18
ದಾನ್ಯರು ಲಯಿಷ್ ನಗರವನ್ನು ಸ್ವಾಧೀನಪಡಿಸಿಕೊಂಡರು
1 ಆ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಆ ಸಮಯದಲ್ಲಿ ದಾನ್ ಕುಲದವರು ಇನ್ನೂ ತಮ್ಮ ವಾಸಕ್ಕಾಗಿ ಒಂದು ಸ್ಥಳವನ್ನು ಹುಡುಕುತ್ತಿದ್ದರು. ಇನ್ನೂ ಅವರಿಗೆ ತಮ್ಮದೇ ಆದ ಒಂದು ಪ್ರದೇಶವೂ ಇರಲಿಲ್ಲ. ಇಸ್ರೇಲಿನ ಬೇರೆ ಕುಲಗಳಿಗೆ ತಮ್ಮದೇ ಆದ ಪ್ರದೇಶ ಇತ್ತು. ಆದರೆ ದಾನ್ ಕುಲದವರು ಮಾತ್ರ ಇನ್ನೂ ತಮ್ಮ ಪ್ರದೇಶವನ್ನು ಹೊಂದಿಕೊಂಡಿರಲಿಲ್ಲ.
2 ದಾನ್ ಕುಲದವರು ತಮಗೆ ಭೂಮಿಯನ್ನು ಹುಡುಕುವುದಕ್ಕಾಗಿ ಐದು ಮಂದಿ ಸೈನಿಕರನ್ನು ಕಳುಹಿಸಿದರು. ಅವರು ತಮ್ಮ ವಾಸಕ್ಕಾಗಿ ಒಳ್ಳೆಯ ಸ್ಥಳವನ್ನು ಹುಡುಕಲು ಹೋದರು. ಆ ಐದು ಮಂದಿ ಚೊರ್ಗಾ ಮತ್ತು ಎಷ್ಟಾವೋಲ್ ನಗರದವರಾಗಿದ್ದರು. ಅವರು ದಾನ್ ಕುಲದವರ ಮನೆತನಕ್ಕೆ ಸೇರಿದವರಾದ ಕಾರಣ “ಭೂಮಿಯನ್ನು ಹುಡುಕಲು” ಅವರನ್ನು ಕಳುಹಿಸಲಾಗಿತ್ತು.
ಆ ಐದು ಜನರು ಎಫ್ರಾಯೀಮ್ ಬೆಟ್ಟದ ಸೀಮೆಗೆ ಬಂದು ಮೀಕನ ಮನೆಯಲ್ಲಿ ಇಳಿದುಕೊಂಡರು. 3 ಆ ಐದು ಜನರು ಮೀಕನ ಮನೆಯ ಸಮೀಪಕ್ಕೆ ಬಂದಾಗ ತರುಣನಾಗಿದ್ದ ಲೇವಿಯ ಧ್ವನಿಯನ್ನು ಕೇಳಿ ಗುರುತಿಸಿದರು. ಆದ್ದರಿಂದ ಅವರು ಮೀಕನ ಮನೆಯಲ್ಲಿ ಇಳಿದುಕೊಂಡು ಆ ತರುಣನಿಗೆ, “ನಿನ್ನನ್ನು ಇಲ್ಲಿಗೆ ಯಾರು ಕರೆದುತಂದರು? ನೀನು ಇಲ್ಲಿ ಏನು ಮಾಡುತ್ತಿರುವೆ? ಇಲ್ಲಿ ನಿನ್ನ ಉದ್ಯೋಗವೇನು?” ಎಂದು ಕೇಳಿದರು.
4 ಮೀಕನು ತನಗಾಗಿ ಮಾಡಿದ ಎಲ್ಲಾ ವ್ಯವಸ್ಥೆಯನ್ನು ಅವರಿಗೆ ವಿವರಿಸಿ, “ನಾನು ಮೀಕನ ಯಾಜಕನಾಗಿ ಕೆಲಸ ಮಾಡುತ್ತಿದ್ದೇನೆ. ಅವನು ನನಗೆ ಸಂಬಳ ಕೊಡುತ್ತಾನೆ” ಎಂದು ಹೇಳಿದನು.
5 ಅವರು ಅವನಿಗೆ, “ವಾಸಕ್ಕಾಗಿ ಭೂಮಿಯನ್ನು ಹುಡುಕಲು ಕೈಕೊಂಡ ನಮ್ಮ ಪ್ರಯಾಣ ಸಫಲವಾಗುವುದೋ ಇಲ್ಲವೋ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ದಯವಿಟ್ಟು ದೇವರಲ್ಲಿ ಈ ವಿಷಯ ಕೇಳು” ಎಂದು ಕೇಳಿಕೊಂಡರು.
