18
ಯೆಹೋವನು ದಾವೀದನನ್ನು ಸೌಲನಿಂದಲೂ ಅವನ ಸೈನ್ಯಗಳಿಂದಲೂ ರಕ್ಷಿಸಿದಾಗ ರಚಿಸಲ್ಪಟ್ಟಿತು.
ರಚನೆಗಾರ: ದಾವೀದ.
ನನ್ನ ಬಲವಾಗಿರುವ ಯೆಹೋವನೇ,
ನಿನ್ನನ್ನೇ ಪ್ರೀತಿಸುವೆನು!
 
ಯೆಹೋವನು ನನ್ನ ಬಂಡೆಯೂ*ಬಂಡೆ ದೇವರ ಹೆಸರು. ಆತನು ಕೋಟೆಯಂತಿದ್ದಾನೆ ಅಥವಾ ಬಲವಾದ ಸುರಕ್ಷಿತ ಸ್ಥಳದಂತಿದ್ದಾನೆ ಎಂಬುದನ್ನು ಇದು ತೋರಿಸುತ್ತದೆ. ನನ್ನ ಕೋಟೆಯೂ
ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ
ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.
 
ಯೆಹೋವನಿಗೆ ಸ್ತೋತ್ರವಾಗಲಿ!
ನಾನು ಆತನಿಗೆ ಮೊರೆಯಿಟ್ಟಾಗ ನನ್ನನ್ನು ವೈರಿಗಳಿಂದ ರಕ್ಷಿಸಿದನು.
ಮರಣಕರವಾದ ಹಗ್ಗಗಳು ನನ್ನನ್ನು ಬಿಗಿದುಕೊಂಡವು.
ನಾಶಪ್ರವಾಹವು ನನ್ನನ್ನು ಪಾತಾಳಕ್ಕೆ ಕೊಚ್ಚಿಕೊಂಡು ಹೋಗುತ್ತಿತ್ತು.
ಪಾತಾಳದ ಹಗ್ಗಗಳು ನನ್ನನ್ನು ಬಿಗಿದುಕೊಂಡಿದ್ದವು.
ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.
ಆಗ ನಾನು ಸಹಾಯಕ್ಕಾಗಿ ಯೆಹೋವನನ್ನು ಕೂಗಿಕೊಂಡೆನು;
ನನ್ನ ದೇವರಿಗೆ ಮೊರೆಯಿಟ್ಟೆನು.
ಆತನು ತನ್ನ ಆಲಯದಲ್ಲಿ ನನ್ನ ಸ್ವರವನ್ನು ಕೇಳಿದನು;
ನನ್ನ ಮೊರೆಗೆ ಕಿವಿಗೊಟ್ಟನು.
ಆಗ ಆತನಿಗೆ ಸಿಟ್ಟೇರಿದ್ದರಿಂದ ಭೂಮಿಯು ಗಡಗಡನೆ ನಡುಗಿತು;
ಪರ್ವತಗಳ ಬುನಾದಿಗಳು ಕಂಪಿಸಿದವು.
ಆತನ ಮೂಗಿನಿಂದ ಹೊಗೆಯು ಬಂದಿತು;
ಆತನ ಬಾಯಿಂದ ಅಗ್ನಿಜ್ವಾಲೆಯೂ ಬೆಂಕಿಯ ಕಿಡಿಗಳೂ ಬಂದವು.
ಆತನು ಆಕಾಶವನ್ನು ಹರಿದು ಕೆಳಗಿಳಿದು ಬಂದನು.
ಆತನು ದಟ್ಟವಾದ ಕಪ್ಪುಮೋಡದ ಮೇಲೆ ನಿಂತುಕೊಂಡನು.
10 ಕೆರೂಬಿಗಳ ಮೇಲೆ ಆಸೀನನಾಗಿ
ವಾಯುವೇ ತನ್ನ ರೆಕ್ಕೆಗಳೋ ಎಂಬಂತೆ ಹಾರಿಬಂದನು.
11 ಆತನನ್ನು ಗುಡಾರದಂತೆ ಆವರಿಸಿಕೊಂಡಿದ್ದ ದಟ್ಟವಾದ ಕಪ್ಪುಮೋಡದಲ್ಲಿ
ಆತನು ಮರೆಯಾದನು.
12 ಬಳಿಕ, ಆತನ ಉಜ್ವಲವಾದ ಪ್ರಕಾಶವು ಮೋಡಗಳನ್ನು ಛೇದಿಸಿಕೊಂಡು ನುಗ್ಗಲು
ಆಲಿಕಲ್ಲಿನ ಮಳೆಯು ಸುರಿಯಿತು; ಮಿಂಚುಗಳು ಹೊಳೆದವು.
13 ಯೆಹೋವನು ಆಕಾಶದಲ್ಲಿ ಗುಡುಗಿದನು;
ಮಹೋನ್ನತ ದೇವರು ತನ್ನ ಧ್ವನಿಯನ್ನು ಕೇಳುವಂತೆ ಮಾಡಿದನು.
14 ಆತನು ಬಾಣಗಳನ್ನುಬಾಣಗಳು ಅಂದರೆ “ಮಿಂಚು.” ಎಸೆದು ವೈರಿಗಳನ್ನು ಚದರಿಸಿಬಿಟ್ಟನು;
ಸಿಡಿಲುಮಿಂಚುಗಳಿಂದ ಅವರನ್ನು ಕಳವಳಗೊಳಿಸಿದನು.
 
