19
ಮುರಿದ ಮಣ್ಣಿನ ಕೊಡ
ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ಒಬ್ಬ ಕುಂಬಾರನ ಹತ್ತಿರ ಹೋಗಿ ಅವನಿಂದ ಒಂದು ಮಣ್ಣಿನ ಕೊಡವನ್ನು ಕೊಂಡುಕೊಂಡು ಬೋಕಿಯ ದ್ವಾರದ*ಬೋಕಿಯ ದಾಬರ ಒಂದು ದಾಬರದ ಹೆಸರು. ಸಮೀಪದಲ್ಲಿರುವ ಬೆನ್‌ಹಿನ್ನೊಮ್ ತಗ್ಗಿಗೆ ಹೋಗು. ನಿನ್ನ ಸಂಗಡ ಜನರ ಹಿರಿಯರಲ್ಲಿ ಕೆಲವರನ್ನೂ ಯಾಜಕರ ಹಿರಿಯರಲ್ಲಿ ಕೆಲವರನ್ನೂ ಕರೆದುಕೊಂಡು ಹೋಗು. ನಾನು ನಿನಗೆ ಹೇಳುವುದನ್ನು ನೀನು ಅಲ್ಲಿ ಅವರಿಗೆ ಹೇಳು. ನಿನ್ನ ಜೊತೆಯಲ್ಲಿದ್ದ ಜನರಿಗೆ ಹೇಳು, ‘ಯೆಹೂದದ ರಾಜನೇ, ಜೆರುಸಲೇಮಿನ ಜನರೇ, ಯೆಹೋವನ ಈ ಸಂದೇಶವನ್ನು ಕೇಳಿರಿ. ಇಸ್ರೇಲರ ದೇವರೂ ಸರ್ವಶಕ್ತನಾದ ಯೆಹೋವನೂ ಹೀಗೆ ಹೇಳುತ್ತಾನೆ: ನಾನು ಈ ಸ್ಥಳಕ್ಕೆ ಒಂದು ಭಯಂಕರವಾದ ಕೇಡನ್ನು ಉಂಟುಮಾಡುವೆನು. ಅದರ ಬಗ್ಗೆ ಕೇಳಿದ ಪ್ರತಿಯೊಬ್ಬ ವ್ಯಕ್ತಿಯು ವಿಸ್ಮಯಪಡುವನು ಮತ್ತು ಭಯಪಡುವನು. ಯೆಹೂದದ ಜನರು ನನ್ನ ಅನುಸರಣೆಯನ್ನು ಬಿಟ್ಟಿದ್ದರಿಂದ ನಾನು ಹೀಗೆ ಮಾಡುವೆನು. ಇದನ್ನು ಅವರು ಅನ್ಯದೇವರುಗಳ ಸ್ಥಳವನ್ನಾಗಿ ಮಾಡಿದ್ದಾರೆ. ಯೆಹೂದದ ಜನರು ಈ ಸ್ಥಳದಲ್ಲಿ ಅನ್ಯದೇವರುಗಳಿಗಾಗಿ ಧೂಪವನ್ನು ಹಾಕಿದ್ದಾರೆ. ಬಹಳ ಹಿಂದೆ ಈ ಜನರು ಆ ದೇವರುಗಳನ್ನು ಪೂಜಿಸುತ್ತಿರಲಿಲ್ಲ. ಅವರ ಹಿರಿಯರೂ ಆ ದೇವರುಗಳನ್ನು ಪೂಜಿಸುತ್ತಿರಲಿಲ್ಲ. ಇವುಗಳು ಅನ್ಯದೇಶದ ಹೊಸ ದೇವರುಗಳು. ಯೆಹೂದದ ರಾಜರು ಈ ಸ್ಥಳವನ್ನು ಮುಗ್ಧಮಕ್ಕಳ ರಕ್ತದಿಂದ ತುಂಬಿದರು. ಯೆಹೂದದ ರಾಜರು ಬಾಳ್ ದೇವರಿಗಾಗಿ ಉನ್ನತವಾದ ಸ್ಥಳಗಳನ್ನು ಕಟ್ಟಿಸಿದರು. ಅವರು ಆ ಸ್ಥಳಗಳಲ್ಲಿ ತಮ್ಮ ಗಂಡುಮಕ್ಕಳನ್ನು