6 ಆ ಯಾಜಕನು, “ಸಮಾಧಾನದಿಂದ ಹೋಗಿರಿ; ಯೆಹೋವನು ನಿಮಗೆ ಮಾರ್ಗದರ್ಶನ ಮಾಡುತ್ತಾನೆ” ಎಂದು ಉತ್ತರಿಸಿದನು.
7 ಆ ಐದು ಜನರು ಹೊರಟರು. ಅವರು ಲಯಿಷ್ ನಗರಕ್ಕೆ ಬಂದರು. ಅಲ್ಲಿಯ ಜನರು ಸುರಕ್ಷಿತವಾಗಿರುವುದನ್ನು ಅವರು ನೋಡಿದರು. ಚೀದೋನ್ಯರು ಅವರನ್ನು ಆಳುತ್ತಿದ್ದರು. ಎಲ್ಲವೂ ಶಾಂತವಾಗಿತ್ತು; ಸಮಾಧಾನಕರವಾಗಿತ್ತು; ಸುಖಕರವಾಗಿತ್ತು. ಸಮೀಪದಲ್ಲಿ ಅವರನ್ನು ಪೀಡಿಸುವ ಶತ್ರುಗಳು ಇರಲಿಲ್ಲ. ಅವರು ಚೀದೋನ್ ನಗರದಿಂದ ಬಹಳ ದೂರ ಇದ್ದರು. ಅವರು ಆರಾಮಿನ ಜನರೊಡನೆ ಯಾವ ಒಪ್ಪಂದವನ್ನೂ ಇಟ್ಟುಕೊಂಡಿರಲಿಲ್ಲ.
8 ಆ ಐದು ಜನರು ಚೊರ್ಗಾ, ಎಷ್ಟಾವೋಲ್ ನಗರಗಳಿಗೆ ಹಿಂತಿರುಗಿಹೋದರು. ಅವರ ಬಂಧುಗಳು, “ನೀವು ಯಾವ ವರ್ತಮಾನ ತಂದಿದ್ದೀರಿ?” ಎಂದು ಕೇಳಿದರು.
9 ಈ ಐದು ಜನ, “ನಾವು ಒಂದು ಪ್ರದೇಶವನ್ನು ಹುಡುಕಿದ್ದೇವೆ. ಅದು ಬಹಳ ಚೆನ್ನಾಗಿದೆ. ತಡಮಾಡುವುದು ಬೇಡ. ಬೇಗ ಹೋಗಿ ಆ ಭೂಮಿಯನ್ನು ತೆಗೆದುಕೊಳ್ಳೋಣ. 10 ನೀವು ಆ ಸ್ಥಳಕ್ಕೆ ಬಂದಮೇಲೆ ಅಲ್ಲಿ ಸಾಕಷ್ಟು ಭೂಮಿ ಇದೆ ಎಂಬುದನ್ನು ಅರಿತುಕೊಳ್ಳುತ್ತೀರಿ. ಅಲ್ಲಿ ಎಲ್ಲವೂ ಸಮೃದ್ಧಿಕರವಾಗಿದೆ. ಅಲ್ಲಿಯ ಜನರಿಗೆ ಶತ್ರುಗಳು ಧಾಳಿ ಮಾಡಬಹುದೆಂಬ ಭಯವೇ ಇಲ್ಲ. ಖಂಡಿತವಾಗಿಯೂ ದೇವರು ಆ ಭೂಮಿಯನ್ನು ನಮಗೆ ಕೊಟ್ಟಿದ್ದಾನೆ” ಎಂದು ಉತ್ತರಿಸಿದರು.
11 ದಾನ್ ಕುಲದವರ ಆರುನೂರು ಜನರು ಚೊರ್ಗಾ ಮತ್ತು ಎಷ್ಟಾವೋಲ್ ನಗರಗಳಿಂದ ಹೊರಟರು. ಅವರು ಯುದ್ಧ ಸನ್ನದ್ಧರಾಗಿದ್ದರು. 12 ಲಯಿಷ್ ನಗರಕ್ಕೆ ಹೋಗುವ ಮಾರ್ಗದಲ್ಲಿ ಅವರು ಯೆಹೂದದ ಕಿರ್ಯತ್ಯಾರೀಮಿನ ಬಳಿಯಲ್ಲಿ ನಿಂತುಕೊಂಡರು. ಅವರು ಅಲ್ಲಿ ಒಂದು ಪಾಳೆಯ ಮಾಡಿಕೊಂಡರು. ಆದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ “ದಾನ್ಯರ ಪಾಳೆಯ”ವೆಂಬ ಹೆಸರಿದೆ. 13 ಅಲ್ಲಿಂದ ಆ ಆರುನೂರು ಮಂದಿ ಎಫ್ರಾಯೀಮಿನ ಬೆಟ್ಟಪ್ರದೇಶಕ್ಕೆ ಪ್ರಯಾಣಮಾಡಿ ಮೀಕನ ಮನೆಗೆ ಬಂದರು.
