2
ಮರುಭೂಮಿಯಲ್ಲಿನ ಅಲೆದಾಟಗಳನ್ನು ನೆನಪಿಸಿದ್ದು
ಆಗ ಯೆಹೋವನು ನನಗೆ ಆಜ್ಞಾಪಿಸಿದಂತೆ ನಾವು ಹಿಂದಿರುಗಿ ಅರಣ್ಯಕ್ಕೆ ಹೊರಟು ಕೆಂಪು ಸಮುದ್ರದ ಮಾರ್ಗದಲ್ಲಿ ನಡೆದು ಅನೇಕ ದಿನಗಳು ಸೇಯೀರ್ ಬೆಟ್ಟದ ಸೀಮೆಯನ್ನು ಸುತ್ತುತ್ತಿದ್ದೆವು. ಆ ಮೇಲೆ ಯೆಹೋವನು ನನಗೆ, “ನೀವು ಈ ಬೆಟ್ಟದ ಸೀಮೆಯನ್ನು ಸುತ್ತಿದ್ದು ಸಾಕು; ಉತ್ತರದಿಕ್ಕಿಗೆ ತಿರುಗಿಕೊಳ್ಳಿರಿ. ಮತ್ತು ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಸೇಯೀರ್ ದೇಶದಲ್ಲಿ ವಾಸವಾಗಿರುವ ನಿಮ್ಮ ಬಂಧುಗಳಾದ ಏಸಾವನ ವಂಶದವರ ದೇಶವನ್ನು ದಾಟುವುದಕ್ಕಿದ್ದೀರಷ್ಟೆ. ಅವರು ನಿಮಗೆ ಭಯಪಡುವರು; ನೀವು ಅವರ ಸಂಗಡ ಯುದ್ಧಕ್ಕೆ ಹೋಗದೆ ಬಹಳ ಜಾಗರೂಕತೆಯಿಂದಿರಬೇಕು. ನಾನು ಸೇಯೀರ್ ಬೆಟ್ಟದ ಸೀಮೆಯನ್ನು ಏಸಾವ್ಯರಿಗೇ ಸ್ವದೇಶವಾಗಿ ಕೊಟ್ಟಿರುವುದರಿಂದ ಅದರಲ್ಲಿ ನಿಮಗೆ ಹೆಜ್ಜೆಯಿಡುವಷ್ಟು ನೆಲವನ್ನಾದರೂ ಕೊಡುವುದಿಲ್ಲ. ನೀವು ಅಲ್ಲಿ ಹಣವನ್ನು ಕೊಟ್ಟು ಆಹಾರಪದಾರ್ಥಗಳನ್ನು ತಿನ್ನಬೇಕು; ನೀರನ್ನು ಕೊಂಡುಕೊಂಡು ಕುಡಿಯಬೇಕು. ನೀವು ಕೈಹಾಕಿದ ಎಲ್ಲಾ ಕೆಲಸಗಳನ್ನೂ ನಿಮ್ಮ ದೇವರಾದ ಯೆಹೋವನು ಸಫಲಪಡಿಸಿದ್ದಾನಲ್ಲಾ. ಈ ದೊಡ್ಡ ಅರಣ್ಯದಲ್ಲಿ ನೀವು ಸಂಚರಿಸುತ್ತಿರುವಾಗೆಲ್ಲಾ ಆತನು ನಿಮ್ಮನ್ನು ಪರಾಂಬರಿಸುತ್ತಾ ಬಂದನು. ಈ ನಲ್ವತ್ತು ವರ್ಷ ನಿಮ್ಮ ದೇವರಾದ ಯೆಹೋವನು ನಿಮ್ಮ ಸಂಗಡ ಇದ್ದುದರಿಂದ ನಿಮಗೆ ಏನೂ ಕೊರತೆಯಾಗಲಿಲ್ಲ’ ” ಎಂದು ಹೇಳಿದನು.
ಆದಕಾರಣ ನಾವು ಸೇಯೀರಿನಲ್ಲಿರುವ ನಮ್ಮ ಬಂಧುಗಳಾದ ಏಸಾವ್ಯರಿಗೆ ಗೊತ್ತಾಗದಂತೆ ಎಚ್ಚರಿಕೆಯಿಂದ ಅರಾಬದ ಮಾರ್ಗವನ್ನು ಬಿಟ್ಟು ಏಲತ್ ಮತ್ತು ಎಚ್ಯೋನ್ ಗೆಬೆರ್ ಎಂಬ ಪಟ್ಟಣಗಳಿಂದ ಪ್ರಯಾಣಮಾಡಿ ಮೋವಾಬ್ಯರ ಅಡವಿಯ ದಾರಿಯಲ್ಲಿ ನಡೆದೆವು. ಆಗ ಯೆಹೋವನು ನನಗೆ, “ನೀವು ಮೋವಾಬ್ಯರಿಗೆ ವೈರಿಗಳಾಗಿ ನಡೆದು ಅವರೊಡನೆ ಯುದ್ಧಮಾಡಬಾರದು. ಲೋಟನ ವಂಶದವರಾದ ಅವರಿಗೆ ನಾನು ಆರ್ ಎಂಬ ಪ್ರದೇಶವನ್ನು ಸ್ವದೇಶವಾಗುವುದಕ್ಕೆ ಕೊಟ್ಟಿರುವುದರಿಂದ ಅದರಲ್ಲಿ ನಿಮಗೆ ಸ್ವತ್ತನ್ನು ಕೊಡುವುದಿಲ್ಲ” ಎಂದು ಆಜ್ಞಾಪಿಸಿದನು. 10 ಏಮಿಯರು ಮೊದಲು ಆ ದೇಶದಲ್ಲಿ ವಾಸವಾಗಿದ್ದರು. ಅವರು ಬಲಿಷ್ಠರೂ, ಬಹುಜನರೂ ಮತ್ತು ಅನಾಕೀಮ್ಯರಂತೆ ಎತ್ತರವಾದ ಪುರುಷರಾಗಿದ್ದರು. 11 ಅವರು ಅನಾಕ್ಯರಂತೆ *ದೈತ್ಯರು ಅಥವಾ ರಾಕ್ಷಸರು.ರೆಫಾಯರಿಗೆ ಸೇರಿದವರೆಂದು ಹೇಳುವುದುಂಟು; ಆದರೆ ಮೋವಾಬ್ಯರು ಅವರನ್ನು ಏಮಿಯರೆಂದು ಹೇಳುತ್ತಾರೆ. 12 ಹೋರಿಯರು ಸಹ ಪೂರ್ವಕಾಲದಲ್ಲಿ ಸೇಯೀರಿನಲ್ಲಿ ವಾಸವಾಗಿದ್ದರು. ತರುವಾಯ ಇಸ್ರಾಯೇಲರು ತಮಗೆ ಯೆಹೋವನು ಕೊಟ್ಟ ದೇಶವನ್ನು ಹೇಗೆ ಸ್ವಾಧೀನಮಾಡಿಕೊಂಡರೋ ಹಾಗೆಯೇ ಏಸಾವ್ಯರು ಬಂದು ಹೋರಿಯರನ್ನು ಸಂಹರಿಸಿ ಅವರ ದೇಶದಲ್ಲಿ ವಾಸಮಾಡಿದರು. 13 ಆಗ ನಾನು, “ಎದ್ದು ಜೆರೆದ್ ಹಳ್ಳವನ್ನು ದಾಟಿರಿ” ಎಂದು ಹೇಳಲು ನಾವು ಜೆರೆದ್ ಹಳ್ಳವನ್ನು ದಾಟಿದೆವು. 14 ನಾವು ಕಾದೇಶ್‌ಬರ್ನೇಯದಿಂದ ಹೊರಟು ಜೆರೆದ್ ಹಳ್ಳವನ್ನು ದಾಟಲು ಮೂವತ್ತೆಂಟು ವರ್ಷವಾಯಿತು. ಯೆಹೋವನು ಪ್ರಮಾಣಪೂರ್ವಕವಾಗಿ ಹೇಳಿದ್ದಂತೆ ಅಷ್ಟರಲ್ಲಿ ಆ ತಲೆಮಾರಿನ ಸೈನಿಕರೆಲ್ಲರೂ ಸತ್ತುಹೋಗಿದ್ದರು. 15 ಯೆಹೋವನ ಹಸ್ತವು ಅವರಿಗೆ ವಿರುದ್ಧವಾಗಿದ್ದುದರಿಂದ ಪಾಳೆಯದಲ್ಲಿ ಒಬ್ಬನೂ ಉಳಿಯದಂತೆ ನಾಶವಾದರು.
