46
ರಚನೆಗಾರರು: ಕೋರಹೀಯರು.
1 ದೇವರು ನಮಗೆ ಆಶ್ರಯವೂ ಬಲವೂ ಆಗಿದ್ದಾನೆ.
ಆತನು ಆಪತ್ತಿನಲ್ಲಿ ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿರುವನು.
2 ಆದ್ದರಿಂದ ಭೂಮಿಯು ನಡುಗಿದರೂ ಬೆಟ್ಟಗಳು
ಸಮುದ್ರದೊಳಗೆ ಮುಳುಗಿಹೋದರೂ ನಮಗೇನೂ ಭಯವಿಲ್ಲ.
3 ಸಮುದ್ರಗಳು ಭೋರ್ಗರೆಯುತ್ತಾ ನೊರೆಕಾರಿದರೂ
ಅವುಗಳ ಅಲ್ಲೋಲಕಲ್ಲೋಲಗಳಿಂದ ಬೆಟ್ಟಗಳು ನಡುಗಿದರೂ ನಮಗೇನೂ ಭಯವಿಲ್ಲ.
4 ಒಂದು ನದಿ ಅದೆ; ಅದರ ಕಾಲುವೆಗಳು ಮಹೋನ್ನತನಾದ ದೇವರ ಪವಿತ್ರ ಪಟ್ಟಣವಾಗಿರುವ
ದೇವನಗರವನ್ನು ಸಂತೋಷಪಡಿಸುತ್ತದೆ.
5 ದೇವರು ಆ ಪಟ್ಟಣದಲ್ಲಿದ್ದಾನೆ, ಆದ್ದರಿಂದ ಅದೆಂದಿಗೂ ನಾಶವಾಗುವುದಿಲ್ಲ.
ಸೂರ್ಯೋದಯಕ್ಕಿಂತ ಮೊದಲೇ ದೇವರು ಅದರ ಸಹಾಯಕ್ಕಾಗಿ ಬರುವನು.
6 ಆತನು ಗರ್ಜಿಸಲು, ಜನಾಂಗಗಳು ಭಯದಿಂದ ನಡುಗುತ್ತವೆ, ರಾಷ್ಟ್ರಗಳು ಬಿದ್ದುಹೋಗುತ್ತವೆ;
ಭೂಮಿಯು ಕರಗಿಹೋಗುವುದು.
7 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
ಯಾಕೋಬನ ದೇವರು ನಮ್ಮ ಆಶ್ರಯದುರ್ಗವಾಗಿದ್ದಾನೆ.
8 ಬನ್ನಿರಿ, ಯೆಹೋವನ ಕಾರ್ಯಗಳನ್ನು ನೋಡಿರಿ;
ಭೂಮಿಯ ಮೇಲೆ ಆತನು ಮಾಡುತ್ತಿರುವ ಭಯಂಕರವಾದ ಕಾರ್ಯಗಳನ್ನು ನೋಡಿರಿ.
9 ಇಡೀ ಪ್ರಪಂಚದಲ್ಲಿ ಆತನು ಯುದ್ಧವನ್ನು ನಿಲ್ಲಿಸುವನು;
ಬಿಲ್ಲುಗಳನ್ನೂ ಗುರಾಣಿಗಳನ್ನೂ*ಗುರಾಣಿಗಳನ್ನು ಅಥವಾ ರಥಗಳನ್ನು. ಮುರಿದುಹಾಕುವನು; ಗುರಾಣಿಗಳನ್ನು ಬೆಂಕಿಯಿಂದ ಸುಟ್ಟುಹಾಕುವನು.
10 ದೇವರು ಹೀಗೆನ್ನುವನು: “ಹೋರಾಡುವುದನ್ನು ನಿಲ್ಲಿಸಿ, ನಾನೇ ದೇವರೆಂಬುದನ್ನು ಕಲಿತುಕೊಳ್ಳಿ!
ನಾನು ಜನಾಂಗಗಳನ್ನು ಸೋಲಿಸುವೆನು!
ಇಡೀ ಲೋಕವನ್ನು ಹತೋಟಿಗೆ ತೆಗೆದುಕೊಳ್ಳುವೆನು!”
11 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
ಯಾಕೋಬನ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ.