21
ಇಸಾಕನ ಜನನ
ಯೆಹೋವನು ತಾನು ವಾಗ್ದಾನ ಮಾಡಿದಂತೆಯೇ ಸಾರಳ ಮೇಲೆ ದಯವಿಟ್ಟು ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದನು. ಅದರಂತೆ ಸಾರಳು ಬಸುರಾಗಿ, ದೇವರು ಮೊದಲು ಸೂಚಿಸಿದ ಕಾಲದಲ್ಲಿ ಅಬ್ರಹಾಮನಿಂದ ಅವನ ಮುಪ್ಪಿನಲ್ಲೇ ಅವನಿಗೆ ಒಬ್ಬ ಮಗನನ್ನು ಹೆತ್ತಳು. ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ “ಇಸಾಕ” ಎಂದು ಹೆಸರಿಟ್ಟನು. ಎಂಟನೆಯ ದಿನದಲ್ಲಿ ದೇವರ ಅಪ್ಪಣೆಯ ಮೇರೆಗೆ ಅಬ್ರಹಾಮನು ಇಸಾಕನಿಗೆ ಸುನ್ನತಿ ಮಾಡಿದನು. ಇಸಾಕನು ಹುಟ್ಟಿದಾಗ ಅಬ್ರಹಾಮನು ನೂರು ವರ್ಷದವನಾಗಿದ್ದನು.
ಸಾರಳು, “ದೇವರು ನನ್ನನ್ನು ಸಂತೋಷಪಡಿಸಿ ನಗುವಂತೆ ಮಾಡಿದ್ದಾನೆ; ಇದುವರೆಗೂ ಈ ಬಗ್ಗೆ ಕೇಳಿದವರು ನನ್ನೊಡನೆ ನಗುವರು. ಸಾರಳೂ ಮಕ್ಕಳಿಗೆ ಮೊಲೆ ಕುಡಿಸುವಳೆಂದು ಯಾರಾದರೂ ಅಬ್ರಹಾಮನಿಗೆ ಹೇಳಲು ಸಾಧ್ಯವಿತ್ತೇ? ಆದರೆ ದೇವರ ಚಿತ್ತದಿಂದ ನನ್ನ ಮುಪ್ಪಿನಲ್ಲಿ ಮತ್ತು ಅಬ್ರಹಾಮನ ಮುಪ್ಪಿನಲ್ಲೇ ಅವನಿಗೆ ಮಗನನ್ನು ಹೆತ್ತಿದ್ದೇನಲ್ಲಾ” ಎಂದು ಹೇಳಿಕೊಂಡಳು.
ಆ ಕೂಸು ಬೆಳೆದು ಮೊಲೆಬಿಟ್ಟಿತು. ಇಸಾಕನು ಮೊಲೆ ಬಿಟ್ಟ ದಿನದಲ್ಲಿ ಅಬ್ರಹಾಮನು ದೊಡ್ಡ ಔತಣವನ್ನು ಮಾಡಿಸಿದನು.
ಹಾಗರಳನ್ನು ಮತ್ತು ಇಷ್ಮಾಯೇಲನನ್ನು ಹೊರದೂಡಿದ್ದು
ಆದರೆ ಐಗುಪ್ತಳಾದ ಹಾಗರಳಲ್ಲಿ ಅಬ್ರಹಾಮನಿಗೆ ಹುಟ್ಟಿದ್ದ ಮಗನು ಇಸಾಕನ ವಿಷಯದಲ್ಲಿ ಹಾಸ್ಯಮಾಡುವುದನ್ನು ಕಂಡು ಸಾರಳು, 10 ಅಬ್ರಹಾಮನಿಗೆ, “ಈ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಈ ದಾಸಿಯ ಮಗನು ನನ್ನ ಮಗನಾದ ಇಸಾಕನೊಂದಿಗೆ ಬಾಧ್ಯಸ್ಥನಾಗಬಾರದು” ಎಂದು ಹೇಳಿದಳು.
11 ಮಗನ ಬಗ್ಗೆ ಆಡಿದ ಈ ಮಾತು ಅಬ್ರಹಾಮನಿಗೆ ಬಹು ದುಃಖವುಂಟುಮಾಡಿತು. 12 ಆದರೆ ದೇವರು ಅವನಿಗೆ, “ಮಗನ ಮತ್ತು ದಾಸಿಯ ದೆಸೆಯಿಂದ ನಿನಗೆ ವ್ಯಥೆಯಾಗಬಾರದು; ಸಾರಳು ಹೇಳಿದಂತೆಯೇ ಮಾಡು; ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು; 13 ಈ ದಾಸಿಯ ಮಗನು ನಿನ್ನಿಂದ ಹುಟ್ಟಿದವನಾದುದರಿಂದ ಅವನಿಂದಲೂ ಬಹು ಜನಾಂಗವಾಗುವಂತೆ ಆಶೀರ್ವಾದ ಮಾಡುವೆನು” ಎಂದು ಹೇಳಿದನು.
