3
1-2 ಇಸ್ರೇಲರ ಪ್ರದೇಶವನ್ನು ಬಿಟ್ಟುಹೋಗುವಂತೆ ಯೆಹೋವನು ಉಳಿದೆಲ್ಲ ಜನಾಂಗದವರನ್ನು ಒತ್ತಾಯಪಡಿಸಲಿಲ್ಲ. ಯೆಹೋವನು ಇಸ್ರೇಲರನ್ನು ಪರೀಕ್ಷಿಸಬೇಕೆಂದಿದ್ದನು. ಈಗ ಬದುಕಿದ್ದ ಇಸ್ರೇಲರಲ್ಲಿ ಯಾರೂ ಕಾನಾನ್ಯರ ಭೂಮಿಯನ್ನು ತೆಗೆದುಕೊಳ್ಳುವುದಕ್ಕಾಗಿ ಯುದ್ಧ ಮಾಡಿರಲಿಲ್ಲ. ಅದಕ್ಕಾಗಿ ಯೆಹೋವನು ಆ ಬೇರೆ ಜನಾಂಗದವರನ್ನು ಅವರ ದೇಶದಲ್ಲಿ ವಾಸಿಸಲು ಬಿಟ್ಟನು. (ಆ ಯುದ್ಧಗಳಲ್ಲಿ ಭಾಗವಹಿಸದ ಈ ಇಸ್ರೇಲರಿಗೆ ಯುದ್ಧ ಮಾಡುವುದನ್ನು ಕಲಿತುಕೊಳ್ಳಲು ಒಂದು ಅವಕಾಶ ದೊರೆಯುವಂತೆ ಯೆಹೋವನು ಹೀಗೆ ಮಾಡಿದ್ದನು.) ಯೆಹೋವನು ಆ ಭೂಮಿಯಲ್ಲಿ ವಾಸಿಸಲು ಬಿಟ್ಟ ಜನಾಂಗಗಳ ಹೆಸರುಗಳು ಇಂತಿವೆ: ಐದು ಮಂದಿ ಫಿಲಿಷ್ಟಿಯ ಪ್ರಭುಗಳು, ಎಲ್ಲಾ ಕಾನಾನ್ಯರು, ಚೀದೋನ್ಯರು, ಲೆಬನೋನ್ ಪರ್ವತಾವಳಿಯಲ್ಲಿ ಬಾಳ್‌ಹೆರ್ಮೊನ್ ಬೆಟ್ಟದಿಂದ ಲೆಬೂಹಮಾತಿನ ದಾರಿಯವರೆಗೆ ವಾಸವಾಗಿರುವ ಹಿವ್ವಿಯರು. ಯೆಹೋವನು ಇಸ್ರೇಲರನ್ನು ಪರೀಕ್ಷಿಸುವುದಕ್ಕಾಗಿ ಬೇರೆ ಜನಾಂಗದವರನ್ನು ಆ ಪ್ರದೇಶದಲ್ಲಿ ಬಿಟ್ಟಿದ್ದನು. ಯೆಹೋವನು ಮೋಶೆಯ ಮೂಲಕ ಅವರ ಪೂರ್ವಿಕರಿಗೆ ಕೊಟ್ಟ ಆಜ್ಞೆಗಳನ್ನು ಇಸ್ರೇಲರು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಆತನು ನೋಡಬೇಕೆಂದಿದ್ದನು.
ಇಸ್ರೇಲರು ಕಾನಾನ್ಯ, ಹಿತ್ತಿಯ, ಅಮೋರಿಯ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಜನಾಂಗಗಳೊಡನೆ ವಾಸಮಾಡತೊಡಗಿದರು. ಇಸ್ರೇಲರು ಅವರ ಕನ್ಯೆಯರನ್ನು ಮದುವೆಯಾಗ ತೊಡಗಿದರು ಮತ್ತು ತಮ್ಮ ಕನ್ಯೆಯರನ್ನು ಅವರ ಕುಮಾರರಿಗೆ ಮದುವೆ ಮಾಡಿಕೊಟ್ಟರು ಮತ್ತು ಅವರ ದೇವರುಗಳನ್ನು ಪೂಜಿಸಲು ಪ್ರಾರಂಭಿಸಿದರು.
