2
ಯೆಹೂದ್ಯರು ಸಹ ಪಾಪಿಗಳು
“ಇತರ ಜನರಿಗೆ ತೀರ್ಪು ಮಾಡಬಲ್ಲೆವು” ಎಂದು ನಿಮ್ಮ ವಿಷಯದಲ್ಲಿ ಯೋಚಿಸಿಕೊಳ್ಳಬೇಡಿ. ಏಕೆಂದರೆ ನೀವು ಸಹ ಪಾಪಮಾಡಿ ಅಪರಾಧಿಗಳಾಗಿದ್ದೀರಿ. ನೀವೂ ಆ ಜನರಿಗೆ ತೀರ್ಪು ಮಾಡುತ್ತೀರಿ. ಆದರೆ ಅದೇ ಕಾರ್ಯಗಳನ್ನು ನೀವೂ ಮಾಡುತ್ತೀರಿ. ಆದ್ದರಿಂದ ನೀವು ಅವರಿಗೆ ತೀರ್ಪು ಮಾಡುವಾಗ, ನಿಜವಾಗಿಯೂ ನಿಮಗೇ ತೀರ್ಪು ಮಾಡಿಕೊಳ್ಳುವವರಾಗಿದ್ದೀರಿ. ಅಪರಾಧಗಳನ್ನು ಮಾಡುವ ಜನರಿಗೆ ದೇವರು ತೀರ್ಪು ಮಾಡುತ್ತಾನೆ. ಆತನ ತೀರ್ಪು ನ್ಯಾಯವಾದುದೆಂದು ನಮಗೆ ಗೊತ್ತಿದೆ. ಆ ಅಪರಾಧಗಳನ್ನು ಮಾಡುವ ಜನರಿಗೆ ನೀವು ಸಹ ತೀರ್ಪು ಮಾಡುತ್ತೀರಿ. ಆದರೆ ನೀವೇ ಆ ಅಪರಾಧಗಳನ್ನು ಮಾಡುತ್ತೀರಿ. ಹೀಗಿರಲು ದೇವರ ದಂಡನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿದೆ. ದೇವರು ನಿಮ್ಮ ವಿಷಯದಲ್ಲಿ ಬಹು ಕನಿಕರ ಉಳ್ಳವನಾಗಿದ್ದಾನೆ; ತಾಳ್ಮೆ ಉಳ್ಳವನಾಗಿದ್ದಾನೆ. ನೀವು ಮಾರ್ಪಾಟಾಗಬೇಕೆಂದು ದೇವರು ನಿಮಗಾಗಿ ಕಾದುಕೊಂಡಿದ್ದಾನೆ. ಆದರೆ ನೀವು ಆತನ ಕರುಣೆಯ ಬಗ್ಗೆ ಆಲೋಚಿಸುವುದೇ ಇಲ್ಲ. ನೀವು ನಿಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳಬೇಕಾಗುತ್ತದೆಯೆಂದು ದೇವರ ಕನಿಕರವನ್ನು ಅರ್ಥಮಾಡಿಕೊಳ್ಳದೆ ಇದ್ದೀರಿ.
ನೀವು ಕಠಿಣರಾಗಿದ್ದೀರಿ ಮತ್ತು ಮೊಂಡರಾಗಿದ್ದೀರಿ. ಮಾರ್ಪಾಟಾಗಲು ನಿಮಗೆ ಇಷ್ಟವಿಲ್ಲ. ಆದ್ದರಿಂದ ನಿಮಗೆ ಬರಲಿರುವ ದಂಡನೆಯನ್ನು ನೀವು ಹೆಚ್ಚುಹೆಚ್ಚು ಮಾಡಿಕೊಳ್ಳುತ್ತಿದ್ದೀರಿ. ದೇವರು ತನ್ನ ಕೋಪವನ್ನು ತೋರಿಸುವ ದಿನದಲ್ಲಿ ನಿಮಗೆ ಆ ದಂಡನೆಯಾಗುವುದು. ಆ ದಿನದಲ್ಲಿ ದೇವರ ನ್ಯಾಯವಾದ ತೀರ್ಪುಗಳನ್ನು ಜನರು ನೋಡುವರು. ದೇವರು ಪ್ರತಿಯೊಬ್ಬರಿಗೂ ಅವರವರು ಮಾಡಿದ ಕಾರ್ಯಗಳಿಗಾಗಿ ಬಹುಮಾನವನ್ನಾಗಲಿ ದಂಡನೆಯನ್ನಾಗಲಿ ಕೊಡುವನು. ಕೆಲವು ಜನರು ಮಹಿಮೆಗಾಗಿ, ಘನತೆಗಾಗಿ ಮತ್ತು ಅಮರತ್ವಕ್ಕಾಗಿ ಯಾವಾಗಲೂ ಸತ್ಕಾರ್ಯಗಳನ್ನು ಮಾಡುತ್ತಾ ಜೀವಿಸುವರು. ದೇವರು ಆ ಜನರಿಗೆ ನಿತ್ಯಜೀವವನ್ನು ಕೊಡುವನು. ಆದರೆ ಉಳಿದ ಜನರು ಸ್ವಾರ್ಥಿಗಳಾಗಿದ್ದು, ಸತ್ಯವನ್ನು