11
1 ರೆಹಬ್ಬಾಮನು ಯೆರೂಸಲೇಮನ್ನು ತಲುಪಿದ ನಂತರ ಇಸ್ರಾಯೇಲ್ಯರಿಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೂ, ರಾಜ್ಯವನ್ನು ತಿರುಗಿ ತನ್ನ ವಶಪಡಿಸಿಕೊಳ್ಳುವುದಕ್ಕೂ ಯೆಹೂದ ಬೆನ್ಯಾಮೀನ್ ಕುಲಗಳಿಂದ ಲಕ್ಷದ ಎಂಭತ್ತು ಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಕೂಡಿಸಿದನು. 2 ಆಗ ದೇವರ ಮನುಷ್ಯನಾದ ಶೆಮಾಯನಿಗೆ, ಯೆಹೋವನ ವಾಕ್ಯವು ಉಂಟಾಗಿ ಹೇಳಿದ್ದೇನಂದರೆ, 3 “ನೀನು ಹೋಗಿ ಸೊಲೊಮೋನನ ಮಗನೂ, ಯೆಹೂದದ ಅರಸನಾದ ರೆಹಬ್ಬಾಮನಿಗೂ ಯೆಹೂದದ ಬೆನ್ಯಾಮೀನ್ ಕುಲಗಳ ಇಸ್ರಾಯೇಲರೆಲ್ಲರಿಗೂ, 4 ಯೆಹೋವನು ಇಂತೆನ್ನುತ್ತಾನೆ, ‘ನೀವು ನಿಮ್ಮ ಸಹೋದರರೊಡನೆ*ಸಹೋದರರೊಡನೆ ಅಥವಾ ಸಂಬಂಧಿಕರೊಡನೆ ಅಥವಾ ಉತ್ತರ ರಾಜ್ಯದವರಾದ ಯೆಹೂದ್ಯರೊಂದಿಗೆ. ಯುದ್ಧಮಾಡುವುದಕ್ಕೆ ಹೋಗಬಾರದು. ಎಲ್ಲರೂ ಹಿಂತಿರುಗಿ ಹೋಗಿರಿ; ಈ ಕಾರ್ಯವು ಯೆಹೋವನಿಂದಾಗಿದೆ ಎಂದು ಹೇಳಬೇಕು’ ” ಎಂಬ ಯೆಹೋವನ ವಾಕ್ಯವುಂಟಾಗಲು ಅವರು ಯೆಹೋವನ ಮಾತನ್ನು ಕೇಳಿ ಯಾರೊಬ್ಬಾಮನಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಡದೆ ಹಿಂತಿರುಗಿ ಹೋದರು.
ಅರಸನಾದ ರೆಹಬ್ಬಾಮನು
5 ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸವಾಗಿದ್ದು ಯೆಹೂದ ಸಂರಕ್ಷಣೆಗಾಗಿ ಪಟ್ಟಣಗಳನ್ನು ಕಟ್ಟಿಸಿದನು. 6 ಆ ಪಟ್ಟಣಗಳು ಯಾವುವೆಂದರೆ: ಬೇತ್ಲೆಹೇಮ್, ಏತಾಮ್, ತೆಕೋವ, 7 ಬೇತ್ಚೂರ್, ಸೋಕೋ, ಅದುಲ್ಲಾಮ್, 8 ಗತ್ ಊರು, ಮಾರೇಷ, ಜೀಫ್ 9 ಅದೋರೈಮ್, ಲಾಕೀಷ್, ಅಜೇಕ, 10 ಚೊರ್ಗ, ಅಯ್ಯಾಲೋನ್, ಹೆಬ್ರೋನ್. ಕೋಟೆಕೊತ್ತಲುಗಳುಳ್ಳ ಈ ಪಟ್ಟಣಗಳು ಯೆಹೂದ ಬೆನ್ಯಾಮೀನ್ ಪ್ರಾಂತ್ಯಗಳಾಗಿದ್ದವು. 