28
ಪೌಲನು ಮೆಲೀತೆದ್ವೀಪದಲ್ಲಿ
ನಾವು ಸುರಕ್ಷಿತವಾಗಿ ದಡವನ್ನು ಸೇರಿದ ಮೇಲೆ, ಅದು ಮೆಲೀತೆ ದ್ವೀಪವೆಂದು ತಿಳಿದುಬಂತು. ಅನ್ಯಭಾಷೆಯವರಾದ ಆ ದ್ವೀಪದವರು ನಮಗೆ ವಿಶೇಷ ಸಹಾನುಭೂತಿಯನ್ನು ತೋರಿದರು. ಮಳೆಯು ಆಗಲೇ ಹೊಯ್ದು ಚಳಿಯಾಗುತ್ತಿದ್ದುದರಿಂದ, ಅವರು ಬೆಂಕಿಯನ್ನು ಹೊತ್ತಿಸಿ ನಮ್ಮೆಲ್ಲರನ್ನು ಸೇರಿಸಿಕೊಂಡರು. ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ, ತಂದು ಬೆಂಕಿಯ ಮೇಲೆ ಹಾಕಲು, ಆ ಶಾಖಕ್ಕೆ ಒಂದು ಸರ್ಪವು ಹೊರಗೆ ಬಂದು, ಅವನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿತು. ಆ ಸರ್ಪವು ಅವನ ಕೈಯಿಂದ ಜೋತಾಡುವುದನ್ನು ದ್ವೀಪದವರು ನೋಡಿ; “ಈ ಮನುಷ್ಯನು ಕೊಲೆಪಾತಕನೇ ಸರಿ; ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯದೇವತೆಯು ಇವನನ್ನು ಬದುಕಗೊಡಿಸುವುದಿಲ್ಲವೆಂದು” ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದರೆ ಪೌಲನು ಆ ಸರ್ಪವನ್ನು ಬೆಂಕಿಯೊಳಕ್ಕೆ ಝಾಡಿಸಿಬಿಟ್ಟನು; ಅವನಿಗೆ ಏನೂ ಅಪಾಯ ಉಂಟಾಗಲಿಲ್ಲ. ಅವರು; “ಇವನ ಮೈ ಈಗ ಊದಿಕೊಳ್ಳುತ್ತದೆ, ಇಲ್ಲವೆ ಇವನು ಫಕ್ಕನೆ ಸತ್ತುಬೀಳುತ್ತಾನೆ” ಎಂದು ಕಾದಿದ್ದರು. ಎಷ್ಟು ಹೊತ್ತು ಕಾದರು ಅವನಿಗೆ ಯಾವ ಹಾನಿಯೂ ಆಗಲಿಲ್ಲ. ಇದನ್ನು ಕಂಡ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡು “ಇವನೊಬ್ಬ ದೇವನೇ” ಇರಬೇಕು ಎಂದುಕೊಂಡರು.
ಮೆಲೀತೆದ್ವೀಪದಲ್ಲಿ ನಡೆದ ಸೇವೆ
ಆ ದ್ವೀಪದ ಮುಖ್ಯಸ್ಥನಾದ ಪೊಪ್ಲಿಯನ ಹೊಲಗದ್ದೆಗಳು ನಾವಿದ್ದ ಸ್ಥಳದ ಸಮೀಪದಲ್ಲಿ ಇದ್ದವು. ಅವನು ನಮ್ಮನ್ನು ಸ್ವಾಗತಿಸಿ ಮೂರು ದಿನಗಳವರೆಗೆ ಆದರದಿಂದ ಸತ್ಕರಿಸಿದನು. ಅವನ ತಂದೆಯು ಜ್ವರದಿಂದಲೂ ರಕ್ತಭೇದಿಯಿಂದಲೂ ಹಾಸಿಗೆ ಹಿಡಿದಿದ್ದನು. ಪೌಲನು ಅವನ ಬಳಿಗೆ ಹೋಗಿ ಪ್ರಾರ್ಥನೆ ಮಾಡಿ ಅವನ ಮೇಲೆ ಕೈಗಳನ್ನಿಟ್ಟು ಅವನನ್ನು ಗುಣಪಡಿಸಿದನು. ಇದಾದ, ನಂತರ ಆ ದ್ವೀಪದಲ್ಲಿದ್ದ ಉಳಿದ ರೋಗಿಗಳು, ಪೌಲನ ಬಳಿಗೆ ಬಂದು ಸ್ವಸ್ಥರಾದರು. 10 ಅವರು ನಮ್ಮನ್ನು ಬಹಳವಾಗಿ ಸನ್ಮಾನಿಸಿದ್ದಲ್ಲದೆ, ನಾವು ಅಲ್ಲಿಂದ ನಮ್ಮ ಪಯಣ ಮುಂದುವರಿಸಿದಾಗ, ನಮಗೆ ಅವಶ್ಯವಾದ ಪದಾರ್ಥಗಳನ್ನು ತಂದು ಹಡಗಿನಲ್ಲಿಟ್ಟರು.