ಅನುಸರಿಸದೆ ದುಷ್ಟತ್ವವನ್ನು ಅನುಸರಿಸುವವರಾಗಿದ್ದಾರೆ. ಅವರ ಮೇಲೆ ದೇವರ ದಂಡನೆಯೂ ಕೋಪವೂ ಬರುತ್ತದೆ. ಕೆಟ್ಟದ್ದನ್ನು ನಡೆಸುವ ಪ್ರತಿಯೊಬ್ಬ ವ್ಯಕ್ತಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಕಷ್ಟಸಂಕಟಗಳನ್ನು ಕೊಡುತ್ತಾನೆ. 10 ಆದರೆ ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬರಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಮಹಿಮೆಯನ್ನು, ಘನತೆಯನ್ನು ಮತ್ತು ಶಾಂತಿಯನ್ನು ಕೊಡುವನು. 11 ದೇವರು ಪಕ್ಷಪಾತ ಮಾಡದೆ ಎಲ್ಲರಿಗೂ ಒಂದೇ ರೀತಿಯಲ್ಲಿ ತೀರ್ಪು ಕೊಡುತ್ತಾನೆ.
12 ಧರ್ಮಶಾಸ್ತ್ರವನ್ನು ಹೊಂದಿರುವ ಜನರು ಮತ್ತು ಧರ್ಮಶಾಸ್ತ್ರದ ಬಗ್ಗೆ ಕೇಳಿಯೂ ಇಲ್ಲದ ಜನರು ಪಾಪ ಮಾಡುವಾಗ ಅವರಿಬ್ಬರಿಗೂ ಯಾವ ವ್ಯತ್ಯಾಸವಿರುವುದಿಲ್ಲ. ಧರ್ಮಶಾಸ್ತ್ರವಿಲ್ಲದವರಾಗಿ ಪಾಪ ಮಾಡುವವರು ನಾಶವಾಗುವರು. ಅದೇ ರೀತಿಯಲ್ಲಿ, ಧರ್ಮಶಾಸ್ತ್ರವನ್ನು ಹೊಂದಿದವರಾಗಿ ಪಾಪ ಮಾಡುವವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು. 13 ಧರ್ಮಶಾಸ್ತ್ರವನ್ನು ಕೇಳಿದ ಮಾತ್ರಕ್ಕೆ ಜನರು ನೀತಿವಂತರಾಗುವುದಿಲ್ಲ. ಧರ್ಮಶಾಸ್ತ್ರ ಹೇಳುವ ಪ್ರತಿಯೊಂದಕ್ಕೂ ವಿಧೇಯರಾಗುವ ಜನರನ್ನು ಧರ್ಮಶಾಸ್ತ್ರವು ನೀತಿವಂತರನ್ನಾಗಿ ಮಾಡುತ್ತದೆ.
14 ಯೆಹೂದ್ಯರಲ್ಲದವರು ಧರ್ಮಶಾಸ್ತ್ರವನ್ನು ಹೊಂದಿಲ್ಲ. ಆದರೆ ಅವರು ಧರ್ಮಶಾಸ್ತ್ರವನ್ನು ಸ್ವಾಭಾವಿಕವಾಗಿ ಅನುಸರಿಸಿದ್ದೇಯಾದರೆ, ಅವರಿಗೆ ಧರ್ಮಶಾಸ್ತ್ರವಿಲ್ಲದಿದ್ದರೂ ಅವರ ಅಂತರಂಗವೇ ಅವರಿಗೆ ಧರ್ಮಶಾಸ್ತ್ರವಾಗುತ್ತದೆ. 15 ಧರ್ಮಶಾಸ್ತ್ರದ ಆಜ್ಞಾವಿಧಿಗಳಿಗನುಸಾರವಾಗಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಮ್ಮ ಹೃದಯಗಳು ಬಲ್ಲವೆಂದು ಅವರು ತಮ್ಮ ನಡತೆಯಿಂದಲೇ ತೋರ್ಪಡಿಸುತ್ತಾರೆ. ಇದು ಸತ್ಯವೆಂಬುದನ್ನು ಅವರ ಮನಸ್ಸಾಕ್ಷಿಯು ಖಚಿತಪಡಿಸುತ್ತದೆ. ಅವರ ಅಂತಃಪ್ರಜ್ಞೆಯೇ ಅವರನ್ನು ದೋಷಿಗಳೆಂದೋ ಇಲ್ಲವೆ ನಿರ್ದೋಷಿಗಳೆಂದೋ ತೀರ್ಮಾನಿಸುತ್ತದೆ.
