ಯೆಶಾಯನು
ಗ್ರಂಥಕರ್ತೃತ್ವ
ಯೆಶಾಯನ ಪುಸ್ತಕವು ಅದರ ಗ್ರಂಥಕರ್ತನಾದ ಯೆಶಾಯನ ಹೆಸರನ್ನು ಹೊಂದಿಕೊಂಡಿದೆ, ಅವನು ಒಬ್ಬ ಪ್ರವಾದಿನಿಯನ್ನು ಮದುವೆಯಾಗಿದ್ದನು, ಆಕೆಯು ಅವನಿಗೆ ಕನಿಷ್ಠ ಎರಡು ಗಂಡುಮಕ್ಕಳನ್ನು ಹೆತ್ತಳು (ಯೆಶಾಯ 7:3; 8:3). ಅವನು ನಾಲ್ಕು ಯೆಹೂದ್ಯ ಅರಸರ ಆಳ್ವಿಕೆಯಡಿಯಲ್ಲಿ ಉಜ್ಜೀಯ, ಯೋತಾಮ್, ಅಹಾಜ್ ಮತ್ತು ಹಿಜ್ಕೀಯನ ಆಳ್ವಿಕೆಯಲ್ಲಿ ಪ್ರವಾದಿಸಿದನು ಮತ್ತು ಬಹುಶಃ ಅವನು ಕೆಟ್ಟ ಅರಸನಾದ ಮನಸ್ಸೆಯ, ಐದನೆಯ ಅರಸನ ಆಳ್ವಿಕೆಯಡಿಯಲ್ಲಿ ಅವನ ಮರಣ ಹೊಂದಿದನು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 740-680 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಈ ಪುಸ್ತಕವು ಅರಸನಾದ ಉಜ್ಜೀಯನ ಆಳ್ವಿಕೆಯ ಅಂತ್ಯದಲ್ಲಿ ಮತ್ತು ಅರಸರಾದ ಯೋತಾಮ್, ಅಹಾಜ್ ಮತ್ತು ಹಿಜ್ಕೀಯನ ಆಳ್ವಿಕೆಯಲ್ಲಿ ಬರೆಯಲ್ಪಟ್ಟಿತು.
ಸ್ವೀಕೃತದಾರರು
ದೇವರ ಧರ್ಮಶಾಸ್ತ್ರದ ಕರ್ತವ್ಯಗಳ ಪ್ರಕಾರ ಜೀವಿಸಲು ವಿಫಲರಾಗಿದ್ದ ಯೆಹೂದದ ಜನರು ಯೆಶಾಯನು ಸಂಬೋಧಿಸಿರುವ ಪ್ರಾಥಮಿಕ ಪ್ರೇಕ್ಷಕರಾಗಿರುತ್ತಾರೆ.
ಉದ್ದೇಶ
ಇಡೀ ಹಳೆಯ ಒಡಂಬಡಿಕೆಯಲ್ಲಿಯೇ ಯೇಸು ಕ್ರಿಸ್ತನ ಸಮಗ್ರವಾದ ಪ್ರವಾದನಾತ್ಮಕ ಚಿತ್ರಣವನ್ನು ನಮಗೆ ಒದಗಿಸುವುದು ಯೆಶಾಯನ ಉದ್ದೇಶವಾಗಿತ್ತು. ಇದು ಆತನ ಜೀವನದ ಸಂಪೂರ್ಣ ವ್ಯಾಪ್ತಿಯನ್ನು ಅಂದರೆ: ಆತನ ಆಗಮನದ ಘೋಷಣೆಯನ್ನು (ಯೆಶಾಯ 40:3-5), ಆತನ ಕನ್ನಿಕೆಯ ಜನನವನ್ನು (7:14), ಶುಭವಾರ್ತೆಯ ಆತನ ಸಾರೋಣವನ್ನು (61:1), ಆತನ ಯಜ್ಞರೂಪವಾದ ಮರಣವನ್ನು (52:13-53:12), ಮತ್ತು ಆತನ ಸ್ವಂತದವರನ್ನು ಕೊಂಡೊಯ್ಯುವುದಕ್ಕಾಗಿರುವ ಆತನ ಪುನರಾಗಮನವನ್ನು ಒಳಗೊಂಡಿದೆ (60:2-3). ಪ್ರವಾದಿಯಾದ ಯೆಶಾಯನು ಪ್ರಾಥಮಿಕವಾಗಿ ಯೆಹೂದ ರಾಜ್ಯದವರಿಗೆ ಪ್ರವಾದಿಸಲು ಕರೆಯಲ್ಪಟ್ಟನಾಗಿದ್ದನು. ಯೆಹೂದವು ಉಜ್ಜೀವನದ ಕಾಲ ಮತ್ತು ಬಂಡಾಯದ ಸಮಯಗಳ ಮೂಲಕ ಹಾದು ಹೋಗುತ್ತಿತ್ತು. ಯೆಹೂದ್ಯವು ಅಶ್ಶೂರ್ಯ ಮತ್ತು ಐಗುಪ್ತಗಳಿಂದ ನಾಶನದ ಬೆದರಿಕೆಗೆ ಒಳಗಾಗಿತ್ತು, ಆದರೆ ದೇವರ ಕರುಣೆಯ ನಿಮಿತ್ತ ಅವರು ಕಾಪಾಡಲ್ಪಟ್ಟರು. ಯೆಶಾಯನು ಪಾಪದಿಂದ ಪಶ್ಚಾತ್ತಾಪಡುವಂಥ ಮತ್ತು ಭವಿಷ್ಯದಲ್ಲಿ ದೇವರ ಬಿಡುಗಡೆಯ ಆಶಾದಾಯಕವಾದ ನಿರೀಕ್ಷೆಯ ಕುರಿತ ಸಂದೇಶವನ್ನು ಸಾರಿದನು.
ಮುಖ್ಯಾಂಶ
ರಕ್ಷಣೆ
ಪರಿವಿಡಿ
1. ಯೆಹೂದದ ಖಂಡನೆ — 1:1-12:6
2. ಇತರ ರಾಷ್ಟ್ರಗಳ ವಿರುದ್ಧ ಖಂಡನೆ — 13:1-23:18
3. ಭವಿಷ್ಯದ ಸಂಕಟ — 24:1-27:13
4. ಇಸ್ರಾಯೇಲ್ ಮತ್ತು ಯೆಹೂದದ ಖಂಡನೆ — 28:1-35:10
5. ಹಿಜ್ಕೀಯನ ಮತ್ತು ಯೆಶಾಯನ ಚರಿತ್ರೆ — 36:1-38:22
6. ಮೆಸ್ಸೀಯನ ರಕ್ಷಣೆ — 39:1-47:15
7. ಸಮಾಧಾನಕ್ಕಾಗಿ ದೇವರ ಯೋಜನೆ — 48:1-66:24
1
ಯೆಹೂದ ದೇಶದ ಅರಸರಾದ ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ ಇವರ ಕಾಲದಲ್ಲಿ ಯೆಹೂದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ.
ದೈವದ್ರೋಹಿಯಾದ ಜನಾಂಗ
ಆಕಾಶಮಂಡಲವೇ, ಆಲಿಸು! ಭೂಮಂಡಲವೇ ಕೇಳು! ಯೆಹೋವನು ಮಾತನಾಡುತ್ತಿದ್ದಾನೆ.
ನಾನು ಸಾಕಿ ಸಲಹಿದ ಮಕ್ಕಳೇ ನನಗೆ ದ್ರೋಹ ಮಾಡಿದ್ದಾರೆ.
ಎತ್ತು ಯಜಮಾನನನ್ನು, ಕತ್ತೆ ಒಡೆಯನ ಕೊಟ್ಟಿಗೆಯನ್ನು ತಿಳಿದಿರುವುದು.
ಆದರೆ ಇಸ್ರಾಯೇಲ್ ಜನರಿಗೋ ತಿಳಿವಳಿಕೆ ಇಲ್ಲ. ನನ್ನ ಪ್ರಜೆಯು ಆಲೋಚಿಸುವುದಿಲ್ಲ.
ಪಾಪಿಷ್ಠ ಜನಾಂಗವೇ, ಅಧರ್ಮದ ಭಾರವನ್ನು ಹೊತ್ತಿರುವ ಪ್ರಜೆಯೇ,
ದುಷ್ಟಜಾತಿಯೇ, ದ್ರೋಹಿಗಳಾದ ಮಕ್ಕಳೇ, ನಿಮ್ಮ ಗತಿಯನ್ನು ಏನು ಹೇಳಲಿ! ಅವರು ಯೆಹೋವನನ್ನು ತೊರೆದಿದ್ದಾರೆ.
ಇಸ್ರಾಯೇಲರ ಸದಮಲಸ್ವಾಮಿಯನ್ನು ಧಿಕ್ಕರಿಸಿದ್ದಾರೆ.
