2
ದೇವ ಜನರ ದೇವದ್ರೋಹವು
1 ಯೆಹೋವನ ಈ ಸಂದೇಶವು ಯೆರೆಮೀಯನಿಗೆ ಬಂದಿತು: 2 “ಯೆರೆಮೀಯನೇ, ಹೋಗಿ ಜೆರುಸಲೇಮಿನ ಜನರೊಂದಿಗೆ ಮಾತನಾಡು, ಅವರಿಗೆ ಹೀಗೆ ಹೇಳು:
“ಯೆಹೋವನು ಹೀಗೆನ್ನುತ್ತಾನೆ: ‘ನೀವು ಯುವ ರಾಷ್ಟ್ರವಾಗಿದ್ದಾಗ ನನಗೆ ನಂಬಿಗಸ್ತರಾಗಿದ್ದಿರಿ;
ಯುವತಿಯಾದ ಮದುಮಗಳಂತೆ ನನ್ನನ್ನು ಹಿಂಬಾಲಿಸಿದಿರಿ.
ಎಂದೂ ಬೇಸಾಯಕ್ಕೆ ಬಳಸದ ಭೂಮಿಯಲ್ಲಿಯೂ
ಮರಳುಗಾಡಿನಲ್ಲಿಯೂ ನನ್ನನ್ನು ಹಿಂಬಾಲಿಸಿದಿರಿ.
3 ಇಸ್ರೇಲಿನ ಜನರು ಯೆಹೋವನಿಗೆ ಒಂದು ಪವಿತ್ರವಾದ ಕಾಣಿಕೆಯಾಗಿದ್ದರು.
ಅವರು ಯೆಹೋವನ ಬೆಳೆಯ ಪ್ರಥಮ ಫಲವಾಗಿದ್ದರು.
ಇಸ್ರೇಲಿನ ಜನರನ್ನು ಪೀಡಿಸಲು ಪ್ರಯತ್ನಿಸಿದವರನ್ನು ಯಾರಾದರೂ ಆಗಿರಲಿ, ದೋಷಿಗಳೆಂದು ನಿರ್ಣಯಿಸಲಾಗುತ್ತಿತ್ತು.
ಆ ಕೆಟ್ಟ ಜನರಿಗೆ ಕೇಡಾಗುತ್ತಿತ್ತು.’ ”
ಇದು ಯೆಹೋವನ ಸಂದೇಶ.
4 ಯಾಕೋಬನ ಮನೆತನದವರೇ, ಯೆಹೋವನ ಸಂದೇಶವನ್ನು ಕೇಳಿರಿ.
ಇಸ್ರೇಲಿನ ಎಲ್ಲಾ ಕುಲದವರೇ, ಯೆಹೋವನ ಸಂದೇಶವನ್ನು ಕೇಳಿರಿ.
5 ಯೆಹೋವನು ಹೀಗೆನ್ನುತ್ತಾನೆ:
“ನಾನು ನಿಮ್ಮ ಪೂರ್ವಿಕರಿಗೆ ಅನ್ಯಾಯ ಮಾಡಿದೆನೇ?
ಅದಕ್ಕಾಗಿ ಅವರು ನನ್ನನ್ನು ತಿರಸ್ಕರಿಸಿದರೇ?
ನಿಮ್ಮ ಪೂರ್ವಿಕರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಪೂಜಿಸಿ
ತಾವು ಸಹ ನಿಷ್ಪ್ರಯೋಜಕರಾದರು.
6 ‘ಈಜಿಪ್ಟಿನಿಂದ ನಮ್ಮನ್ನು ಕರೆದುಕೊಂಡು ಬಂದ ಯೆಹೋವನು ಎಲ್ಲಿದ್ದಾನೆ?
ಮರಳುಗಾಡಿನಿಂದ ನಮ್ಮನ್ನು ಕರೆದುಕೊಂಡು ಬಂದ ಯೆಹೋವನು ಎಲ್ಲಿದ್ದಾನೆ?
ನಿರ್ಜನವಾದ ಬೆಟ್ಟಪ್ರದೇಶದಿಂದ ನಮ್ಮನ್ನು ತಂದ ಯೆಹೋವನು ಎಲ್ಲಿದ್ದಾನೆ?
ಎಂದು ನಿಮ್ಮ ಪೂರ್ವಿಕರು ಸ್ಮರಿಸಲಿಲ್ಲ.