15 ಯೆಹೋವನೇ, ನೀನು ಆಜ್ಞಾಪಿಸಿದಾಗ
ಬಿರುಗಾಳಿಯು ಬೀಸತೊಡಗಿ ನೀರನ್ನು ನೂಕಲು
ಸಮುದ್ರದ ತಳವೇ ಕಾಣಿಸಿತು.
ಭೂಮಿಯ ಅಸ್ತಿವಾರಗಳೂ ಕಾಣಿಸಿದವು.
 
16 ಆತನು ಮೇಲಿನ ಲೋಕದಿಂದ ಕೈಚಾಚಿ ನನ್ನನ್ನು ರಕ್ಷಿಸಿದನು.
ಆತನು ನನ್ನ ಕೈಹಿಡಿದು ನೀರಿನಿಂದ ಮೇಲೆತ್ತಿದನು.
17 ನನ್ನನ್ನು ದ್ವೇಷಿಸುವ ವೈರಿಗಳು
ನನಗಿಂತ ಬಲವಾಗಿಯೂ ಶಕ್ತರಾಗಿಯೂ ಇದ್ದರು; ಆತನು ನನ್ನನ್ನು ಅವರಿಂದ ರಕ್ಷಿಸಿದನು.
18 ನಾನು ಕಷ್ಟದಲ್ಲಿದ್ದಾಗ ಅವರು ನನ್ನ ಮೇಲೆ ಆಕ್ರಮಣಮಾಡಲು,
ಯೆಹೋವನು ನನಗೆ ಸಹಾಯಕನಾಗಿ ಬಂದನು.
19 ಆತನು ನನ್ನನ್ನು ಪ್ರೀತಿಸುವುದರಿಂದ ನನ್ನನ್ನು ರಕ್ಷಿಸಿದನು;
ನನ್ನನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಬಂದನು.
20 ನಾನು ನಿರಪರಾಧಿಯಾಗಿದ್ದರಿಂದ ಯೆಹೋವನು ನನಗೆ ಪ್ರತಿಫಲ ನೀಡಿದನು;
ನಾನು ತಪ್ಪನ್ನು ಮಾಡಿಲ್ಲದ ಕಾರಣ ನನಗೆ ಒಳ್ಳೆಯದನ್ನು ಮಾಡಿದನು.
21 ಯಾಕೆಂದರೆ ನಾನು ಯೆಹೋವನಿಗೆ ವಿಧೇಯನಾಗಿದ್ದೆನು;
ನನ್ನ ದೇವರ ವಿರೋಧನಾಗಿ ನಾನು ಪಾಪಮಾಡಲಿಲ್ಲ.
22 ನಾನು ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ
ಯಾವಾಗಲೂ ಜ್ಞಾಪಿಸಿಕೊಳ್ಳುವೆ.
23 ಆತನ ಎದುರಿನಲ್ಲಿ ನಿರ್ದೋಷಿಯಾಗಿದ್ದೆನು.
ಪಾಪದಲ್ಲಿ ಬೀಳದಂತೆ ಎಚ್ಚರಿಕೆಯಾಗಿದ್ದೆನು.
24 ಯೆಹೋವನ ದೃಷ್ಟಿಯಲ್ಲಿ ನಾನು ನೀತಿವಂತನೂ ನಿರಪರಾಧಿಯೂ ಆಗಿರುವುದರಿಂದ
ಆತನು ನನಗೆ ತಕ್ಕ ಪ್ರತಿಫಲವನ್ನು ಕೊಟ್ಟನು.
 
25 ಯೆಹೋವನೇ, ನಿನ್ನನ್ನು ನಿಜವಾಗಿಯೂ ಪ್ರೀತಿಸುವವರನ್ನು
ನೀನು ಶಾಶ್ವತವಾದ ಪ್ರೀತಿಯಿಂದ ಪ್ರೀತಿಸುವೆ.
ನಿನಗೆ ನಂಬಿಗಸ್ತರಾಗಿರುವವರಿಗೆ
ನೀನೂ ನಂಬಿಗಸ್ತನಾಗಿರುವೆ.
26 ನೀನು ಒಳ್ಳೆಯವರಿಗೂ ಶುದ್ಧರಿಗೂ ಒಳ್ಳೆಯವನಾಗಿಯೂ ಪರಿಶುದ್ಧನಾಗಿಯೂ ಇರುವೆ;
ದುಷ್ಟರಿಗಾದರೋ ಶತ್ರುವಾಗಿರುವೆ.
27 ಯೆಹೋವನೇ, ನೀನು ದೀನರಿಗೆ ಸಹಾಯಮಾಡುವೆ.
ಗರ್ವಿಷ್ಠರಿಗಾದರೋ ಅವಮಾನ ಮಾಡುವೆ.
28 ಯೆಹೋವನೇ, ನನ್ನ ದೀಪವನ್ನು ಹೊತ್ತಿಸುವವನು ನೀನೇ.
ನನ್ನ ದೇವರು ನನ್ನ ಸುತ್ತಲೂ ಇರುವ ಕತ್ತಲೆಯನ್ನು ಬೆಳಕನ್ನಾಗಿ ಮಾಡುವನು.
29 ಯೆಹೋವನೇ, ನಿನ್ನ ಸಹಾಯದಿಂದ ನಾನು ಸೈನಿಕರೊಡನೆ ಓಡಬಲ್ಲೆ.
ನನ್ನ ದೇವರ ಸಹಾಯದಿಂದ ನಾನು ಶತ್ರುಗಳ ಕೋಟೆಗಳನ್ನು ಹತ್ತುವೆನು.
 
30 ದೇವರ ಮಾರ್ಗಗಳು ನಿಷ್ಕಳಂಕವಾಗಿವೆ;
ಯೆಹೋವನ ಮಾತುಗಳು ಸತ್ಯವಾಗಿವೆ.
ಆತನು ತನ್ನಲ್ಲಿ ಭರವಸೆಯಿಟ್ಟಿರುವವರನ್ನು ಸಂರಕ್ಷಿಸುವನು.
31 ಯೆಹೋವನಲ್ಲದೆ ಬೇರೆ ಯಾವ ದೇವರೂ ಇಲ್ಲ.
ನಮ್ಮ ದೇವರಲ್ಲದೆ ಬೇರೆ ಯಾವ ಬಂಡೆಯೂ ಇಲ್ಲ.
32 ಆತನೇ, ನನಗೆ ಬಲವನ್ನು ಕೊಡುವನು;
ಶುದ್ಧ ಜೀವನವನ್ನು ನಡೆಸಲು ನನಗೆ ಸಹಾಯಮಾಡುವನು.
33 ಆತನು ನನ್ನ ಪಾದಗಳನ್ನು ಜಿಂಕೆಯಂತೆಜಿಂಕೆ ಅಕ್ಷರಶಃ, “ಹೆಣ್ಣುಜಿಂಕೆ.” ವೇಗಗೊಳಿಸುವನು.
ಆತನು ನನ್ನನ್ನು ಸ್ಥಿರಗೊಳಿಸುವನು; ಎತ್ತರವಾದ ಸ್ಥಳಗಳಲ್ಲಿ ಬೀಳದಂತೆ ದೃಢಪಡಿಸುವನು.
34 ಆತನು ನನ್ನನ್ನು ಯುದ್ಧಕ್ಕೆ ತರಬೇತಿಗೊಳಿಸುವನು.
ಆದ್ದರಿಂದ ನನ್ನ ತೋಳುಗಳು ದೊಡ್ಡ ಬಿಲ್ಲಿನಿಂದ ಬಾಣವನ್ನು ಎಸೆಯಬಲ್ಲವು. ಆದ್ದರಿಂದ ನಾನು ಬಲವಾದ ಬಿಲ್ಲಿನ ತಂತಿಯನ್ನು ಎಸೆಯಬಲ್ಲೆ.
 