ಒತ್ನೀಯೇಲ್ ಪ್ರಥಮ ನ್ಯಾಯಾಧೀಶ
ಇಸ್ರೇಲರ ದುಷ್ಕೃತ್ಯಗಳನ್ನು ಯೆಹೋವನು ನೋಡಿದನು. ಇಸ್ರೇಲರು ತಮ್ಮ ದೇವರಾದ ಯೆಹೋವನನ್ನು ಮರೆತು ಬಾಳ್ ಮತ್ತು ಆಶೇರ್ ಎಂಬ ಸುಳ್ಳುದೇವರುಗಳ ಸೇವೆ ಮಾಡುತ್ತಿದ್ದರು. ಇಸ್ರೇಲರ ಮೇಲೆ ಯೆಹೋವನು ಕೋಪಿಸಿಕೊಂಡಿದ್ದನು. ಹರೇಮ್‌ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮ್ ಎಂಬವನು ಅವರನ್ನು ಸೋಲಿಸುವುದಕ್ಕೂ ಆಳುವುದಕ್ಕೂ ಯೆಹೋವನು ಆಸ್ಪದ ಕೊಟ್ಟನು. ಇಸ್ರೇಲಿನ ಜನರು ಎಂಟು ವರ್ಷ ಆ ಅರಸನ ಅಧೀನದಲ್ಲಿದ್ದರು. ಇಸ್ರೇಲರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟರು. ಅವರನ್ನು ರಕ್ಷಿಸಲು ಯೆಹೋವನು ಒಬ್ಬ ಮನುಷ್ಯನನ್ನು ಕಳುಹಿಸಿದನು. ಆ ಮನುಷ್ಯನ ಹೆಸರು ಒತ್ನೀಯೇಲ. ಅವನು ಕೆನಜ ಎಂಬವನ ಮಗನು. ಕೆನಜನು ಕಾಲೇಬನ ತಮ್ಮ. ಒತ್ನೀಯೇಲನು ಇಸ್ರೇಲರನ್ನು ರಕ್ಷಿಸಿದನು. 10 ಒತ್ನೀಯೇಲನ ಮೇಲೆ ಯೆಹೋವನ ಆತ್ಮ ಬಂದಿತು; ಆದ್ದರಿಂದ ಅವನು ಇಸ್ರೇಲರ ನ್ಯಾಯಾಧೀಶನಾದನು. ಒತ್ನೀಯೇಲನು ಇಸ್ರೇಲರನ್ನು ಯುದ್ಧಕ್ಕೆ ಕರೆದೊಯ್ದನು. ಅರಾಮಿನ ಅರಸನಾದ ಕೂಷನ್ ರಿಷಾತಯಿಮ್‌ನನ್ನು ಸೋಲಿಸಲು ಯೆಹೋವನು ಒತ್ನೀಯೇಲನಿಗೆ ಸಹಾಯ ಮಾಡಿದನು. 11 ಆದ್ದರಿಂದ ನಲವತ್ತು ವರ್ಷಗಳ ಕಾಲದವರೆಗೆ ಅಂದರೆ ಕೆನಜನ ಮಗನಾದ ಒತ್ನೀಯೇಲನ ಮರಣದವರೆಗೆ ಆ ಪ್ರದೇಶದಲ್ಲಿ ಶಾಂತಿ ನೆಲೆಸಿತ್ತು.
ನ್ಯಾಯಾಧೀಶ ಏಹೂದ
12 ಇಸ್ರೇಲರು ಪುನಃ ದುಷ್ಕೃತ್ಯಗಳನ್ನು ಮಾಡುವುದನ್ನು ಯೆಹೋವನು ನೋಡಿದನು. ಆದ್ದರಿಂದ ಆತನು ಮೋವಾಬ್ಯರ ಅರಸನಾದ ಎಗ್ಲೋನನಿಗೆ ಇಸ್ರೇಲರನ್ನು ಸೋಲಿಸುವ ಶಕ್ತಿಯನ್ನು ಕೊಟ್ಟನು. 13 ಇವನು ಅಮ್ಮೋನಿಯರಿಂದ ಮತ್ತು ಅಮಾಲೇಕ್ಯರಿಂದ ಸಹಾಯವನ್ನು ಪಡೆದನು. ಅವರು ಅವನೊಂದಿಗೆ ಸೇರಿಕೊಂಡು ಇಸ್ರೇಲರ ಮೇಲೆ ಧಾಳಿಮಾಡಿದರು. ಎಗ್ಲೋನ್ ಮತ್ತು ಅವನ ಸೈನಿಕರು ಇಸ್ರೇಲರನ್ನು ಸೋಲಿಸಿ ಅವರನ್ನು ಜೆರಿಕೊ ಎಂಬುವ ಖರ್ಜೂರ ನಗರದಿಂದ ಹೊರದೂಡಿದರು. 14 ಮೋವಾಬ್ಯರ ಅರಸನಾದ ಎಗ್ಲೋನನು ಇಸ್ರೇಲರ ಮೇಲೆ ಹದಿನೆಂಟು ವರ್ಷ ಆಳ್ವಿಕೆ ಮಾಡಿದನು.