ಯೆಹೋವನು ನಮ್ಮನ್ನು ಅಂಧಕಾರಮಯವಾದ
ಮತ್ತು ಅಪಾಯಕಾರಿಯಾದ ಭೂಮಿಯಿಂದ ಕರೆದುತಂದನು.
ಆ ಭೂಮಿಯ ಮಾರ್ಗವಾಗಿ ಯಾರೂ ಪ್ರಯಾಣ ಮಾಡುವುದಿಲ್ಲ.
ಯಾರೂ ಆ ಭೂಮಿಯ ಮೇಲೆ ವಾಸ ಮಾಡುವದಿಲ್ಲ.
ಈಗ ಆ ಯೆಹೋವನು ಎಲ್ಲಿದ್ದಾನೆ?’ ”
ನಿಮ್ಮ ಪೂರ್ವಿಕರು ಆ ಪ್ರಶ್ನೆಗಳನ್ನು ಕೇಳಲೇ ಇಲ್ಲ.
7 “ನಾನು ನಿಮ್ಮನ್ನು ಅನೇಕ ಅಮೂಲ್ಯವಸ್ತುಗಳಿಂದ ಕೂಡಿದ
ಫಲವತ್ತಾದ ಭೂಮಿಗೆ ಕರೆದುತಂದೆ.
ಅಲ್ಲಿ ಬೆಳೆಯುವ ಫಲಗಳನ್ನು ತಿನ್ನಲಿ ಎಂಬ ಉದ್ದೇಶದಿಂದ ನಾನು ಕರೆದುತಂದೆ.
ಆದರೆ ನೀವು ಬಂದು ನನ್ನ ಭೂಮಿಯನ್ನು ಹೊಲಸು ಮಾಡಿದಿರಿ.
ನಾನು ಆ ಭೂಮಿಯನ್ನು ನಿಮಗೆ ಕೊಟ್ಟೆ,
ಆದರೆ ನೀವು ಅದನ್ನು ಕೆಟ್ಟ ಸ್ಥಳವನ್ನಾಗಿ ಮಾಡಿದಿರಿ.
8 “ ‘ಯೆಹೋವನು ಎಲ್ಲಿ?’
ಎಂದು ಯಾಜಕರು ಕೇಳಲಿಲ್ಲ.
ಧರ್ಮಶಾಸ್ತ್ರವನ್ನು ಬಲ್ಲವರು ನನ್ನನ್ನು ತಿಳಿಯಬಯಸಲಿಲ್ಲ.
ಇಸ್ರೇಲರ ಜನನಾಯಕರು ನನ್ನ ವಿರೋಧಿಗಳಾದರು.
ಪ್ರವಾದಿಗಳು ಸುಳ್ಳುದೇವರಾದ ಬಾಳನ ಹೆಸರಿನಿಂದ ಭವಿಷ್ಯವಾಣಿಯನ್ನು ನುಡಿದರು.
ಅವರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಪೂಜಿಸಿದರು.”
9 “ಆದ್ದರಿಂದ ನಾನು ನಿಮ್ಮನ್ನು ಮತ್ತೊಮ್ಮೆ ಆಪಾದಿಸುವೆನು.
ನಾನು ನಿಮ್ಮ ಮೊಮ್ಮಕ್ಕಳ ಮೇಲೂ ಆಪಾದಿಸುವೆನು” ಎನ್ನುತ್ತಾನೆ ಯೆಹೋವನು.
10 ಸಮುದ್ರದ ಆಚೆಗಿದ್ದ ಕಿತ್ತೀಮ್ ದಿಬಪಗಳಿಗೆ ಹೋಗಿ ನೋಡಿರಿ.
ಸೂಕ್ಷ್ಮವಾಗಿ ಪರಿಶೀಲಿಸಲು ಯಾರನ್ನಾದರೂ ಕೇದಾರಿಗೆ ಕಳುಹಿಸಿರಿ.
ಯಾರಾದರೂ ಎಂದಾದರೂ
ಇಂಥ ಕೆಲಸ ಮಾಡಿರುವರೇ, ನೋಡಿರಿ.
11 ಯಾವ ಜನಾಂಗವಾದರೂ ಎಂದಾದರೂ
ತಮ್ಮ ಹಳೆಯ ದೇವರುಗಳನ್ನು ಬದಲಾಯಿಸಿ ಹೊಸ ದೇವರುಗಳನ್ನು ಪಡೆಯಿತೇ?
