25
ಹತ್ತು ಮಂದಿ ಕನ್ನಿಕೆಯರನ್ನು ಕುರಿತ ಸಾಮ್ಯ
1 “ಆ ದಿನಗಳಲ್ಲಿ ಪರಲೋಕರಾಜ್ಯವು ಹೇಗಿರುತ್ತದೆ ಎನ್ನುವುದಕ್ಕೆ ಈ ಸಾಮ್ಯವು ಉದಾಹರಣೆಯಾಗಿದೆ. ಹತ್ತು ಮಂದಿ ಕನ್ನಿಕೆಯರು ತಮ್ಮ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಎದುರುಗೊಳ್ಳಲು ಹೊರಟರು. 2 ಅವರಲ್ಲಿ ಐದು ಮಂದಿ ಬುದ್ಧಿಹೀನರಾಗಿದ್ದರು. ಇನ್ನುಳಿದ ಐದು ಮಂದಿ ಬುದ್ಧಿವಂತೆಯರಾಗಿದ್ದರು. 3 ಬುದ್ಧಿಹೀನ ಕನ್ನಿಕೆಯರು ತಮ್ಮ ದೀಪಾರತಿಗಳನ್ನು ತಂದರೇ ಹೊರತು ಬೇಕಾಗುವಷ್ಟು ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ. 4 ಬುದ್ಧಿವಂತೆಯರು ತಮ್ಮ ದೀಪಗಳೊಂದಿಗೆ ಬೇಕಾದಷ್ಟು ಎಣ್ಣೆಯನ್ನೂ ತೆಗೆದುಕೊಂಡರು. 5 ಮದುಮಗನ ಆಗಮನ ತಡವಾಯಿತು. ಅವರೆಲ್ಲರೂ ಆಯಾಸದಿಂದ ತೂಕಡಿಸುತ್ತಾ ನಿದ್ರೆಹೋದರು.
6 “ಮಧ್ಯರಾತ್ರಿಯಲ್ಲಿ, ‘ಮದುಮಗನು ಬರುತ್ತಿದ್ದಾನೆ! ಬನ್ನಿರಿ, ಆತನನ್ನು ಸಂಧಿಸಿರಿ!’ ಎಂದು ಯಾರೋ ಒಬ್ಬನು ಪ್ರಕಟಿಸಿದನು.
7 “ಆಗ ಕನ್ನಿಕೆಯರೆಲ್ಲ ಎಚ್ಚರಗೊಂಡು ತಮ್ಮ ದೀಪಾರತಿಗಳನ್ನು ಸಿದ್ಧಮಾಡಿಕೊಂಡರು. 8 ಬುದ್ಧಿಹೀನ ಕನ್ನಿಕೆಯರು ಬುದ್ಧಿವಂತ ಕನ್ನಿಕೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿ. ನಮ್ಮ ದೀಪಾರತಿಗಳಲ್ಲಿದ್ದ ಎಣ್ಣೆಯೆಲ್ಲಾ ಮುಗಿಯಿತು’ ಎಂದರು.
9 “ಬುದ್ಧಿವಂತೆಯರು, ‘ಇಲ್ಲ! ನಮ್ಮಲ್ಲಿರುವ ಎಣ್ಣೆ ನಮಗೇ ಸಾಕಾಗದಿರಬಹುದು. ಅಂಗಡಿಗೆ ಹೋಗಿ ಕೊಂಡುಕೊಳ್ಳಿರಿ’ ಎಂದು ಉತ್ತರಕೊಟ್ಟರು.
10 “ಆದ್ದರಿಂದ ಐದು ಮಂದಿ ಬುದ್ಧಿಹೀನ ಕನ್ನಿಕೆಯರು ಎಣ್ಣೆ ಕೊಂಡುಕೊಳ್ಳುವುದಕ್ಕೆ ಹೋದರು. ಅವರು ಹೋಗುತ್ತಿರುವಾಗ, ಮದುಮಗನು ಬಂದನು. ಸಿದ್ಧವಾಗಿದ್ದ ಕನ್ನಿಕೆಯರು ಮದುಮಗನ ಜೊತೆಯಲ್ಲಿ ಔತಣಕ್ಕೆ ಹೋದರು. ನಂತರ ಬಾಗಿಲು ಮುಚ್ಚಲಾಯಿತು.
11 “ತರುವಾಯ ಬುದ್ಧಿಹೀನ ಕನ್ನಿಕೆಯರು ಬಂದು, ‘ಸ್ವಾಮೀ, ಸ್ವಾಮೀ, ಒಳಗೆ ಬರಲು ನಮಗೆ ಬಾಗಿಲು ತೆರೆ’ ಅಂದರು.
