37
ಯೋಸೇಫನ ಕನಸು
1 ಯಾಕೋಬನು ತನ್ನ ತಂದೆಯು ಪ್ರವಾಸವಾಗಿದ್ದ ಕಾನಾನ್ ದೇಶದಲ್ಲಿ ವಾಸವಾಗಿದ್ದನು.
2 ಇದು ಯಾಕೋಬನ ವಂಶದವರ ಚರಿತ್ರೆ: ಯೋಸೇಫನು ಹದಿನೇಳು ವರ್ಷದವನಾಗಿದ್ದಾಗ ತನ್ನ ಅಣ್ಣಂದಿರ ಜೊತೆಯಲ್ಲಿ ಅಂದರೆ, ತನ್ನ ತಂದೆಯ ಹೆಂಡತಿಯರಾದ ಬಿಲ್ಹಾ ಮತ್ತು ಜಿಲ್ಪಾರ ಮಕ್ಕಳ ಜೊತೆಯಲ್ಲಿ ಆಡು ಕುರಿಗಳನ್ನು ಮೇಯಿಸುತ್ತಿದ್ದನು. ಅವರು ಏನಾದರೂ ಕೆಟ್ಟ ಕೆಲಸ ಮಾಡುವಾಗ ಅವನು ತಂದೆಗೆ ತಿಳಿಸುತ್ತಿದ್ದನು.
3 ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನಲ್ಲಿ ಹುಟ್ಟಿದವನಾಗಿದ್ದುದರಿಂದ ಅವನನ್ನು ತನ್ನ ಎಲ್ಲಾ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದನು, ಅಲ್ಲದೆ ಅವನಿಗೆ ಬಣ್ಣಬಣ್ಣದ ಒಂದು ನಿಲುವಂಗಿಯನ್ನು ಹೊಲಿಸಿ ಕೊಟ್ಟಿದ್ದನು. 4 ಅವನ ಅಣ್ಣತಮ್ಮಂದಿರು, ತಮ್ಮ ತಂದೆಯು ಎಲ್ಲಾ ಮಕ್ಕಳಿಗಿಂತಲೂ ಇವನನ್ನೇ ಹೆಚ್ಚಾಗಿ ಪ್ರೀತಿಸುತ್ತಿರುವುದನ್ನು ನೋಡಿ ಯೋಸೇಫನನ್ನು ಹಗೆಮಾಡಿ ಅವನೊಡನೆ ಸ್ನೇಹಭಾವದಿಂದ ಮಾತನಾಡಲಾರದೆ ಹೋದರು.
5 ಒಂದು ದಿನ ಯೋಸೇಫನು ಕನಸು ಕಂಡು ಅದನ್ನು ತನ್ನ ಅಣ್ಣಂದಿರಿಗೆ ತಿಳಿಸಿದಾಗ ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು. 6 ಅವನು ಅವರಿಗೆ, “ನಾನು ಕನಸಿನಲ್ಲಿ ಕಂಡದ್ದನ್ನು ಹೇಳುತ್ತೇನೆ, ದಯವಿಟ್ಟು ಕೇಳಿರಿ. 7 ಆ ಕನಸಿನಲ್ಲಿ ನಾವು ಹೊಲದಲ್ಲಿ ಸಿವುಡುಗಳನ್ನು ಕಟ್ಟುತ್ತಾ ಇದ್ದೆವು. ಆಗ ನನ್ನ ಸಿವುಡು ಎದ್ದು ನಿಂತಿತು. ನಿಮ್ಮ ಸಿವುಡುಗಳು ಸುತ್ತಲೂ ಬಂದು ನನ್ನ ಸಿವುಡಿಗೆ ಅಡ್ಡಬಿದ್ದದ್ದನ್ನು ಕಂಡೆನು” ಎಂದು ಹೇಳಿದನು.
8 ಅದಕ್ಕೆ ಅವನ ಅಣ್ಣಂದಿರು ಅವನಿಗೆ, “ನೀನು ನಿಜವಾಗಿ ನಮ್ಮನ್ನು ಆಳುವಿಯಾ? ನೀನು ನಮ್ಮ ಮೇಲೆ ದೊರೆತನ ಮಾಡುವಿಯಾ?” ಎಂದು ಹೇಳಿ ಅವನ ಕನಸುಗಳಿಗಾಗಿಯೂ, ಅದನ್ನು ಅವನು ಅವರಿಗೆ ತಿಳಿಸಿದ್ದಕ್ಕಾಗಿಯು ಮತ್ತಷ್ಟು ಅವನನ್ನು ದ್ವೇಷಿಸಿದರು.