ಆತನಿಗೆ ಬೆನ್ನು ಮಾಡಿ ಬೇರೆಯಾಗಿದ್ದಾರೆ.
ಏಕೆ ದ್ರೋಹವನ್ನು ಹೆಚ್ಚಿಸಿ, ಪೆಟ್ಟಿಗೆ ಗುರಿಯಾಗುತ್ತೀರಿ?
ತಲೆಯೆಲ್ಲಾ ರೋಗ, ಹೃದಯವೆಲ್ಲಾ ದುರ್ಬಲ.
ಅಂಗಾಲಿನಿಂದ ನಡುನೆತ್ತಿಯ ತನಕ ಪೆಟ್ಟು, ಬಾಸುಂಡೆ,
ವಾಸಿಯಾಗದ ಗಾಯಗಳೇ ಹೊರತು ಏನೂ ಸೌಖ್ಯವಿಲ್ಲ.
ಅವುಗಳನ್ನು ತೊಳೆಯಲಿಲ್ಲ, ಕಟ್ಟಲಿಲ್ಲ, ಇಲ್ಲವೆ ಎಣ್ಣೆ ಸವರಿ ಮೃದು ಮಾಡಲಿಲ್ಲ.
ನಿಮ್ಮ ದೇಶವು ಹಾಳಾಗಿದೆ. ನಿಮ್ಮ ಪಟ್ಟಣಗಳು ಸುಟ್ಟುಹೋಗಿವೆ.
ನಿಮ್ಮ ಭೂಮಿಯನ್ನು ಅನ್ಯರು ನಿಮ್ಮೆದುರಿಗೆ ನುಂಗಿಬಿಡುತ್ತಿದ್ದಾರೆ.
ಅದು ಅನ್ಯಜನರಿಂದ ಹಾಳಾಯಿತು.
ಯೆರೂಸಲೇಮಿನ ನಗರವೊಂದೇ*ಯೆರೂಸಲೇಮಿನ ನಗರವೊಂದೇ ಅಥವಾ ಚೀಯೋನ್ ಕುಮಾರ್ತೆಯರು. ಉಳಿದು, ದ್ರಾಕ್ಷಿತೋಟದ ಮನೆಯಂತೆಯೂ,
ಸೌತೆಕಾಯಿಯ ಹೊಲದ ಗುಡಿಸಿಲಿನ ಹಾಗೂ ಮುತ್ತಿಗೆ ಹಾಕಲ್ಪಟ್ಟ ಪಟ್ಟಣದ ಹಾಗೆಯೂ ಇದೆ.
ಸೇನಾಧೀಶ್ವರನಾದ ಯೆಹೋವನು ನಮಗೆ ಸ್ವಲ್ಪ ಜನರನ್ನು ಉಳಿಸದೇ ಹೋಗಿದ್ದರೆ,
ಸೊದೋಮಿನ ಗತಿಯೇ ನಮಗಾಗುತ್ತಿತ್ತು. ಗೊಮೋರದ ದುರ್ದಶೆಯೇ ಸಂಭವಿಸುತ್ತಿತ್ತು.
10 ಸೊದೋಮಿನ ಅಧಿಪತಿಗಳೇ, ಯೆಹೋವನ ಮಾತನ್ನು ಆಲಿಸಿರಿ.
ಗೊಮೋರದ ಪ್ರಜೆಗಳೇ ನಮ್ಮ ದೇವರ ಧರ್ಮೋಪದೇಶವನ್ನು ಕೇಳಿರಿ.
11 ಯೆಹೋವನು ಹೀಗೆನ್ನುತ್ತಾನೆ, “ಲೆಕ್ಕವಿಲ್ಲದ ನಿಮ್ಮ ಯಜ್ಞಗಳು ನನಗೇಕೆ?
ಟಗರುಗಳ ಸರ್ವಾಂಗ ಹೋಮ, ಪುಷ್ಟಪಶುಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು.
ಹೋರಿ, ಕುರಿಗಳ, ರಕ್ತಕ್ಕೆ ನಾನು ಒಲಿಯೆನು.
12 ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕೆಂದು ನೀವು ಬರುತ್ತೀರಲ್ಲಾ;
ನನ್ನ ಆಲಯದ ಪ್ರಾಕಾರವನ್ನು ಪ್ರವೇಶಿಸಲು ಯಾರು ನಿಮ್ಮನ್ನು ಕೇಳಿಕೊಂಡರು?
