11
ಸೌಲನು ಅಮ್ಮೋನಿಯರನ್ನು ಸೋಲಿಸಿದ್ದು
1 ಅಮ್ಮೋನಿಯನಾದ ನಾಹಾಷನು ಹೊರಟು ಬಂದು ಯಾಬೇಷ್ ಗಿಲ್ಯಾದಿಗೆ ಮುತ್ತಿಗೆ ಹಾಕಲು, ಯಾಬೇಷಿನವರು ಅವನನ್ನು, “ನೀನು ನಮ್ಮ ಸಂಗಡ ಒಡಂಬಡಿಕೆ ಮಾಡಿಕೋ; ನಾವು ನಿನ್ನನ್ನು ಸೇವಿಸುವೆವು” ಎಂದು ಬೇಡಿಕೊಂಡರು. 2 ಅದಕ್ಕೆ ಅವನು, “ಎಲ್ಲಾ ಇಸ್ರಾಯೇಲರನ್ನು ಅವಮಾನಪಡಿಸುವುದಕ್ಕಾಗಿ ನಾನು ಮೊದಲು ನಿಮ್ಮಲ್ಲಿ ಪ್ರತಿಯೊಬ್ಬರ ಬಲಗಣ್ಣನ್ನು ಕಿತ್ತುಹಾಕುತ್ತೇನೆ. ಇದಕ್ಕೆ ನೀವು ಒಪ್ಪುವುದಾದರೆ ನಿಮ್ಮ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ” ಎಂದು ಉತ್ತರಕೊಟ್ಟನು. 3 ಆಗ ಯಾಬೇಷಿನ ಹಿರಿಯರು ಅವನಿಗೆ, “ಏಳು ದಿನಗಳವರೆಗೆ ಸಮಯ ಕೊಡು; ಅಷ್ಟರೊಳಗೆ ನಾವು ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ದೂತರನ್ನು ಕಳುಹಿಸುತ್ತೇವೆ. ನಮ್ಮನ್ನು ಯಾರೂ ರಕ್ಷಿಸದಿದ್ದರೆ, ನಾವು ನಿನ್ನ ಬಳಿಗೆ ಹೊರಟು ಬಂದು ನಿನಗೆ ಅಧೀನರಾಗುತ್ತೇವೆ” ಎಂದು ತಿಳಿಸಿದರು. 4 ದೂತರು ಸೌಲನು ವಾಸವಾಗಿದ್ದ ಗಿಬೆಯಕ್ಕೆ ಬಂದು ಅಲ್ಲಿನವರಿಗೆ ವರ್ತಮಾನವನ್ನು ತಿಳಿಸಲು ಎಲ್ಲರೂ ಅಳತೊಡಗಿದರು. 5 ಅಷ್ಟರಲ್ಲಿ ಸೌಲನು ಹೊಲದಿಂದ ದನಗಳನ್ನು ಹೊಡೆದುಕೊಂಡು ಬಂದನು. ಅವನು, “ಜನರು ಗೋಳಾಡುವುದಕ್ಕೆ ಕಾರಣವೇನು?” ಎಂದು ಕೇಳಲು ಅವರು ಅವನಿಗೆ ಯಾಬೇಷಿನವರ ವರ್ತಮಾನವನ್ನು ತಿಳಿಸಿದರು. 6 ಆಗ ಯೆಹೋವನ ಆತ್ಮವು ಅವನ ಮೇಲೆ ಬಂದಿತು. ಅವನು ಬಹಳ ಕೋಪಗೊಂಡು, *ನ್ಯಾಯ 19:29.ಒಂದು ಜೋಡಿ ಎತ್ತುಗಳನ್ನು ತೆಗೆದುಕೊಂಡು ತುಂಡು ತುಂಡು ಮಾಡಿದನು. 7 ಆ ತುಂಡುಗಳನ್ನು ದೂತರ ಮುಖಾಂತರ ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿ, “ಯಾರು ಸೌಲ, ಸಮುವೇಲರನ್ನು ಹಿಂಬಾಲಿಸುವುದಿಲ್ಲವೋ ಅವರ ಎತ್ತುಗಳು ಹೀಗೆಯೇ ಕಡಿಯಲ್ಪಡುವವು” ಎಂದು ಹೇಳಿ ಕಳುಹಿಸಿದನು. ಯೆಹೋವನಿಗೆ ಭಯಪಟ್ಟು ಜನರೆಲ್ಲರೂ ಏಕಮನಸ್ಸಿನಿಂದ ಬೆಜೆಕಿನಲ್ಲಿ ಕೂಡಿಬಂದರು. 