35 ದೇವರೇ, ನಿನ್ನ ವಿಜಯದ ಗುರಾಣಿಯನ್ನು ನೀನು ನನಗೆ ಕೊಟ್ಟಿರುವೆ.
ನಿನ್ನ ಬಲಗೈ ನನಗೆ ಆಧಾರ ನೀಡುತ್ತದೆ.
ನೀನು ನನ್ನನ್ನು ಪದೇಪದೇ ಬಲಗೊಳಿಸಿರುವೆ.
36 ದೇವರೇ, ನಾನು ಮುಗ್ಗರಿಸದೆ ನಡೆಯಲು
ನನ್ನ ಕಾಲುಗಳನ್ನೂ ಹರಡುಗಳನ್ನೂ ಬಲಗೊಳಿಸು.
 
37 ಆಗ ನಾನು ಶತ್ರುಗಳನ್ನು ಬೆನ್ನಟ್ಟಿ ಹಿಡಿಯಲು ಶಕ್ತನಾಗುವೆ.
ಅವರನ್ನು ನಾಶಮಾಡುವ ತನಕ ನಾನು ಹಿಂತಿರುಗಿ ಬರುವುದಿಲ್ಲ.
38 ನಾನು ನನ್ನ ಶತ್ರುಗಳನ್ನು ಸೋಲಿಸಿ ಅವರನ್ನು ಏಳಲಾರದಂತೆ ಮಾಡುವೆನು;
ನನ್ನ ಶತ್ರುಗಳು ನನ್ನ ಪಾದಗಳ ಕೆಳಗೇ ಇರುವರು.
39 ದೇವರೇ, ಯುದ್ಧದಲ್ಲಿ ನೀನು ನನ್ನನ್ನು ಬಲಿಷ್ಠನನ್ನಾಗಿ ಮಾಡಿದೆ;
ಎಲ್ಲಾ ಶತ್ರುಗಳು ನನ್ನ ಎದುರಿನಲ್ಲಿ ಬೀಳುವಂತೆ ಮಾಡಿದೆ.
40 ನನ್ನ ಶತ್ರುಗಳಿಗೆ ಕತ್ತಿನ ಮೇಲೆ ಹೊಡೆದು ಕೆಳಗುರುಳಿಸಲು
ನೀನು ನನಗೆ ಅವಕಾಶನೀಡಿದೆ.
41 ನನ್ನ ಶತ್ರುಗಳು ಸಹಾಯಕ್ಕಾಗಿ ಕೂಗಿಕೊಂಡರು.
ಆದರೆ ಅವರನ್ನು ರಕ್ಷಿಸಲು ಯಾರೂ ಇರಲಿಲ್ಲ.
ಅವರು ಯೆಹೋವನನ್ನೂ ಕೂಗಿಕೊಂಡರು;
ಆದರೆ ಆತನೂ ಅವರಿಗೆ ಉತ್ತರಿಸಲಿಲ್ಲ.
42 ನಾನು ನನ್ನ ಶತ್ರುಗಳನ್ನು ಹೊಡೆದು ತುಂಡುತುಂಡು ಮಾಡುವೆನು; ಜಜ್ಜಿ ಪುಡಿಪುಡಿ ಮಾಡುವೆನು;
ಗಾಳಿ ಬಡಿದುಕೊಂಡು ಹೋಗುವ ಧೂಳಿನಂತೆ ಅವರಾಗುವರು.
 