ಪೌಲನು ರೋಮಾಪುರಕ್ಕೆ ಬಂದದ್ದು
11 ಮೂರು ತಿಂಗಳಾದ ಮೇಲೆ ಅಲೆಕ್ಸಾಂದ್ರಿಯದಿಂದ ಬಂದು, ಆ ದ್ವೀಪದಲ್ಲಿ ಹಿಮಕಾಲವನ್ನು ಕಳೆಯಲು ತಂಗಿದ್ದ ಒಂದು ಹಡಗನ್ನು ಹತ್ತಿ ಹೊರಟೆವು. ಆ ಹಡಗಿಗೆ ಅಶ್ವಿನೀದೇವತೆಗಳೆಂಬ ಚಿಹ್ನೆ ಇತ್ತು. 12 ನಾವು ಸುರಕೂಸಿಗೆ ತಲುಪಿ ಅಲ್ಲಿ ಮೂರು ದಿನ ತಂಗಿದೆವು. 13 ಅಲ್ಲಿಂದ ಮುಂದುವರೆದು ರೇಗಿಯ ಪಟ್ಟಣಕ್ಕೆ ಸೇರಿದೆವು. ಒಂದು ದಿನವಾದ ಮೇಲೆ ತೆಂಕಣ ಗಾಳಿ ಬೀಸಿದ್ದರಿಂದ, ಎರಡನೆಯ ದಿನದಲ್ಲಿ ಪೊತಿಯೋಲಕ್ಕೆ ಬಂದೆವು. 14 ಅಲ್ಲಿ ಕ್ರೈಸ್ತ ಸಹೋದರರನ್ನು ಕಂಡೆವು. ಅವರು ನಮ್ಮನ್ನು ತಮ್ಮ ಬಳಿಯಲ್ಲಿ ಏಳು ದಿನ ಇರಬೇಕೆಂದು ಬೇಡಿಕೊಂಡರು. ತರುವಾಯ ರೋಮಾಪುರಕ್ಕೆ ಬಂದೆವು. 15 ಅಲ್ಲಿದ್ದ ಸಹೋದರರು ನಮ್ಮ ಸಮಾಚಾರವನ್ನು ಕೇಳಿದಾಗ, ನಮ್ಮನ್ನು ಭೇಟಿಮಾಡುವುದಕ್ಕಾಗಿ ಕೆಲವರು ಅಪ್ಪಿಯಪೇಟೆಯ ವರೆಗೂ, ಕೆಲವರು ತ್ರಿಛತ್ರವೆಂಬ ಸ್ಥಳದ ವರೆಗೂ ಬಂದರು. ಪೌಲನು ಅವರನ್ನು ನೋಡಿ ದೇವರಿಗೆ ಸ್ತೋತ್ರವನ್ನು ಸಲ್ಲಿಸಿ ಧೈರ್ಯಗೊಂಡನು.
