57
ಇಸ್ರೇಲರು ದೇವರನ್ನು ಅನುಸರಿಸುವದಿಲ್ಲ
ನೀತಿವಂತರು ಇಲ್ಲವಾಗುವರು; ಯಾರೂ ಅದನ್ನು ಗಮನಿಸರು.
ಸದ್ಭಕ್ತರು ಗತಿಸಿಹೋಗುವರು;
ಅದಕ್ಕೆ ಕಾರಣವೇನೆಂದು ಯಾರೂ ಗ್ರಹಿಸರು.
 
ಕೇಡಿನಿಂದ ಪಾರಾಗಲೆಂದೇ ಸದ್ಭಕ್ತರಿಗೆ ಹೀಗಾಯಿತು
ಎಂದು ಯಾರೂ ಯೋಚಿಸರು.
ಆದರೆ ಶಾಂತಿಸಮಾಧಾನಗಳು ಬರುತ್ತವೆ.
ಆಗ ಜನರು ತಮ್ಮ ಸ್ವಂತ ಹಾಸಿಗೆಗಳ ಮೇಲೆ ವಿಶ್ರಮಿಸಿಕೊಳ್ಳುವರು; ದೇವರು ಅಪೇಕ್ಷಿಸುವ ರೀತಿಯಲ್ಲಿ ಜೀವಿಸುವರು.
 
“ಮಾಟಗಾರ್ತಿಯ ಮಕ್ಕಳೇ, ಇಲ್ಲಿಗೆ ಬನ್ನಿರಿ.
ನಿಮ್ಮ ತಂದೆಯು ವ್ಯಭಿಚಾರದ ಅಪರಾಧವೆಸಗಿದ್ದಾನೆ.
ನಿಮ್ಮ ತಾಯಿಯು ಸೂಳೆಯಾಗಿ ತನ್ನ ದೇಹವನ್ನು ಮಾರುತ್ತಿದ್ದಾಳೆ.
ನೀವು ಸುಳ್ಳುಹೇಳುವ ದುಷ್ಟಮಕ್ಕಳು.
ನೀವು ನನ್ನನ್ನು ಪರಿಹಾಸ್ಯ ಮಾಡುತ್ತೀರಿ.
ನನ್ನನ್ನು ಹಿಯಾಳಿಸುತ್ತೀರಿ;
ನಿಮ್ಮ ನಾಲಿಗೆಯನ್ನು ನನ್ನತ್ತ ಚಾಚುತ್ತೀರಿ.
ನೀವು ಮಾಡಬೇಕೆನ್ನುವುದು, ಪ್ರತಿಯೊಂದು ಹಸಿರು ಮರದಡಿಯಲ್ಲಿ
ಸುಳ್ಳುದೇವರ ಪೂಜೆ ಮಾಡುವದೊಂದನ್ನೇ,
ಪ್ರತಿಯೊಂದು ನೀರಿನ ಬುಗ್ಗೆಗಳ ಬಳಿಯಲ್ಲಿ ನಿಮ್ಮ ಮಕ್ಕಳನ್ನು ಕೊಂದು
ಬಂಡೆಕಲ್ಲಿನ ಮೇಲೆ ಅವರ ಯಜ್ಞಮಾಡುವಿರಿ.
ನದಿ ದಡದಲ್ಲಿರುವ ನುಣುಪಾದ ಕಲ್ಲುಗಳನ್ನು ಪೂಜಿಸಲು ಆಶಿಸುತ್ತೀರಿ.
ಅದರ ಮೇಲೆ ದ್ರಾಕ್ಷಾರಸ ಸುರಿದು ಪೂಜೆ ಮಾಡುತ್ತೀರಿ.
ಅವುಗಳಿಗೆ ಬಲಿಯರ್ಪಿಸುತ್ತೀರಿ. ಆದರೆ ಅದರಿಂದ ನಿಮಗೆ ದೊರಕುವುದು ಕಲ್ಲೇ.
ಈ ವಿಷಯ ನನ್ನನ್ನು ಸಂತೋಷಗೊಳಿಸುತ್ತದೆಂದು ನೆನಸುತ್ತೀರೋ? ಇಲ್ಲ. ಅವು ನನ್ನನ್ನು ಸಂತೋಷಪಡಿಸುವದಿಲ್ಲ.