43 ನನ್ನ ವಿರೋಧಿಗಳಿಂದ ನನ್ನನ್ನು ರಕ್ಷಿಸು.
ಆ ಜನಾಂಗಗಳಿಗೆ ನನ್ನನ್ನು ನಾಯಕನನ್ನಾಗಿ ಮಾಡು.
ನನಗೆ ಗೊತ್ತಿಲ್ಲದವರೂ ನನ್ನ ಸೇವೆಮಾಡುವರು.
44 ಅವರು ನನ್ನ ಕುರಿತಾಗಿ ಕೇಳಿದ ಕೂಡಲೇ ವಿಧೇಯರಾಗುವರು.
ಆ ವಿದೇಶಿಯರು ನನ್ನ ವಿಷಯದಲ್ಲಿ ಭಯದಿಂದಿರುವರು.
45 ಆ ವಿದೇಶಿಯರು ಧೈರ್ಯವಿಲ್ಲದವರಾಗಿ ನಡುಗುತ್ತಾ
ತಮ್ಮ ಕೋಟೆಗಳಿಂದ ಬರುವರು.
 
46 ಯೆಹೋವನು ಜೀವಸ್ವರೂಪನಾಗಿದ್ದಾನೆ.
ನನ್ನ ಬಂಡೆಯಾಗಿರುವ ಆತನನ್ನು ಸ್ತುತಿಸುವೆನು.
ನನ್ನನ್ನು ರಕ್ಷಿಸುವ ದೇವರು ಮಹೋನ್ನತನಾಗಿದ್ದಾನೆ.
47 ದೇವರು ನನ್ನ ವೈರಿಗಳನ್ನು ದಂಡಿಸಿ
ಅವರನ್ನು ನನಗೆ ಅಧೀನಪಡಿಸಿದ್ದಾನೆ.
48 ಯೆಹೋವನೇ, ಶತ್ರುಗಳಿಂದ ನೀನು ನನ್ನನ್ನು ಕಾಪಾಡಿದೆ.
 
ನನ್ನ ವಿರೋಧಿಗಳನ್ನು ಸೋಲಿಸಲು ನೀನು ನನಗೆ ಸಹಾಯಮಾಡಿದೆ;
ಕ್ರೂರಿಗಳಿಂದ ನನ್ನನ್ನು ರಕ್ಷಿಸಿದೆ.
49 ಯೆಹೋವನೇ, ಈ ಕಾರಣದಿಂದ ನಾನು ನಿನ್ನನ್ನು ಜನಾಂಗಗಳ ಮಧ್ಯದಲ್ಲಿ ಸ್ತುತಿಸುವೆನು;
ನಿನ್ನ ಹೆಸರನ್ನು ಕುರಿತು ಹಾಡುಗಳನ್ನು ಹಾಡುವೆನು.
 
50 ಆತನು ತಾನು ನೇಮಿಸಿದ ರಾಜನಿಗೆ ಅನೇಕ ಯುದ್ಧಗಳಲ್ಲಿ ಜಯವನ್ನು ದಯಪಾಲಿಸುವನು;
ತಾನು ಅಭಿಷೇಕಿಸಿದ ರಾಜನಿಗೆ ಶಾಶ್ವತವಾದ ಪ್ರೀತಿಯನ್ನು ತೋರುವನು.
ಆತನು ದಾವೀದನಿಗೂ ಅವನ ಸಂತತಿಯವರಿಗೂ ಎಂದೆಂದಿಗೂ ನಂಬಿಗಸ್ತನಾಗಿರುವನು.
 

*18:2: ಬಂಡೆ ದೇವರ ಹೆಸರು. ಆತನು ಕೋಟೆಯಂತಿದ್ದಾನೆ ಅಥವಾ ಬಲವಾದ ಸುರಕ್ಷಿತ ಸ್ಥಳದಂತಿದ್ದಾನೆ ಎಂಬುದನ್ನು ಇದು ತೋರಿಸುತ್ತದೆ.

18:14: ಬಾಣಗಳು ಅಂದರೆ “ಮಿಂಚು.”

18:33: ಜಿಂಕೆ ಅಕ್ಷರಶಃ, “ಹೆಣ್ಣುಜಿಂಕೆ.”