ಇಲ್ಲ. (ಅವರ ದೇವರುಗಳು ನಿಜವಾದ ದೇವರುಗಳೇ ಅಲ್ಲ.)
ಆದರೆ ನನ್ನ ಜನರು ತಮ್ಮ ಮಹಿಮಾಶಾಲಿಯಾದ ದೇವರನ್ನು
ಅಪ್ರಯೋಜಕವಾದ ವಿಗ್ರಹಗಳೊಂದಿಗೆ ಬದಲಾಯಿಸಿಕೊಂಡಿದ್ದಾರೆ.
12 “ಆಕಾಶಮಂಡಲವೇ, ನಡೆದ ಸಂಗತಿಗಳಿಗಾಗಿ ಬೆಚ್ಚಿಬೆರಗಾಗು!
ಭಯದಿಂದ ನಡುಗು!”
ಎಂದು ಯೆಹೋವನು ನುಡಿಯುತ್ತಾನೆ.
13 “ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ.
ಅವರು ನನ್ನಿಂದ ಮುಖ ತಿರುವಿದ್ದಾರೆ.
ನಾನು ಜೀವಜಲದ ಬುಗ್ಗೆಯಾಗಿದ್ದೇನೆ.
ಅವರು ತಮ್ಮದೇ ಆದ ನೀರಿನ ತೊಟ್ಟಿಗಳನ್ನು ನಿರ್ಮಿಸಿಕೊಂಡಿದ್ದಾರೆ.
ಅವರು ಇತರ ದೇವರುಗಳ ಕಡೆಗೆ ತಿರುಗಿಕೊಂಡಿದ್ದಾರೆ.
ಅವರ ತೊಟ್ಟಿಗಳು ಒಡೆದಿವೆ. ಅವುಗಳಲ್ಲಿ ನೀರು ತುಂಬಿಡಲು ಸಾಧ್ಯವಿಲ್ಲ.
14 “ಇಸ್ರೇಲಿನ ಜನರು ಗುಲಾಮರಾಗಿರುವರೇ?
ಅವರು ಗುಲಾಮರಾಗಿ ಹುಟ್ಟಿದ ಮನುಷ್ಯನಂತಿರುವರೇ?
ಬೇರೆಯವರು ಇಸ್ರೇಲರ ಸಂಪತ್ತನ್ನು ಏಕೆ ತೆಗೆದುಕೊಂಡರು?
15 ಪ್ರಾಯದಸಿಂಹಗಳು (ವೈರಿಗಳು) ಇಸ್ರೇಲ್ ಜನಾಂಗದ ಮೇಲೆ ಗರ್ಜಿಸುತ್ತಿವೆ.
ಆ ಸಿಂಹಗಳು ಆರ್ಭಟಿಸುತ್ತಿವೆ; ಇಸ್ರೇಲರ ನಾಡನ್ನು ನಾಶಮಾಡಿವೆ.
ಇಸ್ರೇಲ್‌ನ ನಗರಗಳು ಸುಡಲ್ಪಟ್ಟಿವೆ;
ಅವುಗಳು ನಿರ್ಜನವಾಗಿವೆ.
16 ಮೆಂಫೀಸ್ ಮತ್ತು ತಹಪನೇಸ್ ನಗರಗಳ ಜನರು
ನಿನ್ನ ತಲೆಬುರುಡೆಯನ್ನು ಒಡೆದುಬಿಟ್ಟಿದ್ದಾರೆ.
17 ತೊಂದರೆಯು ನಿನ್ನ ತಪ್ಪಿನ ಫಲ.
ನಿನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತಿದ್ದ
ನಿನ್ನ ದೇವರಾದ ಯೆಹೋವನಿಗೆ ನೀನು ವಿಮುಖನಾದೆ.
18 ಯೆಹೂದದ ಜನರೇ, ಅದರ ಬಗ್ಗೆ ಯೋಚಿಸಿರಿ.