16 ಆ ಕಾಲದಲ್ಲಿ ಯುದ್ಧನಿಪುಣರಾಗಿದ್ದ ಸೈನಿಕರೆಲ್ಲರೂ ಸತ್ತುಹೋದರು. 17 ಆಗ ಯೆಹೋವನು ನನ್ನೊಂದಿಗೆ ಮಾತನಾಡಿ ನನಗೆ, 18 “ನೀವು ಈಗ ಮೋವಾಬ್ಯರ ಪ್ರಾಂತ್ಯವಾಗಿರುವ ಆರ್ ಎಂಬ ಪ್ರದೇಶವನ್ನು ದಾಟುವವರಾಗಿದ್ದೀರಿ. 19 ಮುಂದೆ ನೀವು ಅಮೋನಿಯರ ಹತ್ತಿರಕ್ಕೆ ಬರುವಾಗ ಅವರಿಗೆ ತೊಂದರೆಪಡಿಸಲೂ ಬೇಡಿರಿ, ಅವರಿಗೆ ವೈರಿಗಳಾಗಿ ನಡೆದು ಯುದ್ಧಮಾಡಲೂಬೇಡಿರಿ. ನಾನು ಆ ದೇಶವನ್ನು ಲೋಟನ ವಂಶದವರಾದ ಅಮ್ಮೋನಿಯರಿಗೆ ಸ್ವತ್ತಾಗಿ ಕೊಟ್ಟಿರುವುದರಿಂದ ನಿಮಗೆ ಅದರಲ್ಲಿ ಯಾವ ಭಾಗವನ್ನಾದರೂ ಕೊಡುವುದಿಲ್ಲ.” 20 ಪೂರ್ವಕಾಲದಲ್ಲಿ ರೆಫಾಯರು ಆ ದೇಶದಲ್ಲಿ ವಾಸವಾಗಿದ್ದುದರಿಂದ ಅದು ರೆಫಾಯರ ದೇಶವೆನಿಸಿಕೊಳ್ಳುತ್ತದೆ. ಅಮ್ಮೋನಿಯರು ಅವರನ್ನು ಜಂಜುಮ್ಯರೆಂದು ಹೇಳುತ್ತಾರೆ. 21 ಅವರು ಬಲಿಷ್ಠರೂ, ಬಹುಜನರೂ ಮತ್ತು ಅನಾಕ್ಯರಂತೆ ಎತ್ತರವಾದ ಪುರುಷರೂ ಆಗಿದ್ದರು. 22 ಆದರೆ ಹೇಗೆ ಯೆಹೋವನು ಸೇಯೀರಿನಲ್ಲಿರುವ ಏಸಾವ್ಯರಿಗೋಸ್ಕರ ಹೋರಿಯರನ್ನು ಹೊರಡಿಸಿದಾಗ ಏಸಾವ್ಯರು ಆ ದೇಶವನ್ನು ಸ್ವಾಧೀನಮಾಡಿಕೊಂಡು ಇಂದಿನವರೆಗೂ ಅಲ್ಲೇ ವಾಸವಾಗಿದ್ದಾರೋ, 23 ಮತ್ತು ಹೇಗೆ ಕಫ್ತೋರಿಂದ ಬಂದ ಕಫ್ತೋರ್ಯರು ಗಾಜಾ ಪಟ್ಟಣದವರೆಗೂ ಹಳ್ಳಿಗಳಲ್ಲಿದ್ದ ಅವ್ವಿಯರನ್ನು ನಾಶಮಾಡಿ ಅವರ ಸ್ಥಳದಲ್ಲಿ ವಾಸಮಾಡಿದರೋ, ಹಾಗೆಯೇ ಯೆಹೋವನು ರೆಫಾಯರನ್ನು ಅಮ್ಮೋನಿಯರ ನಾಡಿನಿಂದ ಹೊರಗೆ ಹೋಗುವಂತೆ ಮಾಡಿದನು. ಅಮ್ಮೋನಿಯರು ಆ ದೇಶವನ್ನು ಸ್ವಾಧೀನಮಾಡಿಕೊಂಡು ಅವರಲ್ಲಿ ವಾಸಮಾಡ ತೊಡಗಿದರು.
