25
ಪವಿತ್ರ ವಸ್ತುಗಳಿಗಾಗಿ ಕಾಣಿಕೆಗಳು
1 ಯೆಹೋವನು ಮೋಶೆಗೆ, 2 “ಇಸ್ರೇಲರು ನನಗೆ ಕಾಣಿಕೆಗಳನ್ನು ತರಬೇಕೆಂದು ಅವರಿಗೆ ಹೇಳು. ಪ್ರತಿಯೊಬ್ಬನು ನನಗೆ ಕೊಡುವುದರ ಬಗ್ಗೆ ತನ್ನ ಹೃದಯದಲ್ಲಿ ತೀರ್ಮಾನಿಸಿಕೊಳ್ಳಬೇಕು. ಈ ಕಾಣಿಕೆಗಳನ್ನು ನನಗಾಗಿ ಸ್ವೀಕರಿಸು. 3 ಜನರಿಂದ ನೀನು ಸ್ವೀಕರಿಸಬೇಕಾದ ವಸ್ತುಗಳ ಪಟ್ಟಿ ಇಲ್ಲಿದೆ: ಚಿನ್ನ, ಬೆಳ್ಳಿ, ತಾಮ್ರ, 4 ನೀಲಿ, ನೇರಳೆ, ಕೆಂಪುದಾರ, ನಾರುಬಟ್ಟೆ, ಆಡು ಕೂದಲಿನ ಬಟ್ಟೆ, 5 ಕೆಂಪುಬಣ್ಣದ ಕುರಿದೊಗಲು, ಉತ್ತಮ ತೊಗಲುಗಳು,*ಉತ್ತಮ ತೊಗಲು ಕಡಲು ಹಂದಿಯ ಅಥವಾ ಕಡಲು ದನದ ತೊಗಲು. ಜಾಲೀಮರ, 6 ದೀಪಗಳಿಗೆ ಬೇಕಾದ ಎಣ್ಣೆ, ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳು, 7 ಏಪೋದಿಗೆ ದೈವನಿರ್ಣಯದ ಪದಕಚೀಲಕ್ಕೆ ಬೇಕಾದ ಗೋಮೇಧಕ ರತ್ನಗಳು ಮತ್ತು ಇತರ ರತ್ನಗಳು” ಎಂದು ಹೇಳಿದನು.
ಪವಿತ್ರ ಗುಡಾರ
8 ಇದಲ್ಲದೆ ದೇವರು ಮೋಶೆಗೆ, “ಜನರು ನನಗೋಸ್ಕರವಾಗಿ ಒಂದು ಪವಿತ್ರ ಗುಡಾರವನ್ನು ಕಟ್ಟಬೇಕು. ಆಗ ನಾನು ಅವರ ನಡುವೆ ಅದರಲ್ಲಿ ವಾಸಿಸುವೆನು. 9 ಪವಿತ್ರ ಗುಡಾರ ಮತ್ತು ಅದರಲ್ಲಿರುವ ಪ್ರತಿಯೊಂದು ವಸ್ತುವೂ ಹೇಗಿರಬೇಕೆಂದು ನಾನು ನಿನಗೆ ತೋರಿಸುವೆನು. ನಾನು ನಿನಗೆ ತೋರಿಸುವ ಮಾದರಿಯ ಪ್ರಕಾರವೇ ಪ್ರತಿಯೊಂದನ್ನು ಮಾಡು.