11 ಅವನು ಈ ಕೋಟೆಗಳನ್ನು ಬಲಪಡಿಸಿ, ನಾಯಕರ ವಶಕ್ಕೆ ಕೊಟ್ಟು, ಪ್ರತಿ ಒಂದರಲ್ಲಿ ಆಹಾರಪದಾರ್ಥ, ಎಣ್ಣೆ, ದ್ರಾಕ್ಷಾರಸವನ್ನು ಸಂಗ್ರಹಿಸಿಟ್ಟನು. ಗುರಾಣಿ ಬರ್ಜಿಗಳನ್ನೂ ಸಂಗ್ರಹಿಸಿಟ್ಟನು. 12 ಪ್ರತಿಯೊಂದು ಪಟ್ಟಣದಲ್ಲಿ ಗುರಾಣಿ ಬರ್ಜಿಗಳನ್ನೂ ಸಂಗ್ರಹಿಸಿ, ಅವುಗಳನ್ನು ಮತ್ತಷ್ಟು ಭದ್ರಪಡಿಸಿದನು. ಯೆಹೂದ ಬೆನ್ಯಾಮೀನ್ ಕುಲಗಳು ಅವನ ಸ್ವಾಧೀನದಲ್ಲಿದ್ದವು. 13 ಎಲ್ಲಾ ಇಸ್ರಾಯೇಲ್ ಪ್ರಾಂತ್ಯಗಳಲ್ಲಿದ್ದ ಯಾಜಕರೂ ಮತ್ತು ಲೇವಿಯರೂ ಅವನೊಡನೆ ಬಂದು ಸೇರಿಕೊಂಡರು. 14 ಲೇವಿಯರು ಯೆಹೋವನಿಗೆ ಯಾಜಕ ಸೇವೆ ಮಾಡದಂತೆ ಯಾರೊಬ್ಬಾಮನೂ ಮತ್ತು ಅವನ ಮಕ್ಕಳೂ ಅವರನ್ನು ಬಹಿಷ್ಕರಿಸಿದ್ದರಿಂದ ಲೇವಿಯರು ತಮ್ಮ ಹುಲ್ಲುಗಾವಲುಗಳಿದ್ದ ತಮ್ಮ ಆಸ್ತಿಗಳನ್ನು ಬಿಟ್ಟು ಯೆಹೂದಕ್ಕೂ ಯೆರೂಸಲೇಮಿಗೂ ಬಂದರು. 15 ಯಾರೊಬ್ಬಾಮನು ತಾನು ಏರ್ಪಡಿಸಿದ ಪೂಜಾ ಸ್ಥಳಗಳಿಗಾಗಿ ಹಾಗೂ ಹೋರಿಕುರಿಗಳ ಮೂರ್ತಿ ಪೂಜೆಗಳಿಗಾಗಿ ಬೇರೆ ಪೂಜಾರಿಗಳನ್ನು ನೇಮಿಸಿದನು. 16 ಇಸ್ರಾಯೇಲರ ಎಲ್ಲಾ ಕುಲಗಳಲ್ಲಿ ಇಸ್ರಾಯೇಲ್ ದೇವರಾದ ಯೆಹೋವನ ದರ್ಶನವನ್ನು ಬಯಸುತ್ತಿದ್ದವರು ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಯಜ್ಞವನ್ನರ್ಪಿಸುವುದಕ್ಕಾಗಿ ಆ ಲೇವಿಯರನ್ನು ಹಿಂಬಾಲಿಸಿ ಯೆರೂಸಲೇಮಿಗೆ ಬಂದರು. 17 ಇವರೆಲ್ಲರೂ ಮೊದಲನೆಯ ಮೂರು ವರ್ಷಗಳಲ್ಲಿ ದಾವೀದ ಹಾಗು ಸೊಲೊಮೋನರ ಮಾರ್ಗದಲ್ಲೇ ನಡೆಯುತ್ತಿದ್ದರು. ಅಂತೆಯೇ ಯೆಹೂದ ರಾಜ್ಯವು ಆ ವರ್ಷಗಳಲ್ಲಿ ಅಭಿವೃದ್ಧಿಯಾಗಿ, ಸೊಲೊಮೋನನ ಮಗನಾದ ರೆಹಬ್ಬಾಮನು ಬಲಗೊಂಡನು.