15 ಜನರು ಯೆಹೋವನಿಗೆ ಮೊರೆಯಿಟ್ಟರು. ಇಸ್ರೇಲರನ್ನು ರಕ್ಷಿಸಲು ಯೆಹೋವನು ಒಬ್ಬ ಮನುಷ್ಯನನ್ನು ಕಳುಹಿಸಿದನು. ಆ ಮನುಷ್ಯನ ಹೆಸರು ಏಹೂದ. ಅವನು ಎಡಚನಾಗಿದ್ದನು. ಅವನು ಬೆನ್ಯಾಮೀನ್ ಕುಲದ ಗೇರ ಎಂಬವನ ಮಗನಾಗಿದ್ದನು. ಇಸ್ರೇಲರು ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪಕಾಣಿಕೆಯನ್ನು ಕೊಡಲು ಏಹೂದನನ್ನು ಕಳುಹಿಸಿದರು. 16 ಏಹೂದನು ತನಗೊಂದು ಖಡ್ಗವನ್ನು ಮಾಡಿಕೊಂಡನು. ಆ ಖಡ್ಗವು ಇಬ್ಬಾಯಿ ಖಡ್ಗವಾಗಿದ್ದು ಹದಿನೆಂಟು ಅಂಗುಲ ಉದ್ದವಾಗಿತ್ತು. ಅದನ್ನು ಅವನು ತನ್ನ ಬಲತೊಡೆಗೆ ಕಟ್ಟಿಕೊಂಡು ತನ್ನ ಬಟ್ಟೆಗಳಿಂದ ಮುಚ್ಚಿಕೊಂಡನು.
17 ಏಹೂದನು ಮೋವಾಬ್ಯರ ಅರಸನಾದ ಎಗ್ಲೋನನ ಹತ್ತಿರ ಬಂದು ಅವನಿಗೆ ಕಪ್ಪದ ಹಣವನ್ನು ಕೊಟ್ಟನು. ಎಗ್ಲೋನನು ಬಹಳ ದಪ್ಪ ಮನುಷ್ಯನಾಗಿದ್ದನು. 18 ಏಹೂದನು ಎಗ್ಲೋನನಿಗೆ ಹಣವನ್ನು ಕೊಟ್ಟ ತರುವಾಯ ಅದನ್ನು ಹೊತ್ತುಕೊಂಡು ಬಂದ ಜನರನ್ನು ಮನೆಗೆ ಕಳುಹಿಸಿಬಿಟ್ಟನು. 19 ಏಹೂದನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂತಿರುಗಿ ಎಗ್ಲೋನನ ಬಳಿಗೆ ಬಂದು, “ಅರಸನೇ, ನಿನಗೆ ತಿಳಿಸಬೇಕಾದ ಒಂದು ರಹಸ್ಯ ಸಂದೇಶವಿದೆ” ಎಂದು ಹೇಳಿದನು.
ಅರಸನು, “ಸುಮ್ಮನಿರು” ಎಂದು ಹೇಳಿ ತನ್ನ ಸೇವಕರೆಲ್ಲರನ್ನು ಕೋಣೆಯಿಂದ ಆಚೆ ಕಳುಹಿಸಿದನು. 20 ಏಹೂದನು ಅರಸನಾದ ಎಗ್ಲೋನನ ಹತ್ತಿರಕ್ಕೆ ಹೋದನು. ಎಗ್ಲೋನನು ತಂಪಾದ ಅರಮನೆಯ ಮಹಡಿಯ ಕೋಣೆಯಲ್ಲಿ ಒಬ್ಬಂಟಿಗನಾಗಿ ಕುಳಿತಿದ್ದನು.
