9
ದೇವರು ಮತ್ತು ಯೆಹೂದ್ಯರು
ನಾನು ಕ್ರಿಸ್ತನಲ್ಲಿದ್ದೇನೆ ಮತ್ತು ನಿಮಗೆ ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಸುಳ್ಳಾಡುವುದಿಲ್ಲ. ನನ್ನ ಆಲೋಚನೆಗಳು ಪವಿತ್ರಾತ್ಮನ ಆಳ್ವಿಕೆಗೆ ಒಳಪಟ್ಟಿವೆ. ನನ್ನ ಮನಸ್ಸೇ ಇದಕ್ಕೆ ಸಾಕ್ಷಿ. ಯೆಹೂದ್ಯರ ವಿಷಯದಲ್ಲಿ ನನಗೆ ಅತೀವ ದುಃಖವಿದೆ; ನಿರಂತರ ಮನೋವೇದನೆಯಿದೆ. ಅವರು ನನ್ನ ಸಹೋದರ ಸಹೋದರಿಯರಾಗಿದ್ದಾರೆ; ಇಹಲೋಕದ ಕುಟುಂಬದವರಾಗಿದ್ದಾರೆ. ಅವರಿಗೆ ಸಹಾಯ ಮಾಡಲು ಕ್ರಿಸ್ತನನ್ನು ಅಗಲಿ ಶಾಪಗ್ರಸ್ತನಾಗುವುದಕ್ಕೂ ಸಿದ್ಧನಾಗಿದ್ದೇನೆ. ಅವರು ಇಸ್ರೇಲಿನ ಜನರು. ಅವರು ದೇವರಿಂದ ಆರಿಸಲ್ಪಟ್ಟ ಮಕ್ಕಳು. ಅವರು ದೇವರ ಮಹಿಮೆಯನ್ನು ಮತ್ತು ದೇವರು ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಗಳನ್ನು ಹೊಂದಿದ್ದಾರೆ. ದೇವರು ಅವರಿಗೆ ಮೋಶೆಯ ಧರ್ಮಶಾಸ್ತ್ರವನ್ನೂ ಸರಿಯಾದ ಆರಾಧನೆಯ ಕ್ರಮವನ್ನೂ ತನ್ನ ವಾಗ್ದಾನಗಳನ್ನೂ ಕೊಟ್ಟನು. ಅವರು ನಮ್ಮ ಪಿತೃಗಳ ಸಂತಾನಗಳಿಗೆ ಸೇರಿದವರಾಗಿದ್ದಾರೆ; ಕ್ರಿಸ್ತನು ಶಾರೀರಿಕವಾಗಿ ಇವರ ವಂಶದಲ್ಲಿಯೇ ಹುಟ್ಟಿದನು. ಕ್ರಿಸ್ತನು ಸಕಲಕ್ಕೂ ಒಡೆಯನಾಗಿದ್ದಾನೆ. ಆತನಿಗೆ ಎಂದೆಂದಿಗೂ ಸ್ತೋತ್ರವಾಗಲಿ! ಆಮೆನ್.
ಹೌದು, ನಾನು ಯೆಹೂದ್ಯರ ವಿಷಯದಲ್ಲಿ ದುಃಖಿಸುತ್ತೇನೆ. ದೇವರು ತನ್ನ ವಾಗ್ದಾನವನ್ನು ನೆರವೇರಿಸುವುದರಲ್ಲಿ ವಿಫಲನಾದನೆಂದು ನಾನು ಹೇಳುತ್ತಿಲ್ಲ. ಏಕೆಂದರೆ ಇಸ್ರೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ಅಬ್ರಹಾಮನ ಸಂತತಿಗಳವರಲ್ಲಿ ಕೆಲವರು ಮಾತ್ರ ಅಬ್ರಹಾಮನ ನಿಜವಾದ ಮಕ್ಕಳಾಗಿದ್ದಾರೆ. ದೇವರು ಅವನಿಗೆ, “ಇಸಾಕನು ಮಾತ್ರ ನಿಮಗೆ ನ್ಯಾಯಬದ್ಧವಾದ ಮಗನು”ಉಲ್ಲೇಖನ: ಆದಿಕಾಂಡ 21:12. ಎಂದು ಹೇಳಿದನು. ಇದರರ್ಥವೇನೆಂದರೆ, ಶರೀರ ಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ದೇವರ (ನಿಜ) ಮಕ್ಕಳಾಗಿದ್ದಾರೆ. ದೇವರು ಅವನಿಗೆ, “ನೇಮಿತ ಕಾಲದಲ್ಲಿ ನಾನು ಹಿಂತಿರುಗಿಬರುವೆನು, ಆಗ ಸಾರಳಿಗೆ ಒಬ್ಬ ಮಗನಿರುವನು”ಉಲ್ಲೇಖನ: ಆದಿಕಾಂಡ 18:10, 14. ಎಂಬ ವಾಗ್ದಾನ ಮಾಡಿದ್ದನು.
