19
ಇಸ್ರಾಯೇಲರು ಸೀನಾಯಿ ಬೆಟ್ಟಕ್ಕೆ ಬಂದದ್ದು
ಇಸ್ರಾಯೇಲರು ಐಗುಪ್ತ ದೇಶದಿಂದ ಹೊರಟ ಮೂರನೆಯ ತಿಂಗಳಿನ ಅದೇ ದಿನದಲ್ಲಿ ಸೀನಾಯಿ ಮರುಭೂಮಿಗೆ ಬಂದರು. ಇಸ್ರಾಯೇಲರು ರೇಫೀದೀಮನ್ನು ಬಿಟ್ಟು ಮರುಭೂಮಿಗೆ ಬಂದು ಮರುಭೂಮಿಯಲ್ಲಿ ಡೇರೆ ಹಾಕಿ ಸೀನಾಯಿ ಬೆಟ್ಟಕ್ಕೆ ಎದುರಾಗಿ ಇಳಿದುಕೊಂಡರು.
ಮೋಶೆ ಬೆಟ್ಟವನ್ನೇರಿ ದೇವರ ಸನ್ನಿಧಿಗೆ ಹೋದನು. ಆಗ ಯೆಹೋವನು ಬೆಟ್ಟದ ಮೇಲಿಂದ ಮೋಶೆಯನ್ನು ಕರೆದು ಅವನಿಗೆ, “ನೀನು ಯಾಕೋಬನ ಮನೆತನದವರಾದ ಇಸ್ರಾಯೇಲರಿಗೆ ಈ ಮಾತುಗಳನ್ನು ತಿಳಿಸಿ ಹೇಳಬೇಕು. ‘ನಾನು ಐಗುಪ್ತ್ಯರಿಗೆ ಮಾಡಿದ್ದನ್ನೂ, ಹದ್ದು ತನ್ನ ಮರಿಗಳನ್ನು ರೆಕ್ಕೆಗಳ ಮೇಲೆ ಹೊತ್ತುಕೊಳ್ಳುವಂತೆ ನಾನು ನಿಮ್ಮನ್ನು ಹೊತ್ತುಕೊಂಡು ಈ ಸ್ಥಳಕ್ಕೆ ಬರಮಾಡಿದ್ದನ್ನೆಲ್ಲಾ ನೀವು ನೋಡಿದ್ದೀರಿ. ಆದ್ದರಿಂದ ನೀವು ನನ್ನ ಮಾತುಗಳನ್ನು ಶ್ರದ್ಧೆಯಿಂದ ಕೇಳಿ, ನನ್ನ ಒಡಂಬಡಿಕೆಯನ್ನು ಕಾಪಾಡಿಕೊಂಡರೆ, ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯ ಜನರಾಗಿರುವಿರಿ. ಸಮಸ್ತ ಭೂಮಿಯು ನನ್ನದೇ. ನೀವು ನನಗೆ ಶ್ರೇಷ್ಠ ಯಾಜಕರೂ, ಪರಿಶುದ್ಧ ಜನರೂ ಆಗಿರುವಿರಿ’ ನೀನು ಇಸ್ರಾಯೇಲರಿಗೆ ಹೇಳಬೇಕಾದ ಮಾತುಗಳು ಇವೇ” ಅಂದನು.
ಆಗ ಮೋಶೆ ಬಂದು ಜನರ ಹಿರಿಯರನ್ನು ಒಟ್ಟಾಗಿ ಸೇರಿಸಿದನು. ಯೆಹೋವನು ಆಜ್ಞಾಪಿಸಿದ್ದ ಈ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಿದನು. ಜನರೆಲ್ಲರೂ ಒಗ್ಗಟ್ಟಾಗಿ, “ಯೆಹೋವನು ಹೇಳಿದಂತೆಯೇ ಮಾಡುವೆವು” ಎಂದು ಉತ್ತರಕೊಟ್ಟರು. ಮೋಶೆ ಯೆಹೋವನ ಬಳಿಗೆ ಹಿಂತಿರುಗಿ ಹೋಗಿ ಅವರು ಹೇಳಿದ ಮಾತುಗಳನ್ನು ಆತನಿಗೆ ಹೇಳಿದನು.