ಒಡಂಬಡಿಕೆಯ ಪೆಟ್ಟಿಗೆ
10 “ಜಾಲೀಮರದಿಂದ ಒಂದು ವಿಶೇಷ ಪೆಟ್ಟಿಗೆಯನ್ನು ಮಾಡಿಸು. ಈ ಪವಿತ್ರ ಪೆಟ್ಟಿಗೆಯು ಎರಡೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರ ಇರಬೇಕು. 11 ಅದರ ಹೊರಮೈಯನ್ನು ಮತ್ತು ಒಳಮೈಯನ್ನು ಅಪ್ಪಟ ಬಂಗಾರದಿಂದ ಹೊದಿಸಬೇಕು. ಪೆಟ್ಟಿಗೆಯ ಅಂಚುಗಳ ಸುತ್ತಲೂ ಚಿನ್ನದ ಗೋಟು ಕಟ್ಟಿಸಬೇಕು. 12 ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಅನುಕೂಲವಾಗುವಂತೆ ನಾಲ್ಕು ಚಿನ್ನದ ಬಳೆಗಳನ್ನು ಎರಕಹೊಯ್ಯಬೇಕು. ನಾಲ್ಕು ಮೂಲೆಗಳಲ್ಲಿ ಅಂದರೆ ಒಂದೊಂದು ಕಡೆಯಲ್ಲಿ ಎರಡೆರಡು ಬಳೆಗಳನ್ನು ಇಡಬೇಕು. 13 ಬಳಿಕ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಅನುಕೂಲವಾಗುವಂತೆ ಕಂಬಗಳನ್ನು ಮಾಡಬೇಕು. ಈ ಕಂಬಗಳನ್ನು ಜಾಲೀಮರದಿಂದ ಮಾಡಿ ಬಂಗಾರದಿಂದ ಹೊದಿಸಬೇಕು. 14 ಕಂಬಗಳನ್ನು ಪೆಟ್ಟಿಗೆ ಕೊನೆಗಳಲ್ಲಿರುವ ಬಳೆಗಳಲ್ಲಿ ಸೇರಿಸಿ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಬೇಕು. 15 ಕಂಬಗಳು ಯಾವಾಗಲೂ ಪೆಟ್ಟಿಗೆಯ ಬಳೆಗಳಲ್ಲಿ ಇರಬೇಕು. ಕಂಬಗಳನ್ನು ಅವುಗಳಿಂದ ಹೊರಗೆ ತೆಗೆಯಬಾರದು.
16 “ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಅದರೊಳಗೆ ಇಡು” ಎಂದು ಹೇಳಿದನು. 17 ಇದಲ್ಲದೆ ದೇವರು ಮೋಶೆಗೆ, “ಅಪ್ಪಟ ಬಂಗಾರದಿಂದ ಕೃಪಾಸನವನ್ನು ಮಾಡಿಸಬೇಕು. ಅದು ಎರಡೂವರೆ ಮೊಳ ಉದ್ದವಾಗಿರಬೇಕು. ಒಂದೂವರೆ ಮೊಳ ಅಗಲವಾಗಿರಬೇಕು. 18 ಬಳಿಕ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ಮಾಡಿಸಿ ಕೃಪಾಸನದ ಎರಡು ಕೊನೆಗಳಲ್ಲಿ ಇಡಬೇಕು. 19 ಕೃಪಾಸನದ ಒಂದು ಕೊನೆಯಲ್ಲಿ ಒಂದು ಕೆರೂಬಿಯನ್ನೂ ಇನ್ನೊಂದು ಕೊನೆಯಲ್ಲಿ ಇನ್ನೊಂದು ಕೆರೂಬಿಯನ್ನೂ ಜೋಡಿಸಬೇಕು. 20 ಅವುಗಳ ರೆಕ್ಕೆಗಳು ಆಕಾಶದ ಕಡೆಗೆ ಚಾಚಿರಬೇಕು; ಪೆಟ್ಟಿಗೆಯನ್ನು ಮುಚ್ಚಿಕೊಂಡಿರಬೇಕು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿರಬೇಕು.
21 “ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಪೆಟ್ಟಿಗೆಯಲ್ಲಿಡಬೇಕು; ಕೃಪಾಸನವನ್ನು ಆ ಪೆಟ್ಟಿಗೆಯ ಮೇಲಿಡಬೇಕು. 22 ನಾನು ನಿನಗೆ ದರ್ಶನ ಕೊಡುವಾಗ ಒಡಂಬಡಿಕೆ ಪೆಟ್ಟಿಗೆಯ ಮೇಲಿರುವ ಕೆರೂಬಿಗಳ ಮಧ್ಯದಿಂದ ನಿನ್ನ ಸಂಗಡ ಮಾತಾಡುವೆನು; ಇಸ್ರೇಲರಿಗೆ ಆಜ್ಞಾಪಿಸಬೇಕಾದವುಗಳನ್ನು ನಿನಗೆ ತಿಳಿಸುವೆನು.