ಹೆಷ್ಬೋನಿನ ಅರಸನಾದ ಸೀಹೋನನ ಅಪಜಯ
24 “ಈಗ ನೀವು ಹೊರಟು ಅರ್ನೋನ್ ಹಳ್ಳವನ್ನು ದಾಟಿರಿ. ಅಮೋರಿಯನಾಗಿರುವ ಹೆಷ್ಬೋನಿನ ಅರಸನಾದ ಸೀಹೋನನು ನಿಮ್ಮಿಂದ ಸೋತುಹೋಗುವನು, ಅವನ ರಾಜ್ಯವು ನಿಮಗೇ ವಶವಾಗಬೇಕೆಂದು ನಾನು ಅನುಗ್ರಹಿಸಿದ್ದೇನೆ. ಅವನೊಡನೆ ಯುದ್ಧಮಾಡಿ, ಆ ದೇಶವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಪ್ರಾರಂಭಿಸಿರಿ. 25 ಲೋಕದಲ್ಲಿರುವ ಎಲ್ಲಾ ಜನಗಳಿಗೂ ನಿಮ್ಮಿಂದ ದಿಗಿಲೂ ಮತ್ತು ಹೆದರಿಕೆಯೂ ಉಂಟಾಗುವಂತೆ ಮಾಡುತ್ತೇನೆ. ಇಂದಿನಿಂದ ನಿಮ್ಮ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ಎಲ್ಲರೂ ಗಡಗಡನೆ ನಡುಗಿ ಸಂಕಟಪಡುವರು” ಎಂದು ಹೇಳಿದನು.
26 ಆಗ ನಾನು ಕೆದೇಮೋತಿನ ಅರಣ್ಯದಿಂದ ಹೆಷ್ಬೋನಿನ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, 27 “ನಿನ್ನ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಎಡಬಲಕ್ಕೆ ತಿರುಗದೆ ದಾರಿಹಿಡಿದು ನಡೆದುಹೋಗುವೆವು. 28 ನಮ್ಮಿಂದ ಕ್ರಯ ತೆಗೆದುಕೊಂಡು ಆಹಾರಪದಾರ್ಥಗಳನ್ನೂ ಮತ್ತು ಕುಡಿಯಲಿಕ್ಕೆ ನೀರನ್ನೂ ಕೊಡಿರಿ. 29 ನಾವು ಯೊರ್ದನ್ ನದಿಯನ್ನು ದಾಟಿ ನಮ್ಮ ದೇವರಾದ ಯೆಹೋವನು ನಮಗೆ ಕೊಡುವ ದೇಶವನ್ನು ಸೇರಬೇಕೆಂದಿದ್ದೇವೆ. ಸೇಯೀರಿನಲ್ಲಿರುವ ಏಸಾವ್ಯರೂ ಮತ್ತು ಆರ್ ಪ್ರದೇಶದಲ್ಲಿರುವ ಮೋವಾಬ್ಯರೂ ನಮಗೆ ದಾರಿ ಕೊಟ್ಟಂತೆ ನೀನೂ ಕೊಡಬೇಕು. ಕಾಲ್ನಡೆಯಾಗಿ ನಿನ್ನ ದೇಶವನ್ನು ದಾಟಿಹೋಗುವುದಕ್ಕೆ ನಿನ್ನ ಅಪ್ಪಣೆಯಾಗಬೇಕೇ ಹೊರತು ಬೇರೆ ಏನೂ ಬೇಕಿಲ್ಲ” ಎಂದು ಸಮಾಧಾನಕರವಾದ ಮಾತುಗಳಿಂದ ಹೇಳಿ ಕಳುಹಿಸಿದೆನು. 30 ಆದರೆ ಯೆಹೋವನು ಅವನಿಗೆ ಮೂರ್ಖಬುದ್ಧಿಯನ್ನು ಕೊಟ್ಟು ಹಟವನ್ನು ಹುಟ್ಟಿಸಿದ್ದರಿಂದ ಅವನು ಸಮ್ಮತಿಸಲಿಲ್ಲ. ಅವನು ನಿಮ್ಮಿಂದ ಸೋತುಹೋಗಬೇಕೆಂಬುದೇ ನಿಮ್ಮ ದೇವರಾದ ಯೆಹೋವನ ಸಂಕಲ್ಪವಾಗಿತ್ತು; ಅದು ಈಗಾಗಲೇ ನೆರವೇರಿತಲ್ಲಾ.