ಯೆಹೋವನು ಮೋಶೆಗೆ, “ಇಗೋ, ನಾನು ನಿನ್ನ ಸಂಗಡ ಮಾತನಾಡುವಾಗ, ಜನರು ಕೇಳಿ ಯಾವಾಗಲೂ ನಿನ್ನನ್ನು ನಂಬುವಂತೆ ನಾನು ಮೇಘದೊಳಗಿನಿಂದ ನಿನ್ನ ಬಳಿಗೆ ಬರುತ್ತೇನೆ” ಎಂದು ಹೇಳಿದನು. ಮೋಶೆ ಜನರ ಮಾತುಗಳನ್ನು ಯೆಹೋವನಿಗೆ ತಿಳಿಸಿದನು. 10 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು ಜನರ ಬಳಿಗೆ ಹೋಗಿ, ಈ ದಿನ ಮತ್ತು ನಾಳೆ ಅವರನ್ನು ಶುದ್ಧಗೊಳಿಸು. ನನ್ನ ಬರುವಿಕೆಗಾಗಿ ಅವರನ್ನು ಸಿದ್ಧಗೊಳಿಸು. ಅವರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡು, 11 ಮೂರನೆಯ ದಿನದಲ್ಲಿ ಅವರು ಸಿದ್ಧರಾಗಿರಬೇಕು. ಮೂರನೆಯ ದಿನದಲ್ಲಿ ಯೆಹೋವನು ಸಮಸ್ತ ಜನರಿಗೂ ಪ್ರತ್ಯಕ್ಷನಾಗಿ ಸೀನಾಯಿ ಬೆಟ್ಟದ ಮೇಲೆ ಇಳಿದು ಬರುವನು. 12 ಜನರು ಹತ್ತಿರ ಬಾರದಂತೆ ನೀನು ಬೆಟ್ಟದ ಸುತ್ತಲೂ ಗಡಿಯನ್ನು ಮಾಡಿಸಿ ಜನರಿಗೆ, ‘ಎಚ್ಚರಿಕೆಯಾಗಿರಿ, ನೀವು ಈ ಬೆಟ್ಟವನ್ನು ಏರದಂತೆಯೂ ಅದರ ಗಡಿಯನ್ನು ಮುಟ್ಟದಂತೆಯೂ ಜಾಗ್ರತೆಯಿಂದಿರಬೇಕು. ಬೆಟ್ಟವನ್ನು ಮುಟ್ಟಿದವರೆಲ್ಲಾ ಖಂಡಿತವಾಗಿ ಸತ್ತುಹೋಗುವರು.’ 13 ಅಂಥವನನ್ನು ಯಾರೂ ಮುಟ್ಟಬಾರದು. ಕಲ್ಲೆಸೆದು ಅಥವಾ ಬಾಣವನ್ನು ಎಸೆದು ಖಂಡಿತವಾಗಿ ಅವನನ್ನು ಕೊಲ್ಲಬೇಕು. ಮನುಷ್ಯನಾಗಲಿ, ಪಶುಗಳಾಗಲಿ ಬೆಟ್ಟವನ್ನು ಮುಟ್ಟಿದರೆ ಸಾಯಲೇಬೇಕು. ಕೊಂಬಿನ ಧ್ವನಿ ದೀರ್ಘವಾಗಿ ಕೇಳಿಸಿದಾಗ ಅವರು ಬೆಟ್ಟದ ಸಮೀಪಕ್ಕೆ ಬರಬೇಕು” ಎಂದು ಹೇಳು ಎಂದನು. 14 ಮೋಶೆ ಬೆಟ್ಟದಿಂದಿಳಿದು ಜನರ ಬಳಿಗೆ ಬಂದು, ಅವರನ್ನು ಶುದ್ಧಗೊಳಿಸಿದನು. ಅವರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡು ಶುದ್ಧರಾದರು. 15 ಆಗ ಮೋಶೆ ಜನರಿಗೆ, “ಮೂರನೆಯ ದಿನದಲ್ಲಿ ಸಿದ್ಧವಾಗಿರಿ. ಯಾವ ಪುರುಷನೂ ಸ್ತ್ರೀಸಂಗ ಮಾಡಬಾರದು” ಎಂದು ಹೇಳಿದನು. 16 ಮೂರನೆಯ ದಿನದಲ್ಲಿ ಸೂರ್ಯೋದಯವಾಗಲು ಆ ಬೆಟ್ಟದ ಮೇಲೆ ಗುಡುಗು, ಮಿಂಚೂ, ಕಾರ್ಮುಗಿಲೂ, ತುತ್ತೂರಿಯ ಮಹಾಧ್ವನಿಯೂ ಉಂಟಾಗಲು ಪಾಳೆಯಲ್ಲಿದ್ದ ಜನರೆಲ್ಲರೂ ನಡುಗಿದರು. 17 ದೇವದರ್ಶನಕ್ಕಾಗಿ ಮೋಶೆ ಜನರನ್ನು ಪಾಳೆಯದ ಹೊರಕ್ಕೆ ಕರೆದುಕೊಂಡು ಬರಲು, ಅವರು ಬೆಟ್ಟದ ಕೆಳಗೆ ನಿಂತುಕೊಂಡರು. 18 ಯೆಹೋವನು ಬೆಂಕಿಯೊಳಗೆ ಸೀನಾಯಿ ಬೆಟ್ಟದ ಮೇಲೆ ಇಳಿದು ಬಂದನು. ಆದುದರಿಂದ ಆ ಬೆಟ್ಟವೆಲ್ಲಾ ಹೊಗೆಯಿಂದ ಆವರಿಸಿಕೊಂಡಿತು. ಆ ಹೊಗೆ ಆವಿಗೆಯ ಹೊಗೆಯಂತೆ ಏರಿತು. ಅದಲ್ಲದೆ *ಜನರೆಲ್ಲರು ಬಹಳವಾಗಿ ನಡುಗಿದರು.ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.
