2 ಅರಸುಗಳು
ಗ್ರಂಥಕರ್ತೃತ್ವ
1 ಅರಸುಗಳ ಮತ್ತು 2 ಅರಸುಗಳ ಪುಸ್ತಕಗಳು ಮೂಲತಃ ಒಂದೇ ಪುಸ್ತಕವಾಗಿದೆ. ಯೆಹೂದ್ಯ ಸಂಪ್ರದಾಯವು ಪ್ರವಾದಿಯಾದ ಯೆರೆಮೀಯನನ್ನು 2 ಅರಸಗಳ ಗ್ರಂಥಕರ್ತನನ್ನಾಗಿ ಪರಿಗಣಿಸುವಾಗ, ಇತ್ತೀಚಿನ ಸತ್ಯವೇದದ ಪಾಂಡಿತ್ಯವು ಈ ಕೃತಿಯು ಡ್ಯುಟೆರೊನೊಮಿಸ್ಟ್ಸ್ (ಹಳೆಯ ಒಡಂಬಡಿಕೆಯ ಮೊದಲ ಕೆಲವು ಪುಸ್ತಕಗಳ ಗ್ರಂಥಕರ್ತ ಅಥವಾ ಸಂಪಾದಕ) ಎಂದು ಕರೆಯಲ್ಪಡುವ ಅನಾಮಧೇಯ ಗ್ರಂಥಕರ್ತರ ಗುಂಪಿಗೆ ಸೇರಿದ್ದು ಎನ್ನುತ್ತಾರೆ. 2 ಅರಸುಗಳು ಧರ್ಮೋಪದೇಶಕಾಂಡದ ಪ್ರಧಾನ ವಿಷಯವನ್ನು ಅನುಸರಿಸುತ್ತದೆ: ದೇವರಿಗೆ ವಿಧೇಯತೆಯು ಆಶೀರ್ವಾದಗಳನ್ನು ಉಂಟುಮಾಡುತ್ತದೆ, ಅವಿಧೇಯತೆಯು ಶಾಪಗಳನ್ನು ಉಂಟುಮಾಡುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 590-538 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಮೊದಲನೆಯ ದೇವಾಲಯವು ಇನ್ನೂ ಇರುವಾಗಲೇ ಇದು ಬರೆಯಲ್ಪಟ್ಟಿತು (1 ಅರಸುಗಳು 8:8).
ಸ್ವೀಕೃತದಾರರು
ಇಸ್ರಾಯೇಲ್ ಜನರು, ಸತ್ಯವೇದದ ಎಲ್ಲಾ ಓದುಗಾರರು.
ಉದ್ದೇಶ
2 ಅರಸುಗಳ ಪುಸ್ತಕವು 1 ಅರಸುಗಳ ಪುಸ್ತಕದ ಮುಂದಿನ ಭಾಗವಾಗಿದೆ. ಇದು ವಿಭಜಿತ ಸಾಮ್ರಾಜ್ಯದ ಅರಸರ ಕಥೆಯನ್ನು ಮುಂದುವರಿಸುತ್ತದೆ (ಇಸ್ರಾಯೇಲ್ ಮತ್ತು ಯೆಹೂದ.) 2 ಅರಸುಗಳು ಅಂತಿಮ ಅಪಜಯದೊಂದಿಗೆ ಮತ್ತು ಇಸ್ರಾಯೇಲ್ ಜನರು ಅಶ್ಯೂರಕ್ಕೆ ಹಾಗೂ ಯೆಹೂದದ ಜನರು ಬಾಬಿಲೋನಿಗೆ ಗಡೀಪಾರು ಆಗುವುದರೊಂದಿಗೆ ಮುಕ್ತಾಯವಾಗುತ್ತದೆ.
ಮುಖ್ಯಾಂಶ
ಚದುರುವಿಕೆ
ಪರಿವಿಡಿ
1. ಎಲೀಷನ ಸೇವೆ — 1:1-8:29
2. ಅಹಾಬನ ವಂಶದ ಅಂತ್ಯ — 9:1-11:21
3. ಯೆಹೋವಾಷನಿಂದ ಇಸ್ರಾಯೇಲಿನ ಅಂತ್ಯದವರೆಗೆ — 12:1-17:41
4. ಹಿಜ್ಕೀಯನಿಂದ ಯೆಹೂದದ ಅಂತ್ಯದವರೆಗೆ — 18:1-25:30
1
ಪ್ರವಾದಿಯಾದ ಎಲೀಯನು ಮತ್ತು ಅರಸನಾದ ಅಹಜ್ಯನು
ಅಹಾಬನು ಮರಣಹೊಂದಿದ ನಂತರ ಮೋವಾಬ್ಯರು ಇಸ್ರಾಯೇಲರಿಗೆ ವಿರುದ್ಧವಾಗಿ ದಂಗೆ ಎದ್ದರು. ಅಹಜ್ಯನು ಸಮಾರ್ಯದಲ್ಲಿ ತನ್ನ ಮೇಲುಪ್ಪರಿಗೆಯ ಕಿಟಿಕಿಯಿಂದ ಬಿದ್ದು ಅಸ್ವಸ್ಥನಾದಾಗ ತನ್ನ ಸೇವಕರನ್ನು ಕರೆದು ಅವರಿಗೆ, “ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನ ಸನ್ನಿಧಿಗೆ ಹೋಗಿ ನಾನು ಈ ಅಸ್ವಸ್ಥತೆಯಿಂದ ವಾಸಿಯಾಗುವೆನೋ ಇಲ್ಲವೋ ಎಂಬುದನ್ನು ವಿಚಾರಿಸಿರಿ” ಎಂದು ಹೇಳಿಕಳುಹಿಸಿದನು.