ಇದರಿಂದ ನಿಮಗೆ ಈಜಿಪ್ಟಿಗೆ ಹೋಗಲು ಸಹಾಯವಾಯಿತೇ? ನೈಲ್ ನದಿಯ ನೀರನ್ನು ಕುಡಿಯಲು ಈಜಿಪ್ಟಿಗೆ ಹೋಗುವುದೇಕೆ?*ನೈಲ್ … ಹೋಗುವುದೇಕೆ? ಅಥವಾ “ಈಜಿಪ್ಟ್ ಮತ್ತು ಅಸ್ಸೀರಿಯಾಗಳಿಂದ ನೀನು ಸಹಾಯ ಬೇಡುವುದೇಕೆ?”
ಅವರ ನದಿಯ ನೀರನ್ನು ಕುಡಿಯಲು ಅಸ್ಸೀರಿಯಕ್ಕೆ ಹೋಗುವುದೇಕೆ?
19 ನೀವು ಕೆಟ್ಟದ್ದನ್ನು ಮಾಡಿದರೆ
ಆ ಕೆಟ್ಟತನ ನಿಮಗೆ ಶಿಕ್ಷೆಯಾಗುವಂತೆ ಮಾತ್ರ ಮಾಡುತ್ತದೆ.
ನಿಮಗೆ ವಿಪತ್ತು ಬರುತ್ತದೆ.
ಆ ವಿಪತ್ತು ನಿಮಗೊಂದು ಪಾಠವನ್ನು ಕಲಿಸುತ್ತದೆ.
ಅದರ ಬಗ್ಗೆ ಯೋಚಿಸಿರಿ. ಆಗ ನಿಮ್ಮ ದೇವರಿಗೆ ವಿಮುಖರಾಗುವುದು ಎಷ್ಟು ಕೆಟ್ಟದ್ದೆಂದು ನಿಮಗೆ ಗೊತ್ತಾಗುತ್ತದೆ.
ನನಗೆ ಭಯಭಕ್ತಿ ತೋರದೆ ಇರುವದು ತಪ್ಪು.”
ಈ ಸಂದೇಶವು ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನಿಂದ ಬಂದಿತು.
20 “ಯೆಹೂದವೇ, ಬಹಳ ದಿನಗಳ ಹಿಂದೆಯೇ ನೀನು ನಿನ್ನ ನೊಗವನ್ನು ಕಳಚಿ ಎಸೆದುಬಿಟ್ಟೆ.
ನನ್ನೊಂದಿಗೆ ಬಂಧಿಸಿದ ಕಣ್ಣಿಗಳನ್ನು ಹರಿದುಬಿಟ್ಟೆ.
‘ನಾನು ನಿನ್ನನ್ನು ಸೇವಿಸುವದಿಲ್ಲ’ವೆಂದು ನನಗೆ ಹೇಳಿಬಿಟ್ಟೆ.
ನಿಜವಾಗಿ ನೋಡಿದರೆ ಎತ್ತರವಾದ ಎಲ್ಲಾ ಪರ್ವತಗಳ ಮೇಲೂ ಮತ್ತು ಸೊಂಪಾಗಿ ಬೆಳೆದ ಎಲ್ಲಾ ಮರಗಳ ಕೆಳಗೂ
ನೀನು ಮಲಗಿಕೊಂಡು ವೇಶ್ಯೆಯರಂತೆ ವರ್ತಿಸಿದೆ.†ಎತ್ತರ … ವರ್ತಿಸಿದೆ ಈ ಸ್ಥಳಗಳಲ್ಲಿ ಜನರು ತಮ್ಮ ಸುಳ್ಳುದೇವರುಗಳನ್ನು ಪೂಜಿಸಿದರು ಎಂದರ್ಥ.
21 ಯೆಹೂದವೇ, ನಾನು ನಿನ್ನನ್ನು ಅತ್ಯುತ್ತಮ ದ್ರಾಕ್ಷಾಲತೆಯಂತೆ ನೆಟ್ಟೆ.
ನೀನು ಒಳ್ಳೆಯ ಬೀಜದಂತಿದ್ದಿ.
ನೀನು ಕೆಟ್ಟ ಫಲಗಳನ್ನು ಫಲಿಸುವ ಬೇರೆ ದ್ರಾಕ್ಷಿಯ ಬಳ್ಳಿಯಾದದ್ದು ಹೇಗೆ?
22 ನೀನು ಚೌಳನಿಂದ ತೊಳೆದುಕೊಂಡರೂ
ಹೆಚ್ಚು ಸೋಪನ್ನು ಉಪಯೋಗಿಸಿದರೂ
ನಾನು ನಿನ್ನ ದೋಷವನ್ನು ಕಂಡುಹಿಡಿಯಬಲ್ಲೆ” ಅನ್ನುತ್ತಾನೆ ಯೆಹೋವನು.