16 ಮನುಷ್ಯರ ಅಂತರಂಗದಲ್ಲಿರುವ ರಹಸ್ಯ ಸಂಗತಿಗಳಿಗೆ ದೇವರು ತೀರ್ಪುಮಾಡುವ ದಿನದಂದು ಇವುಗಳೆಲ್ಲಾ ನೆರವೇರುವವು. ದೇವರು ಯೇಸು ಕ್ರಿಸ್ತನ ಮೂಲಕ ಜನರಿಗೆ ತೀರ್ಪು ಮಾಡುತ್ತಾನೆ ಎಂಬುದಾಗಿ ಸುವಾರ್ತೆಯು ತಿಳಿಸುತ್ತದೆ. ನಾನು ಜನರಿಗೆ ತಿಳಿಸುವುದು ಆ ಸುವಾರ್ತೆಯನ್ನೇ.
ಯೆಹೂದ್ಯರು ಮತ್ತು ಧರ್ಮಶಾಸ್ತ್ರ
17 “ನಾನು ಯೆಹೂದ್ಯನು” ಎಂದು ಹೇಳಿಕೊಳ್ಳುತ್ತಿರುವ ನಿನ್ನ ವಿಷಯವಾದರೂ ಏನು? ಧರ್ಮಶಾಸ್ತ್ರದಲ್ಲಿ ನಂಬಿಕೆಯಿಟ್ಟು ದೇವರಿಗೆ ಸಮೀಪವಾಗಿರುವುದಾಗಿ ನೀನು ಹೆಮ್ಮೆಪಡುವೆ. 18 ದೇವರ ಚಿತ್ತಕ್ಕನುಸಾರವಾದ ಕಾರ್ಯಗಳನ್ನು ಧರ್ಮಶಾಸ್ತ್ರದಿಂದ ಕಲಿತುಕೊಂಡಿರುವುದಾಗಿ ನೀನು ಹೇಳಿಕೊಳ್ಳುವೆ. 19 ಸರಿಯಾದ ಮಾರ್ಗವನ್ನು ತಿಳಿದಿಲ್ಲದ ಜನರಿಗೆ ಮಾರ್ಗದರ್ಶಕನಾಗಿಯೂ ಕತ್ತಲೆಯಲ್ಲಿರುವ ಜನರಿಗೆ ಬೆಳಕಾಗಿಯೂ ಇರುವುದಾಗಿ ನಿನ್ನ ಕುರಿತು ಭಾವಿಸಿಕೊಂಡಿರುವೆ. 20 ಮೂಢರಿಗೆ ಶಿಕ್ಷಕನೆಂತಲೂ ಕಲಿಯಬೇಕಾದವರಿಗೆ ಉಪಾಧ್ಯಾಯನೆಂತಲೂ ನೀನು ನಿನ್ನ ಬಗ್ಗೆ ಆಲೋಚಿಸಿಕೊಂಡಿರುವೆ. ನಿನ್ನಲ್ಲಿ ಧರ್ಮಶಾಸ್ತ್ರವಿದೆ, ಆದ್ದರಿಂದ ಪ್ರತಿಯೊಂದನ್ನೂ ತಿಳಿದುಕೊಂಡಿರುವುದಾಗಿಯೂ ಎಲ್ಲಾ ಸತ್ಯವನ್ನು ಹೊಂದಿಕೊಂಡಿರುವುದಾಗಿಯೂ ನೀನು ಭಾವಿಸಿಕೊಂಡಿರುವೆ. 21 ನೀನು ಬೇರೆಯವರಿಗೆ ಉಪದೇಶಿಸುವೆ. ಹೀಗಿರಲು ನೀನು ನಿನಗೇ ಉಪದೇಶ ಮಾಡಿಕೊಳ್ಳಬಾರದೇಕೆ? ಕದಿಯಬಾರದೆಂದು ನೀನು ಜನರಿಗೆ ಹೇಳುವೆ, ಆದರೆ ನೀನೇ ಕದಿಯುವೆ. 22 ಜನರು ವ್ಯಭಿಚಾರವೆಂಬ ಪಾಪವನ್ನು ಮಾಡಕೂಡದೆಂದು ನೀನು ಹೇಳುವೆ, ಆದರೆ ನೀನೇ ಆ ಪಾಪಮಾಡಿ ಅಪರಾಧಿಯಾಗಿರುವೆ. ನೀನು ವಿಗ್ರಹಗಳನ್ನು ದ್ವೇಷಿಸುವೆ, ಆದರೆ ನೀನೇ ಅವುಗಳನ್ನು ಗುಡಿಗಳಿಂದ ಕದಿಯುವೆ. 23 ನೀನು ದೇವರ ಧರ್ಮಶಾಸ್ತ್ರದ ಬಗ್ಗೆ ಹೆಮ್ಮೆಪಡುವೆ. ಆದರೆ ಆ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೇವರಿಗೆ ಅವಮಾನ ಮಾಡುವೆ. 