19 ತುತ್ತೂರಿಯ ಧ್ವನಿ ಹೆಚ್ಚಾಗುತ್ತಾ ಬಂದಾಗ, ಮೋಶೆಯು ದೇವರ ಸಂಗಡ ಮಾತನಾಡಿದನು. ಆಗ ದೇವರು ಎತ್ತರದ ಧ್ವನಿಯಲ್ಲಿ ಅವನಿಗೆ ಉತ್ತರಕೊಟ್ಟನು. 20 ಯೆಹೋವನು ಸೀನಾಯಿ ಬೆಟ್ಟದ ಶಿಖರಕ್ಕೆ ಇಳಿದು ಬಂದನು. ಆತನು ಬೆಟ್ಟದ ತುದಿಗೆ ಬಾ ಎಂದು ಮೋಶೆಯನ್ನು ಕರೆಯಲು ಅವನು ಬೆಟ್ಟವನ್ನೇರಿದನು. 21 ಆಗ ಯೆಹೋವನು ಮೋಶೆಗೆ, “ನೀನು ಇಳಿದು ಹೋಗಿ ಜನರನ್ನು ಎಚ್ಚರಿಸಬೇಕು. ಅವರು ನೋಡಬೇಕೆಂಬ ಆಶೆಯಿಂದ ಗಡಿಯನ್ನು ದಾಟಿ ಯೆಹೋವನ ಹತ್ತಿರಕ್ಕೆ ಬಂದರೆ ಅವರಲ್ಲಿ ಬಹಳ ಜನರು ನಾಶವಾಗುವರು. 22 ಯೆಹೋವನ ಸನ್ನಿಧಿಗೆ ಬರುವ ಯಾಜಕರೂ ತಮ್ಮನ್ನು ಶುದ್ಧಿಪಡಿಸಿಕೊಳ್ಳಬೇಕು. ಇಲ್ಲವಾದರೆ ಯೆಹೋವನು ಪಕ್ಕನೆ ಅವರನ್ನೂ ಸಂಹಾರಮಾಡುವನು” ಎಂದು ಹೇಳಿದನು. 23 ಅದಕ್ಕೆ ಮೋಶೆ ಯೆಹೋವನಿಗೆ, “ಜನರು ಸೀನಾಯಿ ಬೆಟ್ಟವನ್ನೇರುವುದಕ್ಕೆ ಆಗುವುದಿಲ್ಲ. ಯಾಕೆಂದರೆ ‘ಬೆಟ್ಟದ ಸುತ್ತಲೂ ಗಡಿಯನ್ನು ಹಾಕಿ ನಿನಗಾಗಿ ಶುದ್ಧಮಾಡು’ ” ಎಂದು ಆಜ್ಞಾಪಿಸಿರುವೆಯಲ್ಲಾ ಎಂದನು. 24 ಯೆಹೋವನು ಮೋಶೆಗೆ, “ನೀನು ಇಳಿದುಹೋಗಿ ಆರೋನನ್ನು ನಿನ್ನ ಸಂಗಡ ಕರೆದುಕೊಂಡು ಮೇಲಕ್ಕೆ ಬಾ. ಆದರೆ ಯಾಜಕರೂ, ಜನರೂ ಆ ಗಡಿಯನ್ನು ದಾಟಿ ಯೆಹೋವನ ಹತ್ತಿರ ಬರಬಾರದು. ದಾಟಿ ಬಂದರೆ ನಾನು ಅವರನ್ನು ಪಕ್ಕನೇ ಸಂಹಾರ ಮಾಡುವೆನು” ಎಂದು ಹೇಳಿದನು. 25 ಮೋಶೆ ಜನರ ಬಳಿಗೆ ಇಳಿದುಹೋಗಿ ಆ ಮಾತುಗಳನ್ನು ಅವರಿಗೆ ತಿಳಿಸಿದನು.

*19:18 ಜನರೆಲ್ಲರು ಬಹಳವಾಗಿ ನಡುಗಿದರು.