ಮೇಜು
23 “ನೀನು ಜಾಲೀಮರದಿಂದ ಮೇಜನ್ನು ಮಾಡಬೇಕು. ಮೇಜು ಎರಡು ಮೊಳ ಉದ್ದ, ಒಂದು ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರ ಇರಬೇಕು. 24 ಶುದ್ಧಬಂಗಾರದ ತಗಡುಗಳನ್ನು ಮೇಜಿಗೆ ಹೊದಿಸಿ ಅದರ ಸುತ್ತಲೂ ಚಿನ್ನದ ಗೋಟು ಕಟ್ಟಿಸಬೇಕು. 25 ಬಳಿಕ ಮೇಜಿನ ಸುತ್ತಲೂ ಮೂರು ಇಂಚು†ಮೂರು ಇಂಚು ಅಕ್ಷರಶಃ, “ಒಂದು ತೋಷಹ.” ಅಗಲದ ಚೌಕಟ್ಟನ್ನು ಮಾಡಿಸಿ ಅದಕ್ಕೂ ಚಿನ್ನದ ಗೋಟು ಕಟ್ಟಿಸಬೇಕು. 26 ಬಳಿಕ ನಾಲ್ಕು ಚಿನ್ನದ ಬಳೆಗಳನ್ನು ಮಾಡಿಸಿ ಮೇಜಿನ ನಾಲ್ಕು ಕಾಲುಗಳಿಗೆ ಜೋಡಿಸಬೇಕು. 27 ಆ ಬಳೆಗಳು ಅಡ್ಡಪಟ್ಟಿಗೆ ಜೋಡಿಸಿಕೊಂಡಿರಬೇಕು. ಮೇಜನ್ನು ಹೊತ್ತುಕೊಂಡು ಹೋಗುವುದಕ್ಕೆ ಉಪಯೋಗಿಸುವ ಕೋಲುಗಳನ್ನು ಅವುಗಳಲ್ಲಿ ಸೇರಿಸಬೇಕು. 28 ಆ ಕೋಲುಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡನ್ನು ಹೊದಿಸಬೇಕು. 29 ತಟ್ಟೆಗಳನ್ನು, ಚಮಚಗಳನ್ನು, ಹೂಜಿಗಳನ್ನು ಮತ್ತು ಬೋಗುಣಿಗಳನ್ನು ಶುದ್ಧಬಂಗಾರದಿಂದ ಮಾಡಬೇಕು. ಹೂಜಿಗಳನ್ನು ಮತ್ತು ಬೋಗುಣಿಗಳನ್ನು ಪಾನದ್ರವ್ಯಗಳನ್ನು ಅರ್ಪಿಸಲು ಉಪಯೋಗಿಸಬೇಕು. 30 ನೈವೇದ್ಯದ ರೊಟ್ಟಿಗಳನ್ನು ಮೇಜಿನ ಮೇಲೆ ನನ್ನ ಮುಂದೆ ಇಡು. ಅವು ಅಲ್ಲಿ ನನ್ನ ಮುಂದೆ ಯಾವಾಗಲೂ ಇರಬೇಕು.
ದೀಪಸ್ತಂಭ
31 “ಬಳಿಕ ಒಂದು ದೀಪಸ್ತಂಭವನ್ನು ಶುದ್ಧಬಂಗಾರದಿಂದ ಮಾಡಿಸಬೇಕು. ಅದರ ಬುಡವನ್ನೂ ಕಂಬವನ್ನೂ ಕಸೂತಿ ಕೆಲಸದಿಂದ ಮಾಡಿಸಬೇಕು. ಆ ದೀಪಸ್ತಂಭವೆಲ್ಲಾ ಅಖಂಡವಾಗಿದ್ದು ಪುಷ್ಪಪಾತ್ರೆಗಳಂತೆಯೂ ಅಲಂಕಾರವಾಗಿ ಕೆತ್ತಲ್ಪಡಬೇಕು.