10 ಅದಷ್ಟೇ ಅಲ್ಲ, ರೆಬೆಕ್ಕಳಿಗೂ ಇಬ್ಬರು ಗಂಡುಮಕ್ಕಳಿದ್ದರು. ಅವರಿಬ್ಬರಿಗೂ ಒಬ್ಬನೇ ತಂದೆ. ಅವನೇ ನಮ್ಮ ಪಿತೃವಾದ ಇಸಾಕನು. 11-12 ಆದರೆ ಆ ಇಬ್ಬರು ಗಂಡುಮಕ್ಕಳು ಹುಟ್ಟುವ ಮೊದಲೇ, ದೇವರು ರೆಬೆಕ್ಕಳಿಗೆ, “ಹಿರಿಯವನು ಕಿರಿಯವನ ಸೇವೆ ಮಾಡುವನು”ಉಲ್ಲೇಖನ: ಆದಿಕಾಂಡ 25:23. ಎಂದು ಹೇಳಿದನು. ಆ ಬಾಲಕರು ಯಾವ ಒಳ್ಳೆಯದಾಗಲಿ ಕೆಟ್ಟದ್ದಾಗಲಿ ಮಾಡುವ ಮೊದಲೇ ಇದಾಯಿತು. ದೇವರು ಆ ಬಾಲಕನನ್ನು ತನ್ನ ಸ್ವಂತ ಯೋಜನೆಗನುಸಾರವಾಗಿ ಆರಿಸಿಕೊಂಡಿದ್ದರಿಂದ ಆ ಬಾಲಕರು ಹುಟ್ಟುವದಕ್ಕಿಂತ ಮೊದಲೇ ಹೀಗೆ ಹೇಳಿದನು. ದೇವರು ಅವನನ್ನು ಆರಿಸಿಕೊಂಡಿದ್ದರಿಂದ ಅವನನ್ನೇ ಕರೆಯಬೇಕೆಂದಿದ್ದನು. ಆದರೆ ಅದು ಆ ಬಾಲಕರ ಯಾವುದೇ ಕಾರ್ಯಗಳ ಮೇಲೆ ಆಧಾರಗೊಂಡಿರಲಿಲ್ಲ. 13 ಅಂತೆಯೇ, “ನಾನು ಯಾಕೋಬನನ್ನು ಪ್ರೀತಿಸಿದೆನು, ಆದರೆ ಏಸಾವನನ್ನು ದ್ವೇಷಿಸಿದೆನು”ಉಲ್ಲೇಖನ: ಮಲಾಕಿ 1:2-3. ಎಂದು ಪವಿತ್ರ ಗ್ರಂಥವು ಹೇಳುತ್ತದೆ.
14 ಹಾಗಾದರೆ, ಇದರ ಬಗ್ಗೆ ಏನು ಹೇಳೋಣ? ದೇವರು ಅನ್ಯಾಯಗಾರನೇ? ಎಂದಿಗೂ, ಇಲ್ಲ. 15 ದೇವರು ಮೋಶೆಗೆ, “ನಾನು ಯಾರಿಗೆ ಕರುಣೆ ತೋರಬಯಸುತ್ತೇನೋ ಅವನಿಗೆ ಕರುಣೆ ತೋರುವೆನು. ನಾನು ಯಾರಿಗೆ ಕನಿಕರ ತೋರಬಯಸುತ್ತೇನೋ ಅವರಿಗೆ ಕನಿಕರ ತೋರುವೆನು”ಉಲ್ಲೇಖನ: ವಿಮೋಚನ. 33:19. ಎಂದು ಹೇಳಿದ್ದಾನೆ. 16 ಆದ್ದರಿಂದ ದೇವರು ತಾನು ಯಾರಿಗೆ ಕರುಣೆ ತೋರಬಯಸುತ್ತಾನೊ ಅವನನ್ನೇ ಆರಿಸಿಕೊಳ್ಳುತ್ತಾನೆ. ಆತನ ಆಯ್ಕೆಯು ಜನರು ಏನು ಮಾಡಬಯಸುತ್ತಾರೆ ಅಥವಾ ಏನು ಮಾಡಲು ಪ್ರಯತ್ನಿಸುತ್ತಾರೆಂಬುದರ ಮೇಲೆ ಆಧಾರಗೊಂಡಿಲ್ಲ. 17 ಪವಿತ್ರ ಗ್ರಂಥದಲ್ಲಿ ದೇವರು ಫರೋಹನಿಗೆ, “ನಾನು ನಿನಗೆ ನನ್ನ ಶಕ್ತಿಯನ್ನು ತೋರಿಸಬೇಕೆಂತಲೂ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಖ್ಯಾತಿಪಡಿಸಬೇಕೆಂತಲೂ ನಿನ್ನನ್ನು ರಾಜನನ್ನಾಗಿ ಮಾಡಿದೆನು”ಉಲ್ಲೇಖನ: ವಿಮೋಚನ. 9:16. ಎಂದು ಹೇಳಿದ್ದಾನೆ. 