16 ನಾವು ರೋಮಾಪುರಕ್ಕೆ ಬಂದ ಮೇಲೆ, ಪೌಲನು ತನ್ನನ್ನು ಕಾಯುತ್ತಿದ್ದ ಸಿಪಾಯಿಯೊಂದಿಗೆ ಪ್ರತ್ಯೇಕವಾಗಿರಬಹುದೆಂಬ ಅಪ್ಪಣೆಯನ್ನು ಹೊಂದಿದನು.
17 ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರ ಪ್ರಮುಖರನ್ನು ತನ್ನ ಬಳಿಗೆ ಕರೆಯಿಸಿಕೊಂಡನು. ಅವರು ಬಂದಾಗ ಅವನು ಅವರಿಗೆ; “ಸಹೋದರರೇ, ನಾನು ನಮ್ಮ ಜನರಿಗೂ, ನಮ್ಮ ಪೂರ್ವಿಕರ ಆಚಾರಗಳಿಗೂ ವಿರುದ್ಧವಾಗಿ ಏನೂ ಮಾಡದವನಾದರೂ ಯೆರೂಸಲೇಮಿನಿಂದ ರೋಮಾಯರ ಕೈಗೆ ಸೆರೆಯವನಾಗಿ ಒಪ್ಪಿಸಲ್ಪಟ್ಟೆನು. 18 ಅವರು ನನ್ನನ್ನು ವಿಚಾರಣೆಮಾಡಿ, ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡಿಸಬೇಕೆಂದಿದ್ದರು. 19 ಅದಕ್ಕೆ ಯೆಹೂದ್ಯರು ವಿರೋಧಿಸಿದ್ದರಿಂದ, ನಾನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳಬೇಕಾಗಿ ಬಂದಿತು. ನನ್ನ ಸ್ವಂತ ದೇಶದವರ ಮೇಲೆ ದೋಷಾರೋಪಣೆ ಮಾಡಬೇಕೆಂಬ ಅಭಿಪ್ರಾಯದಿಂದ ಅದನ್ನು ಹೇಳಲಿಲ್ಲ. 20 ಈ ಕಾರಣದಿಂದ ನಾನು ನಿಮ್ಮನ್ನು ಕಂಡು ಮಾತನಾಡಬೇಕೆಂದು ಕರೆಯಿಸಿದೆನು. ಇಸ್ರಾಯೇಲ್ ಜನರ ನಿರೀಕ್ಷೆಯ ನಿಮಿತ್ತವಾಗಿ ಈ ಬೇಡಿಯಿಂದ ಬಂಧಿತನಾಗಿದ್ದೇನೆ” ಎಂದು ಹೇಳಿದನು. 21 ಅದಕ್ಕೆ ಅವರು ಅವನಿಗೆ; “ನಿನ್ನ ವಿಷಯವಾಗಿ ನಮಗೆ ಯೂದಾಯದಿಂದ ವರದಿ ಬರಲಿಲ್ಲ, ಸಹೋದರರಲ್ಲಿ ಒಬ್ಬರೂ ಬಂದು ನಿನ್ನ ವಿಷಯವಾಗಿ ಕೆಟ್ಟದ್ದನ್ನು ತಿಳಿಸಲೂ ಇಲ್ಲ, ಮಾತನಾಡಲೂ ಇಲ್ಲ. 22 ಆದರೆ, ನಿನ್ನ ಅಭಿಪ್ರಾಯವನ್ನು ನಿನ್ನಿಂದಲೇ ಕೇಳುವುದು ನಮಗೆ ಯುಕ್ತವೆಂದು ತೋರುತ್ತದೆ. ಆ ಪಂಥದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತನಾಡುತ್ತಾರೆಂಬದೊಂದೇ ನಮಗೆ ಗೊತ್ತದೆ” ಅಂದರು.