12 “ಆದರೆ ಮದುಮಗನು, ‘ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ನೀವು ಯಾರೋ ನನಗೆ ಗೊತ್ತಿಲ್ಲ’ ಎಂದು ಉತ್ತರಕೊಟ್ಟನು.
13 “ಆದ್ದರಿಂದ ಯಾವಾಗಲೂ ಸಿದ್ಧವಾಗಿರಿ. ಮನುಷ್ಯಕುಮಾರನು ಬರುವ ದಿನವಾಗಲಿ ಸಮಯವಾಗಲಿ ನಿಮಗೆ ಗೊತ್ತಿಲ್ಲ.
ಮೂವರು ಸೇವಕರನ್ನು ಕುರಿತ ಸಾಮ್ಯ
(ಲೂಕ 19:11-27)
14 “ಪರಲೋಕರಾಜ್ಯವು, ತನ್ನ ಮನೆಯನ್ನು ಬಿಟ್ಟು ಬೇರೆ ಸ್ಥಳವನ್ನು ಸಂದರ್ಶಿಸುವುದಕ್ಕೆ ಪ್ರಯಾಣ ಮಾಡಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. ಆ ಮನುಷ್ಯನು ತಾನು ಹೊರಡುವುದಕ್ಕೆ ಮುಂಚೆ ತನ್ನ ಸೇವಕರೊಂದಿಗೆ ಮಾತನಾಡಿ, ತನ್ನ ಆಸ್ತಿಯನ್ನು ನೋಡಿಕೊಳ್ಳಲು ಅವರಿಗೆ ಹೇಳಿದನು. 15 ಅವನು ಆ ಸೇವಕರ ಸಾಮರ್ಥ್ಯಕ್ಕನುಸಾರವಾಗಿ ಎಷ್ಟೆಷ್ಟು ಜವಾಬ್ದಾರಿಕೆಯನ್ನು ಕೊಡಬೇಕೆಂಬುದನ್ನು ನಿರ್ಧರಿಸಿದನು. ಅವನು ಒಬ್ಬ ಸೇವಕನಿಗೆ ಐದು ತಲಾಂತು*ತಲಾಂತು ಒಂದು ತಲಾಂತು ಅಂದರೆ 30,000 ದಿನಾರಿ. ಒಂದು ದಿನಾರಿ ಅಂದರೆ ಒಬ್ಬನ ಒಂದು ದಿನದ ಸಂಬಳ. ಮತ್ತೊಬ್ಬನಿಗೆ ಎರಡು ತಲಾಂತು ಕೊಟ್ಟನು. ಮೂರನೇ ಸೇವಕನಿಗೆ ಒಂದು ತಲಾಂತು ಕೊಟ್ಟನು. ಬಳಿಕ ಅವನು ಬೇರೆ ಸ್ಥಳಕ್ಕೆ ಹೊರಟುಹೋದನು. 16 ಐದು ತಲಾಂತು ತೆಗೆದುಕೊಂಡ ಸೇವಕನು ತಕ್ಷಣವೇ ಹೋಗಿ ಆ ಹಣವನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಸಂಪಾದಿಸಿದನು. 17 ಎರಡು ತಲಾಂತು ಹೊಂದಿದ ಸೇವಕನೂ ಅದೇ ರೀತಿ ಆ ಹಣವನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಎರಡು ತಲಾಂತು ಸಂಪಾದಿಸಿದನು. 18 ಆದರೆ ಒಂದು ತಲಾಂತು ಹೊಂದಿದವನು ಹೊರಟುಹೋಗಿ ನೆಲದಲ್ಲಿ ಒಂದು ಗುಂಡಿ ತೋಡಿ ಆ ಹಣವನ್ನು ಅಡಗಿಸಿಟ್ಟನು.
19 “ಬಹುಕಾಲದ ನಂತರ ಯಜಮಾನನು ಮನೆಗೆ ಬಂದನು. ತಾನು ಕೊಟ್ಟಿದ್ದ ಹಣದ ಕುರಿತಾಗಿ ಅವನು ಸೇವಕರನ್ನು ವಿಚಾರಿಸಿ ಲೆಕ್ಕ ಕೇಳಿದನು. 20 ಐದು ತಲಾಂತು ಪಡೆದ ಸೇವಕನು ಇನ್ನೂ ಐದು ತಲಾಂತನ್ನು ತನ್ನ ಯಜಮಾನನ ಬಳಿಗೆ ತಂದು, ‘ಧಣಿಯೇ, ನೀನು ನನ್ನಲ್ಲಿ ಭರವಸೆಯಿಟ್ಟು ಐದು ತಲಾಂತನ್ನು ಕೊಟ್ಟೆ. ನಾನು ಅದನ್ನು ವಿನಿಯೋಗಿಸಿ ಇನ್ನೂ ಐದು ತಲಾಂತು ಸಂಪಾದಿಸಿದ್ದೇನೆ’ ಎಂದನು.