14 ಆಗ ಲಯಿಷ್ ದೇಶವನ್ನು ಸಂಚರಿಸಿ ನೋಡಲು ಹೋಗಿದ್ದ ಐದು ಜನರು ತಮ್ಮ ಬಂಧುಗಳಿಗೆ, “ಇಲ್ಲಿಯ ಒಂದು ಮನೆಯಲ್ಲಿ ಏಫೋದ್ ಇದೆ; ಮನೆದೇವರುಗಳೂ ಇವೆ. ಕೆತ್ತಿ ಮಾಡಿರುವ ಒಂದು ವಿಗ್ರಹವೂ ಇದೆ. ಈಗ ನೀವು ಹೋಗಿ ಅವುಗಳನ್ನು ತೆಗೆದುಕೊಂಡು ಬನ್ನಿರಿ” ಎಂದು ಹೇಳಿದರು. 15 ಅವರು ಯೌವನಸ್ಥನಾದ ಲೇವಿಯು ಇದ್ದ ಮೀಕನ ಮನೆಗೆ ಬಂದು ಇಳಿದುಕೊಂಡರು. ತರುಣನ ಯೋಗಕ್ಷೇಮವನ್ನು ಕೇಳಿದರು. 16 ದಾನ್ಯರ ಆರುನೂರು ಜನರು ಪುರದ್ವಾರದಲ್ಲಿ ನಿಂತಿದ್ದರು. ಅವರು ಆಯುಧಗಳನ್ನು ಹಿಡಿದುಕೊಂಡು ಯುದ್ಧ ಸನ್ನದ್ಧರಾಗಿದ್ದರು. 17-18 ಆ ಐದು ಜನ ಗೂಢಚಾರರು ಮನೆಯೊಳಗೆ ಪ್ರವೇಶ ಮಾಡಿದರು. ಯಾಜಕನು ಹೊರಗೆ ಬಾಗಿಲ ಬಳಿಯಲ್ಲಿ ಯುದ್ಧ ಸನ್ನದ್ಧರಾದ ಆರುನೂರು ಜನರ ಸಂಗಡ ನಿಂತಿದ್ದನು. ಆಗ ಆ ಐದು ಮಂದಿ ಮನೆಯೊಳಗೆ ಹೋಗಿ ಕೆತ್ತನೆಯ ವಿಗ್ರಹವನ್ನೂ ಏಫೋದನ್ನೂ ಬೆಳ್ಳಿವಿಗ್ರಹಗಳನ್ನೂ ಗೃಹದೇವತೆಗಳ ವಿಗ್ರಹಗಳನ್ನೂ ತೆಗೆದುಕೊಂಡರು. ಅವರನ್ನು ಕಂಡ ತರುಣ ಲೇವಿಯು, “ನೀವು ಏನು ಮಾಡುತ್ತಿದ್ದೀರಿ?” ಎಂದು ಕೇಳಿದನು.
19 ಆ ಐದು ಜನರು, “ಸುಮ್ಮನಿರು, ಶಬ್ದ ಮಾಡಬೇಡ. ನಮ್ಮ ಸಂಗಡ ಬಾ. ನಮಗೆ ತಂದೆಯೂ ಯಾಜಕನೂ ಆಗಿರು. ನೀನು ಕೇವಲ ಒಬ್ಬ ಮನುಷ್ಯನ ಯಾಜಕನಾಗಿರುವುದು ಒಳ್ಳೆಯದೋ ಅಥವಾ ಇಸ್ರೇಲರ ಒಂದು ಕುಲದ ಯಾಜಕನಾಗಿರುವುದು ಒಳ್ಳೆಯದೋ ಎಂಬುದನ್ನು ನೀನೇ ವಿಚಾರಮಾಡು” ಎಂದು ಉತ್ತರಿಸಿದರು.