ಆಗ ಏಹೂದನು, “ದೇವರಿಂದ ನಾನು ನಿನಗೆ ಒಂದು ಸಂದೇಶವನ್ನು ತಂದಿದ್ದೇನೆ” ಎಂದನು. ಅರಸನು ತನ್ನ ಸಿಂಹಾಸನದಿಂದ ಎದ್ದುನಿಂತನು. ಅವನು ಏಹೂದನಿಗೆ ತುಂಬ ಹತ್ತಿರದಲ್ಲಿದ್ದನು. 21 ಅರಸನು ತನ್ನ ಸಿಂಹಾಸನದಿಂದ ಎದ್ದುನಿಂತಾಗ ಏಹೂದನು ತನ್ನ ಎಡಗೈಯನ್ನು ಚಾಚಿ ತನ್ನ ಬಲ ತೊಡೆಗೆ ಕಟ್ಟಿದ್ದ ಕತ್ತಿಯನ್ನು ಹೊರತೆಗೆದನು. ಏಹೂದನು ಆ ಖಡ್ಗವನ್ನು ಅರಸನ ಹೊಟ್ಟೆಗೆ ತಿವಿದನು. 22 ಏಹೂದನು ಕತ್ತಿಯನ್ನು ಜೋರಾಗಿ ಒತ್ತಿದ್ದರಿಂದ ಅದು ಹಿಡಿಯ ಸಹಿತ ಮುಳುಗಿ ಹೋಯಿತು. ಅರಸನ ಕೊಬ್ಬಿದ ದೇಹದಲ್ಲಿ ಕತ್ತಿಯು ಸಂಪೂರ್ಣವಾಗಿ ಮುಚ್ಚಿಕೊಂಡಿತು. ಆದ್ದರಿಂದ ಏಹೂದನು ಎಗ್ಲೋನನ ಹೊಟ್ಟೆಯಲ್ಲಿಯೇ ಖಡ್ಗವನ್ನು ಬಿಟ್ಟನು. ಮಲವು ಹೊರಗೆ ಬಂದಿತು.
23 ಏಹೂದನು ಕೋಣೆಯ ಹೊರಗೆ ಹೋಗಿ ಬಾಗಿಲು ಹಾಕಿಕೊಂಡು ಬೀಗಹಾಕಿದನು. 24 ಏಹೂದನು ಹೋದ ಕೂಡಲೆ ಸೇವಕರು ಹಿಂದಿರುಗಿ ಬಂದರು. ಕೋಣೆಯ ಬಾಗಿಲಿಗೆ ಬೀಗ ಹಾಕಿದ್ದನ್ನು ಸೇವಕರು ನೋಡಿದರು. “ಅರಸನು ತನ್ನ ವಿಶ್ರಾಂತಿ ಕೋಣೆಯ ಶೌಚಾಲಯದಲ್ಲಿ ಇರಬಹುದು” ಎಂದುಕೊಂಡರು. 25 ಹೀಗಾಗಿ ಸೇವಕರು ಬಹಳ ಹೊತ್ತಿನವರೆಗೆ ಅರಸನಿಗಾಗಿ ಕಾಯುತ್ತಾ ಚಿಂತೆಗೊಳಗಾದರು. ಅವರು ಬೀಗದ ಕೈಯನ್ನು ತಂದು ಬಾಗಿಲುಗಳನ್ನು ತೆರೆದರು. ಸೇವಕರು ಒಳಗೆ ಹೋದಾಗ ತಮ್ಮ ಅರಸನು ನೆಲದ ಮೇಲೆ ಸತ್ತು ಬಿದ್ದಿರುವುದನ್ನು ಕಂಡರು.