18 ಆದ್ದರಿಂದ ದೇವರು ತಾನು ಯಾರಿಗೆ ಕರುಣೆಯನ್ನು ತೋರಬಯಸುತ್ತಾನೋ ಅವರಿಗೆ ಕರುಣೆಯನ್ನು ತೋರಿಸುತ್ತಾನೆ. ದೇವರು ಯಾರನ್ನು ಮೊಂಡರನ್ನಾಗಿ ಮಾಡಬಯಸುತ್ತಾನೋ ಅವರನ್ನು ಮೊಂಡರನ್ನಾಗಿ ಮಾಡುತ್ತಾನೆ.
19 “ನಾವು ಮಾಡುವ ಕಾರ್ಯಗಳು ದೇವರ ಹಿಡಿತಕ್ಕೆ ಒಳಗಾಗಿರುವುದಾದರೆ, ನಮ್ಮ ಪಾಪಗಳ ನಿಮಿತ್ತ ದೇವರು ನಮ್ಮನ್ನು ದೂಷಿಸುವುದೇಕೆ?” ಎಂದು ನಿಮ್ಮಲ್ಲಿ ಒಬ್ಬನು ಕೇಳಬಹುದು. 20 ಹಾಗೆ ಕೇಳಬೇಡಿ. ನೀವು ಕೇವಲ ಮನುಷ್ಯರು. ದೇವರನ್ನು ಪ್ರಶ್ನಿಸಲು ಮನುಷ್ಯರಿಗೆ ಯಾವ ಹಕ್ಕೂ ಇಲ್ಲ. ಮಡಕೆಯು ತನ್ನನ್ನು ತಯಾರಿಸಿದವನಿಗೆ, “ನೀನು ನನ್ನನ್ನು ಈ ರೀತಿ ತಯಾರಿಸಿದ್ದೇಕೆ” ಎಂದು ಕೇಳುವುದುಂಟೇ? 21 ಕುಂಬಾರನು ತನಗೆ ಇಷ್ಟಬಂದಂತೆ ಒಂದೇ ಮಣ್ಣಿನಿಂದ ವಿವಿಧ ವಸ್ತುಗಳನ್ನು ತಯಾರಿಸುವುದಿಲ್ಲವೇ? ಅವನು ಒಂದನ್ನು ವಿಶೇಷವಾದ ಬಳಕೆಗಾಗಿಯೂ ಮತ್ತೊಂದನ್ನು ದೈನಂದಿನ ಬಳಕೆಗಾಗಿಯೂ ತಯಾರಿಸುವನು.
22 ದೇವರು ಮಾಡಿರುವುದು ಸಹ ಹೀಗೆಯೇ. ಆತನು ತನ್ನ ಕೋಪವನ್ನು ತೋರಿಸಿ, ತನ್ನ ಶಕ್ತಿಯನ್ನು ಜನರಿಗೆ ಪ್ರಸಿದ್ಧಿಪಡಿಸಬೇಕೆಂದಿದ್ದನು. ಆದರೂ ಆತನು ತನ್ನ ಕೋಪಕ್ಕೆ ಗುರಿಯಾಗಿ ನಾಶವಾಗಲಿದ್ದ ಜನರನ್ನು ಬಹು ಸಹನೆಯಿಂದ ಸಹಿಸಿಕೊಂಡನು. 23 ದೇವರು ತನ್ನ ಅತಿಶಯವಾದ ಮಹಿಮೆಯನ್ನು ತೋರ್ಪಡಿಸಬೇಕೆಂದು ತಾಳ್ಮೆಯಿಂದ ಕಾದುಕೊಂಡಿದ್ದನು. ತನ್ನ ಕರುಣೆಯನ್ನು ಹೊಂದಿಕೊಳ್ಳುವ ಜನರಿಗೆ ದೇವರು ಆ ಮಹಿಮೆಯನ್ನು ಕೊಡಬೇಕೆಂದಿದ್ದನು. ತನ್ನ ಮಹಿಮೆಯನ್ನು ಹೊಂದಿಕೊಳ್ಳಲೆಂದು ದೇವರು ಆ ಜನರನ್ನು ಸಿದ್ಧಪಡಿಸಿದನು. 24 ನಾವೇ ಆ ಜನರು. ದೇವರಿಂದ ಕರೆಯಲ್ಪಟ್ಟ ಜನರು ನಾವೇ. ದೇವರು ನಮ್ಮನ್ನು ಯೆಹೂದ್ಯರೊಳಗಿಂದ ಮತ್ತು ಯೆಹೂದ್ಯರಲ್ಲದವರೊಳಗಿಂದ ಕರೆದನು. 25 ಪವಿತ್ರ ಗ್ರಂಥದ ಹೋಶೇಯನ ಪುಸ್ತಕದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:
 