ಆಗ ಯೆಹೋವನ ದೂತನು ತಿಷ್ಬೀಯನಾದ ಎಲೀಯನಿಗೆ, “ನೀನು ಹೋಗಿ ಸಮಾರ್ಯದ ಅರಸನ ಸೇವಕರನ್ನು ಎದುರುಗೊಂಡು ಅವರಿಗೆ, ‘ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಹೋಗುವುದೇನು ಇಸ್ರಾಯೇಲರಲ್ಲಿ ದೇವರಿಲ್ಲವೋ? ಅಹಜ್ಯನು ತಾನು ಹತ್ತಿ ಮಲಗಿದ ಮಂಚದಿಂದ ಇಳಿಯದೆ ಸಾಯಲೇ ಬೇಕು’ ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂಬುದಾಗಿ ಹೇಳು ಎಂದು ಆಜ್ಞಾಪಿಸಿದನು. ಎಲೀಯನು ಹಾಗೆಯೇ ಮಾಡಿದನು.
ದೂತರು ಅರಸನ ಬಳಿಗೆ ಹಿಂದಿರುಗಿ ಬಂದಾಗ, “ನೀವು ಹಿಂದಿರುಗಿ ಬಂದ್ದದೇಕೆ?” ಎಂದು ಕೇಳಿದನು. ಅದಕ್ಕೆ ಅವರು, “ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ, ‘ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ’ ಯೆಹೋವನ ಹೆಸರಿನಲ್ಲಿ ಅವನಿಗೆ, ‘ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಕಳುಹಿಸುವುದೇನು? ಇಸ್ರಾಯೇಲರಲ್ಲಿ ದೇವರಿಲ್ಲವೋ? ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದ ಇಳಿಯದೆ ಸಾಯಲೇ ಬೇಕು’ ಎಂಬುದಾಗಿ ಹೇಳಿರಿ ಎಂದು ಆಜ್ಞಾಪಿಸಿದನು” ಎಂದು ಉತ್ತರ ಕೊಟ್ಟರು.
ಅರಸನು ತಿರುಗಿ ಅವರನ್ನು, “ನಿಮಗೆ ಎದುರಾಗಿ ಹೀಗೆ ಹೇಳಿದ ಮನುಷ್ಯನು ಹೇಗಿದ್ದನು?” ಎಂದು ಕೇಳಲು, ಅವರು, “ಅವನು ಕಂಬಳಿ ಹೊದ್ದುಕೊಂಡಿದ್ದನು. ಅವನ ಸೊಂಟಕ್ಕೆ ತೊಗಲಿನ ನಡುಕಟ್ಟು ಇತ್ತು” ಎಂದು ಉತ್ತರ ಕೊಟ್ಟರು. ಅದಕ್ಕೆ ಅರಸನು, “ಆ ಮನುಷ್ಯನು ತಿಷ್ಬೀಯನಾದ ಎಲೀಯನೇ ಆಗಿರಬೇಕು” ಎಂದನು.
ಆಗ ಅರಸನು ಎಲೀಯನನ್ನು ಕರೆತರುವುದಕ್ಕಾಗಿ ಪಂಚದಶಾಧಿಪತಿಯನ್ನು, ಅವನ ಐವತ್ತು ಮಂದಿ ಸಿಪಾಯಿಗಳೊಡನೆ ಕಳುಹಿಸಿದನು. ಇವನು ಹೋಗಿ ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿರುವುದನ್ನು ಕಂಡು ಅವನಿಗೆ, “ದೇವರ ಮನುಷ್ಯನೇ ಇಳಿದು ಬಾ ಅರಸನು ನಿನ್ನನ್ನು ಕರೆಯುತ್ತಾನೆ” ಎಂದು ಹೇಳಿದನು. 10 ಅದಕ್ಕೆ ಎಲೀಯನು ಪಂಚದಶಾಧಿಪತಿಗೆ, “ನಾನು ದೇವರ ಮನುಷ್ಯನಾಗಿರುವುದಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ ನಿನ್ನ ಐವತ್ತು ಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ” ಎಂದನು. ಕೂಡಲೆ ಆಕಾಶದಿಂದ ಬೆಂಕಿ ಬಿದ್ದು ಅವನನ್ನೂ, ಅವನ ಸಿಪಾಯಿಗಳನ್ನೂ ದಹಿಸಿಬಿಟ್ಟಿತು.