14 ಮಾರನೆಯ ದಿನ ಬೆಳಗ್ಗೆ ಅಬ್ರಹಾಮನು ಎದ್ದು, ಹಾಗರಳಿಗೆ ಬುತ್ತಿಯನ್ನೂ, ಒಂದು ತಿತ್ತಿ ತಣ್ಣೀರನ್ನೂ ಅವಳ ಹೆಗಲಿನ ಮೇಲೆ ಇಟ್ಟು, ಮಗುವನ್ನು ಒಪ್ಪಿಸಿ ಅವಳನ್ನು ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು.
15 ತಿತ್ತಿಯಲ್ಲಿದ್ದ ನೀರು ಮುಗಿದ ಮೇಲೆ ಅವಳು ಮಗುವನ್ನು ಒಂದು ಗಿಡದ ನೆರಳಿನಲ್ಲಿ ಮಲಗಿಸಿ, 16 ಕಲ್ಲೆಸೆಯುವಷ್ಟು ದೂರ ಹೋಗಿ ಕುಳಿತುಕೊಂಡು, “ಮಗುವು ಸಾಯುವುದನ್ನು ನೋಡಲಾರೆನು” ಎಂದು ಹೇಳಿ ಜೋರಾಗಿ *ಅಥವಾ ಆ ಹುಡುಗನು ಅತ್ತನು.ಅತ್ತಳು.
17 ಆ ಹುಡುಗನ ಮೊರೆಯು ದೇವರಿಗೆ ಕೇಳಿಸಿತು; ದೇವದೂತನು ಆಕಾಶದಿಂದ ಹಾಗರಳನ್ನು ಕರೆದು ಆಕೆಗೆ, “ಹಾಗರಳೇ, ನಿನಗೇನಾಯಿತು? ಹೆದರಬೇಡ; ಆ ಹುಡುಗನ ಕೂಗು ದೇವರಿಗೆ ಕೇಳಿಸಿತು; 18 ನೀನು ಎದ್ದು ಮಗನನ್ನು ಎತ್ತಿಕೊಂಡು ಸಂತೈಸು. ಏಕೆಂದರೆ ಅವನಿಂದ ಮಹಾ ಜನಾಂಗವಾಗುವಂತೆ ಮಾಡುವೆನು” ಎಂದು ಹೇಳಿದನು.
19 ಇದಲ್ಲದೆ ದೇವರು ಅವಳ ಕಣ್ಣನ್ನು ತೆರೆದಿದ್ದರಿಂದ, ಅವಳು ಅಲ್ಲಿ ನೀರಿನ ಬಾವಿಯನ್ನು ಕಂಡು ತಿತ್ತಿಯಲ್ಲಿ ನೀರನ್ನು ತುಂಬಿಕೊಂಡು ಮಗನಿಗೆ ಕುಡಿಸಿದಳು.
20 ದೇವರು ಆ ಹುಡುಗನ ಸಂಗಡ ಇದ್ದನು; ಅವನು ಬೆಳೆದು ಕಾಡಿನಲ್ಲಿ ವಾಸವಾಗಿದ್ದು ಬಿಲ್ಲುಗಾರನಾದನು. 21 ಅವನು ಪಾರಾನಿನ ಅರಣ್ಯದಲ್ಲಿ ವಾಸ ಮಾಡಿದನು. ಅವನ ತಾಯಿ ಐಗುಪ್ತ ದೇಶದಿಂದ ಕನ್ಯೆಯನ್ನು ತಂದು ಅವನಿಗೆ ಮದುವೆ ಮಾಡಿಸಿದಳು.
ಅಬ್ರಹಾಮನ ಮತ್ತು ಅಬೀಮೆಲೆಕನ ಒಪ್ಪಂದ
22 ಆ ಕಾಲದಲ್ಲಿ ಅಬೀಮೆಲೆಕನು ತನ್ನ ಸೇನಾಧಿಪತಿಯಾದ ಫೀಕೋಲನ ಸಮೇತ ಅಬ್ರಹಾಮನಿಗೆ, “ನೀನು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ದೇವರು ನಿನ್ನ ಸಂಗಡ ಇದ್ದಾನೆ. 23 ಆದುದರಿಂದ ನೀನು ನನಗೂ, ನನ್ನ ಮಕ್ಕಳಿಗೂ, ನನ್ನ ಸಂತತಿಗೂ ಅನ್ಯಾಯ ಮಾಡದೆ, ನಾನು ನಿನಗೆ ಹಿತವನ್ನು ಮಾಡಿದಂತೆಯೇ, ನನಗೂ, ನೀನು ವಾಸಿಸುವ ಈ ದೇಶಕ್ಕೂ ಹಿತವನ್ನು ಮಾಡುವುದಾಗಿ ದೇವರ ಮೇಲೆ ಪ್ರಮಾಣ ಮಾಡಬೇಕು” ಎಂದು ಹೇಳಿದನು.