23 “ಯೆಹೂದವೇ, ‘ನಾನು ತಪ್ಪಿತಸ್ಥಳಲ್ಲವೆಂದೂ ನಾನು ಬಾಳನ ವಿಗ್ರಹಗಳನ್ನು ಪೂಜಿಸಲಿಲ್ಲವೆಂದೂ’
ನೀನು ನನಗೆ ಹೇಗೆ ಹೇಳುವೆ?
ನೀನು ಕಣಿವೆಯಲ್ಲಿ ಮಾಡಿದ ಕಾರ್ಯಗಳ ಬಗ್ಗೆ ಯೋಚಿಸು.
ನೀನು ಮಾಡಿದ ಕೆಲಸಗಳ ಬಗ್ಗೆ ಯೋಚಿಸು.
ನೀನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡಿಹೋಗುವ
ತೀವ್ರಗತಿಯ ಹೆಣ್ಣು ಒಂಟೆಯಂತೆ ಇರುವೆ.
24 ನೀನು ಮರುಭೂಮಿಯಲ್ಲಿ ವಾಸಿಸುವ ಕಾಡುಕತ್ತೆಯಂತೆ ಇರುವೆ.
ಅದು ಬೆದೆಯ ಕಾಲದಲ್ಲಿ ಗಾಳಿಯನ್ನು ಮೂಸಿ ನೋಡುತ್ತದೆ.
ಅದಕ್ಕೆ ಬೆದೆ ಏರಿದಾಗ ಯಾರೂ ಅದನ್ನು ಹಿಡಿಯಲು ಸಾಧ್ಯವಿಲ್ಲ.
ಅದು ಬೆದೆಗೆ ಬಂದಾಗ ಅದನ್ನು ಇಷ್ಟಪಡುವ ಪ್ರತಿಯೊಂದು ಗಂಡು ಕತ್ತೆಗೆ ಅದು ಲಭಿಸುವುದು.
ಆಗ ಅದನ್ನು ಪಡೆಯುವುದು ಬಹಳ ಸುಲಭ.
25 ಯೆಹೂದವೇ, ವಿಗ್ರಹಗಳ ಬೆನ್ನುಹತ್ತಿ ಹೋಗುವದನ್ನು ನಿಲ್ಲಿಸು!
ಆ ಅನ್ಯದೇವರುಗಳ ಬಗ್ಗೆ ನಿನ್ನಲ್ಲಿರುವ ಬಯಕೆಯನ್ನು ತೊರೆದುಬಿಡು.
ಆದರೆ ನೀನು ‘ಹಾಗೆ ಮಾಡಿದರೆ ಪ್ರಯೋಜನವೇನು? ನಾನು ಅವುಗಳನ್ನು ಬಿಡಲಾರೆ.
ನಾನು ಆ ಅನ್ಯದೇವರುಗಳನ್ನು ಪ್ರೀತಿಸುತ್ತೇನೆ.
ನಾನು ಅವುಗಳನ್ನು ಪೂಜಿಸಬಯಸುತ್ತೇನೆ’ ಎಂದು ಹೇಳುವೆ.
26 “ಜನರ ಕೈಗೆ ಸಿಕ್ಕಿಬಿದ್ದಾಗ
ಕಳ್ಳನಿಗೆ ನಾಚಿಕೆಯಾಗುತ್ತದೆ.
ಅದೇ ರೀತಿಯಲ್ಲಿ ಇಸ್ರೇಲ್ ವಂಶವು ನಾಚಿಕೆಪಡುತ್ತದೆ.
ರಾಜರು ಮತ್ತು ನಾಯಕರು ನಾಚಿಕೆಪಡುವರು. ಯಾಜಕರು ಮತ್ತು ಪ್ರವಾದಿಗಳು ನಾಚಿಕೆಪಡುವರು.
27 ಅವರು ಮರದ ತುಂಡುಗಳೊಡನೆ ಮಾತನಾಡಿ,
‘ನೀನು ನಮ್ಮ ತಂದೆ’ ಎಂದು ಹೇಳುವರು.