20 ಇದರಿಂದ ಲೇವಿಯನಿಗೆ ಸಂತೋಷವಾಯಿತು. ಅವನು ಏಫೋದನ್ನೂ ಗೃಹದೇವತೆಗಳನ್ನೂ ಕೆತ್ತನೆಯ ಕೆಲಸದ ವಿಗ್ರಹವನ್ನೂ ತೆಗೆದುಕೊಂಡು ದಾನ್ಯರ ಜೊತೆಗೆ ಹೋದನು.
21 ಆಗ ದಾನ್ಯರ ಆರುನೂರು ಜನರು ಲೇವಿಯ ಯಾಜಕನೊಂದಿಗೆ ಮೀಕನ ಮನೆಯನ್ನು ಬಿಟ್ಟುಹೊರಟರು. ಅವರು ತಮ್ಮ ಹೆಂಡತಿಮಕ್ಕಳನ್ನೂ ತಮ್ಮ ದನಕರುಗಳನ್ನೂ ಎಲ್ಲಾ ವಸ್ತುಗಳನ್ನೂ ಮುಂದೆ ಕಳುಹಿಸಿದರು.
22 ಆ ಸ್ಥಳದಿಂದ ದಾನ್ಯರು ಬಹುದೂರ ಹೋದರು. ಮೀಕನೂ ಅವನ ನೆರೆಹೊರೆಯವರೆಲ್ಲರೂ ಒಂದೆಡೆ ಸೇರಿದರು. 23 ಅವರು ದಾನ್ಯರನ್ನು ಬೆನ್ನಟ್ಟಿಕೊಂಡು ಅವರ ಸಮೀಪಕ್ಕೆ ಹೋಗಿ ಅವರನ್ನು ಕೂಗಿದರು. ದಾನ್ಯರು ಹಿಂತಿರುಗಿ ನೋಡಿ ಮೀಕನಿಗೆ, “ನಿನಗೇನಾಗಿದೆ? ಏಕೆ ಕೂಗಿಕೊಳ್ಳುತ್ತಿರುವೆ?” ಎಂದು ಕೇಳಿದರು.
24 ಮೀಕನು, “ದಾನ್ಯರಾದ ನೀವು ನನ್ನ ವಿಗ್ರಹಗಳನ್ನು ತೆಗೆದುಕೊಂಡಿದ್ದೀರಿ. ಆ ವಿಗ್ರಹಗಳನ್ನು ನಾನು ನನಗೋಸ್ಕರ ಮಾಡಿಸಿದ್ದೆ. ನೀವು ನನ್ನ ಯಾಜಕನನ್ನು ಸಹ ತೆಗೆದುಕೊಂಡಿದ್ದೀರಿ. ನನ್ನ ಹತ್ತಿರ ಈಗ ಏನು ಉಳಿದಿದೆ? ಹೀಗೆಲ್ಲ ಮಾಡಿ ನೀವು ನನಗೆ, ‘ನಿನಗೇನಾಗಿದೆ?’ ಎಂದು ಕೇಳಬಹುದೇ?” ಎಂದು ಉತ್ತರಕೊಟ್ಟನು.
25 ಅದಕ್ಕೆ ದಾನ್ಯರು, “ನೀನು ನಮ್ಮ ಜೊತೆ ವಾದವಿವಾದ ಮಾಡದಿರುವುದೇ ಒಳ್ಳೆಯದು. ನಮ್ಮಲ್ಲಿ ಬಹಳ ಸಿಟ್ಟಿನ ಕೆಲವರಿದ್ದಾರೆ. ನೀನು ಹೀಗೆ ಕೂಗಾಡಿದರೆ ಅವರು ನಿಮ್ಮ ಮೇಲೆ ಧಾಳಿ ಮಾಡಬಹುದು. ಆಗ ನೀನು ಮತ್ತು ನಿನ್ನ ಕುಟುಂಬದವರು ಸತ್ತು ಹೋಗುವಿರಿ” ಎಂದು ಪ್ರತ್ಯುತ್ತರ ಕೊಟ್ಟರು.
26 ಆಮೇಲೆ ದಾನ್ಯರು ಮತ್ತೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಅವರು ತುಂಬ ಬಲಿಷ್ಠರೆಂದೂ ತನ್ನಿಂದ ಏನೂ ಮಾಡಲು ಸಾಧ್ಯವಿಲ್ಲವೆಂದೂ ಮೀಕನು ತಿಳಿದುಕೊಂಡು ಮನೆಗೆ ಹಿಂದಿರುಗಿದನು.