ಹೋಮಮಾಡಿದರು. ಅವರು ಬಾಳ್ ದೇವರಿಗೆ ತಮ್ಮ ಗಂಡುಮಕ್ಕಳನ್ನು ಆಹುತಿಕೊಟ್ಟರು. ನಾನು ಹಾಗೆ ಮಾಡಲು ಅವರಿಗೆ ಹೇಳಿರಲಿಲ್ಲ. ನಿಮ್ಮ ಗಂಡುಮಕ್ಕಳನ್ನು ಆಹುತಿಯಾಗಿ ಕೊಡಿ ಎಂದು ನಿಮಗೆ ಹೇಳಲಿಲ್ಲ. ಅಂಥ ವಿಚಾರ ನನ್ನ ಮನಸ್ಸಿನಲ್ಲಿ ಬರಲೇ ಇಲ್ಲ. ಈಗ, ಬೆನ್‌ಹಿನ್ನೊಮೀನ ಕಣಿವೆಯಲ್ಲಿದ್ದ ಈ ಸ್ಥಳವನ್ನು ಜನರು “ತೋಫೆತ್” ಎಂದು ಕರೆಯುತ್ತಾರೆ. ಆದರೆ ಜನರು ಇದನ್ನು “ಕೊಲೆಯ ಕಣಿವೆ” ಎಂದು ಕರೆಯುವ ದಿನಗಳು ಬರುತ್ತಿವೆ ಎಂದು ನಾನು ನಿಮಗೆ ಮುನ್ನೆಚ್ಚರಿಕೆಯನ್ನು ಕೊಡುತ್ತೇನೆ. ಇದು ಯೆಹೋವನ ನುಡಿ. ಈ ಸ್ಥಳದಲ್ಲಿ ನಾನು ಯೆಹೂದದ ಮತ್ತು ಜೆರುಸಲೇಮಿನ ಜನರ ಯೋಜನೆಗಳನ್ನು ಹಾಳು ಮಾಡುತ್ತೇನೆ. ಶತ್ರುವು ಈ ಜನರನ್ನು ಬೆನ್ನಟ್ಟಿ ಬರುವನು. ನಾನು ಈ ಸ್ಥಳದಲ್ಲಿ ಖಡ್ಗದಿಂದ ಯೆಹೂದದ ಜನರ ಕೊಲೆಯಾಗುವಂತೆ ಮಾಡುವೆನು. ಅವರ ಹೆಣಗಳು ಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ಆಹಾರವಾಗುವಂತೆ ಮಾಡುವೆನು. ನಾನು ಈ ನಗರವನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಜೆರುಸಲೇಮಿನಿಂದ ಹಾದುಹೋಗುವಾಗ ಜನರು ಸಿಳ್ಳುಹಾಕಿ ತಲೆಯಾಡಿಸಿ ಹೋಗುವರು. ನಗರವು ಹಾಳಾಗಿರುವುದನ್ನು ಕಂಡು ಅವರು ಬೆರಗಾಗುವರು. ಶತ್ರುವು ನಗರದ ಸುತ್ತಲೂ ತನ್ನ ಸೈನ್ಯವನ್ನು ತರುವನು. ಜನರು ಆಹಾರವನ್ನು ಶೇಖರಿಸಲು ಹೊರಗೆ ಹೋಗದಂತೆ ಆ ಸೈನ್ಯವು ತಡೆಯುವದು. ನಗರದಲ್ಲಿದ್ದ ಜನರು ಉಪವಾಸ ಬೀಳುವರು. ಅವರು ಹಸಿವು ತಾಳಲಾರದೆ ತಮ್ಮ ಮಕ್ಕಳನ್ನೇ ತಿನ್ನುವರು. ಆಮೇಲೆ ಅವರು ಒಬ್ಬರನ್ನೊಬ್ಬರು ತಿನ್ನಲು ಪ್ರಾರಂಭಿಸುವರು.’