ರೆಹಬ್ಬಾಮನ ಕುಟುಂಬ
18 ರೆಹಬ್ಬಾಮನು ದಾವೀದನ ಮಗನಾದ ಯೆರೀಮೋತನ ಮಗಳಾದ ಮಹ್ಲತ್ತಳನ್ನು, ಇಷಯನ ಮೊಮ್ಮಗಳೂ ಎಲೀಯಾಬನ ಮಗಳೂ ಆದ ಅಬೀಹೈಲಳನ್ನೂ ಹೆಂಡತಿಯನ್ನಾಗಿ ಮಾಡಿಕೊಂಡನು. 19 ಆಕೆಯು ಅವನಿಂದ ಯೆಗೂಷ್, ಶೆಮರ್ಯ, ಜಾಹಮ್ ಎಂಬ ಗಂಡು ಮಕ್ಕಳನ್ನು ಹೆತ್ತಳು. 20 ಅನಂತರ ಅವನು ಅಬ್ಷಾಲೋಮನ ಮಗಳಾದ ಮಾಕ ಎಂಬಾಕೆಯನ್ನು ಮದುವೆಮಾಡಿಕೊಂಡನು; ಆಕೆಯು ಅವನಿಂದ ಅಬೀಯ, ಅತ್ತೈ, ಜೀಜ, ಶೆಲೋಮೀತ್ ಎಂಬುವರನ್ನು ಹೆತ್ತಳು. 21 ರೆಹಬ್ಬಾಮನು ತನ್ನ ಎಲ್ಲಾ ಪತ್ನಿಯರಲ್ಲಿಯೂ, ಉಪಪತ್ನಿಯರಲ್ಲಿಯೂ ಅಬ್ಷಾಲೋಮನ ಮಗಳಾದ ಮಾಕಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದನು. ಅವನಿಗೆ ಹದಿನೆಂಟು ಮಂದಿ ಪತ್ನಿಯರೂ, ಅರುವತ್ತು ಮಂದಿ ಉಪಪತ್ನಿಯರೂ ಇದ್ದರು. ಇವರಲ್ಲಿ ಅವನಿಗೆ ಇಪ್ಪತ್ತೆಂಟು ಮಂದಿ ಗಂಡುಮಕ್ಕಳೂ ಅರುವತ್ತು ಮಂದಿ ಹೆಣ್ಣುಮಕ್ಕಳೂ ಹುಟ್ಟಿದರು. 22 ರೆಹಬ್ಬಾಮನು ಮಾಕಳ ಮಗನಾದ ಅಬೀಯನನ್ನು ಅರಸನನ್ನಾಗಿ ಮಾಡಬೇಕೆಂದು ಅವನನ್ನು ಅವನ ಅಣ್ಣ ತಮ್ಮಂದಿರಲ್ಲಿ ಪ್ರಧಾನನ್ನಾಗಿಯೂ ಪ್ರಭುವನ್ನಾಗಿಯೂ ನೇಮಿಸಿದನು. 23 ತನ್ನ ಉಳಿದ ಎಲ್ಲಾ ಮಕ್ಕಳನ್ನು ಜಾಣತನದಿಂದ ವಿಂಗಡಿಸಿ, ಯೆಹೂದ ಬೆನ್ಯಾಮೀನ್ ಪ್ರದೇಶಗಳಲ್ಲಿದ್ದ ಕೋಟೆಕೊತ್ತಲುಗಳುಳ್ಳ ಆಯಾ ಪಟ್ಟಣಗಳಲ್ಲಿರಿಸಿ, ಅವರಿಗೆ ಬೇಕಾದಷ್ಟು ಆಹಾರವನ್ನು ಏರ್ಪಡಿಸಿ, ಅನೇಕ ಮಂದಿ ಹೆಂಡತಿಯರನ್ನೂ ಗೊತ್ತು ಮಾಡಿಕೊಟ್ಟನು.