13 ವ್ಯರ್ಥವಾದ ಕಾಣಿಕೆಗಳನ್ನು ಇನ್ನು ತರಬೇಡಿ; ಧೂಪವು ನನಗೆ ಅಸಹ್ಯ;
ಅಮಾವಾಸ್ಯೆ, ಹುಣ್ಣಿಮೆಹಬ್ಬ, ಸಬ್ಬತ್ ದಿನ, ಕೂಟ ಪ್ರಕಟಣೆ ಇವು ಬೇಡ; ಅಧರ್ಮದಿಂದ ಕೂಡಿದ ಸಂಘವನ್ನು ನಾನು ಸಹಿಸಲಾರೆನು.
14 ನಿಮ್ಮ ಅಮಾವಾಸ್ಯೆಗಳನ್ನೂ, ಹುಣ್ಣಿಮೆಹಬ್ಬ, ಉತ್ಸವ ದಿನಗಳನ್ನೂ ದ್ವೇಷಿಸುತ್ತೇನೆ;
ಇವು ನನಗೆ ಭಾರ; ಸಹಿಸಲು ಬೇಸರ.
15 ನೀವು ನನ್ನ ಕಡೆಗೆ ಪ್ರಾರ್ಥಿಸಲು ಕೈಯೆತ್ತುವಾಗ, ನಿಮ್ಮನ್ನು ನೋಡದಂತೆ ನನ್ನ ಕಣ್ಣುಗಳನ್ನು ಮರೆಮಾಡಿಕೊಳ್ಳುವೆನು.
ಹೌದು, ನೀವು ಬಹಳ ಪ್ರಾರ್ಥನೆಗಳನ್ನು ಮಾಡಿದರೂ ನಾನು ಆಲಿಸುವುದಿಲ್ಲ.
ನಿಮ್ಮ ಕೈಗಳಲ್ಲಿ ರಕ್ತವು ತುಂಬಿದೆ.
16 ನಿಮ್ಮನ್ನು ತೊಳೆದು ಶುದ್ಧರಾಗಿ,
ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ,
ದುರಾಚಾರವನ್ನು ಬಿಡಿ,
17 ಸದಾಚಾರವನ್ನು ಅಭ್ಯಾಸ ಮಾಡಿಕೊಳ್ಳಲು ಕಲಿಯಿರಿ, ನ್ಯಾಯವನ್ನು ಅನುಸರಿಸಿ ನಡೆಯಿರಿ.
ಹಿಂಸೆಗೆ ಒಳಗಾದವನಿಗೆ ಸಹಾಯಮಾಡಿರಿ.
ಅನಾಥನಿಗೆ ನ್ಯಾಯತೀರಿಸಿರಿ.
ವಿಧವೆಯ ಪಕ್ಷವಾಗಿ ವಾದಿಸಿರಿ.”
18 “ಬನ್ನಿರಿ ವಾದಿಸುವ” ಎಂದು ಯೆಹೋವನು ಅನ್ನುತ್ತಾನೆ.
“ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ, ಹಿಮದ ಹಾಗೆ ಬಿಳುಪಾಗುವವು.
ಕಿರಮಂಜಿ ಬಣ್ಣವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು.
19 ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ.
20 ಒಪ್ಪದೆ ತಿರುಗಿ ಬಿದ್ದರೆ, ಕತ್ತಿಯ ಬಾಯಿಗೆ ತುತ್ತಾಗುವಿರಿ”
ಈ ಮಾತನ್ನು ಯೆಹೋವನೇ ನುಡಿದಿದ್ದಾನೆ.
ಅಪನಂಬಿಗಸ್ತ ಯೆರೂಸಲೇಮ್
21 ಅಯ್ಯೋ, ನಂಬಿಕೆಯುಳ್ಳ ನಗರಿಯು ಸೂಳೆಯಾದಳಲ್ಲಾ!
ನ್ಯಾಯದಿಂದ ತುಂಬಿ ಧರ್ಮಕ್ಕೆ ನೆಲೆಯಾಗಿದ್ದ ನಗರ
ಈಗ ಕೊಲೆಪಾತಕರಿಗೆ ನೆಲೆಯಾಗಿದೆ.
22 ನಿನ್ನ ಬೆಳ್ಳಿಯು ಅಶುದ್ಧವಾಯಿತು. ನಿನ್ನ ದ್ರಾಕ್ಷಾರಸವು ನೀರಾಯಿತು.