31 ತರುವಾಯ ಯೆಹೋವನು ನನಗೆ, “ಈಗ ನಾನು ಸೀಹೋನನನ್ನೂ ಮತ್ತು ಅವನ ದೇಶವನ್ನೂ ನಿಮಗೆ ವಶಪಡಿಸುವುದಕ್ಕೆ ಪ್ರಾರಂಭಿಸಿದ್ದೇನೆ; ಅದನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಪ್ರಾರಂಭಮಾಡಿರಿ” ಎಂದು ಹೇಳಿದನು. 32 ಸೀಹೋನನು ತನ್ನ ಜನರೆಲ್ಲರ ಸಮೇತ ನಮ್ಮೊಡನೆ ಯುದ್ಧಮಾಡುವುದಕ್ಕೆ ಯಹಜಿಗೆ ಹೊರಟುಬಂದನು. 33 ನಮ್ಮ ದೇವರಾದ ಯೆಹೋವನು ಅವನನ್ನು ನಮ್ಮಿಂದ ಪರಾಜಯಪಡಿಸಿದನು. ನಾವು ಅವನನ್ನೂ, ಅವನ ಮಕ್ಕಳನ್ನೂ ಮತ್ತು ಜನರೆಲ್ಲರನ್ನೂ ಸಂಹರಿಸಿದೆವು. 34 ಆ ಕಾಲದಲ್ಲಿ ನಾವು ಅವನ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡು ಅವುಗಳಲ್ಲಿದ್ದ ಗಂಡಸರನ್ನೂ, ಹೆಂಗಸರನ್ನು ಮತ್ತು ಮಕ್ಕಳನ್ನೂ ನಿಶ್ಶೇಷವಾಗಿ ಹತಮಾಡಿದೆವು; ಒಬ್ಬನನ್ನೂ ಉಳಿಸಲಿಲ್ಲ. 35 ಪಶುಗಳನ್ನು ಮಾತ್ರ ಉಳಿಸಿ ನಮ್ಮ ಸ್ವಂತಕ್ಕಾಗಿ ತೆಗೆದುಕೊಂಡು ಊರುಗಳನ್ನು ಸೂರೆಮಾಡಿಬಿಟ್ಟೆವು. 36 ಅರ್ನೋನ್ ತಗ್ಗಿನ ಅಂಚಿನಲ್ಲಿರುವ ಅರೋಯೇರ್ ಪಟ್ಟಣವು ಮತ್ತು ತಗ್ಗಿನಲ್ಲಿಯೇ ಇರುವ ಪಟ್ಟಣವು ಇವುಗಳು ಮೊದಲುಗೊಂಡು ಗಿಲ್ಯಾದ್ ಸೀಮೆಯವರೆಗೂ ಯಾವ ಪಟ್ಟಣವನ್ನು ಜಯಿಸಲು ನಮಗೆ ಅಸಾಧ್ಯವಾಗಲಿಲ್ಲ. ನಮ್ಮ ದೇವರಾದ ಯೆಹೋವನು ಅವುಗಳನ್ನೆಲ್ಲಾ ನಮ್ಮ ಕೈಗೆ ಸಿಕ್ಕುವಂತೆ ಮಾಡಿದನು. 37 ಅಮ್ಮೋನಿಯರ ದೇಶವನ್ನು ಮಾತ್ರ ಅಂದರೆ ಯಬ್ಬೋಕ್ ಹೊಳೆಯ ಬಳಿಯಲ್ಲಿರುವ ಪ್ರದೇಶವು ಮತ್ತು ಬೆಟ್ಟದ ಸೀಮೆಯ ಊರುಗಳು ಇವೇ ಮೊದಲಾದ ಸ್ಥಳಗಳನ್ನು ನೀವು ಅತಿಕ್ರಮಿಸಲಿಲ್ಲ; ಅಲ್ಲಿಗೆ ಹೋಗಲೇ ಬಾರದೆಂದು ನಮ್ಮ ದೇವರಾದ ಯೆಹೋವನು ಆಜ್ಞಾಪಿಸಿದ್ದನು.

*2:11 ದೈತ್ಯರು ಅಥವಾ ರಾಕ್ಷಸರು.