10 “ಯೆರೆಮೀಯನೇ, ನೀನು ಜನರಿಗೆ ಆ ವಿಷಯಗಳನ್ನು ಹೇಳು. ಅವರು ಗಮನವಿಟ್ಟು ಕೇಳುತ್ತಿರುವಾಗ ಆ ಮಣ್ಣಿನ ಕೊಡವನ್ನು ಒಡೆದುಹಾಕಿ 11 ಹೀಗೆ ಹೇಳು: ‘ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ಈ ಮಣ್ಣಿನ ಕೊಡವನ್ನು ಒಡೆದುಹಾಕಿದಂತೆ ನಾನು ಯೆಹೂದ ಜನಾಂಗವನ್ನು ಮತ್ತು ಜೆರುಸಲೇಮ್ ನಗರವನ್ನು ಒಡೆದುಹಾಕುವೆನು. ಈ ಕೊಡವನ್ನು ಪುನಃ ಜೋಡಿಸಲು ಸಾಧ್ಯವಿಲ್ಲ. ಯೆಹೂದ ಜನಾಂಗದ ಸ್ಥಿತಿಯೂ ಹೀಗೆಯೇ ಆಗುವುದು. ತೋಫೆತಿನಲ್ಲಿ ಸ್ಥಳವಿಲ್ಲದಂತಾಗುವವರೆಗೂ ಸತ್ತವರನ್ನು ಅಲ್ಲಿ ಹೂಳಲಾಗುವುದು. 12 ನಾನು ಈ ಜನರಿಗೂ ಮತ್ತು ಈ ಸ್ಥಳಕ್ಕೂ ಹೀಗೆ ಮಾಡುತ್ತೇನೆ. ನಾನು ಈ ನಗರವನ್ನು ತೋಫೆತಿನಂತೆ ಮಾಡುತ್ತೇನೆ’ ಇದು ಯೆಹೋವನ ನುಡಿ. 13 ‘ಜೆರುಸಲೇಮಿನ ಮನೆಗಳು ಈ ತೋಫೆತಿನಷ್ಟೆ “ಹೊಲಸಾಗುವವು.” ಯೆಹೂದದ ರಾಜರ ಅರಮನೆಗಳು ಈ ತೋಫೆತಿನಂತೆ ಹಾಳಾಗುವವು. ಏಕೆಂದರೆ ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಸುಳ್ಳುದೇವರುಗಳನ್ನು ಪೂಜಿಸಿದರು. ಅವರು ನಕ್ಷತ್ರಗಳನ್ನು ಪೂಜಿಸಿ ಅವುಗಳ ಗೌರವಾರ್ಥವಾಗಿ ಧೂಪಹಾಕಿದರು. ಅವರು ಸುಳ್ಳುದೇವರುಗಳಿಗೆ ಪಾನನೈವೇದ್ಯಗಳನ್ನು ಅರ್ಪಿಸಿದರು.’ ”
14 ಯೆರೆಮೀಯನು ಯೆಹೋವನ ಅಪ್ಪಣೆಯಂತೆ ತೋಫೆತಿನಲ್ಲಿ ಪ್ರವಾದಿಸಿದ ಮೇಲೆ ಅಲ್ಲಿಂದ ಬಂದು ಪವಿತ್ರಾಲಯದ ಪ್ರಾಕಾರದಲ್ಲಿ ನಿಂತುಕೊಂಡು, ಎಲ್ಲಾ ಜನರನ್ನುದ್ದೇಶಿಸಿ ಹೀಗೆ ಹೇಳಿದನು: 15 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: ‘ನಾನು ಜೆರುಸಲೇಮಿಗೂ ಅದರ ಸುತ್ತಲಿನ ಹಳ್ಳಿಗಳಿಗೂ ಅನೇಕ ವಿಪತ್ತುಗಳನ್ನು ಬರಮಾಡುವುದಾಗಿ ಹೇಳಿದೆನು. ಅವುಗಳನ್ನು ಬೇಗನೆ ಬರಮಾಡುತ್ತೇನೆ. ಏಕೆಂದರೆ ಜನರು ಬಹಳ ಮೊಂಡರಾಗಿದ್ದಾರೆ. ನಾನು ಹೇಳಿದ್ದನ್ನು ಅವರು ಕೇಳುವುದೂ ಇಲ್ಲ, ಅನುಸರಿಸುವುದೂ ಇಲ್ಲ.’ ”

*19:2: ಬೋಕಿಯ ದಾಬರ ಒಂದು ದಾಬರದ ಹೆಸರು.