84
ರಚನೆಗಾರರು: ಕೋರಹೀಯರು.
1 ಸೇನಾಧೀಶ್ವರನಾದ ಯೆಹೋವನೇ, ನಿನ್ನ ಆಲಯವು ಎಷ್ಟೋ ರಮ್ಯವಾಗಿದೆ.
2 ಯೆಹೋವನೇ, ನಿನ್ನ ಆಲಯದೊಳಗೆ ಪ್ರವೇಶಿಸಲು ಕಾತುರಗೊಂಡಿರುವೆ.
ನನ್ನ ಅಂಗಾಂಗಗಳೆಲ್ಲಾ ಚೈತನ್ಯಸ್ವರೂಪನಾದ ದೇವರೊಂದಿಗೆ ಇರಲು ಬಯಸುತ್ತಿವೆ.
3 ಸೇನಾಧೀಶ್ವರನಾದ ಯೆಹೋವನೇ, ನನ್ನ ರಾಜನೇ,
ನನ್ನ ದೇವರೇ, ಗುಬ್ಬಚ್ಚಿಗಳಿಗೂ ಪಾರಿವಾಳಗಳಿಗೂ ನಿನ್ನ ಆಲಯದಲ್ಲಿ ಗೂಡುಗಳಿವೆ.
ನಿನ್ನ ಯಜ್ಞವೇದಿಕೆಯ ಸಮೀಪದಲ್ಲಿಯೇ
ಗೂಡು ಕಟ್ಟಿಕೊಂಡು ಮರಿ ಮಾಡುತ್ತವೆ.
4 ನಿನ್ನ ಆಲಯದಲ್ಲಿ ವಾಸಿಸುವವರು ಭಾಗ್ಯವಂತರೇ ಸರಿ!
ಅವರು ನಿನ್ನನ್ನು ನಿತ್ಯವೂ ಸ್ತುತಿಸುತ್ತಿರುವರು.
5 ನಿನ್ನ ಶಕ್ತಿಯನ್ನೇ ಆಶ್ರಯಿಸಿಕೊಂಡು ಚೀಯೋನ್ ಪರ್ವತಕ್ಕೆ
ಯಾತ್ರಿಕರಾಗಿ ಬರಲು ಬಯಸುವವರು ಎಷ್ಟೋ ಭಾಗ್ಯವಂತರು.
6 ಒರತೆಯನ್ನಾಗಿ ಮಾಡಿರುವ ಬಾಕಾ ಕಣಿವೆಯ ಮೂಲಕ ಅವರು ಪ್ರಯಾಣಮಾಡುವರು.
ಮುಂಗಾರು ಮಳೆಯು ಅದನ್ನು ನೀರಿನ ತೊರೆಗಳಿಂದ ಸಮೃದ್ಧಿಗೊಳಿಸುವುದು.
7 ಜನರು ದೇವರನ್ನು ಸಂದರ್ಶಿಸಲು
ಊರಿಂದ ಊರಿಗೆ ಪ್ರಯಾಣ ಮಾಡುತ್ತಾ ಚೀಯೋನಿಗೆ ಬರುವರು.
8 ಸೇನಾಧೀಶ್ವರ ಯೆಹೋವ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ಯಾಕೋಬನ ದೇವರೇ, ನನ್ನ ಮೊರೆಯನ್ನು ಕೇಳು.
9 ದೇವರೇ, ನಮಗೆ ಗುರಾಣಿಯಾಗಿರುವವನನ್ನು ನೋಡು.
ನೀನು ಅಭಿಷೇಕಿಸಿದವನಿಗೆ ಕರುಣೆತೋರು.
10 ಬೇರೊಂದು ಸ್ಥಳದಲ್ಲಿ ಸಾವಿರ ದಿನಗಳಿರುವುದಕ್ಕಿಂತಲೂ
ನಿನ್ನ ಆಲಯದಲ್ಲಿ ಒಂದು ದಿನವಿರುವುದೇ ಉತ್ತಮ.
ದುಷ್ಟರ ಮನೆಯಲ್ಲಿ ವಾಸಿಸುವುದಕ್ಕಿಂತಲೂ
ನನ್ನ ದೇವರ ಆಲಯದಲ್ಲಿ ದ್ವಾರಪಾಲಕನಾಗಿರುವುದೇ ಉತ್ತಮ.*ದುಷ್ಟರ … ಉತ್ತಮ ಅಥವಾ “ದುಷ್ಟರ ಗುಡಾರಗಳಲ್ಲಿ ವಾಸಿಸುವುದಕ್ಕಿಂತ ನನ್ನ ದೇವರ ಆಲಯದ ಬಾಗಿಲ ಬಳಿಯಲ್ಲಿ ಕುಳಿತುಕೊಂಡು ಭಿಕ್ಷೆಬೇಡುವುದೇ ಉತ್ತಮ.”
11 ಯೆಹೋವ ದೇವರು ನಮ್ಮ ಸಂರಕ್ಷಕನೂ ಮಹಿಮಾ ಪೂರ್ಣನಾದ ರಾಜನೂ ಆಗಿದ್ದಾನೆ.†ಸಂರಕ್ಷಕನೂ … ರಾಜನೂ ಆಗಿದ್ದಾನೆ ಅಕ್ಷರಶಃ, “ಸೂರ್ಯ ಮತ್ತು ಗುರಾಣಿ.”
ಯೆಹೋವನು ನಮಗೆ ದಯೆಯನ್ನೂ ಘನತೆಯನ್ನೂ ಅನುಗ್ರಹಿಸುವನು.
ಆತನು ಎಲ್ಲಾ ಒಳ್ಳೆಯವುಗಳನ್ನು
ತನ್ನ ಭಕ್ತರಿಗೆ ಕೊಡುವನು.
12 ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವವರು ಭಾಗ್ಯವಂತರೇ ಸರಿ!