27 ಮೀಕನು ಮಾಡಿಸಿದ ವಿಗ್ರಹಗಳನ್ನು ದಾನ್ಯರು ತೆಗೆದುಕೊಂಡರು. ಅವರು ಮೀಕನ ಜೊತೆಗಿದ್ದ ಯಾಜಕನನ್ನು ಸಹ ತೆಗೆದುಕೊಂಡು ಹೋದರು. ಅವರು ಲಯಿಷಿಗೆ ಬಂದು ಅಲ್ಲಿನ ಜನರ ಮೇಲೆ ಧಾಳಿಮಾಡಿದರು. ಆ ಜನರು ಶಾಂತಿಯಿಂದ ಇದ್ದರು. ಅವರು ಧಾಳಿಯನ್ನು ನಿರೀಕ್ಷಿಸಿರಲಿಲ್ಲ. ದಾನ್ಯರು ತಮ್ಮ ಖಡ್ಗಗಳಿಂದ ಆ ಜನರನ್ನು ಕೊಂದುಹಾಕಿದರು. ಆಮೇಲೆ ಆ ನಗರವನ್ನು ಸುಟ್ಟುಬಿಟ್ಟರು. 28 ಲಯಿಷಿನಲ್ಲಿ ವಾಸಮಾಡುತ್ತಿದ್ದ ಜನರನ್ನು ರಕ್ಷಿಸುವವರು ಯಾರೂ ಇರಲಿಲ್ಲ. ಅವರು ಚೀದೋನ್ ನಗರದಿಂದ ಬಹುದೂರದಲ್ಲಿದ್ದ ಕಾರಣ ಅವರೂ ಬರುವಂತಿರಲಿಲ್ಲ. ಲಯಿಷಿನವರು ಆರಾಮಿನ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಂಡಿರಲಿಲ್ಲ. ಹೀಗಾಗಿ ಅವರೂ ಸಹಾಯಕ್ಕೆ ಬರಲಿಲ್ಲ. ಬೇತ್‌ರೆಹೋಬಿನ ಕಣಿವೆಯಲ್ಲಿದ್ದ ಈ ನಗರವನ್ನು ದಾನ್ಯರು ಹೊಸದಾಗಿ ಕಟ್ಟಿದರು. ಆ ನಗರವು ಅವರ ವಾಸಸ್ಥಾನವಾಯಿತು. 29 ದಾನ್ಯರು ಆ ನಗರಕ್ಕೆ ಒಂದು ಹೊಸ ಹೆಸರನ್ನು ಕೊಟ್ಟರು. ಹಿಂದೆ ಅದರ ಹೆಸರು ಲಯಿಷ್ ಎಂದಿತ್ತು. ಆದರೆ ಅವರು ಅದಕ್ಕೆ ದಾನ್ ಎಂದು ಹೆಸರಿಟ್ಟರು. ಅವರು ತಮ್ಮ ಪೂರ್ವಿಕನಾದ ದಾನನ ಸ್ಮರಣಾರ್ಥವಾಗಿ ಆ ಹೆಸರನ್ನಿಟ್ಟರು. ದಾನನು ಇಸ್ರೇಲನ ಮಕ್ಕಳಲ್ಲಿ ಒಬ್ಬನು.
30 ದಾನ್ಯರು ದಾನ್ ನಗರದಲ್ಲಿ ಆ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಅವರು ಗೇರ್ಷೋಮನ ಮಗನಾದ ಯೆಹೋನಾತಾನನನ್ನು ತಮ್ಮ ಯಾಜಕನನ್ನಾಗಿ ಮಾಡಿಕೊಂಡರು. ಗೇರ್ಷೋಮನು ಮೋಶೆಯ*ಮೋಶೆ ಅಥವಾ “ಮನಸ್ಸೆ” ಮಗನಾಗಿದ್ದನು. ಇಸ್ರೇಲರನ್ನು ಸೆರೆಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋಗುವವರೆಗೆ ಯೆಹೋನಾತಾನನು ಮತ್ತು ಅವನ ಮಕ್ಕಳು ದಾನ್ಯರ ಯಾಜಕರಾಗಿದ್ದರು. 31 ಮೀಕನು ಮಾಡಿದ್ದ ಆ ವಿಗ್ರಹಗಳನ್ನು ದಾನ್ಯರು ಪೂಜಿಸಿದರು. ಶೀಲೋವಿನಲ್ಲಿ ದೇವಸ್ಥಾನವಿದ್ದ ಕಾಲದಲ್ಲೆಲ್ಲಾ ಅವರು ಆ ವಿಗ್ರಹಗಳನ್ನು ಪೂಜಿಸಿದರು.