21 “ಯಜಮಾನನು, ‘ನೀನು ನಂಬಿಗಸ್ತನಾದ ಒಳ್ಳೆಯ ಸೇವಕ. ಆ ಸ್ವಲ್ಪ ಹಣವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದೆ. ಆದ್ದರಿಂದ ನಾನು ನಿನಗೆ ಇದಕ್ಕಿಂತಲೂ ದೊಡ್ಡ ಕೆಲಸವನ್ನು ಕೊಡುತ್ತೇನೆ. ಬಂದು ನನ್ನ ಸೌಭಾಗ್ಯದಲ್ಲಿ ಸೇರು’ ಎಂದು ಉತ್ತರಕೊಟ್ಟನು.
22 “ಆಮೇಲೆ ಎರಡು ತಲಾಂತು ಹೊಂದಿದ್ದ ಸೇವಕನು ಯಜಮಾನನ ಬಳಿಗೆ ಬಂದು, ‘ಧಣಿಯೇ, ನೀನು ನನಗೆ ಎರಡು ತಲಾಂತು ಕೊಟ್ಟೆ. ನಾನು ಆ ಹಣವನ್ನು ಉಪಯೋಗಿಸಿ ಇನ್ನೂ ಎರಡು ತಲಾಂತು ಸಂಪಾದಿಸಿರುವೆ’ ಅಂದನು.
23 “ಯಜಮಾನನು, ‘ನೀನು ನಂಬಿಗಸ್ತನಾದ ಒಳ್ಳೆಯ ಸೇವಕ. ನೀನು ಆ ಸ್ವಲ್ಪ ಹಣವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದೆ. ಆದ್ದರಿಂದ ನಾನು ನಿನಗೆ ಇದಕ್ಕಿಂತಲೂ ದೊಡ್ಡ ಕೆಲಸವನ್ನು ಕೊಡುತ್ತೇನೆ. ಬಂದು, ನನ್ನ ಸೌಭಾಗ್ಯದಲ್ಲಿ ಸೇರು’ ಎಂದು ಉತ್ತರಕೊಟ್ಟನು.
24 “ಬಳಿಕ ಒಂದು ತಲಾಂತು ಹೊಂದಿದ್ದ ಸೇವಕನು ಯಜಮಾನನ ಬಳಿಗೆ ಬಂದು, ‘ಧಣಿಯೇ, ನೀನು ಬಹಳ ಕಠಿಣ ಮನುಷ್ಯನು ಎಂದು ನಾನು ಬಲ್ಲೆ. ನೀನು ನೆಡದ ಕಡೆಯಲ್ಲಿ ರಾಶಿ ಮಾಡಿಕೊಳ್ಳುವವನು ಮತ್ತು ಬೀಜ ಬಿತ್ತದ ಕಡೆಯಲ್ಲಿ ಕೊಯ್ಯುವವನು. 25 ಆದ್ದರಿಂದ ನಾನು ಹೆದರಿಕೊಂಡು ನಿನ್ನ ಹಣವನ್ನು ಭೂಮಿಯಲ್ಲಿ ಅಡಗಿಸಿಟ್ಟೆನು. ನೀನು ನನಗೆ ಕೊಟ್ಟ ಹಣ ಇಲ್ಲಿದೆ, ತೆಗೆದುಕೊ’ ಅಂದನು.
26 “ಅದಕ್ಕೆ ಯಜಮಾನನು, ‘ನೀನು ಸೋಮಾರಿಯಾದ ಕೆಟ್ಟ ಸೇವಕ! ನಾನು ನೆಡದ ಕಡೆಯಲ್ಲಿ ರಾಶಿ ಮಾಡಿಕೊಳ್ಳುವವನೆಂದು ಮತ್ತು ಬೀಜ ಬಿತ್ತದ ಕಡೆಯಲ್ಲಿ ಕೊಯ್ಯುವವನೆಂದು ನಿನಗೆ ಗೊತ್ತಿತ್ತೇ? 27 ಹಾಗಿದ್ದರೆ ನೀನು ನನ್ನ ಹಣವನ್ನು ಬಡ್ಡಿಗೆ ಕೊಡಬೇಕಿತ್ತು. ಆಗ ನಾನು ಅಸಲಿನೊಡನೆ ಬಡ್ಡಿಯನ್ನೂ ಪಡೆದುಕೊಳ್ಳುತ್ತಿದ್ದೆನು’ ಎಂದು ಉತ್ತರಕೊಟ್ಟನು.