8 ಅವರನ್ನು ಬೆಜೆಕಿನಲ್ಲಿ ಕ್ರಮಪಡಿಸಿ ಲೆಕ್ಕಿಸಿದಾಗ ಇಸ್ರಾಯೇಲರಲ್ಲಿ ಮೂರು ಲಕ್ಷ ಸೈನಿಕರೂ ಯೆಹೂದ್ಯರಲ್ಲಿ ಮೂವತ್ತು ಸಾವಿರ ಸೈನಿಕರೂ ಇದ್ದರು. 9 ಅವರು ಬಂದಿದ್ದ ದೂತರಿಗೆ, “ನಾಳೆ ಮಧ್ಯಾಹ್ನದಲ್ಲಿ ನಿಮಗೆ ಸಹಾಯ ಸಿಕ್ಕುವುದೆಂದು ಯಾಬೇಷ್ ಗಿಲ್ಯಾದಿನವರಿಗೆ ತಿಳಿಸಿರಿ” ಎಂದು ಹೇಳಿ ಅವರನ್ನು ಕಳುಹಿಸಿದರು. 10 ದೂತರು ಹೋಗಿ ಈ ವರ್ತಮಾನವನ್ನು ತಿಳಿಸಲು ಯಾಬೇಷಿನವರು ಬಹಳವಾಗಿ ಸಂತೋಷಪಟ್ಟು ಅಮ್ಮೋನಿಯರಿಗೆ, “ನಾವು ನಾಳೆ ನಿಮ್ಮ ಬಳಿಗೆ ಬರುವೆವು; ನಿಮಗೆ ಸರಿ ಕಾಣುವ ಪ್ರಕಾರ ಮಾಡಿರಿ” ಎಂದು ಹೇಳಿದರು. 11 ಸೌಲನು ಬೆಳಗಿನ ಜಾವದಲ್ಲಿ ತನ್ನ ಜನರನ್ನು ಮೂರು ಗುಂಪನ್ನಾಗಿ ಮಾಡಿ ಅಮ್ಮೋನಿಯರ ಪಾಳೆಯದೊಳಗೆ ನುಗ್ಗಿ ಅವರನ್ನು ಮಧ್ಯಾಹ್ನದ ವರೆಗೆ ಹತ್ಯೆಮಾಡಿದನು. ಉಳಿದವರನ್ನು ಒಟ್ಟಾಗಿ ಸೇರಿಸಿಕೊಳ್ಳದ ಹಾಗೆ ಚದರಿಸಿಬಿಟ್ಟನು.
12 ತರುವಾಯ ಜನರು ಸಮುವೇಲನಿಗೆ, “ಸೌಲನು ನಮಗೆ ಅರಸನಾಗಬಾರದು ಎಂದು ಹೇಳಿದವರು ಯಾರು? †ಲೂಕ 19:27.ಅವರನ್ನು ನಮಗೆ ಒಪ್ಪಿಸಿರಿ; ನಾವು ಕೊಂದುಹಾಕುತ್ತೇವೆ” ಎಂದರು. 13 ಸೌಲನು ಅವರಿಗೆ, “ಯೆಹೋವನು ಈ ದಿನ ಇಸ್ರಾಯೇಲ್ಯರಿಗೆ ಜಯವನ್ನು ಉಂಟುಮಾಡಿರುವುದರಿಂದ ಯಾರನ್ನೂ ಕೊಲ್ಲಬಾರದು” ಎಂದು ಹೇಳಿದನು. 14 ಸಮುವೇಲನು ಜನರಿಗೆ, “ಬನ್ನಿರಿ; ಗಿಲ್ಗಾಲಿಗೆ ಹೋಗಿ ಸೌಲನ ಅರಸುತನವನ್ನು ಸ್ಥಿರಪಡಿಸೋಣ” ಅನ್ನಲು 15 ಅವರೆಲ್ಲರೂ ಅಲ್ಲಿಗೆ ಹೋಗಿ ಯೆಹೋವನ ಸನ್ನಿಧಿಯಲ್ಲಿ ಸೌಲನ ಅರಸುತನವನ್ನು ಸ್ಥಿರಪಡಿಸಿ, ಯೆಹೋವನಿಗೆ ಸಮಾಧಾನ ಯಜ್ಞಗಳನ್ನು ಸಮರ್ಪಿಸಿ, ಸೌಲನೊಡನೆ ಬಹಳವಾಗಿ ಆನಂದಿಸಿದರು.