9 ಅವನು ಇನ್ನೊಂದು ಕನಸನ್ನು ಕಂಡನು. ಅದನ್ನು ತನ್ನ ಅಣ್ಣಂದಿರಿಗೆ ತಿಳಿಸಿದನು. ಅವನು ಅವರಿಗೆ, “ಇನ್ನೊಂದು ಕನಸು ಕಂಡಿದ್ದೇನೆ. ಅದರಲ್ಲಿ ಸೂರ್ಯಚಂದ್ರರೂ, ಹನ್ನೊಂದು ನಕ್ಷತ್ರಗಳೂ ನನಗೆ ಅಡ್ಡ ಬಿದ್ದವು” ಎಂದು ಹೇಳಿದನು.
10 ಅವನು ಈ ಕನಸನ್ನು ತನ್ನ ತಂದೆಗೂ ಮತ್ತು ಅಣ್ಣಂದಿರಿಗೂ ತಿಳಿಸಿದಾಗ ತಂದೆಯು ಅವನಿಗೆ, “ಇದು ಎಂಥಾ ಕನಸು ನೀನು ಕಂಡದ್ದು? ನಾನೂ ನಿನ್ನ ತಾಯಿಯೂ, ಅಣ್ಣತಮ್ಮಂದಿರೂ ನಿನ್ನ ಮುಂದೆ ಅಡ್ಡ ಬೀಳುವುದಕ್ಕೆ ಬಂದೆವೋ?” ಎಂದು ಹೇಳಿ ಗದರಿಸಿದನು. 11 ಹೀಗೆ ಯೋಸೇಫನ ಅಣ್ಣಂದಿರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು. ಆದರೆ ಅವನ ತಂದೆಯು ಅವನ ಮಾತುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡನು.
ಯೋಸೇಫನನ್ನು ಮಾರಿದ್ದು
12 ಅವನ ಅಣ್ಣಂದಿರು ತಂದೆಯ ಆಡುಕುರಿ ಹಿಂಡುಗಳನ್ನು ಮೇಯಿಸುವುದಕ್ಕೆ ಶೆಕೆಮಿಗೆ ಹೋದರು. 13 ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಅಣ್ಣಂದಿರು ಶೆಕೆಮಿನಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದಾರಲ್ಲಾ ಅವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೆ, ಹೋಗು” ಎಂದು ಹೇಳಿದನು. ಅದಕ್ಕೆ ಅವನು, “ಆಗಲಿ, ಹೋಗುತ್ತೇನೆ” ಎಂದನು.
14 ಇಸ್ರಾಯೇಲ್ಯನು ಅವನಿಗೆ, “ನೀನು ಶೆಕೆಮಿಗೆ ಹೋಗಿ ನಿನ್ನ ಅಣ್ಣಂದಿರ ಯೋಗ ಕ್ಷೇಮವನ್ನೂ, ಆಡುಕುರಿಗಳ ಹಿಂಡಿನ ಯೋಗ ಕ್ಷೇಮವನ್ನೂ ವಿಚಾರಿಸಿಕೊಂಡು ಬಾ” ಎಂದು ಅಪ್ಪಣೆ ಕೊಟ್ಟು, ಅವನನ್ನು ಹೆಬ್ರೋನ್ ಕಣಿವೆಯಿಂದ ಕಳುಹಿಸಲು ಯೋಸೇಫನು ಹೊರಟನು. 15 ಅವನು ಶೆಕೆಮಿಗೆ ಬಂದು ಅಲ್ಲಿ ಅಡವಿಯೊಳಗೆ ತಿರುಗಾಡುತ್ತಿರುವಾಗ ಒಬ್ಬ ಮನುಷ್ಯನು ಅವನನ್ನು ಕಂಡು, “ಏನು ಹುಡುಕುತ್ತೀ?” ಎಂದು ವಿಚಾರಿಸಿದನು.
16 ಅದಕ್ಕೆ ಅವನು, “ನನ್ನ ಅಣ್ಣಂದಿರನ್ನು ಹುಡುಕುತ್ತಾ ಇದ್ದೇನೆ. ಅವರು ಆಡುಕುರಿಗಳನ್ನು ಎಲ್ಲಿ ಮೇಯಿಸುತ್ತಾರೆ ದಯವಿಟ್ಟು ಹೇಳು” ಎಂದನು.
17 ಅದಕ್ಕೆ ಆ ಮನುಷ್ಯನು, “ಅವರು ಇಲ್ಲಿಂದ ಹೊರಟುಹೋದರು. ಅವರು ನಾವು ದೋತಾನಿಗೆ ಹೋಗೋಣ ಎಂಬುದಾಗಿ ಮಾತನಾಡುವುದನ್ನು ನಾನು ಕೇಳಿಸಿಕೊಂಡೆನು” ಎಂದು ಹೇಳಲು ಯೋಸೇಫನು ಅವರನ್ನು ಹುಡುಕುತ್ತಾ ಹೋಗಿ ದೋತಾನಿನಲ್ಲಿ ಅವರನ್ನು ಕಂಡನು. 18 ಅವರು ಅವನನ್ನು ದೂರದಿಂದ ನೋಡಿ ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲುವುದಕ್ಕೆ ಒಳಸಂಚು ಮಾಡಿಕೊಂಡರು.