28 “ಬಳಿಕ ಯಜಮಾನನು ತನ್ನ ಬೇರೆ ಸೇವಕರಿಗೆ, ‘ಅವನ ಒಂದು ತಲಾಂತನ್ನು ತೆಗೆದುಕೊಂಡು ಐದು ತಲಾಂತು ಹೊಂದಿರುವ ಸೇವಕನಿಗೆ ಕೊಡಿರಿ. 29 ತನ್ನಲ್ಲಿರುವುದನ್ನು ವಿನಿಯೋಗಿಸುವ ಪ್ರತಿಯೊಬ್ಬನಿಗೂ ಹೆಚ್ಚಾಗಿ ಕೊಡಲ್ಪಡುವುದು, ಆದರೆ ತನ್ನಲ್ಲಿರುವುದನ್ನು ವಿನಿಯೋಗಿಸದಿರುವ ವ್ಯಕ್ತಿಯಿಂದ ಇದ್ದದ್ದನ್ನೂ ಕಸಿದುಕೊಳ್ಳಲಾಗುವುದು’ ಎಂದು ಹೇಳಿದನು. 30 ಬಳಿಕ ಆ ಯಜಮಾನನು, ‘ಕೆಲಸಕ್ಕೆ ಬಾರದ ಆ ಸೇವಕನನ್ನು, ಜನರು ಗೋಳಾಡುತ್ತಾ ಬಾಧೆಯಿಂದ ತಮ್ಮ ಹಲ್ಲುಗಳನ್ನು ಕಡಿಯುತ್ತಿರುವ ಕಗ್ಗತ್ತಲೆಯ ಸ್ಥಳಕ್ಕೆ ದಬ್ಬಿರಿ’ ಎಂದು ಆಜ್ಞಾಪಿಸಿದನು.
ಸರ್ವರಿಗೂ ಮನುಷ್ಯಕುಮಾರನು ನೀಡುವ ತೀರ್ಪು
31 “ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಮತ್ತೆ ಬರುವಾಗ ರಾಜನಾಗಿ ಮಹಾಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾನೆ. 32 ಭೂಲೋಕದ ಜನರೆಲ್ಲರೂ ಆತನ ಮುಂದೆ ಒಟ್ಟುಗೂಡುತ್ತಾರೆ. ಕುರುಬನು ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸಿದಂತೆ ಆತನು ಅವರನ್ನು ಬೇರ್ಪಡಿಸುವನು; 33 ಮನುಷ್ಯಕುಮಾರನು ಕುರಿಗಳನ್ನು ತನ್ನ ಬಲಗಡೆಯಲ್ಲಿಯೂ ಮತ್ತು ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು.
34 “ಆಗ ರಾಜನು ತನ್ನ ಬಲಗಡೆಯಲ್ಲಿರುವ ಜನರಿಗೆ, ‘ಬನ್ನಿರಿ, ನನ್ನ ತಂದೆ ನಿಮಗೆ ಮಹಾ ಆಶೀರ್ವಾದಗಳನ್ನು ಕೊಟ್ಟಿದ್ದಾನೆ. ಬನ್ನಿರಿ, ದೇವರು ನಿಮಗೆ ವಾಗ್ದಾನ ಮಾಡಿದ ರಾಜ್ಯವನ್ನು ಪಡೆದುಕೊಳ್ಳಿರಿ. ಆ ರಾಜ್ಯವು ಲೋಕ ಉಂಟಾದಂದಿನಿಂದ ನಿಮಗಾಗಿ ಸಿದ್ಧಮಾಡಲ್ಪಟ್ಟಿದೆ. 35 ನೀವು ಈ ರಾಜ್ಯವನ್ನು ಪಡೆದುಕೊಳ್ಳಿರಿ. ಏಕೆಂದರೆ ನಾನು ಹಸಿದಿದ್ದೆನು. ನೀವು ನನಗೆ ಊಟ ಕೊಟ್ಟಿರಿ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಟ್ಟಿರಿ. ನಾನು ಒಬ್ಬಂಟಿಗನಾಗಿ ಮನೆಯಿಂದ ದೂರದಲ್ಲಿ ಇದ್ದಾಗ, ನೀವು ನನ್ನನ್ನು ನಿಮ್ಮ ಮನೆಯೊಳಗೆ ಸೇರಿಸಿಕೊಂಡಿರಿ. 36 ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಟ್ಟಿರಿ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು, ನೀವು ನನಗೆ ಆರೈಕೆ ಮಾಡಿದಿರಿ. ನಾನು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುತ್ತಾನೆ.