23 ನಿನ್ನ ಅಧಿಕಾರಿಗಳು ದ್ರೋಹಿಗಳೂ, ಕಳ್ಳರ ಗೆಳೆಯರೂ ಆಗಿದ್ದಾರೆ;
ಪ್ರತಿಯೊಬ್ಬನೂ ಕಾಣಿಕೆಗಳನ್ನು ಪ್ರೀತಿಸಿ, ಲಂಚಗಳನ್ನು ಹುಡುಕುವನು;
ಅನಾಥರಿಗೆ ನ್ಯಾಯತೀರಿಸುವುದಿಲ್ಲ; ವಿಧವೆಯರ ವ್ಯಾಜ್ಯವು ಅವರ ಮನಸ್ಸಿಗೆ ಬಾರದು.
24 ಆದುದರಿಂದ ಕರ್ತನೂ, ಸೇನಾಧೀಶ್ವರನೂ, ಇಸ್ರಾಯೇಲರ ಶೂರನೂ ಆಗಿರುವ ಯೆಹೋವನು ಹೀಗೆ ನುಡಿಯುತ್ತಾನೆ,
“ಆಹಾ, ನನ್ನ ವಿರೋಧಿಗಳನ್ನು ಅಡಗಿಸಿ ಶಾಂತನಾಗುವೆನು; ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವೆನು.
25 ನಿನ್ನ ಮೇಲೆ ಕೈಮಾಡಿ, ನಿನ್ನನ್ನು ಪುಟಕ್ಕೆ ಹಾಕಿ, ನಿನ್ನ ಹೊಲಸುತನವನ್ನು ಸಂಪೂರ್ಣವಾಗಿ ನಿವಾರಿಸಿ,
ನಿನ್ನ ಎಲ್ಲಾ ಕಲ್ಮಷವನ್ನು ತೆಗೆದುಬಿಡುವೆನು.
26 ಪೂರ್ವದಲ್ಲಿ ನಿನಗಿದ್ದ ನ್ಯಾಯಾಧಿಪತಿಗಳನ್ನು, ಮಂತ್ರಾಲೋಚಕರನ್ನು ಪುನಃ ಒದಗಿಸಿಕೊಡುವೆನು.
ಆ ಮೇಲೆ ನೀನು ಸದಾಚಾರದ ನಗರಿ ಎಂತಲೂ, ಸ್ವಾಮಿ ನಿಷ್ಠೆಯುಳ್ಳ ನಗರಿ ಎಂತಲೂ ಕರೆಯಲ್ಪಡುವಿ.”
27 ಚೀಯೋನ್ ನ್ಯಾಯತೀರ್ಪಿನಿಂದಲೂ, ನೀತಿ ನಂಬಿಕೆಯಿಂದ ಪಶ್ತಾತ್ತಾಪ ಹೊಂದಿದ ಆಕೆಯ ಜನರೂ ಬಿಡುಗಡೆಯಾಗುವರು.
28 ಆದರೆ ದ್ರೋಹಿಗಳೂ ಮತ್ತು ಪಾಪಿಗಳೂ ಒಟ್ಟಾಗಿ ನಾಶವಾಗುವರು. ಹೌದು, ಯೆಹೋವನನ್ನು ತೊರೆದವರು ನಾಶವಾಗುವರು.
29 “ನೀವು ಇಷ್ಟಪಟ್ಟ ಏಲಾ ಮರಗಳ ನಿಮಿತ್ತ ನಾಚಿಕೆಪಡುವಿರಿ.
ಗೊತ್ತು ಮಾಡಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.
30 ಎಲೆ ಒಣಗಿದ ಏಲಾ ಮರದಂತೆಯೂ,
ನೀರಿಲ್ಲದ ವನದ ಹಾಗೂ ಇರುವಿರಿ.
31 ನಿಮ್ಮಲ್ಲಿನ ಬಲಿಷ್ಠನೇ ಸೆಣಬಿನ ನಾರು, ಅವನ ಕಾರ್ಯವೇ ಕಿಡಿ,
ಎರಡೂ ಸೇರಿ ಯಾರೂ ಆರಿಸಲಾಗದಂತೆ ಅವು ಸುಟ್ಟುಹೋಗುವವು.”

*1:8 ಯೆರೂಸಲೇಮಿನ ನಗರವೊಂದೇ ಅಥವಾ ಚೀಯೋನ್ ಕುಮಾರ್ತೆಯರು.