23 ಅವರು ಅವನಿಗೆ ಒಂದು ದಿನವನ್ನು ಗೊತ್ತುಮಾಡಲು, ಬಹುಮಂದಿ ಅವನ ಬಿಡಾರದಲ್ಲಿ ಅವನ ಬಳಿಗೆ ಬಂದರು. ಅವನು ಬೆಳಗ್ಗಿನಿಂದ ಸಾಯಂಕಾಲದ ವರೆಗೂ ದೇವರ ರಾಜ್ಯವನ್ನು ಕುರಿತು ಪ್ರಾಮಾಣಿಕವಾಗಿ ಸಾಕ್ಷಿಹೇಳುತ್ತಾ, ಮೋಶೆಯ ಧರ್ಮಶಾಸ್ತ್ರವನ್ನೂ, ಪ್ರವಾದಿಗಳ ಗ್ರಂಥಗಳನ್ನೂ, ಆಧಾರಮಾಡಿಕೊಂಡು ಯೇಸುವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಇದ್ದನು. 24 ಅವನು ಹೇಳಿದ ಮಾತುಗಳಿಗೆ ಕೆಲವರು ಒಪ್ಪಿಕೊಂಡರು; ಕೆಲವರು ನಂಬದೆ ಹೋದರು. 25 ಅವರು ಒಮ್ಮತವಿಲ್ಲದೆ ಇರುವಾಗ ಪೌಲನು ಅವರಿಗೆ; “ಪವಿತ್ರಾತ್ಮನು ಪ್ರವಾದಿಯಾದ ಯೆಶಾಯನ ಬಾಯಿಂದ 26 ನಿಮ್ಮ ಪೂರ್ವಿಕರಿಗೆ ವಿವರವಾಗಿ ಹೇಳಿದ್ದೇನೆಂದರೆ;
“ ‘ನೀನು ಈ ಜನರ ಬಳಿಗೆ ಹೋಗಿ ಅವರಿಗೆ;
ನೀವು ಕಿವಿಯಿದ್ದು ಕೇಳಿಕೊಂಡರೂ ತಿಳಿದುಕೊಳ್ಳುವುದೇ ಇಲ್ಲ;
ಕಣ್ಣಿದ್ದು ನೋಡಿದರೂ ಕಾಣುವುದೇ ಇಲ್ಲ, ಎಂಬುದಾಗಿ ಹೇಳು.
27 ಏಕೆಂದರೆ, ಈ ಜನರ ಹೃದಯವು ಕಲ್ಲಾಗಿದೆ;
ಇವರ ಕಿವಿ ಕಿವುಡಾಗಿದೆ;
ಇವರು ಕಣ್ಣು ಮುಚ್ಚಿಕೊಂಡಿದ್ದಾರೆ;
ತಾವು ಕಣ್ಣಿನಿಂದ ಕಂಡು,
ಕಿವಿಯಿಂದ ಕೇಳಿ, ಹೃದಯದಿಂದ ತಿಳಿದು
ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಹೀಗೆ ಮಾಡಿಕೊಂಡಿದ್ದಾರೆ’ ಎಂಬುದೇ.
28 “ಆದಕಾರಣ ದೇವರಿಂದಾದ ಈ ರಕ್ಷಣೆಯು ಅನ್ಯಜನರಿಗೆ ಹೇಳಿಕಳುಹಿಸಲ್ಪಟ್ಟಿದೆ ಎಂದು ನಿಮಗೆ ಚೆನ್ನಾಗಿ ತಿಳಿದಿರಲಿ; ಅವರಾದರೂ ಕೇಳುವರು” ಎಂದು ಹೇಳಿದನು. 29 ಅವನು ಈ ಮಾತನ್ನು ಹೇಳಿದ ಮೇಲೆ ಅವರು ಹೊರಟುಹೋದರು.
30 ತರುವಾಯ ಅವನು ತಾನೇ ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳ ಕಾಲ ಇದ್ದು, ತನ್ನ ಬಳಿಗೆ ಬರುವವರೆಲ್ಲರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದನು. 31 ಯಾವ ಅಡ್ಡಿಯೂ ಇಲ್ಲದೆ, ತುಂಬಾ ಧೈರ್ಯದಿಂದ ದೇವರ ರಾಜ್ಯದ ಕುರಿತು ಬೋಧಿಸುತ್ತಾ, ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ ಇದ್ದನು.