32 “ದೀಪಸ್ತಂಭಕ್ಕೆ ಒಂದೊಂದು ಪಾರ್ಶ್ವದಲ್ಲಿ ಮೂರುಮೂರು ಕೊಂಬೆಗಳಂತೆ ಆರು ಕೊಂಬೆಗಳಿರಬೇಕು. 33 ಪ್ರತಿಯೊಂದು ಕೊಂಬೆಯಲ್ಲಿ ಬಾದಾಮಿ ಹೂವುಗಳಂತಿರುವ ಮೂರುಮೂರು ಪುಷ್ಪಾಲಂಕಾರಗಳಿರಬೇಕು. ಒಂದೊಂದು ಅಲಂಕಾರಕ್ಕೆ ಒಂದು ಪುಷ್ಪಪಾತ್ರೆಯೂ ಒಂದು ಪುಷ್ಪವೂ ಇರಬೇಕು. ಆರು ಕೊಂಬೆಗಳನ್ನೂ ಹಾಗೇ ಮಾಡಿಸಬೇಕು. 34 ದೀಪದ ಸ್ತಂಭದಲ್ಲಿ ಪುಷ್ಪಪಾತ್ರೆಗಳೂ ಪುಷ್ಪಗಳೂ ಇರುವ ಬಾದಾಮಿ ಹೂವುಗಳಂತೆ ನಾಲ್ಕು ಪುಷ್ಪಾಲಂಕಾರಗಳು ಇರಬೇಕು. 35 ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಪುಷ್ಪಪಾತ್ರೆಯಿರಬೇಕು. 36 ಪುಷ್ಪಪಾತ್ರೆಗಳನ್ನೂ ಕೊಂಬೆಗಳನ್ನೂ ಒಳಗೊಂಡಿರುವ ದೀಪಸ್ತಂಭವು ಅಖಂಡವಾಗಿದ್ದು ಅಪ್ಪಟ ಬಂಗಾರದಿಂದಲೂ ನಕಾಸಿ ಕೆಲಸದಿಂದಲೂ ಮಾಡಿದ್ದಾಗಿರಬೇಕು. 37 ಅದಕ್ಕೆ ಏಳು ಹಣತೆಗಳನ್ನು ಮಾಡಿಸಬೇಕು. ಈ ಹಣತೆಗಳು ದೀಪಸ್ತಂಭದ ಮುಂದಿರುವ ಪ್ರದೇಶಕ್ಕೆ ಬೆಳಕು ಕೊಡುವುದು. 38 ಅದರ ಬತ್ತಿಗಳನ್ನು ಕತ್ತರಿಸುವ ಕತ್ತರಿಯನ್ನು ಮತ್ತು ಹರಿವಾಣಗಳನ್ನು ಅಪ್ಪಟ ಬಂಗಾರದಿಂದ ಮಾಡಿಸಬೇಕು. 39 ದೀಪಸ್ತಂಭವನ್ನು ಮತ್ತು ಅದರ ಎಲ್ಲಾ ಉಪಕರಣಗಳನ್ನು ಎಪ್ಪತ್ತೈದು ಪೌಂಡು‡ಎಪ್ಪತ್ತೈದು ಪೌಂಡು ಅಕ್ಷರಶಃ, “ಒಂದು ಪಿಕಾರ್, ಅಥವಾ ಮೂರು ಸಾವಿರ ತೊಲೆ.” 40 ನಾನು ನಿನಗೆ ಬೆಟ್ಟದ ಮೇಲೆ ತೋರಿಸಿದ ಮಾದರಿಯಂತೆಯೇ ಪ್ರತಿಯೊಂದನ್ನು ಮಾಡಬೇಕು” ಎಂದು ಹೇಳಿದನು.