ಪ್ರತಿಯೊಂದು ಬೆಟ್ಟ ಮತ್ತು
ಉನ್ನತ ಶಿಖರಗಳ ಮೇಲೆ ನಿಮ್ಮ ಹಾಸಿಗೆಯನ್ನು ಹಾಸುವಿರಿ.
ನೀವು ಅಲ್ಲಿಗೆ ಹೋಗಿ ಬಲಿಯರ್ಪಿಸುತ್ತೀರಿ.
ಆ ಬಳಿಕ ಆ ಹಾಸಿಗೆಯ ಮೇಲೆ ಮಲಗಿ ಆ ದೇವರುಗಳನ್ನು ಪ್ರೀತಿಸಿ
ನನಗೆ ವಿರುದ್ಧವಾಗಿ ಪಾಪ ಮಾಡುತ್ತೀರಿ.
ನೀವು ಆ ದೇವರುಗಳನ್ನು ಪ್ರೀತಿಸುತ್ತೀರಿ.
ಅವುಗಳ ಬೆತ್ತಲೆ ಶರೀರಗಳನ್ನು ನೋಡುವದರಲ್ಲಿ ಸಂತೋಷಿಸುವಿರಿ.
ನೀವು ನನ್ನೊಂದಿಗೆ ಇದ್ದಿರಿ.
ಆದರೆ ಈಗ ನನ್ನನ್ನು ತೊರೆದು ಅವುಗಳನ್ನು ಸೇರಿಕೊಂಡಿದ್ದೀರಿ.
ನನ್ನನ್ನು ಜ್ಞಾಪಕ ಹುಟ್ಟಿಸುವ ವಿಷಯಗಳನ್ನು ನೀವು ಅಡಗಿಸಿಡುತ್ತೀರಿ.
ಅವುಗಳನ್ನು ಬಾಗಿಲ ಹಿಂದೆ ಅಡಗಿಸಿಡುತ್ತೀರಿ.
ಅನಂತರ ನೀವು ಹೋಗಿ ಆ ಸುಳ್ಳುದೇವರೊಂದಿಗೆ ಒಪ್ಪಂದ ಮಾಡುತ್ತೀರಿ.
ಮೋಲೆಕನಿಗೆ ಅಂದವಾಗಿ ತೋರುವಂತೆ
ನೀವು ನಿಮಗೆ ಎಣ್ಣೆ, ಸುಗಂಧದ್ರವ್ಯಗಳನ್ನು ಹಚ್ಚಿಕೊಂಡು ಹೋಗುವಿರಿ.
ನಿಮ್ಮ ದೂತರನ್ನು ದೂರದೇಶಕ್ಕೆ ಕಳುಹಿಸುತ್ತೀರಿ.
ಇವೇ ನಿಮ್ಮನ್ನು ನರಕಕ್ಕೆ ನಡಿಸುತ್ತವೆ. ಅಲ್ಲಿ ಮರಣವಿರುವದು.
10 ಇವುಗಳನ್ನೆಲ್ಲಾ ನೀವು ಬಹು ಪ್ರಯಾಸದಿಂದ ಮಾಡಿದರೂ ಆಯಾಸಗೊಂಡಿಲ್ಲ.
ಯಾಕೆಂದರೆ ಇವುಗಳನ್ನು ಮಾಡುವುದರಲ್ಲೇ ನಿಮಗೆ ಸಂತೋಷ.
11 ನೀವು ನನ್ನನ್ನು ಜ್ಞಾಪಕ ಮಾಡಿಕೊಳ್ಳಲಿಲ್ಲ.
ನನ್ನನ್ನು ಗಮನಕ್ಕೇ ತರಲಿಲ್ಲ.
ಹೀಗಿರಲು ನೀವು ಯಾರ ಬಗ್ಗೆ ಚಿಂತಿಸುತ್ತಿದ್ದಿರಿ?
ನೀವು ಯಾರಿಗೆ ಭಯಪಡುತ್ತಿದ್ದಿರಿ?
