾಧಿಪತಿಗಳನ್ನು “ದೇವರು” ಎಂದು ಕರೆಯಲಾಗುತ್ತಿತ್ತು. ಯಜಮಾನನು ಗುಲಾಮನನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುತ್ತಾನೆ ಎಂಬರ್ಥವನ್ನು ಕೊಡುತ್ತದೆ.