“ನನ್ನವರಲ್ಲದ ಜನರನ್ನು
ನನ್ನ ಜನರೆಂದು ಹೇಳುವೆನು.
ನನಗೆ ಪ್ರಿಯರಲ್ಲದವರನ್ನು
ನನಗೆ ಪ್ರಿಯರೆಂದು ಹೇಳುವೆನು.” ಹೋಶೇಯ 2:23
 
26 ಮತ್ತು
 
“ಯಾವ ಸ್ಥಳದಲ್ಲಿ ದೇವರು,
‘ನೀವು ನನ್ನ ಜನರಲ್ಲ’ ಎಂದು ಹೇಳಿದ್ದನೋ
ಅದೇ ಸ್ಥಳದಲ್ಲಿ ಅವರನ್ನು ಜೀವವುಳ್ಳ ದೇವರ ಮಕ್ಕಳೆಂದು ಕರೆಯಲಾಗುವುದು.” ಹೋಶೇಯ 1:10
 
27 ಇದಲ್ಲದೆ ಯೆಶಾಯನು ಇಸ್ರೇಲಿನ ಬಗ್ಗೆ ಕೂಗಿ ಹೇಳಿದ್ದಾನೆ:
 
“ಸಮುದ್ರ ತೀರದ ಮರಳಿನಂತೆ ಇಸ್ರೇಲರು ಅಸಂಖ್ಯಾತವಾಗಿರುವರು.
ಆದರೆ ಆ ಜನರಲ್ಲಿ ಕೆಲವರು ಮಾತ್ರ ರಕ್ಷಣೆ ಹೊಂದುವರು.
28 ಹೌದು, ಪ್ರಭುವು ಭೂಮಿಯ ಮೇಲಿನ ಜನರಿಗೆ ಬಹುಬೇಗನೆ ತೀರ್ಪನ್ನು ಪೂರ್ಣವಾಗಿ ತೀರಿಸುವನು.” ಯೆಶಾಯ 10:22-23
 
29 ಯೆಶಾಯನು ಹೇಳಿರುವುದೇನೆಂದರೆ:
 