ನೀವು ಸುಳ್ಳಾಡಿದ್ದು ಯಾಕೆ?
ನೋಡಿ, ನಾನು ಬಹಳ ಸಮಯದಿಂದ ಸುಮ್ಮನಿದ್ದೆನು.
ಆದರೆ ನೀವು ನನ್ನನ್ನು ಗೌರವಿಸಲಿಲ್ಲ.
12 ನೀವು ಮಾಡುವ ಧಾರ್ಮಿಕ ಕಾರ್ಯಗಳನ್ನೂ ನಿಮ್ಮ ಒಳ್ಳೆತನವನ್ನೂ
ನಾನು ಹೇಳಿದರೂ ಅವುಗಳೆಲ್ಲಾ ನಿಷ್ಪ್ರಯೋಜಕವಾದವುಗಳು.
13 ನಿಮಗೆ ಸಹಾಯದ ಅವಶ್ಯಕತೆ ಬಂದಾಗ
ನೀವು ಆ ಸುಳ್ಳುದೇವರುಗಳನ್ನು ಕರೆಯುವಿರಿ.
ಅವುಗಳನ್ನು ನಿಮ್ಮ ಸುತ್ತಲೂ ಸೇರಿಸಿಕೊಂಡಿರುವಿರಿ.
ಆದರೆ ನಾನು ಹೇಳುವುದೇನೆಂದರೆ, ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವುದು.
ಅವುಗಳನ್ನೆಲ್ಲ ಉಸಿರಿನ ಗಾಳಿಯು ನಿಮ್ಮಿಂದ ದೂರಕ್ಕೆ ಕೊಂಡೊಯ್ಯುವುದು.
ಆದರೆ ನನ್ನನ್ನು ಅವಲಂಬಿಸಿರುವವರು ಭೂಮಿಯನ್ನು ಪಡೆದುಕೊಳ್ಳುವರು.
ನನ್ನ ಪವಿತ್ರ ಪರ್ವತವನ್ನು ಬಾಧ್ಯವಾಗಿ ಹೊಂದಿಕೊಳ್ಳುವರು.”
ಯೆಹೋವನು ತನ್ನ ಜನರನ್ನು ಕಾಪಾಡುವನು
14 ದಾರಿಯನ್ನು ಸರಿಪಡಿಸಿರಿ, ದಾರಿಯನ್ನು ಸರಿಪಡಿಸಿರಿ!
ನನ್ನ ಜನರಿಗೆ ದಾರಿಯು ಸರಾಗವಾಗಿರುವಂತೆ ಅಡತಡೆಗಳನ್ನು ತೆಗೆದುಹಾಕಿರಿ ಎಂದು ಒಂದು ಸ್ವರವು ನುಡಿಯುತ್ತದೆ.
 
15 ದೇವರು ಉನ್ನತಸ್ಥಾನದಲ್ಲಿ ಎತ್ತಲ್ಪಟ್ಟಿದ್ದಾನೆ.
ಆತನು ಸದಾಕಾಲ ಜೀವಿಸುತ್ತಾನೆ.
ಆತನ ಹೆಸರು ಪರಿಶುದ್ಧವಾದದ್ದು.
ದೇವರು ಹೇಳುವುದೇನೆಂದರೆ, “ನಾನು ಉನ್ನತಲೋಕವೆಂಬ ಪವಿತ್ರಸ್ಥಳದಲ್ಲಿ ವಾಸಿಸುತ್ತೇನೆ.
ಅದೇ ಸಮಯದಲ್ಲಿ ದುಃಖಪಡುವವರೂ ದೀನರೂ ಆಗಿರುವ ಜನರೊಂದಿಗೆ ವಾಸಮಾಡುತ್ತೇನೆ.
ಆತ್ಮದಲ್ಲಿ ದೀನರಾಗಿರುವವರಿಗೆ ನಾನು ಹೊಸಜನ್ಮ ಕೊಡುತ್ತೇನೆ.
ಹೃದಯದಲ್ಲಿ ದುಃಖಿಸುವವರಿಗೆ ನಾನು ಹೊಸ ಜೀವ ಕೊಡುತ್ತೇನೆ.