19 ಅವರು ಒಬ್ಬರಿಗೊಬ್ಬರು, “ಅಗೋ ಆ ಕನಸುಗಾರನು ಬರುತ್ತಿದ್ದಾನೆ ನೋಡಿರಿ 20 ಬನ್ನಿರಿ, ಈಗ ನಾವು ಅವನನ್ನು ಕೊಂದು ಈ ಗುಂಡಿಗಳಲ್ಲಿ ಒಂದರೊಳಗೆ ಹಾಕಿ, ಕಾಡುಮೃಗವು ಅವನನ್ನು ತಿಂದು ಬಿಟ್ಟಿತೆಂದು ಹೇಳೋಣ. ಆಗ ಅವನ ಕನಸುಗಳು ಏನಾಗುವವೋ? ನೋಡೋಣ” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
21 ರೂಬೇನನು ಈ ಮಾತನ್ನು ಕೇಳಿ, “ನಾವು ಅವನ ಪ್ರಾಣವನ್ನು ತೆಗೆಯಬಾರದು” ಎಂದು ಹೇಳಿದನು. 22 ರೂಬೇನನು ಅವನನ್ನು ಅವರ ಕೈಯಿಂದ ತಪ್ಪಿಸಿ ತಂದೆಗೆ ತಿರುಗಿ ಒಪ್ಪಿಸಬೇಕೆಂದು ನೆನಸಿ ಅವರಿಗೆ, “ಇವನ ರಕ್ತ ಸುರಿಸಬೇಡಿರಿ, ಅವನನ್ನು ಈ ಕಾಡಿನಲ್ಲಿರುವ ಈ ಗುಂಡಿಯೊಳಗೆ ಹಾಕಿರಿ, ಅವನ ಮೇಲೆ ಕೈಹಾಕಬೇಡಿರಿ” ಎಂದು ಹೇಳಿದನು.
23 ಯೋಸೇಫನು ತನ್ನ ಅಣ್ಣಂದಿರ ಹತ್ತಿರಕ್ಕೆ ಬಂದಾಗ ಅವರು ಅವನ ಮೇಲಿದ್ದ ನಿಲುವಂಗಿಯನ್ನು ತೆಗೆದರು. 24 ಅವನನ್ನು ಹಿಡಿದು ಆ ಗುಂಡಿಯೊಳಗೆ ಹಾಕಿದರು. ಆ ಗುಂಡಿ ನೀರಿಲ್ಲದೆ ಬರಿದಾಗಿತ್ತು.
25 ಆ ಮೇಲೆ ಅವರು ಊಟಕ್ಕೆ ಕುಳಿತುಕೊಂಡಾಗ ಅವರು ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ, ಇಷ್ಮಾಯೇಲರ ಗುಂಪು ಒಂಟೆಗಳ ಮೇಲೆ ಪರಿಮಳ ದ್ರವ್ಯ, ಸುಗಂಧ ತೈಲ, ರಕ್ತಬೋಳ, ಇವುಗಳನ್ನು ಹೇರಿಕೊಂಡು ಗಿಲ್ಯಾದಿನಿಂದ ಐಗುಪ್ತದೇಶಕ್ಕೆ ಪ್ರಯಾಣಮಾಡುತ್ತಾ ಬರುವುದನ್ನು ಕಂಡರು.
26 ಆಗ ಯೆಹೂದನು ತನ್ನ ಅಣ್ಣತಮ್ಮಂದಿರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಹಾಕಿ ಅವನ ರಕ್ತವನ್ನು ಮರೆಮಾಡಿದರೆ ಲಾಭವೇನು? 27 ಬನ್ನಿರಿ, ಅವನನ್ನು ಆ ಇಷ್ಮಾಯೇಲ್ಯರಿಗೆ ಮಾರಿಬಿಡೋಣ. ನಾವು ಅವನ ಮೇಲೆ ಕೈಹಾಕಬಾರದು. ಅವನು ನಮ್ಮ ಒಡಹುಟ್ಟಿದ ತಮ್ಮನಲ್ಲವೇ” ಎಂದು ಹೇಳಿದನು. ಆ ಮಾತಿಗೆ ಅವನ ಅಣ್ಣಂದಿರು ಒಪ್ಪಿದರು.
