14
ದೇವರ ಪ್ರೀತಿಪೂರ್ವಕವಾದ ವಾಗ್ದಾನಗಳು
1 ಇಸ್ರಾಯೇಲೇ, ನೀನು ಹಿಂದಿರುಗಿ ನಿನ್ನ ದೇವರಾದ ಯೆಹೋವನ ಕಡೆಗೆ ತಿರುಗಿಕೋ;
ನಿನ್ನ ಅಪರಾಧದಿಂದಲೇ, ನೀನು ಮುಗ್ಗರಿಸಿ ಬಿದ್ದಿ.
2 ಪಶ್ಚಾತ್ತಾಪದ ಮಾತುಗಳಿಂದ ಯೆಹೋವನ ಬಳಿಗೆ ಹಿಂದಿರುಗಿ ಬಂದು
ಆತನಿಗೆ, “ನಮ್ಮ ಅಪರಾಧವನ್ನು ಸಂಪೂರ್ಣವಾಗಿ ನಿವಾರಣೆಮಾಡಿ, ನಮ್ಮಲ್ಲಿನ ಒಳ್ಳೆಯದನ್ನು ಅಂಗೀಕರಿಸು;
ನಮ್ಮ ತುಟಿಗಳ ಫಲಗಳನ್ನು ಅರ್ಪಿಸುವೆವು.*ನಮ್ಮ ತುಟಿಗಳ ಫಲಗಳನ್ನು ಅರ್ಪಿಸುವೆವು. ನಮ್ಮ ಸ್ತೋತ್ರಗಳೆಂಬ ಹೋರಿಗಳನ್ನು ಅರ್ಪಿಸುವೆವು.
3 ಅಶ್ಶೂರವು ನಮ್ಮನ್ನು ರಕ್ಷಿಸುವುದೆಂದು ನಂಬುವುದಿಲ್ಲ,
ಐಗುಪ್ತದ ಕುದುರೆಗಳನ್ನು ಹತ್ತುವುದಿಲ್ಲ,
ನಮ್ಮ ಕೈಕೆಲಸದ ಬೊಂಬೆಗಳಿಗೆ, ‘ನೀವು ನಮ್ಮ ದೇವರುಗಳು’ ಎಂದು ಇನ್ನು ಹೇಳುವುದಿಲ್ಲ;
ನೀನೇ ದಿಕ್ಕಿಲ್ಲದ ಈ ಅನಾಥರನ್ನು ಕರುಣಿಸುವವನು” ಎಂಬುದಾಗಿ ಅರಿಕೆಮಾಡಿಕೊಳ್ಳಿರಿ.
4 ನಾನು ನನ್ನ ಜನರ ಭ್ರಷ್ಟತ್ವವನ್ನು ಪರಿಹರಿಸಿ ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು;
ನನ್ನ ಕೋಪವು ಅವರಿಂದ ತೊಲಗಿಹೋಯಿತು.
5 ನಾನು ಇಸ್ರಾಯೇಲಿಗೆ ಇಬ್ಬನಿಯಂತಾಗುವೆನು; ಅದು ತಾವರೆಯಂತೆ ಅರಳುವುದು;
ಲೆಬನೋನಿನ ದೇವದಾರು ಮರಗಳ ಹಾಗೆ ಬೇರು ಬಿಟ್ಟುಕೊಳ್ಳುವುದು.
6 ಅದರ ರೆಂಬೆಗಳು ಹರಡುವವು, ಅದರ ಅಂದವು ಒಲೀವ್ ಮರದಂತೆ ಕಂಗೊಳಿಸುವುದು,
ಅದರ ಪರಿಮಳವು ಲೆಬನೋನಿನ ಹಾಗೆ ಮನೋಹರವಾಗಿರುವುದು.
7 ಅದರ ನೆರಳನ್ನು ಆಶ್ರಯಿಸಿರುವವರು†ಅದರ ನೆರಳನ್ನು ಆಶ್ರಯಿಸಿರುವವರು ಅವರು ಯೆಹೋವನ ನೆರಳಿನಲ್ಲಿ ವಾಸಿಸುವರು. ಹಿಂದಿರುಗಿ ಬೆಳೆಯನ್ನು ಬೆಳೆದು ದ್ರಾಕ್ಷಿಯಂತೆ ಫಲಪ್ರದರಾಗಿ ಫಲ ಕೊಡುವರು;
ಅದರ ಕೀರ್ತಿಯು ಲೆಬನೋನಿನ ದ್ರಾಕ್ಷಾರಸದ ಹಾಗೆ ಸ್ವಾರಸ್ಯವಾಗಿರುವುದು.
8 ಎಫ್ರಾಯೀಮು, “ವಿಗ್ರಹಗಳ ಗೊಡವೆ ನನಗೆ ಇನ್ನೇಕೆ?” ಎಂದು ಅವುಗಳನ್ನು ತ್ಯಜಿಸುವುದು;
ನಾನು ಅದಕ್ಕೆ ಒಲಿದು ಕಟಾಕ್ಷಿಸುವೆನು; ನಾನು ಸೊಂಪಾದ ತುರಾಯಿ ಮರದಂತಿದ್ದೇನೆ;
ನನ್ನಿಂದಲೇ ನೀನು ಫಲಿಸುವಿ.
9 ಜ್ಞಾನಿಗಳು ಈ ಸಂಗತಿಗಳನ್ನು ಗ್ರಹಿಸುವರು; ವಿವೇಕಿಗಳು ಅವುಗಳನ್ನು ತಿಳಿದುಕೊಳ್ಳುವರು.
ಯೆಹೋವನ ಮಾರ್ಗಗಳು ಸತ್ಯವಾದವುಗಳು;
ಅವುಗಳಲ್ಲಿ ಸನ್ಮಾರ್ಗಿಗಳು ನಡೆಯುವರು, ದುರ್ಮಾರ್ಗಿಗಳು ಅವುಗಳನ್ನು ಬಿಟ್ಟು ಎಡವಿ ಬೀಳುವರು.