24 ಅದಕ್ಕೆ ಅಬ್ರಹಾಮನು “ಹಾಗೆಯೇ” ಪ್ರಮಾಣಮಾಡುತ್ತೇನೆ ಅಂದನು.
25 ಅಬೀಮೆಲೆಕನ ಆಳುಗಳು ಒಂದು ಬಾವಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡದ್ದರಿಂದ ಅಬ್ರಹಾಮನು ಅಬೀಮೆಲೆಕನ ಮೇಲೆ ತಪ್ಪು ಹೊರಿಸಲು, 26 ಅಬೀಮೆಲೆಕನು, “ಈ ಕೆಲಸವನ್ನು ಮಾಡಿದವರು ಯಾರೋ ನಾನರಿಯೆ; ನೀನು ನನಗೆ ತಿಳಿಸಲೂ ಇಲ್ಲ, ಈಗಿನ ವರೆಗೆ ನಾನು ಈ ಸಂಗತಿಯನ್ನು ಕೇಳಲೂ ಇಲ್ಲ” ಎಂದನು.
27 ಆ ನಂತರ ಅಬ್ರಹಾಮನು ಕುರಿದನಗಳನ್ನು ಅಬೀಮೆಲೆಕನಿಗೆ ದಾನ ಮಾಡಿದನು. 28 ತರುವಾಯ ಅಬ್ರಹಾಮನು ಹಿಂಡಿನ ಏಳು ಹೆಣ್ಣು ಕುರಿಮರಿಗಳನ್ನು ಪ್ರತ್ಯೇಕವಾಗಿ ಇರಿಸಲು, 29 ಅಬೀಮೆಲೆಕನು ಅಬ್ರಹಾಮನಿಗೆ “ನೀನು ಈ ಏಳು ಹೆಣ್ಣು ಕುರಿಮರಿಗಳನ್ನು ಪ್ರತ್ಯೇಕವಾಗಿ ಇರಿಸಲು ಕಾರಣವೇನು?” ಎಂದು ಕೇಳಿದನು.
30 ಅದಕ್ಕೆ ಅಬ್ರಹಾಮನು, “ಈ ಬಾವಿಯನ್ನು ತೋಡಿಸಿದವನು ನಾನೇ ಎಂಬುದಕ್ಕೆ ಸಾಕ್ಷಿಯಾಗಿ ನೀನು ಈ ಏಳು ಹೆಣ್ಣು ಕುರಿಮರಿಗಳನ್ನು ನನ್ನ ಕೈಯಿಂದ ತೆಗೆದುಕೊಳ್ಳಬೇಕು” ಎಂದು ಹೇಳಿ, ಅವರಿಬ್ಬರೂ ಒಡಂಬಡಿಕೆ ಮಾಡಿಕೊಂಡರು.
31 ಅವರಿಬ್ಬರು ಅಲ್ಲಿ ಪ್ರಮಾಣಮಾಡಿದ್ದರಿಂದ ಆ ಸ್ಥಳಕ್ಕೆ ಅಂದರೆ ಏಳು ಬಾವಿಗಳು ಅಥವಾ ಒಡಂಬಡಿಕೆಯ ಬಾವಿ.ಬೇರ್ಷೆಬ ಎಂದು ಹೆಸರಾಯಿತು.
32 ಬೇರ್ಷೆಬದಲ್ಲಿ ಅವರು ಒಡಂಬಡಿಕೆಯನ್ನು ಮಾಡಿಕೊಂಡ ತರುವಾಯ ಅಬೀಮೆಲೆಕನೂ ಅವನ ಸೇನಾಧಿಪತಿಯಾದ ಫೀಕೋಲನೂ ಫಿಲಿಷ್ಟಿಯರ ದೇಶಕ್ಕೆ ಹಿಂತಿರುಗಿ ಹೊರಟು ಹೋದರು. 33 ಅಬ್ರಹಾಮನು ಬೇರ್ಷೆಬದಲ್ಲಿ ಪಿಚುಲ ವೃಕ್ಷವನ್ನು ನೆಟ್ಟು ಅಲ್ಲಿ ನಿತ್ಯದೇವರಾದ ಯೆಹೋವನ ಹೆಸರನ್ನು ಹೇಳಿಕೊಂಡು ಆರಾಧಿಸಿದನು. 34 ಅಬ್ರಹಾಮನು ಫಿಲಿಷ್ಟಿಯರ ದೇಶದಲ್ಲಿ ಬಹಳ ದಿನಗಳ ಕಾಲ ವಾಸವಾಗಿದ್ದನು.

*21:16 ಅಥವಾ ಆ ಹುಡುಗನು ಅತ್ತನು.

21:31 ಅಂದರೆ ಏಳು ಬಾವಿಗಳು ಅಥವಾ ಒಡಂಬಡಿಕೆಯ ಬಾವಿ.