15
ಯೆಹೂದದ ಅರಸನಾದ ಅಜರ್ಯ
1 ಇಸ್ರಾಯೇಲರ ಅರಸನಾದ ಯಾರೊಬ್ಬಾಮನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ ಅಮಚ್ಯನ ಮಗನಾದ ಅಜರ್ಯನು ಯೆಹೂದದ ಅರಸನಾದನು. 2 ಅಜರ್ಯನು ಪಟ್ಟಕ್ಕೆ ಬಂದಾಗ ಅವನು ಹದಿನಾರು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಐವತ್ತೆರಡು ವರ್ಷಗಳ ಕಾಲ ಆಳಿದನು. ಯೆರೂಸಲೇಮಿನವಳಾದ ಯೆಕೊಲ್ಯ ಎಂಬಾಕೆ ಇವನ ತಾಯಿ. 3 ಅಜರ್ಯನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು.
4 ಆದರೆ, ಇವನ ಕಾಲದಲ್ಲಿಯೂ ಪೂಜಾಸ್ಥಳಗಳು ತೆಗೆಯಲ್ಪಡಲಿಲ್ಲವಾದುದರಿಂದ ಜನರು ಅವುಗಳಲ್ಲಿ ಯಜ್ಞಧೂಪಗಳನ್ನು ಅರ್ಪಿಸುತ್ತಿದ್ದರು. 5 ಯೆಹೋವನು ಅವನನ್ನು ಕುಷ್ಠರೋಗದಿಂದ ಶಿಕ್ಷಿಸಿದನು. ಆದುದರಿಂದ ಇವನು ಜೀವದಿಂದಿರುವವರೆಗೂ ಪ್ರತ್ಯೇಕವಾದ ಮನೆಯಲ್ಲಿ ವಾಸಮಾಡಬೇಕಾಯಿತು. ರಾಜಗೃಹಾಧಿಪತ್ಯವನ್ನೂ, ಪ್ರಜಾಪಾಲನೆಯನ್ನೂ ಇವನ ಮಗನಾದ ಯೋತಾಮನು ನೋಡಿಕೊಳ್ಳುತ್ತಿದ್ದನು.
6 ಅಜರ್ಯನ ಉಳಿದ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲದ ವೃತಾಂತ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. 7 ಅಜರ್ಯನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದ ನಗರದೊಳಗೆ ರಾಜಕುಟುಂಬದ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯೋತಾಮನು ಅರಸನಾದನು.
ಇಸ್ರಾಯೇಲರ ಅರಸನಾದ ಜೆಕರ್ಯ
8 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಯಾರೊಬ್ಬಾಮನ ಮಗನಾದ ಜೆಕರ್ಯ ಎಂಬುವವನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಆರು ತಿಂಗಳು ಆಳಿದನು. 9 ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ತನ್ನ ಪೂರ್ವಿಕರಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
10 ಯಾಬೇಷನ ಮಗನಾದ ಶಲ್ಲೂಮನು ಅವನಿಗೆ ವಿರುದ್ಧವಾಗಿ ಒಳಸಂಚುಮಾಡಿ ಪ್ರಜೆಗಳ ಮುಂದೆಯೇ ಅವನನ್ನು ಕೊಂದು ಅವನಿಗೆ ಬದಲಾಗಿ ತಾನು ಅರಸನಾದನು. 11 ಜೆಕರ್ಯನ ಉಳಿದ ಚರಿತ್ರೆಯು ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. 12 “ನಿನ್ನ ಸಂತಾನದವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲರ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು” ಎಂಬುದಾಗಿ ಯೆಹೋವನು ಯೇಹುವಿಗೆ ಮುಂತಿಳಿಸಿದ ಮಾತು ನೆರವೇರಿತು.
ಇಸ್ರಾಯೇಲರ ಅರಸನಾದ ಶಲ್ಲೂಮನು
13 ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಯಾಬೇಷನ ಮಗನಾದ ಶಲ್ಲೂಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು. 14 ಗಾದಿಯ ಮಗನಾದ ಮೆನಹೇಮನೆಂಬುವನು ತಿರ್ಚದಿಂದ ಸಮಾರ್ಯಕ್ಕೆ ಬಂದು ಅಲ್ಲಿದ್ದ ಯಾಬೇಷನ ಮಗನಾದ ಶಲ್ಲೂಮನನ್ನು ಕೊಂದು, ಅವನಿಗೆ ಬದಲಾಗಿ ತಾನು ಅರಸನಾದನು. 15 ಶಲ್ಲೂಮನ ಉಳಿದ ಚರಿತ್ರೆಯೂ ಮತ್ತು ಅವನ ಒಳಸಂಚಿನ ವಿವರವೂ ಇಸ್ರಾಯೇಲ್ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಲಾಗಿದೆ. 16 ಮೆನಹೇಮನು ತಿರ್ಚದಿಂದ ತಿಪ್ಸಹುವಿಗೆ ಹೋದಾಗ ಅಲ್ಲಿಯವರು ತಮ್ಮ ಊರುಬಾಗಿಲನ್ನು ಅವನಿಗೆ ತೆರೆಯಲಿಲ್ಲ, ಆದುದರಿಂದ ಅವನು ಆ ಊರನ್ನು ಅದಕ್ಕೆ ಸೇರಿದ ಪ್ರದೇಶವನ್ನೂ ಹಾಳುಮಾಡಿ ಅದರ ನಿವಾಸಿಗಳನ್ನು ಸಂಹರಿಸಿದನು. ಅದರಲ್ಲಿದ್ದ ಎಲ್ಲಾ ಗರ್ಭಿಣಿಗಳ ಹೊಟ್ಟೆಯನ್ನು ಸೀಳಿಹಾಕಿಸಿದನು.
ಇಸ್ರಾಯೇಲರ ಅರಸನಾದ ಮೆನಹೇಮನು
17 ಯೆಹೂದದ ಅರಸನಾದ *ಅಂದರೆ ಉಜ್ಜೀಯ.ಅಜರ್ಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಗಾದಿಯ ಮಗನಾದ ಮೆನಹೇಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಹತ್ತು ವರ್ಷ ಆಳಿದನು. 18 ಇವನು ಜೀವದಿಂದ ಇರುವವರೆಗೂ ಇಸ್ರಾಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ದುರ್ಮಾರ್ಗವನ್ನು ಬಿಡದೆ ತನ್ನ ಪೂರ್ವಿಕರಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. 19 ಅಶ್ಶೂರ ದೇಶದ ಅರಸನಾದ ಪೂಲನೆಂಬವನು ಇಸ್ರಾಯೇಲ್ ದೇಶಕ್ಕೆ ವಿರುದ್ಧವಾಗಿ ಬಂದಾಗ ಮೆನಹೇಮನು ಅವನ ಮುಖಾಂತರವಾಗಿ ತನ್ನ ಅರಸುತನವನ್ನು ಜನರು ದೃಢಪಡಿಸಿಕೊಳ್ಳುವುದಕ್ಕೋಸ್ಕರ ಅವನಿಗೆ †ಸುಮಾರು 34,000 ಕಿಲೋಗ್ರಾಂ.ಸಾವಿರ ತಲಾಂತು ಬೆಳ್ಳಿಯನ್ನು ಕೊಟ್ಟನು. 20 ಮೆನಹೇಮನು ಅಶ್ಶೂರದ ಅರಸನಿಗೆ ಆ ಹಣವನ್ನು ಕೊಡುವುದಕ್ಕಾಗಿ ಇಸ್ರಾಯೇಲರ ಪ್ರತಿಯೊಬ್ಬ ಐಶ್ವರ್ಯವಂತನಿಂದ ‡ಸುಮಾರು 570 ಕಿಲೋಗ್ರಾಂ.ಐವತ್ತು ರೂಪಾಯಿಗಳನ್ನು ವಸೂಲಿಮಾಡಿಕೊಂಡನು. ಆ ಹಣವು ಸಿಕ್ಕಿದ ನಂತರ ಅಶ್ಶೂರದ ಅರಸನು ಅಲ್ಲಿ ನಿಲ್ಲದೆ ಹಿಂತಿರುಗಿ ಹೋದನು.
21 ಮೆನಹೇಮನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. 22 ಮೆನಹೇಮನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಮಗನಾದ ಪೆಕಹ್ಯನು ಇಸ್ರಾಯೇಲರ ಅರಸನಾದನು.
ಇಸ್ರಾಯೇಲರ ಅರಸನಾದ ಪೆಕಹ್ಯ
23 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗನಾದ ಪೆಕಹ್ಯ ಎಂಬುವವನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಎರಡು ವರ್ಷ ಆಳಿದನು. 24 ಇವನು ಇಸ್ರಾಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
25 ಇವನ ಸರದಾರನೂ, ರೆಮಲ್ಯನ ಮಗನೂ ಆಗಿದ್ದ ಪೆಕಹನು, ಗಿಲ್ಯಾದಿನ ಐವತ್ತು ಮಂದಿ ಜನರನ್ನು ಕೂಡಿಸಿಕೊಂಡು ಇವನಿಗೆ ವಿರುದ್ಧವಾಗಿ ಒಳಸಂಚು ಮಾಡಿ ಸಮಾರ್ಯದಲ್ಲಿರುವ ಅರಮನೆಯ ಗರ್ಭಗೃಹದಲ್ಲಿ ಇವನನ್ನೂ ಅರ್ಗೋಬ್, ಅರ್ಯೇ ಎಂಬವರನ್ನೂ ಕೊಂದು ಇವನಿಗೆ ಬದಲಾಗಿ ತಾನು ಅರಸನಾದನು. 26 ಪೆಕಹ್ಯನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.