28 ಅಷ್ಟರಲ್ಲಿ ಮಿದ್ಯಾನ್ಯರಾದ ವರ್ತಕರು ಹಾದುಹೋಗುತ್ತಿದ್ದರು. ಅವರು ಯೋಸೇಫನನ್ನು ಗುಂಡಿಯೊಳಗಿಂದ ಮೇಲೆ ಎತ್ತಿ ಆ ಇಷ್ಮಾಯೇಲ್ಯರಿಗೆ *230 ಗ್ರಾಂ ಬೆಳ್ಳಿ, ಇದು ಯುವ ದಾಸನಿಗಿರುವ ಬೆಲೆ.ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಅವನನ್ನು ಮಾರಿದರು. ಅವರು ಅವನನ್ನು ಐಗುಪ್ತ ದೇಶಕ್ಕೆ ಕರೆದುಕೊಂಡು ಹೋದರು.
29 ರೂಬೇನನು ತಿರುಗಿ ಆ ಗುಂಡಿಯ ಹತ್ತಿರಕ್ಕೆ ಬಂದು ಅದರಲ್ಲಿ ಯೋಸೇಫನು ಇಲ್ಲದೆ ಇರುವುದನ್ನು ಕಂಡು ತನ್ನ ಬಟ್ಟೆಗಳನ್ನು ಹರಿದುಕೊಂಡನು. 30 ಅವನು ತನ್ನ ತಮ್ಮಂದಿರ ಬಳಿಗೆ ಬಂದು, “ಅಯ್ಯೋ, ಹುಡುಗನು ಇಲ್ಲವಲ್ಲಾ, ನಾನೆಲ್ಲಿಗೆ ಹೋಗಲಿ?” ಎಂದು ಗೋಳಾಡಿದನು.
31 ಆ ಮೇಲೆ ಅವರು ಒಂದು ಹೋತವನ್ನು ಕೊಯ್ದು ಅದರ ರಕ್ತದಲ್ಲಿ ಯೋಸೇಫನ ಅಂಗಿಯನ್ನು ಅದ್ದಿ, 32 ಆ ಬಣ್ಣದ ನಿಲುವಂಗಿಯನ್ನು ತಮ್ಮ ತಂದೆಯ ಬಳಿಗೆ ತಂದು, “ಇದು ನಮಗೆ ಸಿಕ್ಕಿತು. ಇದು ನಿನ್ನ ಮಗನ ಅಂಗಿಯೋ ಏನೋ ದಯವಿಟ್ಟು ನೋಡು” ಎಂದು ಅವನಿಗೆ ಹೇಳಿದರು.
33 ಯಾಕೋಬನು ಅದರ ಗುರುತು ಹಿಡಿದು, “ಈ ಅಂಗಿ ನನ್ನ ಮಗನದೇ ಹೌದು, ಕಾಡುಮೃಗವು ಅವನನ್ನು ಕೊಂದು ತಿಂದು ಬಿಟ್ಟಿದೆ. ಯೋಸೇಫನನ್ನು ಸಂದೇಹವಿಲ್ಲದೆ ಸೀಳಿಹಾಕಿರಬೇಕು” ಎಂದು ಹೇಳಿದನು.
34 ಯಾಕೋಬನು ತನ್ನ ಬಟ್ಟೆಗಳನ್ನು ಹರಿದುಕೊಂಡು ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗಾಗಿ ಬಹು ದಿನಗಳವರೆಗೂ ದುಃಖಪಟ್ಟನು. 35 ಅವನ ಗಂಡುಮಕ್ಕಳೂ ಮತ್ತು ಹೆಣ್ಣುಮಕ್ಕಳೂ ಎಲ್ಲರೂ ಅವನ ದುಃಖ ಶಮನಮಾಡುವುದಕ್ಕೆ ಪ್ರಯತ್ನಿಸಿದ್ದಾಗ್ಯೂ ಅವನು ಸಮಾಧಾನ ಆದರಣೆ ಹೊಂದಲಾರದೇ, “ನಾನು ಹೀಗೆ ದುಃಖಪಡುತ್ತಾ ನನ್ನ ಮಗನೊಂದಿಗೆ ಸಮಾಧಿ ಸೇರುವೆನು” ಎಂದನು. ಹೀಗೆ ತಂದೆಯು ಮಗನಿಗೋಸ್ಕರ ದುಃಖಿಸಿದನು.
36 ಇದಲ್ಲದೆ ಆ ಮಿದ್ಯಾನ್ಯರು ಯೋಸೇಫನನ್ನು ತೆಗೆದುಕೊಂಡು ಹೋಗಿ ಐಗುಪ್ತ ದೇಶದ ಫರೋಹನ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದರು. ಇವನು ಅರಸನ ಮೈಗಾವಲಿನವರ ದಳಪತಿಯೂ ಆಗಿದ್ದನು.