ಆ ಜನರು ಕಲ್ಲುಬಂಡೆಯೊಂದಿಗೆ ಮಾತನಾಡಿ,
‘ನೀನು ನಮಗೆ ಜನ್ಮಕೊಟ್ಟ ತಾಯಿ’ ಎಂದು ಹೇಳುವರು.
ಆ ಜನರೆಲ್ಲರು ನಾಚಿಕೆಪಡುವರು.
ಅವರು ನನ್ನ ಕಡೆಗೆ ನೋಡುವದಿಲ್ಲ.
ಅವರು ನನಗೆ ವಿಮುಖರಾಗಿದ್ದಾರೆ.
ಆದರೆ ಯೆಹೂದದ ಜನರು ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಾಗ,
‘ಬಾ ನಮ್ಮನ್ನು ರಕ್ಷಿಸು’ ಎಂದು ನನ್ನನ್ನು ಕೇಳುತ್ತಾರೆ.
28 ಆ ವಿಗ್ರಹಗಳು ಬಂದು ನಿಮ್ಮನ್ನು ರಕ್ಷಿಸಲಿ, ನೀವು ಮಾಡಿದ ವಿಗ್ರಹಗಳು ಎಲ್ಲಿವೆ?
ನೀವು ಕಷ್ಟದಲ್ಲಿದ್ದಾಗ ಆ ವಿಗ್ರಹಗಳು ಬಂದು ನಿಮ್ಮನ್ನು ರಕ್ಷಿಸುವವೇ ಎಂಬುದನ್ನು ನೋಡೋಣ.
ಯೆಹೂದದ ನಿವಾಸಿಗಳೇ, ನಿಮ್ಮಲ್ಲಿ ಎಷ್ಟು ಪಟ್ಟಣಗಳಿವೆಯೋ ಅಷ್ಟು ವಿಗ್ರಹಗಳಿವೆ.
29 “ನೀವು ನನ್ನೊಂದಿಗೆ ಏಕೆ ಚರ್ಚೆಮಾಡುವಿರಿ,
ನೀವೆಲ್ಲರೂ ನನ್ನ ವಿರುದ್ಧ ದಂಗೆ ಎದ್ದಿದ್ದೀರಿ”
ಎನ್ನುತ್ತಾನೆ ಯೆಹೋವನು.
30 “ಯೆಹೂದದ ಜನರೇ ನಾನು ನಿಮ್ಮನ್ನು ಶಿಕ್ಷಿಸಿದೆ,
ಆದರೆ ಅದರಿಂದ ಪ್ರಯೋಜನವಾಗಲಿಲ್ಲ.
ಶಿಕ್ಷಿಸಿದರೂ ನೀವು ಹಿಂತಿರುಗಿ ಬರಲಿಲ್ಲ.
ನಿಮ್ಮಲ್ಲಿಗೆ ಬಂದ ಪ್ರವಾದಿಗಳನ್ನು ನೀವು ಕತ್ತಿಯಿಂದ ಕೊಂದುಹಾಕಿದಿರಿ.
ನೀವು ಅಪಾಯಕಾರಿಯಾದ ಸಿಂಹದಂತಿದ್ದು ಪ್ರವಾದಿಗಳನ್ನು ಕೊಂದುಹಾಕಿದಿರಿ.”
31 ಈ ಪೀಳಿಗೆಯ ಜನರೇ, ಯೆಹೋವನ ಸಂದೇಶದ ಕಡೆಗೆ ಗಮನ ಕೊಡಿ,
“ಇಸ್ರೇಲಿನ ಜನರಿಗೆ ನಾನು ಮರಳುಗಾಡಿನಂತೆ ಇರುವೆನೇ?
ನಾನು ಗಾಢಾಂಧಕಾರಮಯವಾದ ಮತ್ತು ಅಪಾಯಕಾರಿಯಾದ ಭೂಮಿಯಂತೆ ಇರುವೆನೇ?
ನನ್ನ ಜನರು, ‘ನಮಗೆ ಇಷ್ಟವಾದ ಮಾರ್ಗವನ್ನು ಅನುಸರಿಸಲು ನಾವು ಸ್ವತಂತ್ರರಾಗಿದ್ದೇವೆ.
ಯೆಹೋವನೇ, ನಾವು ಪುನಃ ನಿನ್ನಲ್ಲಿಗೆ ಬರುವದಿಲ್ಲ’ ಎಂದು ಹೇಳುತ್ತಾರೆ.