16 ನಾನು ನಿತ್ಯಕಾಲಕ್ಕೂ ಯುದ್ಧ ಮಾಡುವವನಲ್ಲ.
ನಾನು ಎಂದೆಂದಿಗೂ ಕೋಪಗೊಳ್ಳುವವನಲ್ಲ.
ನಾನು ಹಾಗೆ ಮಾಡುವವನಾದರೆ
ನಾನು ಕೊಟ್ಟಿರುವ ಮನುಷ್ಯನ ಆತ್ಮವು ನನ್ನ ಮುಂದೆಯೇ ಸಾಯುವದು.
17 ಈ ಜನರು ದುಷ್ಕೃತ್ಯಗಳನ್ನು ನಡಿಸಿ ನನಗೆ ಕೋಪವನ್ನೆಬ್ಬಿಸಿದರು.
ಆದ್ದರಿಂದ ನಾನು ಇಸ್ರೇಲನ್ನು ಶಿಕ್ಷಿಸಿದೆನು.
ನಾನು ಕೋಪಗೊಂಡು ಅವರಿಗೆ ವಿಮುಖನಾದೆನು.
ಇಸ್ರೇಲ್ ನನ್ನನ್ನು ತೊರೆದು ತನಗಿಷ್ಟವಾದ ಸ್ಥಳಕ್ಕೆ*ತನಗಿಷ್ಟವಾದ ಸ್ಥಳಕ್ಕೆ ಅಕ್ಷರಶಃ, “ದಂಗೆಕೋರತನದ ರೀತಿಯಲ್ಲಿ ತನಗಿಷ್ಟಬಂದಂತೆ ಮಾಡಿದನು.” ಹೋದನು.
18 ಇಸ್ರೇಲ್ ಎಲ್ಲಿಗೆ ಹೋದನೆಂದು ನಾನು ನೋಡಿದೆನು. ನಾನು ಅವನನ್ನು ಸ್ವಸ್ಥ ಮಾಡುವೆನು.
ಅವನನ್ನು ಆದರಿಸುವೆನು. ಒಳ್ಳೆಯ ಮಾತುಗಳಿಂದ ಅವನನ್ನು ರಮಿಸುವೆನು. ಆಗ ಅವನೂ ಅವನ ಜನರೂ ವ್ಯಸನಪಡುವದಿಲ್ಲ.
19 ನಾನು ಅವರಿಗೆ ‘ಸಮಾಧಾನ’ ಎಂಬ ಹೊಸ ಪದವನ್ನು ಕಲಿಸುತ್ತೇನೆ.
ನನ್ನ ಬಳಿಯಲ್ಲಿರುವವರಿಗೂ ನನ್ನಿಂದ ದೂರದಲ್ಲಿರುವವರಿಗೂ ಸಮಾಧಾನವನ್ನು ಅನುಗ್ರಹಿಸುವೆನು.
ನಾನು ಅವರನ್ನು ಗುಣಪಡಿಸುವೆನು.”
ಇದು ಯೆಹೋವನ ನುಡಿ.
 
20 ದುಷ್ಟಜನರು ರೊಚ್ಚಿಗೆದ್ದ ಸಾಗರದಂತೆ,
ಸಮಾಧಾನವಾಗಿಯೂ ಮೌನವಾಗಿಯೂ ಇರಲಾರರು.
ಅವರು ಸಿಟ್ಟುಗೊಂಡು ಸಾಗರದಂತೆ
ಕೆಸರನ್ನು ಕದಡಿಸುವರು.
21 ನನ್ನ ದೇವರು ಹೇಳುವುದೇನೆಂದರೆ:
“ದುಷ್ಟ ಜನರಿಗೆ ಸಮಾಧಾನವಿಲ್ಲ.”

*57:17: ತನಗಿಷ್ಟವಾದ ಸ್ಥಳಕ್ಕೆ ಅಕ್ಷರಶಃ, “ದಂಗೆಕೋರತನದ ರೀತಿಯಲ್ಲಿ ತನಗಿಷ್ಟಬಂದಂತೆ ಮಾಡಿದನು.”