11 ತರುವಾಯ ಅರಸನು ಇನ್ನೊಬ್ಬ ಪಂಚದಶಾಧಿಪತಿಯನ್ನೂ, ಅವನ ಐವತ್ತು ಮಂದಿ ಸಿಪಾಯಿಗಳನ್ನೂ ಕಳುಹಿಸಿದನು. ಇವನು ಹೋಗಿ ಎಲೀಯನಿಗೆ “ದೇವರ ಮನುಷ್ಯನೇ ಬೇಗನೆ ಇಳಿದು ಬಾ, ಅರಸನು ನಿನ್ನನ್ನು ಕರೆಯುತ್ತಾನೆ” ಎಂದು ಹೇಳಿದನು. 12 ಆಗ ಎಲೀಯನು, “ನಾನು ದೇವರ ಮನುಷ್ಯನಾಗಿರುವುದಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ, ನಿನ್ನ ಐವತ್ತು ಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ” ಎಂದನು. ಕೂಡಲೆ ಆಕಾಶದಿಂದ ಬೆಂಕಿ ಬಿದ್ದು ಅವನನ್ನೂ, ಅವನ ಸಿಪಾಯಿಗಳನ್ನೂ ದಹಿಸಿಬಿಟ್ಟಿತು.
13 ಆಗ ಅರಸನು ಇನ್ನೊಬ್ಬ ಪಂಚದಶಾಧಿಪತಿಯನ್ನು, ಅವನ ಐವತ್ತು ಮಂದಿ ಸಿಪಾಯಿಗಳನ್ನೂ ಕಳುಹಿಸಿದನು. ಇವನು ಬಂದು ಎಲೀಯನ ಮುಂದೆ ಮೊಣಕಾಲೂರಿ ಬೇಡಿಕೊಂಡು ಅವನಿಗೆ, “ದೇವರ ಮನುಷ್ಯನೇ, ನನ್ನ ಮತ್ತು ನಿನ್ನ ಸೇವಕರಾದ ಈ ಐವತ್ತು ಮಂದಿಯ ಪ್ರಾಣವು ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದಾಗಿರಲಿ. 14 ಆಕಾಶದಿಂದ ಬೆಂಕಿಬಿದ್ದು ಮೊದಲು ಬಂದ ಇಬ್ಬರು ಪಂಚದಶಾಧಿಪತಿಗಳನ್ನೂ, ಅವರ ಸಿಪಾಯಿಗಳನ್ನೂ ದಹಿಸಿಬಿಟ್ಟಿತಲ್ಲಾ, ನನ್ನ ಪ್ರಾಣವಾದರೂ ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದೆಂದು ಎಣಿಸಲ್ಪಡಲಿ” ಎಂದು ಬೇಡಿಕೊಂಡನು.
15 ಆಗ ಯೆಹೋವನ ದೂತನು ಎಲೀಯನಿಗೆ, “ನೀನು ಇವನ ಸಂಗಡ ಹೋಗು, ಅವನಿಗೆ ಹೆದರಬೇಡ” ಎಂದು ಹೇಳಿದ್ದರಿಂದ ಅವನು ಎದ್ದು, ಇವನ ಜೊತೆಯಲ್ಲಿ ಅರಸನ ಬಳಿಗೆ ಹೋದನು. 16 ನಂತರ ಎಲೀಯನು ಅರಸನಿಗೆ, “ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ದೂತರನ್ನು ಕಳುಹಿಸಿದ್ದೇನು? ಅಂಥ ವಿಚಾರ ಮಾಡುವುದಕ್ಕೆ ಇಸ್ರಾಯೇಲರಲ್ಲಿ ದೇವರಿಲ್ಲವೋ? ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದ ಇಳಿಯದೆ ಸಾಯಲೇಬೇಕು ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂದು ಹೇಳಿದನು.
17 ಯೆಹೋವನು ಎಲೀಯನ ಮುಖಾಂತರವಾಗಿ ಮುಂತಿಳಿಸಿದಂತೆ ಅರಸನು ಸತ್ತನು. ಅವನಿಗೆ ಮಗನಿಲ್ಲದೆ ಇದ್ದುದರಿಂದ ಅವನಿಗೆ ಬದಲಾಗಿ ಅವನ ತಮ್ಮನಾದ ಯೋರಾಮನೆಂಬವನು ಯೆಹೂದ್ಯರ ಅರಸನಾದ ಯೆಹೋಷಾಫಾಟನ ಮಗ ಯೆಹೋರಾಮನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಇಸ್ರಾಯೇಲರ ಅರಸನಾದನು 18 ಅಹಜ್ಯನ ಉಳಿದ ಚರಿತ್ರೆಯೂ, ಅವನ ಕೃತ್ಯಗಳೂ ಇಸ್ರಾಯೇಲರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.