ಅವರು ಹಾಗೆ ಏಕೆ ಹೇಳುತ್ತಾರೆ?
32 ಯುವತಿಯು ತನ್ನ ಆಭರಣಗಳನ್ನು ಮರೆಯುವಳೇ? ಇಲ್ಲ.
ವಧುವು ಮದುವೆಯ ಉಡುಪನ್ನು ಧರಿಸಿಕೊಳ್ಳಲು ಮರೆಯುವಳೇ? ಇಲ್ಲ.
ಆದರೆ ನನ್ನ ಜನರು ನನ್ನನ್ನು ಅಸಂಖ್ಯಾತ ದಿನಗಳವರೆಗೆ ಮರೆತುಬಿಟ್ಟಿದ್ದಾರೆ.
33 “ಯೆಹೂದವೇ, ಪ್ರಿಯತಮನ ಬೆನ್ನುಹತ್ತಿ ಹೋಗುವದು ನಿನಗೆ ಗೊತ್ತು.
ಆದಕಾರಣ ದುರಾಭ್ಯಾಸವನ್ನು ನೀನು ಕಲಿತುಕೊಂಡಿರುವೆ.
34 ನಿನ್ನ ಕೈಗಳ ಮೇಲೆ ರಕ್ತದ ಕಲೆ ಇದೆ.
ಅದು ನಿರ್ದೋಷಿಗಳಾದ ಬಡವರ ರಕ್ತ.
ಅವರು ನಿನ್ನ ಕೈಗೆ ಸಿಕ್ಕಿಹಾಕಿಕೊಂಡ ಕಳ್ಳರಾಗಿರಲಿಲ್ಲ.
ಆದರೂ ನೀನು ಅವರನ್ನು ಕೊಲೆ ಮಾಡಿರುವೆ. ನೀನು ಅಂಥ ಕೆಟ್ಟ ಕೆಲಸವನ್ನು ಮಾಡಿರುವೆ.
35 ಆದರೆ ನೀನು, ‘ನಾನು ತಪ್ಪು ಮಾಡಿಲ್ಲ.
ದೇವರು ನನ್ನ ಮೇಲೆ ಕೋಪಗೊಂಡಿಲ್ಲ’ ಎಂದು ಹೇಳುತ್ತಿರುವೆ.
ಆದ್ದರಿಂದ ನೀನು ಸುಳ್ಳು ಹೇಳಿದ ಅಪರಾಧಿಯೆಂದು ನಾನು ನಿನಗೆ ತೀರ್ಪುನೀಡುತ್ತೇನೆ.
ಏಕೆಂದರೆ ‘ನಾನು ಯಾವ ತಪ್ಪೂ ಮಾಡಿಲ್ಲ’ ಎಂದು ನೀನು ಹೇಳಿಕೊಳ್ಳುತ್ತಿರುವೆ.
36 ನಿನ್ನ ವಿಚಾರಗಳನ್ನು ಬದಲಾಯಿಸುವದು ನಿನಗೆ ಸುಲಭ.
ಅಸ್ಸೀರಿಯಾ ನಿನ್ನನ್ನು ನಿರಾಶೆಗೊಳಿಸಿತು.
ಆಗ ನೀನು ಅಸ್ಸೀರಿಯರನ್ನು ಬಿಟ್ಟು ಈಜಿಪ್ಟಿನ ಸಹಾಯವನ್ನು ಕೇಳಿದೆ,
ಈಜಿಪ್ಟ್ ನಿನ್ನನ್ನು ನಿರಾಶೆಗೊಳಿಸುತ್ತದೆ.
37 ಕೊನೆಗೆ ನೀನು ಈಜಿಪ್ಟನ್ನು ಬಿಡುವೆ, ನಾಚಿಕೆಯಿಂದ
ತಲೆಯ ಮೇಲೆ ಕೈಯಿಟ್ಟುಕೊಂಡು ಹೊರಡುವೆ.
ನೀನು ಆ ದೇಶಗಳನ್ನು ನಂಬಿರುವೆ,
ಆದರೆ ಆ ದೇಶಗಳಿಂದ ನಿನಗೆ ಯಾವ ಅನುಕೂಲವೂ ಆಗದು. ಯೆಹೋವನು ಆ ದೇಶಗಳನ್ನು ನಿರಾಕರಿಸಿದ್ದಾನೆ.”