“ಪ್ರಭುವು ಸರ್ವಶಕ್ತನಾಗಿದ್ದಾನೆ. ಪ್ರಭುವು ತನ್ನ ಜನರಲ್ಲಿ ಕೆಲವರನ್ನು ನಮಗೋಸ್ಕರವಾಗಿ ರಕ್ಷಿಸಿದ್ದಾನೆ.
ಆತನು ಹೀಗೆ ಮಾಡಿಲ್ಲದಿದ್ದರೆ,
ಈಗ ನಾವು ಸೊದೋಮಿನಂತೆಯೂ
ಗೊಮೋರದಂತೆಯೂ ಇರುತ್ತಿದ್ದೆವು.” ಯೆಶಾಯ 1:9
 
30 ಇದರರ್ಥವೇನೆಂದರೆ, ಯೆಹೂದ್ಯರಲ್ಲದವರು ನೀತಿವಂತರಾಗಲು ಪ್ರಯತ್ನಿಸುತ್ತಿರಲಿಲ್ಲ. ಆದರೆ ಅವರನ್ನು ನೀತಿವಂತರನ್ನಾಗಿ ಮಾಡಲಾಯಿತು. ಅವರು ನಂಬಿಕೆಯಿಂದಲೇ ನೀತಿವಂತರಾದರು. 31 ಇಸ್ರೇಲಿನ ಜನರಾದರೋ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನೀತಿವಂತರಾಗಲು ಪ್ರಯತ್ನಿಸಿ ವಿಫಲರಾದರು. 32 ಏಕೆಂದರೆ ಕ್ರಿಯೆಗಳ ಮೂಲಕ ನೀತಿವಂತರಾಗಲು ಅವರು ಪ್ರಯತ್ನಿಸಿದರೇ ಹೊರತು ನಂಬಿಕೆಯನ್ನು ಆಧಾರ ಮಾಡಿಕೊಳ್ಳಲಿಲ್ಲ. ಜನರನ್ನು ಬೀಳಿಸುವ ಕಲ್ಲಿನ ಮೇಲೆ ಅವರು ಬಿದ್ದರು. 33 ಪವಿತ್ರ ಗ್ರಂಥವು ಆ ಕಲ್ಲಿನ ಬಗ್ಗೆ ಹೀಗೆ ತಿಳಿಸಿದೆ:
 
“ಇಗೋ, ನಾನು ಸಿಯೋನಿನಲ್ಲಿ*ಸಿಯೋನ್ ದೇವಮಕ್ಕಳ ಪಟ್ಟಣವಾದ ಜೆರುಸಲೇಮಿನ ಮತ್ತೊಂದು ಹೆಸರು. ಜನರನ್ನು ಎಡವಿಬೀಳಿಸುವ ಒಂದು ಕಲ್ಲನ್ನು ಇಡುತ್ತೇನೆ.
ಈ ಬಂಡೆಯಿಂದಾಗಿ ಜನರು ಎಡವಿಬೀಳುತ್ತಾರೆ.
ಆದರೆ ಆ ಬಂಡೆಯಲ್ಲಿ ನಂಬಿಕೆಯಿಡುವವನು ಎಂದಿಗೂ ಆಶಾಭಂಗ ಹೊಂದುವುದಿಲ್ಲ.” ಯೆಶಾಯ 8:14; 28:16
 

9:7: ಉಲ್ಲೇಖನ: ಆದಿಕಾಂಡ 21:12.

9:9: ಉಲ್ಲೇಖನ: ಆದಿಕಾಂಡ 18:10, 14.

9:11-12: ಉಲ್ಲೇಖನ: ಆದಿಕಾಂಡ 25:23.

9:13: ಉಲ್ಲೇಖನ: ಮಲಾಕಿ 1:2-3.

9:15: ಉಲ್ಲೇಖನ: ವಿಮೋಚನ. 33:19.

9:17: ಉಲ್ಲೇಖನ: ವಿಮೋಚನ. 9:16.

*9:33: ಸಿಯೋನ್ ದೇವಮಕ್ಕಳ ಪಟ್ಟಣವಾದ ಜೆರುಸಲೇಮಿನ ಮತ್ತೊಂದು ಹೆಸರು.