24 “ಯೆಹೂದ್ಯರಾದ ನಿಮ್ಮ ದೆಸೆಯಿಂದ ಯೆಹೂದ್ಯರಲ್ಲದ ಜನರು ದೇವರ ಹೆಸರಿಗೆ ವಿರೋಧವಾಗಿ ಮಾತಾಡುತ್ತಾರೆ”ಉಲ್ಲೇಖನ: ಯೆಶಾಯ 52:5; ಯೆಹೆಜ್ಕೇಲ 36:20. ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
25 ನೀನು ಧರ್ಮಶಾಸ್ತ್ರವನ್ನು ಅನುಸರಿಸಿದರೆ ನೀನು ಮಾಡಿಸಿಕೊಂಡ ಸುನ್ನತಿಗೆ ಅರ್ಥವಿದೆ. ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದರೆ ನಿನಗೆ ಸುನ್ನತಿಯಾಗಿಲ್ಲದಂತೆಯೇ ಆಯಿತು. 26 ಯೆಹೂದ್ಯರಲ್ಲದ ಜನರಿಗೆ ಸುನ್ನತಿಯಾಗಿಲ್ಲ, ಆದರೆ ಧರ್ಮಶಾಸ್ತ್ರವು ಹೇಳುವುದನ್ನು ಅವರು ಮಾಡುವುದಾದರೆ, ಅವರು ಸುನ್ನತಿಯನ್ನು ಹೊಂದಿದಂಥವರಾದರು. 27 ಯೆಹೂದ್ಯರಾದ ನಿಮಗೆ ಲಿಖಿತ ಧರ್ಮಶಾಸ್ತ್ರವಿದೆ ಮತ್ತು ಸುನ್ನತಿಯಾಗಿದೆ. ಆದರೆ ನೀವು ಧರ್ಮಶಾಸ್ತ್ರವನ್ನು ಮೀರಿ ನಡೆಯುತ್ತೀರಿ. ಹೀಗಿರಲು, ದೇಹದಲ್ಲಿ ಸುನ್ನತಿಯನ್ನು ಹೊಂದಿಲ್ಲದಿದ್ದರೂ ಧರ್ಮಶಾಸ್ತ್ರಕ್ಕೆ ವಿಧೇಯರಾಗುವ ಜನರು ನಿಮ್ಮನ್ನು ಅಪರಾಧಿಗಳೆಂದು ತೋರ್ಪಡಿಸುತ್ತಾರೆ.
28 ಕೇವಲ ಬಾಹ್ಯ ದೇಹದಲ್ಲಿ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ. ಕೇವಲ ದೇಹದ ಹೊರಭಾಗದ ಸುನ್ನತಿಯು ನಿಜವಾದ ಸುನ್ನತಿಯಲ್ಲ. 29 ಅಂತರಂಗದಲ್ಲಿ ಯೆಹೂದ್ಯನಾಗಿರುವವನು ಮಾತ್ರ ನಿಜವಾದ ಯೆಹೂದ್ಯನು. ಹೃದಯದಲ್ಲಿ ಆದ ಸುನ್ನತಿಯೇ ನಿಜವಾದ ಸುನ್ನತಿ. ಈ ಸುನ್ನತಿಯಾದದ್ದು ಪವಿತ್ರಾತ್ಮನಿಂದಲೇ ಹೊರತು ಲಿಖಿತ ಧರ್ಮಶಾಸ್ತ್ರದಿಂದಲ್ಲ. ಪವಿತ್ರಾತ್ಮನಿಂದ ಹೃದಯದಲ್ಲಿ ಸುನ್ನತಿ ಹೊಂದಿರುವ ವ್ಯಕ್ತಿಯು ಹೊಗಳಿಕೆಯನ್ನು ಪಡೆಯುವುದು ದೇವರಿಂದಲೇ ಹೊರತು ಮನುಷ್ಯರಿಂದಲ್ಲ.

2:24: ಉಲ್ಲೇಖನ: ಯೆಶಾಯ 52:5; ಯೆಹೆಜ್ಕೇಲ 36:20.