26 ಸೇವಕರು ಅರಸನಿಗಾಗಿ ಕಾಯುತ್ತಾ ನಿಂತಿರುವಾಗ ತಪ್ಪಿಸಿಕೊಂಡು ಹೋಗುವುದಕ್ಕೆ ಏಹೂದನಿಗೆ ಅವಕಾಶ ಸಿಕ್ಕಿತು. ಏಹೂದನು ವಿಗ್ರಹಗಳ ಪಕ್ಕದಿಂದ ಹಾದು ಹೊಳೆ ದಾಟಿ 27 ಸೆಯೀರಾ ಎಂಬ ಸ್ಥಳಕ್ಕೆ ಬಂದನು. ಅಲ್ಲಿ ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿ ಅವನು ತುತ್ತೂರಿಯನ್ನು ಊದಿದನು. ಇಸ್ರೇಲರು ತುತ್ತೂರಿಯ ಧ್ವನಿಯನ್ನು ಕೇಳಿ ಬೆಟ್ಟದಿಂದ ಇಳಿದು ಏಹೂದನನ್ನು ಹಿಂಬಾಲಿಸಿ ಹೋದರು. 28 ಏಹೂದನು ಇಸ್ರೇಲರಿಗೆ, “ನನ್ನನ್ನು ಹಿಂಬಾಲಿಸಿರಿ, ನಮ್ಮ ಶತ್ರುಗಳಾದ ಮೋವಾಬ್ಯರನ್ನು ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡಿದ್ದಾನೆ” ಎಂದನು.
ಇಸ್ರೇಲರು ಏಹೂದನನ್ನು ಹಿಂಬಾಲಿಸಿದರು. ಅವರು ಜೋರ್ಡನ್ ನದಿಯ ಹಾಯಗಡಗಳನ್ನೆಲ್ಲಾ ವಶಪಡಿಸಿಕೊಂಡರು. ಆ ಸ್ಥಳಗಳು ಮೋವಾಬಿಗೆ ಹೋಗುವ ದಾರಿಯಲ್ಲಿದ್ದವು. ಜೋರ್ಡನ್ ನದಿಯನ್ನು ದಾಟಿಹೋಗಲು ಇಸ್ರೇಲರು ಯಾರಿಗೂ ಅವಕಾಶ ಕೊಡಲಿಲ್ಲ. 29 ಇಸ್ರೇಲರು ದೃಢಕಾಯರೂ ಧೈರ್ಯಶಾಲಿಗಳೂ ಆಗಿದ್ದ ಹತ್ತು ಸಾವಿರ ಮಂದಿ ಮೋವಾಬ್ಯರನ್ನು ಕೊಂದುಹಾಕಿದರು. ಒಬ್ಬ ಮೋವಾಬ್ಯನೂ ತಪ್ಪಿಸಿಕೊಳ್ಳಲಿಲ್ಲ. 30 ಅಂದಿನಿಂದ ಇಸ್ರೇಲರು ಮೋವಾಬ್ಯರನ್ನು ಆಳಲು ಪ್ರಾರಂಭಿಸಿದರು. ಆ ಪ್ರದೇಶದಲ್ಲಿ ಎಂಭತ್ತು ವರ್ಷಗಳವರೆಗೆ ಶಾಂತಿ ನೆಲೆಸಿತು.
ನ್ಯಾಯಾಧೀಶನಾದ ಶಮ್ಗರ
31 ಏಹೂದನು ಇಸ್ರೇಲರನ್ನು ರಕ್ಷಿಸಿದ ತರುವಾಯ, ಇನ್ನೊಬ್ಬ ವ್ಯಕ್ತಿಯು ಇಸ್ರೇಲರನ್ನು ರಕ್ಷಿಸಿದನು. ಅವನು ಅನಾತನ*ಅನಾತ ಇದು ಕಾನಾನ್ಯರ ಯುದ್ಧದೇವತೆಯ ಹೆಸರು. ಇಲ್ಲಿ ಅದು ಶಮ್ಗರನ ತಂದೆಯ ಹೆಸರು ಎಂದು ಇದ್ದರೂ ತಾಯಿಯ ಹೆಸರೂ ಆಗಿರುವ ಸಂಭವವಿದೆ. ಮಗನಾದ ಶಮ್ಗರ. ಶಮ್ಗರನು ಎದ್ದು ಎತ್ತಿನ ಮುಳ್ಳುಗೋಲಿನಿಂದ ಆರುನೂರು ಮಂದಿ ಫಿಲಿಷ್ಟಿಯರನ್ನು ಕೊಂದನು.

*3:31: ಅನಾತ ಇದು ಕಾನಾನ್ಯರ ಯುದ್ಧದೇವತೆಯ ಹೆಸರು. ಇಲ್ಲಿ ಅದು ಶಮ್ಗರನ ತಂದೆಯ ಹೆಸರು ಎಂದು ಇದ್ದರೂ ತಾಯಿಯ ಹೆಸರೂ ಆಗಿರುವ ಸಂಭವವಿದೆ.