4
ಯೋಹಾನನು ಪರಲೋಕವನ್ನು ನೋಡಿದನು
1 ನಂತರ ನಾನು ನೋಡಿದಾಗ ನನ್ನ ಎದುರಿನಲ್ಲಿ ಪರಲೋಕದ ಬಾಗಿಲು ತೆರೆದಿರುವುದನ್ನು ಕಂಡೆನು. ನನ್ನ ಜೊತೆಯಲ್ಲಿ ಮೊದಲು ಮಾತನಾಡಿದ್ದ ಧ್ವನಿಯೇ ಮತ್ತೆ ನನ್ನೊಂದಿಗೆ ಮಾತಾಡಿತು. ಆ ಧ್ವನಿಯು ತುತೂರಿಯ ಧ್ವನಿಯಂತಿತ್ತು. ಆ ಧ್ವನಿಯು, “ಇಲ್ಲಿಗೆ ಹತ್ತಿ ಬಾ. ಮುಂದೆ ಸಂಭವಿಸುವುದನ್ನು ನಾನು ನಿನಗೆ ತೋರಿಸುತ್ತೇನೆ” ಎಂದು ಹೇಳಿತು. 2 ಕೂಡಲೇ ನಾನು ಪವಿತ್ರಾತ್ಮನ ವಶನಾದೆನು. ಪರಲೋಕದಲ್ಲಿ ನನ್ನೆದುರಿಗೆ ಒಂದು ಸಿಂಹಾಸನವಿತ್ತು. ಯಾರೋ ಒಬ್ಬನು ಆ ಸಿಂಹಾಸನದ ಮೇಲೆ ಕುಳಿತಿದ್ದನು. 3 ಸಿಂಹಾಸನದ ಮೇಲೆ ಕುಳಿತಿದ್ದಾತನು ಅಮೂಲ್ಯವಾದ ಸೂರ್ಯಕಾಂತ, ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಬಣ್ಣದ ಕಾಮನಬಿಲ್ಲಿತ್ತು.
4 ಆ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತುಕೊಂಡಿದ್ದರು. ಅವರು ಬಿಳಿ ವಸ್ತ್ರಗಳನ್ನು ಧರಿಸಿದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು. 5 ಆ ಸಿಂಹಾಸನದಿಂದ ಸಿಡಿಲಿನ ಆರ್ಭಟವೂ ಗುಡುಗಿನ ಧ್ವನಿಯೂ ಬರುತ್ತಿತ್ತು. ಆ ಸಿಂಹಾಸನದ ಮುಂದೆ ಏಳು ದೀಪಗಳು ಬೆಳಗುತ್ತಿದ್ದವು. ಈ ದೀಪಗಳು ದೇವರ ಏಳು ಆತ್ಮಗಳಾಗಿದ್ದವು. 6 ಇದಲ್ಲದೆ ಸಿಂಹಾಸನದ ಮುಂದೆ ಗಾಜಿನ ಸಮುದ್ರದಂತೆ ಕಾಣುವ ವಸ್ತುವೊಂದಿತ್ತು. ಅದು ಸ್ಫಟಿಕದಂತೆ ಸ್ಪಚ್ಛವಾಗಿತ್ತು.
ಆ ಸಿಂಹಾಸನದ ಮುಂದೆ ಮತ್ತು ಅದರ ಪ್ರತಿಯೊಂದು ಮಗ್ಗುಲಿನಲ್ಲೂ ನಾಲ್ಕು ಜೀವಿಗಳಿದ್ದವು. ಈ ಜೀವಿಗಳ ಹಿಂಭಾಗದಲ್ಲೆಲ್ಲಾ ಮತ್ತು ಮುಂಭಾಗದಲ್ಲೆಲ್ಲಾ ಕಣ್ಣುಗಳು ತುಂಬಿದ್ದವು. 7 ಮೊದಲನೆ ಜೀವಿಯು ಸಿಂಹದಂತಿತ್ತು. ಎರಡನೆಯದು ಹಸುವಿನಂತಿತ್ತು. ಮೂರನೆಯದರ ಮುಖ ಮಾನವನ ಮುಖದಂತಿತ್ತು. ನಾಲ್ಕನೆಯದು ಹಾರುವ ಗರುಡನಂತಿತ್ತು.*ನೋಡಿರಿ: ಯೆಹೆಜ್ಕೇಲ 1:4-14. 8 ಈ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆರು ರೆಕ್ಕೆಗಳಿದ್ದವು. ಈ ಜೀವಿಗಳ ಹೊರಭಾಗದಲ್ಲೆಲ್ಲಾ ಮತ್ತು ಒಳಭಾಗದಲ್ಲೆಲ್ಲಾ ಕಣ್ಣುಗಳಿದ್ದವು. ಈ ನಾಲ್ಕು ಜೀವಿಗಳು ಹಗಲಿರುಳು ಎಡಬಿಡದೆ ಹೀಗೆ ಹೇಳುತ್ತಿದ್ದವು:
“ದೇವರಾದ ಪ್ರಭು, ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು; ಆತನು ಸರ್ವಶಕ್ತನು.
ಆತನು ಭೂತಕಾಲದಲ್ಲಿ ಇದ್ದವನೂ ವರ್ತಮಾನಕಾಲದಲ್ಲಿ ಇರುವಾತನೂ ಮುಂದೆ ಬರುವಾತನೂ ಆಗಿದ್ದಾನೆ.”
9 ಈ ಜೀವಿಗಳು, ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಪ್ರಭಾವ, ಗೌರವ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದವು. ಯುಗಯುಗಾಂತರಗಳಲ್ಲಿಯೂ ಜೀವಿಸುವವನು ಆತನೇ. 10 ಇಪ್ಪತ್ತನಾಲ್ಕು ಮಂದಿ ಹಿರಿಯರು ತಮ್ಮ ಕಿರೀಟಗಳನ್ನು ತೆಗೆದು ಬದಿಗಿಟ್ಟು, ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಮೊಣಕಾಲೂರಿ ನಮಸ್ಕರಿಸಿ, ಯುಗಯುಗಾಂತರಗಳಲ್ಲಿಯೂ ಜೀವಿಸುವ ಆತನನ್ನು ಆರಾಧಿಸುತ್ತಾ ಇಂತೆಂದರು:
11 “ನಮ್ಮ ಪ್ರಭುವೇ, ನಮ್ಮ ದೇವರೇ!
ನೀನು ಪ್ರಭಾವ, ಗೌರವ, ಅಧಿಕಾರಗಳನ್ನು ಪಡೆಯಲು ಯೋಗ್ಯನಾಗಿರುವೆ.
ಎಲ್ಲವನ್ನೂ ನಿರ್ಮಿಸಿದಾತನು ನೀನೇ.
ನಿನ್ನ ಚಿತ್ತದಂತೆಯೇ ಎಲ್ಲವೂ ಇದ್ದವು; ಎಲ್ಲವೂ ಸೃಷ್ಟಿಗೊಂಡವು.”