37 “ಆಗ ಒಳ್ಳೆಯ ಜನರು, ‘ಪ್ರಭುವೇ, ನೀನು ಹಸಿದಿದ್ದನ್ನು ನೋಡಿ ಯಾವಾಗ ನಿನಗೆ ಆಹಾರ ಕೊಟ್ಟೆವು? ನೀನು ಬಾಯಾರಿದ್ದನ್ನು ನೋಡಿ ಯಾವಾಗ ಕುಡಿಯುವುದಕ್ಕೆ ಕೊಟ್ಟೆವು? 38 ನೀನು ಒಬ್ಬಂಟಿಗನಾಗಿ ಮನೆಯಿಂದ ದೂರವಾಗಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ನಮ್ಮ ಮನೆಗಳೊಳಗೆ ಸೇರಿಸಿಕೊಂಡೆವು? ನಿನಗೆ ಬಟ್ಟೆಯಿಲ್ಲದಿರುವುದನ್ನು ನೋಡಿ ಯಾವಾಗ ಉಡುವುದಕ್ಕೆ ಕೊಟ್ಟೆವು? 39 ನೀನು ಕಾಯಿಲೆ ಬಿದ್ದಿದ್ದನ್ನು ಅಥವಾ ಸೆರೆಯಲ್ಲಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ಆರೈಕೆ ಮಾಡಿದೆವು?’ ಎಂದು ಹೇಳುವರು.
40 “ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗಾಗಿ ಏನೇನು ಮಾಡುತ್ತೀರೋ ಅದೆಲ್ಲವನ್ನು ನನಗೂ ಮಾಡಿದಂತಾಯಿತು’ ಎಂದು ಉತ್ತರಕೊಡುವನು.
41 “ಆಮೇಲೆ ರಾಜನು ತನ್ನ ಎಡಗಡೆಯಿದ್ದ ಜನರಿಗೆ, ‘ನನ್ನಿಂದ ತೊಲಗಿಹೋಗಿರಿ, ನಿಮಗೆ ಶಿಕ್ಷೆಯಾಗಬೇಕೆಂದು ದೇವರು ತೀರ್ಮಾನಿಸಿದ್ದಾನೆ. ಸೈತಾನನಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. 42 ಏಕೆಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯಲು ಕೊಡಲಿಲ್ಲ. 43 ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ನಿಮ್ಮ ಮನೆಯೊಳಕ್ಕೆ ಸೇರಿಸಿಕೊಳ್ಳಲಿಲ್ಲ. ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು ಮತ್ತು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡಿಕೊಳ್ಳಲಿಲ್ಲ’ ಎಂದು ಹೇಳುವನು.
44 “ಅವರು, ‘ಪ್ರಭುವೇ, ನೀನು ಯಾವಾಗ ಹಸಿದಿದ್ದೆ ಮತ್ತು ಬಾಯಾರಿದ್ದೆ? ನೀನು ಯಾವಾಗ ಆಶ್ರಯವಿಲ್ಲದವನಾಗಿದ್ದೆ? ನಿನಗೆ ಯಾವಾಗ ಬಟ್ಟೆಯಿರಲಿಲ್ಲ? ನೀನು ಯಾವಾಗ ಕಾಯಿಲೆ ಬಿದ್ದಿದ್ದೆ ಮತ್ತು ಸೆರೆವಾಸದಲ್ಲಿದ್ದೆ? ಇವೆಲ್ಲವನ್ನು ನಾವು ನೋಡಿಯೂ ನಿನಗೆ ಸಹಾಯ ಮಾಡದೆ ಹೋದದ್ದು ಯಾವಾಗ?’ ಎಂದು ಉತ್ತರಿಸುವರು.
45 “ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗೆ ಏನೇನು ಮಾಡಲಿಲ್ಲವೋ ಅದನ್ನು ನನಗೂ ಮಾಡದಂತಾಯಿತು’ ಎಂದು ಉತ್ತರಕೊಡುವನು.
46 “ಆಗ ಕೆಟ್ಟಜನರು ಅಲ್ಲಿಂದ ಹೊರಟುಹೋಗುವರು. ಅವರಿಗೆ ನಿತ್ಯದಂಡನೆಯಾಗುವುದು. ಒಳ್ಳೆಯ ಜನರಾದರೋ ನಿತ್ಯಜೀವವನ್ನು ಹೊಂದುವರು.”