ಇಸ್ರಾಯೇಲರ ಅರಸನಾದ ಪೆಕಹ
27 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತೆರಡನೆಯ ವರ್ಷದಲ್ಲಿ ರೆಮಲ್ಯನ ಮಗನಾದ ಪೆಕಹನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಇಪ್ಪತ್ತು ವರ್ಷ ಆಳಿದನು. 28 ಇವನು ಇಸ್ರಾಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
29 ಇಸ್ರಾಯೇಲರ ಅರಸನಾದ ಪೆಕಹನ ಕಾಲದಲ್ಲಿ ಅಶ್ಶೂರ್ ದೇಶದ ಅರಸನಾದ ತಿಗ್ಲತ್ಪಿಲೆಸೆರನೆಂಬುವವನು ಬಂದು ಇಯ್ಯೋನ್, ಆಬೇಲ್ಬೇತ್ಮಾಕಾ, ಯಾನೋಹ, ಕೆದೆಷ್, ಹಾಚೋರ್ ಮೊದಲಾದ ನಫ್ತಾಲಿಯ ಊರುಗಳನ್ನು ಗಿಲ್ಯಾದ್ ಮತ್ತು ಗಲಿಲಾಯ ಪ್ರಾಂತ್ಯಗಳನ್ನೂ ಸ್ವಾಧೀನಪಡಿಸಿಕೊಂಡು ಅವುಗಳ ನಿವಾಸಿಗಳನ್ನು ಅಶ್ಶೂರ್ ದೇಶಕ್ಕೆ ಸೆರೆಯಾಗಿ ತೆಗೆದುಕೊಂಡು ಹೋದನು. 30 ಆಗ ಏಲನ ಮಗನಾದ ಹೋಶೇಯನು, ರೆಮಲ್ಯನ ಮಗನಾದ ಪೆಕಹನಿಗೆ ವಿರುದ್ಧವಾಗಿ ಒಳಸಂಚು ಮಾಡಿ, ಇವನನ್ನು ಉಜ್ಜೀಯನ ಮಗನಾದ ಯೋತಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಕೊಂದು ಇವನಿಗೆ ಬದಲಾಗಿ ತಾನು ಅರಸನಾದನು. 31 ಪೆಕಹನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.
ಇಸ್ರಾಯೇಲರ ಅರಸನಾದ ಯೋತಾಮನು
32 ಇಸ್ರಾಯೇಲರ ಅರಸನೂ, ರೆಮಲ್ಯನ ಮಗನೂ ಆದ ಪೆಕಹನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಯೆಹೂದ್ಯರ ಅರಸನಾದ ಉಜ್ಜೀಯನ ಮಗನಾದ ಯೋತಾಮನು ಆಳತೊಡಗಿದನು. 33 ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಇವನು ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷಾ ಇವನ ತಾಯಿ. 34 ಇವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು. 35 ಆದರೆ ಇವನ ಕಾಲದಲ್ಲಿ ಪೂಜಾಸ್ಥಳಗಳು ಇನ್ನೂ ತೆಗೆಯಲ್ಪಟ್ಟಿರಲಿಲ್ಲ. ಆದುದರಿಂದ ಜನರು ಅವುಗಳಲ್ಲಿ ಯಜ್ಞಧೂಪಗಳನ್ನು ಸಮರ್ಪಿಸುತ್ತಿದ್ದರು. ಯೆಹೋವನ ಆಲಯಕ್ಕೆ ಮೇಲಣ ಹೆಬ್ಬಾಗಿಲನ್ನು ಇಡಿಸಿದವನು ಇವನೇ. 36 ಯೋತಾಮನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.
37 ಯೆಹೋವನು ಆ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನನನ್ನೂ, ರೆಮಲ್ಯನ ಮಗನಾದ ಪೆಕಹನನ್ನೂ ಯೆಹೂದ್ಯರಿಗೆ ವಿರೋಧವಾಗಿ ಕಳುಹಿಸತೊಡಗಿದನು. 38 ಯೋತಾಮನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಅವನ ಪೂರ್ವಿಕನಾದ ದಾವೀದನ ಪಟ್ಟಣದೊಳಗೆ ಅವನ ಪೂರ್ವಿಕರ ಕುಟುಂಬ ಸ್ಮಶಾನದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಆಹಾಜನು ಅರಸನಾದನು.